ಶನಿವಾರ, ಆಗಸ್ಟ್ 22, 2009

ಪಂಚಕ್ಷೇತ್ರದ ಪಂಚಾಂಗಶ್ರವಣ

ಸೋಲಿಲ್ಲ ತನಗೆಂದು ಸೋಮಣ್ಣ ಮೆರೆಯುತಿರೆ
ಸೋಲಿಸಿದರೈ ಅವನ ಮತದಾರರು!
ಮೂಲ ಪಕ್ಷವ ಬಿಟ್ಟು ಜಿಗಿಯುವಾ ಜನಗಳಿಗೆ
ಕಾಲಕಾಲಕ್ಕು ಇದು ಪಾಠವಯ್ಯ!

***

ಪ್ರಾಮಾಣಿಕತೆ ಇಲ್ಲ ಪಕ್ಷನಿಷ್ಠೆಯು ಇಲ್ಲ
ತಾನೋರ್ವ ಸ್ಟಾರ್ ಎಂಬ ಜಂಬ ಬೇರೆ!
ಈ ಮಾನ್ಯ ಯೋಗೀಶ್ವರನು ತಾನು ಜನಗಳನು
ಯಾಮಾರಿಸಲುಹೋಗಿ ಸೋತನಯ್ಯೊ!

***

ಗೆದ್ದು ’ಕೈ’ಕೊಟ್ಟರೈ ಮಗನ ಕಣಕಿಟ್ಟರೈ
ಒದ್ದು ಕ್ಷೇತ್ರವ ಹೋದ ಖರ್ಗೆಯವರು!
ಬುದ್ಧೂಗಳಲ್ಲ ಜನ ಬಲು ಬುದ್ಧಿಶಾಲಿಗಳು
ಗುದ್ದು ಕೊಟ್ಟರು ಚೆನ್ನ ಮಲ್ಕಾರ್ಜುನ!

***

ಕೊಳ್ಳೆಗಾಲದಲ್ನಾವು ಕೊಳ್ಳೆಹೊಡೆವುವು ಮತವ
ಒಳ್ಳೆ ಜಯ ನಮಗೆಂಬ ’ಕೈ’ ನಂಬ್ಕೆಯ
ಸುಳ್ಳುಮಾಡಿದರಲ್ಲಿ ಮತದಾರ ಜನ ಮತ್ತು
ಮಳ್ಳನಂತಿದ್ದ ಮತಿವಂತ ಭರಣಿ!

***

ರಾಮನಗರದಲಿಂದು ಆ ’ಕುಮಾರ’ನ ಅಲೆಯು
ಎಂದು ಶ್ರುತಪಡಿಸಿದರು ಅಲ್ಲಿ ಜನರು
ಆ ’ಮಗ’ನ ಕೆಲಸಕ್ಕು ಮತ್ತು ಕಣ್ಣೀರಿಗೂ
ಮನಸೋತು ಗೆಲಿಸಿದರು ಅಶ್ವತ್ಥನ

***

ಸಿಕ್ಕ ಜೋಡಿಯೆ ಲಾಭ ಕಮಲಕ್ಕೆ, ಆದರೇನ್
ಬಕ್ಕಬಾರಲು ಬಿತ್ತು ಆಪರೇಷನ್!
ಸಿಕ್ಕಲಾರದ ಸೀಟು ಸಿಕ್ಕಿಬಿಟ್ಟವು, ಅಸಲು
ದಕ್ಕಬೇಕಾದವೇ ಕೈಕೊಟ್ಟವು!

***

ಕಾಂಗ್ರೆಸ್‌ನ ಸ್ಥಿತಿ ಮಾತ್ರ ಬಲು ಶೋಚನೀಯವೈ
ಇದ್ದ ನಾಲ್ಕರಲಿ ದಕ್ಕಿದ್ದು ಒಂದೆ!
ಭಾಂಗ್ರ ನೃತ್ಯವ ಮಾಡಿದರು ಎಲ್ಲ ನಾಯಕರು
ಹಾಂಗಾದ್ರು ಮತದಾರ ಒಲಿಯಲಿಲ್ಲ!

***

ದೆಸೆ ಅಂದ್ರೆ ತೆನೆಹೊತ್ತ ಮಹಿಳೆಯದು ಈ ಬಾರಿ
ಕಸಿದುಕೊಂಡಳು ಚನ್ನಪಟ್ಣವನ್ನೂ!
ಒಸಿ ಕೆಲಸ, ಮತ್ತೆಲ್ಲ ಕಣ್ಣೀರು, ಇವು ಎರಡು
ಹುಸಿಹೋಗಲಿಲ್ಲ, ಭಲೆ, ಗೌಡ್ರ ಬ್ರೈನು!

***

ಪಂಚಕ್ಷೇತ್ರದ ಈ ಪಂಚಾಂಗಶ್ರವಣದಿಂ
ಕೊಂಚವಾದರು ನಮ್ಮ ’ಕಮಲ’-’ಕೈ’ಗೆ
ಮಿಂಚಬಹುದೇ ಅರಿವು? ತಿಳಿಯಬಹುದೇ ಜನರ
ವಂಚಿಸಲು ಸಾಧ್ಯವಿಲ್ಲೆಂಬ ಸತ್ಯ?

6 ಕಾಮೆಂಟ್‌ಗಳು:

  1. ತುಂಬ ಚೆನ್ನಾಗಿದೆ ಸರ್.
    ಗುಳಿಗೆ ಅಂಥ ಕರೆದ್ರು, ನಿಮ್ಮ ಹಾಸ್ಯ ಚುಟುಕಗಳು ಇಂಜೆಕ್ಷ್ ನ್ ಇದ್ದಂಗೆ ಸರ್.

    ನಿಮ್ಮಿಂದ ಸ್ಫೂರ್ತಿಗೊಂಡು:-

    ಸೋಮಣ್ಣನಿಗೆ ಅವರು ಅರೆದು ಕುಡಿದ "ಎಗುರ್ ವೇದ" ಈ ಬಾರಿ 'ಕೈ' ಕೊಟ್ಟಿತು.
    ಎಲ್ಲ ವೇದಗಳಿಗು ಮೀರಿದ್ದು ಗೋವಿಂದ ನಾಮವಲ್ಲವೆ.

    ಪ್ರತ್ಯುತ್ತರಅಳಿಸಿ
  2. ಸೋಮಣ್ಣನದು ಸದ್ಯಕ್ಕೆ ನಾಮವೇದ!! ನಾಮವೇ(ದ)!
    ರಾಜಾ, ಗೋ...ವಿಂದ!
    ಶ್ರೀಕಾಂತ್, ಸ್ಫೂರ್ತಿಗಾಗಿ ಧನ್ಯವಾದ. ’ಎಗುರ್ ವೇದ’ ಬಂಬಾಟ್!

    ಪ್ರತ್ಯುತ್ತರಅಳಿಸಿ
  3. election review ಸಕತ್ತಾಗಿ ನಿಮ್ಮ ಶೈಲಿಯಲ್ಲಿ ಮಾಡಿದ್ದೀರಿ ಸರ್. ಸೂಪರ್ರಾಗಿದೆ. ನಿಜ ನಿಮ್ಮದು ಗುಳಿಗೆಯಲ್ಲಿ ಇಂಜಕ್ಷನ್ನೇ!!

    ಪ್ರತ್ಯುತ್ತರಅಳಿಸಿ
  4. ಆನ೦ದ ಸಾರ್,
    ನಿಮ್ಮ ಇಂಜಕ್ಷನ್ ಸೊಗಸಾಗಿ ಇದೆ .. ಆದರೆ ಎಲ್ಲರಿಗೆ ೧ ಇಂಜಕ್ಷನ್ ಸಾಲುವುದಿಲ್ಲ .. ೫-೬ ಇಂಜಕ್ಷನ್ ಕೊಟ್ಟರೆ ಸಲ್ಪ ಸುಧಾ ರಿಸಿ ಯಾರು ಎ೦ಬ ಆಸೆ .

    ಪ್ರತ್ಯುತ್ತರಅಳಿಸಿ
  5. ಅವರದು ದಪ್ಪ ಚರ್ಮ! ಸೂಜಿ ಮುರಿದುಹೋದರೆ ಕಷ್ಟ!
    ಧನ್ಯವಾದ ರೂಪಾ ಅವರೇ.

    ಪ್ರತ್ಯುತ್ತರಅಳಿಸಿ