ಶನಿವಾರ, ಆಗಸ್ಟ್ 1, 2009

ರಫಿ-ಮುಖೇಶ್-ಕಿಶೋರ್



ಸುಗಮ ಸಂಗೀತದ ಮೂರು ಉತ್ಕೃಷ್ಟ ಮಾದರಿಗಳನ್ನು ರಫಿ-ಮುಖೇಶ್-ಕಿಶೋರ್ ತ್ರಯರು ನಮಗೆ ನೀಡಿ ಹೋಗಿದ್ದಾರೆ.

ಮಾಧುರ್ಯವೇ ಮೈವೆತ್ತಂಥ ಸಿರಿಕಂಠದ ಗಾಯನ ರಫಿಯದು. ’ಚೌದವೀನ್ ಕಾ ಚಾಂದ್ ಹೋ’, ’ಚಾಹೂಂಗಾ ಮೈ ತುಝೆ’, ’ರಂಗ್ ಔರ್ ನೂರ್ ಕೀ’, ’ತುಝ್‌ಕೋ ಪುಕಾರೇ ಮೇರಾ ಪ್ಯಾರ್’ ಹೀಗೆ ಸಾಲುಸಾಲು ಉದಾಹರಣೆಗಳನ್ನು ಕೊಡಬಹುದು.

ಭಾವಭರಿತ-ದುಃಖಾರ್ದ್ರ ಗಾಯನಕ್ಕೆ ಹೇಳಿ ಮಾಡಿಸಿದಂಥ ಶಾರೀರ ಮುಖೇಶ್‌ನದು. ’ಆ, ಲೌಟ್‌ಕೇ ಆಜಾ’, ’ಜಾನೇ ಕಹ್ಞಾ, ಗಯೇ ವೋ ದಿನ್’, ’ಖುಷ್ ರಹೋ ಹರ್ ಖುಷೀ ಹೈ’, ’ಕಹೀ ದೂರ್ ಜಬ್ ದಿನ್ ಢಲ್ ಜಾಯೇ’ ಹೀಗೆ ಒಂದೊಂದು ಹಾಡೂ ಕೇಳುಗನ ಕಣ್ಣಲ್ಲಿ ನೀರು ತುಂಬುವಂಥದು.

ಹೃದಯಂಗಮ-ವೈವಿಧ್ಯಮಯ ಕಂಠಸಿರಿ ಕಿಶೋರ್‌ನದು. ’ನಾಚ್ ಮೇರೀ ಜಾನ್’, ಹಾಡನ್ನು ಹಾಡಿರುವ ಕಿಶೋರ್‌ನೇ ’ಯೇ ಜೀವನ್ ಹೈ’, ಹಾಡನ್ನೂ ಹಾಡಿದ್ದಾನೆ. ’ತೆರೀ ದುನಿಯಾ ಸೇ, ಹೋಕೇ ಮಜ್‌ಬೂರ್ ಚಲಾ’, ಎಂದು ಹಾಡಿರುವವನೇ ’ಜಿಂದಗೀ ಏಕ್ ಸಫರ್ ಹೈ ಸುಹಾನಾ’, ಎಂದು ’ಒಲೈಯೋ ಲೈಯೋ’ಗರೆದಿದ್ದಾನೆ, ’ಜೈ ಜೈ ಶಿವ್ ಶಂಕರ್’, ಎಂದು ಕೇಳುಗರಿಗೆಲ್ಲ ಮತ್ತೇರಿಸಿದ್ದಾನೆ.

ಈ ತ್ರಿಮೂರ್ತಿಗಳ ಈ ವೈಶಿಷ್ಟ್ಯಗಳಿಂದ, ಒಟ್ಟು ಸುಗಮ ಸಂಗೀತದ ಸಂಪೂರ್ಣ ರಸಾನುಭವ ನಮಗೆ ಲಭ್ಯವಾಗಿದೆ. ಇವರ ಕಂಠಸಿರಿಯ ಮತ್ತು ಗಾಯನದ ಪ್ರಭೆಯು ಗರಿಷ್ಠ ಮಟ್ಟದಲ್ಲಿ ಹೊರಹೊಮ್ಮಲು ಅನುವಾಗುವಂಥ ಸಶಕ್ತ ಪದ-ಅರ್ಥಗಳನ್ನೊಳಗೊಂಡ ಗೀತೆಗಳು ಹಾಗೂ ತಕ್ಕುದಾದ ಸಂಗೀತ ಇವು ರಸಾನುಭವವನ್ನು ಪರಿಪೂರ್ಣವಾಗಿಸಿವೆ. ಹಿಂದಿ ಚಲನಚಿತ್ರ ಕ್ಷೇತ್ರದಲ್ಲಿ ಇವಿಷ್ಟೂ ಇತ್ಯಾತ್ಮಕ ಅಂಶಗಳೂ ಏಕಕಾಲಕ್ಕೇ ಅವತರಿಸಿ ಒಟ್ಟುಗೂಡಿದುದು ಕೇಳುಗರಾದ ನಮ್ಮ ಭಾಗ್ಯವೇ ಸರಿ.

ಪ್ರಪಂಚದಲ್ಲಿ ’ಅತಿ ಹೆಚ್ಚು ಜನ ಅತಿ ದೀರ್ಘ ಕಾಲ’ ಆಲಿಸಿಕೊಂಡುಬಂದಿರುವ ಸಂಗೀತಭಾಗವೆಂದರೆ ೫೦ರಿಂದ ೮೦ರ ದಶಕದವರೆಗಿನ ಹಿಂದಿ ಚಲನಚಿತ್ರ ಸಂಗೀತ. ಆ ಅವಧಿಯ ಗಾಯಕರ ಪೈಕಿ (ಗಾಯಕಿಯರನ್ನು ಹೊರತುಪಡಿಸಿ) ಮುಂಚೂಣಿಯಲ್ಲಿದ್ದವರು ರಫಿ-ಮುಖೇಶ್-ಕಿಶೋರ್ ತ್ರಿಮೂರ್ತಿಗಳೇ ತಾನೇ.

ಇಂದಿನ ಚಲನಚಿತ್ರ ಸಂಗೀತವು ಬೇರೆಯದೇ ಮಜಲು ತಲುಪಿದೆ. ’ಅಂದಿಗೆ ಅದು ಚಂದ, ಇಂದಿಗೆ ಇದೇ ಚಂದ’, ಎನ್ನುವ ಅಭಿಪ್ರಾಯ ಚಾಲನೆಯಲ್ಲಿದೆ. ಕಾಲ ಬದಲಾದಂತೆ ಸಮಾಜದ ಅಭಿರುಚಿಗಳೂ ಬದಲಾಗುವುದು ಸಾಮಾನ್ಯ. ಆದರೆ ಒಂದು ಮಾತಂತೂ ಸತ್ಯ. ಇಂದಿನ ಬಹುತೇಕ ಚಿತ್ರಗೀತೆಗಳು ಅಂದಿನ ಬಹುತೇಕ ಚಿತ್ರಗೀತೆಗಳಿಗೆ ಹೋಲಿಸಿದಲ್ಲಿ ಅಲ್ಪಾಯುಷಿಗಳು. ಸಂಗೀತವು ಬಹುಕಾಲ ಬಾಳಬೇಕೆಂದರೆ ಅದು ಹೇಗಿರಬೇಕು ಮತ್ತು ಅದರಲ್ಲಿ ಏನಿರಬೇಕು ಎಂಬುದನ್ನು ಈ ಮೂಲಕ ಸಮಾಜವೇ ನಿರ್ಧರಿಸಿಬಿಟ್ಟಿದೆ!

5 ಕಾಮೆಂಟ್‌ಗಳು:

  1. ಆನ೦ದ ಸರ್,
    ತ್ರಿಮೂರ್ತಿಗಳೇ ಬಗ್ಗೆ ಒಳ್ಳೆಯ ಮಾಹಿತಿ ..

    ಪ್ರತ್ಯುತ್ತರಅಳಿಸಿ
  2. ಮೂರು ಸಂಗೀತ ಸಾಧಕರ ಬಗ್ಗೆ ಸೊಗಸಾದ ಮಾಹಿತಿ ಕೊಟ್ಟಿದ್ದೀರಿ.

    ಪ್ರತ್ಯುತ್ತರಅಳಿಸಿ
  3. ಸರ್ ನಿಮ್ಮ ಮಾತುಗಳು ಅಕ್ಷರ ಸಹ ನಿಜವೆನ್ನಿಸುತ್ತಿದೆ.[೬೦ ರ ಸಮಯದಲ್ಲಿ ಸಂಗೀತ-ಸಾಹಿತ್ಯ-ಗಾಯನಳ ಅದ್ಭುತ ಮಿಲನ.]

    ಅರ್ ಎನ್ ಜಯಗೋಪಾಲ್ ರವರ ಒಂದು ಮಾತು ನೆನಪಿಗೆ ಬರುತ್ತದೆ " ನಮ್ಮ ಕಾಲದಲ್ಲಿ ಉತ್ತಮ ಪೈಪೋಟಿ ಇತ್ತು" ಎಂದು ಹೇಳುತ್ತಾರೆ.

    ಒಂದಕ್ಕಿಂತ ಒಂದು ಸಾಹಿತ್ಯ[ ಪ್ರೇಮ ಗೀತೆ, ಭಕ್ತಿ ಗೀತೆ,ದೇಶ ಗೀತೆ, ವಿರಹ ಗೀತೆ] , ಮೀರಿಸುವ ಸಂಗೀತ[ ನೌಶಾದ್,ಎಸ್ ಡಿ ಬರ್ಮನ್, ಶಂಕರ್ ಜೈ ಕಿಷನ್] ಹಾಗು ಗಾಯಕರು
    [ತ್ರಿಮೂರ್ತಿಗಳಿಗೆ ಪೈಪೋಟಿ ನೀಡಿದವರು ಮನ್ನಾ ಡೆ, ಹೇಮಂತ್ ಕುಮಾರ್].

    ಇತ್ತೀಚೆಗೆ ಕನ್ನಡದಲ್ಲಿ ಜಯಂತ್ ಕಾಯ್ಕಿಣಿ ಹಾಗು ಮನೋ ಮೂರ್ತಿಯವರ ಕೆಲವು ಕಾಂಬಿನೇಷನ್ಗಳನ್ನು ಹೊರತು ಪಡಿಸಿದರೆ,
    ಉತ್ತಮ ಸಾಹಿತ್ಯ ಇರುತ್ತದೆ ಇಲ್ಲವೆ ಉತ್ತಮ ಸಂಗೀತವಿರುತ್ತದೆ[ ಇವು ಕೂಡ ಬೆರಳೆಣಿಕೆಯಷ್ಟು].
    ಸಿನಿಮಾ ಸಾಹಿತ್ಯ ಕೇವಲ ಅನುರಾಗ ಗೀತೆಗಳಿಗೆ ಸೀಮಿತಗೊಂಡಿವೆ.
    ಪ್ರತಿಭೆಯ ಅಲಭ್ಯವಂತೂ ಇದಕ್ಕೆ ಕಾರಣವಲ್ಲ.

    ನನ್ನ ಪ್ರಕಾರ ಇದಕ್ಕೆ ಮುಖ್ಯ ಕಾರಣ, ಇಂದಿನ ನಿರ್ಮಾಕರು. ಇವರುಗಳೆ ನಿರ್ಧರಿಸಿ ಬಿಡುತ್ತಾರೆ ಜನಕ್ಕೆ ಏನು ಬೇಕು ಬೇಡವೆಂದು, ಅದಕ್ಕೆ ತಕ್ಕಂತೆ ನಿರ್ದೇಶಕರು ಹಾದು ಗೀತ ರಚನೆಕಾರರು ಕುಣಿಯುತ್ತಾರೆ.

    ಪ್ರತ್ಯುತ್ತರಅಳಿಸಿ
  4. ಶ್ರೀಕಾಂತ್ ಅವರೇ,
    ನಿಮ್ಮ ಅವಲೋಕನ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ. ಪೂರಕ ಅಭಿಪ್ರಾಯಕ್ಕಾಗಿ ಧನ್ಯವಾದ.

    ಪ್ರತ್ಯುತ್ತರಅಳಿಸಿ