ಬುಧವಾರ, ಆಗಸ್ಟ್ 26, 2009

ಪ್ರಮೋದ್ ಮುತಾಲಿಕ್ ಸಂಸ್ಕೃತಿ

ನನ್ನೊಡನೆ ಯಾವ ಸಂಪರ್ಕವನ್ನೂ ಹೊಂದಿರದಿದ್ದ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಈಚೆಗೆ ನನಗೊಂದು ಪತ್ರ ಬರೆದು ’ಅಸಹಾಯಕ ಬಿ.ಜೆ.ಪಿ. ಸರಕಾರ’ದ ವಿಚಾರವಾಗಿ ’ಸಮಾಲೋಚನೆ ಹಾಗೂ ಪರಿಹಾರ ಮಾರ್ಗ’ ಚರ್ಚಿಸಲು ತಾನು ನನ್ನನ್ನು ಭೇಟಿಯಾಗಲು ಇಚ್ಛಿಸಿರುವುದಾಗಿಯೂ ಇದೇ ದಿನಾಂಕ ೨೦ ಮತ್ತು ೨೪ರಂದು ತಾನು ಬೆಂಗಳೂರಿಗೆ ಬರುತ್ತಿರುವುದಾಗಿಯೂ ಭೇಟಿಗೆ ಅವಕಾಶ ಮಾಡಿಕೊಡಬೇಕೆಂದೂ ವಿನಂತಿಸಿದರು. ಈ ಪತ್ರ ಸಾಮಾನ್ಯ ಅಂಚೆಯ ಮೂಲಕ ನನಗೆ ದಿನಾಂಕ ೨೨ರ ಸಂಜೆ ತಲುಪಿತು. ಮರುದಿನ ಬೆಳಗ್ಗೆ ನಾನು ಮುತಾಲಿಕ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ೨೪ರ ಭೇಟಿಗೆ ಸಮ್ಮತಿ ವ್ಯಕ್ತಪಡಿಸಿದೆ. ೨೪ರಂದು ತಾನು ಬೆಂಗಳೂರಿಗೆ ಬಂದವನು ನನ್ನನ್ನು ಪುನಃ ಸಂಪರ್ಕಿಸುವುದಾಗಿ ಅವರು ಉತ್ತರಿಸಿದರು.

೨೪ರಂದು ನಾನು ನನ್ನೆಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿ ಮುತಾಲಿಕ್‌ಗಾಗಿ ಕಾದೆ. ಆದರೆ ಅವರು ನನ್ನನ್ನು ಸಂಪರ್ಕಿಸಲೂ ಇಲ್ಲ, ಆ ಬಗ್ಗೆ ಮಾಹಿತಿಯೇನನ್ನೂ ನನಗೆ ತಲುಪಿಸಲೂ ಇಲ್ಲ! ೨೬ರ ಮಧ್ಯಾಹ್ನದ ಈ ಹೊತ್ತಿನವರೆಗೂ ಅವರಿಂದಾಗಲೀ ಅವರ ಕಡೆಯವರಿಂದಾಗಲೀ ಯಾವ ಸುದ್ದಿಯೂ ಇಲ್ಲ! ಇದು ಮುತಾಲಿಕ್ ಅವರು ನನಗೆ ಮಾಡಿರುವ ಅವಮಾನವೆಂದೇ ನಾನು ಭಾವಿಸಬೇಕಾಗುತ್ತದೆ.

ಭೇಟಿಗಾಗಿ ವಿನಂತಿಸಿಕೊಂಡು, ಸಂಪರ್ಕಿಸುತ್ತೇನೆಂದು ತಿಳಿಸಿ, ಅನಂತರ ಸಂಪರ್ಕಿಸುವುದಿರಲಿ, ಕನಿಷ್ಠಪಕ್ಷ ಆ ಬಗ್ಗೆ ಮಾಹಿತಿ ತಲುಪಿಸುವ ಸಂಸ್ಕೃತಿಯನ್ನೂ ಹೊಂದಿರದ ಈ ವ್ಯಕ್ತಿ ತಾನು ಈ ನಾಡಿನ ಧರ್ಮ-ಸಂಸ್ಕೃತಿಯ ರಕ್ಷಣೆ ಮಾಡುತ್ತೇನೆಂದು ಹೊರಟಿರುವುದನ್ನು ನೋಡಿದರೆ ನನಗೆ ಸೋಜಿಗವೆನಿಸುತ್ತದೆ!

ನಿಗದಿಯನುಸಾರ ೨೪ರಂದು ಮುತಾಲಿಕ್ ನನ್ನನ್ನು ಭೇಟಿಯಾಗಿದ್ದರೆ ನಾನು ಅವರಿಗೆ ಅಂದು ಈ ಕೆಳಗಿನ ಮಾತುಗಳನ್ನು ಹೇಳುವವನಿದ್ದೆ:

’ದ್ವೇಷ ಮತ್ತು ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವುದು ಸಂಸ್ಕೃತಿಯಲ್ಲ. ಅಂಥವರನ್ನು ಸಮಾಜ ಎಂದೂ ಒಪ್ಪದು. ಇಂದಿನ ಪೀಳಿಗೆಗೆ ಈ ನೆಲದ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿದಾಗ ಎಲ್ಲ ಸಮಸ್ಯೆಗಳೂ ತಾನಾಗಿಯೇ ನಿವಾರಣೆಯಾಗುತ್ತವೆ. ಆದ್ದರಿಂದ ಇಂದಿನ ಪೀಳಿಗೆಗೆ ಈ ನೆಲದ ಸಂಸ್ಕೃತಿಯ ಬಗ್ಗೆ ವಿಸ್ತೃತ ತಿಳಿವಳಿಕೆ ನೀಡಬೇಕಾದ್ದು ಇಂದಿನ ಅಗತ್ಯ. ಹಾಗೆ ತಿಳಿವಳಿಕೆ ಹೊಂದಿದವರ ಸಂಖ್ಯೆ ಕ್ರಮೇಣ ಹೆಚ್ಚುತ್ತ ಸಾಗಿ ಮುಂದೊಂದು ದಿನ ಅವರೇ ನಾಡಿನ ಆಡಳಿತದ ಚುಕ್ಕಾಣಿ ಹಿಡಿಯುವಂಥ ಸನ್ನಿವೇಶ ಸೃಷ್ಟಿಯಾದಾಗ ಅಸಹಾಯಕ-ಭ್ರಷ್ಟ-ದುಷ್ಟ ಸರ್ಕಾರಗಳಿಂದ ನಮಗೆ ಮುಕ್ತಿ ದೊರೆಯುತ್ತದೆ. ಅಲ್ಲಿಯತನಕ ನಮಗೆ ತಾಳ್ಮೆ ಬೇಕು ಮತ್ತು ಅನವರತ ಇತ್ಯಾತ್ಮಕ ಪ್ರಯತ್ನ ಸಾಗಿರಬೇಕು.’

ಈ ಮಾತುಗಳನ್ನು ನಾನು ಮುತಾಲಿಕ್ ಅವರಿಗೆ ಸಕಾರಣ ವಿವರಿಸುವವನಿದ್ದೆ.

ಇಂದಿನ ದಿನಪತ್ರಿಕೆಯೊಂದರ ಪತ್ರ ವಿಭಾಗದಲ್ಲಿ ನನ್ನ ಈ ಮನದಳಲಿನ ಪತ್ರ ಪ್ರಕಟಗೊಂಡಿದ್ದು ಅದನ್ನು ಮುತಾಲಿಕ್ ಗಮನಿಸಿರುತ್ತಾರೆ. ಆದ್ದರಿಂದ ಇನ್ನು ಅವರಿಗೆ ನಾನು ಹೇಳುವ ಅಗತ್ಯವಿಲ್ಲ.

8 ಕಾಮೆಂಟ್‌ಗಳು:

  1. ನಿಮ್ಮನ್ನು ಭೇಟಿಯಾಗಲು ದಿನಾ೦ಕ ನಿಗದಿ ಮಾಡಿದ ಮೇಲೆ ಭೇಟಿ ಮಾಡದೆ, ಭೇಟಿಗೆ ಬರದಿರುವಿಕೆ ಬಗ್ಗೆ ಸಮಜಾಯಿಷಿ ಕೂಡ ಕೊಡದೇ, ಸುಮ್ಮನಿದ್ದುದು ಅನಾಗರಿಕತೆ ಮತ್ತು ಬೇಜವಾಬ್ದಾರಿತನದ ನಡವಳಿಕೆ. ಆ ಬಗ್ಗೆ ನೀವು ವ್ಯಕ್ತ ಪಡಿಸಿದ ಭಾವನೆ ನಿಜ. ಅ೦ತೆಯೇ ನೀವು ಅವರಿಗೆ ಹೇಳಬೇಕೆ೦ದಿದ್ದ ವಿಚಾರ ಕೂಡ ಸಕಾಲಿಕ ಮತ್ತು ವಸ್ತುನಿಷ್ಠ.

    ಪ್ರತ್ಯುತ್ತರಅಳಿಸಿ
  2. ಶಾಸ್ತ್ರಿಯವರೆ,

    ಸಕಾಲಿಕವಾಗಿದೆ ನಿಮ್ಮ ಲೇಖನ ಹಾಗೂ ಅದರೊಳಗಿನ ಭಾವನೆ. ಕ್ರಾಂತಿ, ಬದಲಾವಣೆಯೆಲ್ಲಾ ಒಂದು ಭಾಷಣದಿಂದಲೋ ಇಲ್ಲಾ ಉಗ್ರ ಕ್ರಮಗಳಿಂದಲೋ ಸಾಧ್ಯವಿಲ್ಲ. ಬದಲಾವಣೆ ತರಬೇಕಾದರೆ ಮೊದಲು ನಮ್ಮನ್ನು ನಾವು ಅದಕ್ಕೆ ಸಿಧ್ಧಗೊಳಿಸಿಕೊಂಡಿ ಬದಲಾಗಬೇಕು. ಸಮಾಜ ಎಂದರೆ ನಾವೇ.. ಅಲ್ಲವೇ?

    ಪ್ರತ್ಯುತ್ತರಅಳಿಸಿ
  3. ಆನ೦ದ ಸರ್ ,
    ಹಾಗಾದರೆ ಮುತಾಲಿಕ್ ಇಲ್ಲಿಯವರೆಗೆ ತಾನು ಭಾರತೀಯ ಸಂಸ್ಕೃತಿ ಇತ್ಯಾದಿ ದೊಡ್ಡ ದೊಡ್ಡ ಮಾತಾಡುವ ಮನುಶ್ಯನಿಗೆ ಇಷ್ಟು ಸೌಜನ್ಯವು ಇಲ್ಲ ಎ೦ದು ಕೇಳಿ ನನಗೆ ಏನೂ ಹೇಳಲು ತೋಚುತ್ತಾ ಇಲ್ಲ :-( :-( .. ನಿಮ್ಮ ಮಾತು ಸರಿಯಾಗಿದೆ ..

    ಪ್ರತ್ಯುತ್ತರಅಳಿಸಿ
  4. ನನ್ನ ಮಾತಿಗೆ ಅನುಮೋದನೆಯನ್ನೂ ಬೆಂಬಲವನ್ನೂ ವ್ಯಕ್ತಪಡಿಸಿರುವ ಮತ್ತು ಸಾಮಾಜಿಕ ಕಾಳಜಿ ತೋರಿರುವ ಅಕ್ಷರಮಿತ್ರತ್ರಯರಿಗೆ ಅನಂತ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  5. ಮುತಾಲಿಕ್ ಕೇವಲ ಮಾತಾಡ್ಲಿಕ್ಕೆ ಲಾಯಕ್ ಅಂತ ಮೊತ್ತಮ್ಮೆ ತೋರಿಸಿಕೊಟ್ಟಿದ್ದಾರೆ, ಅಷ್ಟೆ. ಆತನ ಹೋರಾಟದ ಕಿಚ್ಚನ್ನು ಸರಿದಾರಿಯಲ್ಲಿ ಉರಿಸುವವರು ಬೇಕು. ಆ ನಿಟ್ಟಿನಲ್ಲಿ ನಿಮ್ಮ ಯೋಚನೆ ಖಂಡಿತಾ ಮೆಚ್ಚುವಂತದ್ದು.

    ಪ್ರತ್ಯುತ್ತರಅಳಿಸಿ
  6. ನನ್ನ ಯೋಚನೆಯ ಅನುಮೋದನೆಗಾಗಿ ಧನ್ಯವಾದ ಡಾ. ಸತ್ಯನಾರಾಯಣ ಅವರೇ.

    ಪ್ರತ್ಯುತ್ತರಅಳಿಸಿ