ಉನ್ನತ ನ್ಯಾಯಾಲಯಗಳ ನ್ಯಾಯಾಧೀಶರ ಆಸ್ತಿ ವಿವರವನ್ನು ಇಚ್ಛುಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಬಹಿರಂಗಗೊಳಿಸಬೇಕೇ ಬೇಡವೇ ಎನ್ನುವ ವಿಷಯವು ಎರಡು ಕಾರಣಗಳಿಗಾಗಿ ವಿವಾದಕ್ಕೀಡಾಗಬಾರದಿತ್ತು.
ಒಂದನೆಯ ಕಾರಣ, ನ್ಯಾಯಾಲಯಗಳಮೇಲೆ ಜನರು ಹೊಂದಿರುವ ಗೌರವಕ್ಕೆ ಈ ವಿವಾದದಿಂದಾಗಿ ಕೊಂಚವಾದರೂ ಚ್ಯುತಿ ಉಂಟಾಗಿಯೇ ಆಗುತ್ತದೆ. ಎರಡನೆಯ ಕಾರಣ, ಆಸ್ತಿ ವಿವರ ಬಹಿರಂಗಗೊಳಿಸುವುದು ನ್ಯಾಯಾಧೀಶರು ಪಾಲಿಸಬೇಕಾದ ಒಂದು ಸಾಮಾಜಿಕ ನ್ಯಾಯ.
ನ್ಯಾಯಾಧೀಶರಾಗಿ ಅವರು ಮೊಕದ್ದಮೆಗಳ ಬಗ್ಗೆ ನೀಡುವ ತೀರ್ಪು ಸರ್ವೋಚ್ಚ ನ್ಯಾಯಾಲಯದ ತೀರ್ಮಾನದ ನಂತರ ಪ್ರಶ್ನಾತೀತ. ಆದರೆ ವ್ಯಕ್ತಿಗಳಾಗಿ ಅವರು ಸಮಾಜದಲ್ಲಿ ಪ್ರಶ್ನಾತೀತರೇನಲ್ಲ. ಆ ’ವ್ಯಕ್ತಿ’ಯೇ ’ನ್ಯಾಯಾಧೀಶ’ನೂ ಆಗಿರುವುದರಿಂದ, ವ್ಯಕ್ತಿಯಾಗಿಯೂ ಆತನ ಜೀವನ ಪಾರದರ್ಶಕವಾಗಿರಬೇಕಾದ್ದು ಆತ ನೀಡುವ ತೀರ್ಪಿನಮೇಲೆ ಸಮಾಜಕ್ಕೆ ಅವಿಚ್ಛಿನ್ನ ವಿಶ್ವಾಸದ ದೃಷ್ಟಿಯಿಂದ ಅತ್ಯವಶ್ಯ. ಈ ನಿಟ್ಟಿನಲ್ಲಿ ಆತ ತನ್ನ ಮತ್ತು ಕುಟುಂಬದವರ ಆಸ್ತಿ ವಿವರವನ್ನು ಇಚ್ಛುಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಬಹಿರಂಗಗೊಳಿಸಬೇಕಾದ್ದು ಆತನ ಸಾಮಾಜಿಕ ಹೊಣೆಗಾರಿಕೆ. ಈ ಹೊಣೆಗಾರಿಕೆಯ ಮುಂದೆ, ಮತ್ತು, ಸಮಾಜಕ್ಕೆ ನ್ಯಾಯಾಲಯಗಳಮೇಲಣ ವಿಶ್ವಾಸದ ಪ್ರಶ್ನೆಯ ಮುಂದೆ, ಆತ ಆಸ್ತಿ ವಿವರ ಬಹಿರಂಗಗೊಳಿಸದಿರಲು ನೀಡಬಲ್ಲ ಕಾರಣಗಳೆಲ್ಲವೂ ನಗಣ್ಯ.
ಆಸ್ತಿ ವಿವರ ಬಹಿರಂಗಗೊಳಿಸುವುದನ್ನು ಸಮರ್ಥಿಸಿ ನ್ಯಾಯಮೂರ್ತಿ ಶೈಲೇಂದ್ರಕುಮಾರ್ ಅವರು ಪತ್ರಿಕೆಗಳಲ್ಲಿ ಬರೆದಿರುವ ಲೇಖನವು ಯಥೋಚಿತವಾಗಿದೆ. ಒಂದಿಬ್ಬರು ಅತ್ಯಂತ ಹಿರಿಯ ನ್ಯಾಯವೇತ್ತರು ಶೈಲೇಂದ್ರಕುಮಾರ್ ಅವರ ಲೇಖನಕ್ಕೆ ಪ್ರತಿಕ್ರಿಯಿಸುತ್ತ, ’ನಿಮ್ಮ ಆಸ್ತಿಯನ್ನು ಬಹಿರಂಗಗೊಳಿಸಲು ಯಾರು ಬೇಡವೆಂದರು? ಬಹಿರಂಗಗೊಳಿಸಿ. ತಾವಾಗಿ ಆಸ್ತಿ ಬಹಿರಂಗಗೊಳಿಸಬಯಸುವ ನ್ಯಾಯಾಧೀಶರನ್ನು ಯಾರು ತಡೆಹಿಡಿದಿದ್ದಾರೆ? ಬಯಸುವವರು ಬಹಿರಂಗಗೊಳಿಸಲಿ’, ಎಂಬರ್ಥದ ಮಾತುಗಳನ್ನಾಡಿರುವುದು ನ್ಯಾಯಾಂಗಕ್ಕೆ ಶೋಭೆ ತರುವಂಥದಲ್ಲ. ಇದು ಹೇಗಾಯಿತೆಂದರೆ, ಸಾಮಾಜಿಕ ವಿಷಯವೊಂದರ ಬಗ್ಗೆ ’ಹೋರಾಡೋಣ’ ಎಂದು ಕರೆ ನೀಡಿದವರಿಗೆ, ’ನೀವು ಹೋರಾಡಿ. ಬೇಡ ಅಂದವರ್‍ಯಾರು?’ ಅಂದಂತಾಯಿತು!
ಬಯಸಿದವರಷ್ಟೇ ಆಸ್ತಿ ವಿವರ ಬಹಿರಂಗಪಡಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಎಲ್ಲ ಸ್ತರದ ಎಲ್ಲ ನ್ಯಾಯಾಧೀಶರೂ ಸ್ವಕುಟುಂಬದ ಆಸ್ತಿ ವಿವರ ಸಹಿತ ತಮ್ಮ ಆಸ್ತಿ ವಿವರವನ್ನು ಇಚ್ಛುಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಕಡ್ಡಾಯವಾಗಿ ಬಹಿರಂಗಗೊಳಿಸುವಂತಾದಾಗ ಮಾತ್ರ ನ್ಯಾಯವ್ಯವಸ್ಥೆಯಮೇಲೆ ಸಮಾಜಕ್ಕೆ ಸಂಪೂರ್ಣ ವಿಶ್ವಾಸ ಉಂಟಾಗುತ್ತದೆ.
ಬುಧವಾರ, ಆಗಸ್ಟ್ 26, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ನ್ಯಾಯಾಧೀಶ ಕೂಡ ಒಬ್ಬ ವ್ಯಕ್ತಿ. ಆತ ಕೂಡ ಪಾರದರ್ಶಕವಾಗಿರಬೇಕು. ಆದ್ದರಿ೦ದ ಎಲ್ಲರ೦ತೆ ಅವರು ಕೂಡ ಕಾನೂನು ರೀತ್ಯಾ accountable. ಆದ್ದರಿ೦ದ ಅವರು ಕೂಡ ಅಸ್ತಿ ವಿವರ ಘೋಷಣೆ ಮಾಡಬೇಕು. ಕಾನೂನಿಗಿ೦ತ ಯಾರು ದೊಡ್ಡವರಲ್ಲ. ಪ್ರಶ್ನಾತೀತರೂ ಅಲ್ಲ
ಪ್ರತ್ಯುತ್ತರಅಳಿಸಿಆನ೦ದ ಸರ್ ,
ಪ್ರತ್ಯುತ್ತರಅಳಿಸಿಸಕಾಲಿಕ ಬರಹ . ಮಾಹಿತಿಯುಕ್ತವಾಗಿ ಇದೆ .
ಪೂರಕ ಅಭಿಪ್ರಾಯಕ್ಕಾಗಿ ಪರಾಂಜಪೆ ಅವರಿಗೂ ಮೆಚ್ಚುಗೆಗಾಗಿ ರೂಪಾ ಅವರಿಗೂ ಧನ್ಯವಾದಗಳು.
ಪ್ರತ್ಯುತ್ತರಅಳಿಸಿ