ಬುಧವಾರ, ಆಗಸ್ಟ್ 26, 2009

ವ್ಯಕ್ತಿಗಳಾಗಿ ನ್ಯಾಯಾಧೀಶರು ಪ್ರಶ್ನಾತೀತರೇನಲ್ಲ

ಉನ್ನತ ನ್ಯಾಯಾಲಯಗಳ ನ್ಯಾಯಾಧೀಶರ ಆಸ್ತಿ ವಿವರವನ್ನು ಇಚ್ಛುಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಬಹಿರಂಗಗೊಳಿಸಬೇಕೇ ಬೇಡವೇ ಎನ್ನುವ ವಿಷಯವು ಎರಡು ಕಾರಣಗಳಿಗಾಗಿ ವಿವಾದಕ್ಕೀಡಾಗಬಾರದಿತ್ತು.

ಒಂದನೆಯ ಕಾರಣ, ನ್ಯಾಯಾಲಯಗಳಮೇಲೆ ಜನರು ಹೊಂದಿರುವ ಗೌರವಕ್ಕೆ ಈ ವಿವಾದದಿಂದಾಗಿ ಕೊಂಚವಾದರೂ ಚ್ಯುತಿ ಉಂಟಾಗಿಯೇ ಆಗುತ್ತದೆ. ಎರಡನೆಯ ಕಾರಣ, ಆಸ್ತಿ ವಿವರ ಬಹಿರಂಗಗೊಳಿಸುವುದು ನ್ಯಾಯಾಧೀಶರು ಪಾಲಿಸಬೇಕಾದ ಒಂದು ಸಾಮಾಜಿಕ ನ್ಯಾಯ.

ನ್ಯಾಯಾಧೀಶರಾಗಿ ಅವರು ಮೊಕದ್ದಮೆಗಳ ಬಗ್ಗೆ ನೀಡುವ ತೀರ್ಪು ಸರ್ವೋಚ್ಚ ನ್ಯಾಯಾಲಯದ ತೀರ್ಮಾನದ ನಂತರ ಪ್ರಶ್ನಾತೀತ. ಆದರೆ ವ್ಯಕ್ತಿಗಳಾಗಿ ಅವರು ಸಮಾಜದಲ್ಲಿ ಪ್ರಶ್ನಾತೀತರೇನಲ್ಲ. ಆ ’ವ್ಯಕ್ತಿ’ಯೇ ’ನ್ಯಾಯಾಧೀಶ’ನೂ ಆಗಿರುವುದರಿಂದ, ವ್ಯಕ್ತಿಯಾಗಿಯೂ ಆತನ ಜೀವನ ಪಾರದರ್ಶಕವಾಗಿರಬೇಕಾದ್ದು ಆತ ನೀಡುವ ತೀರ್ಪಿನಮೇಲೆ ಸಮಾಜಕ್ಕೆ ಅವಿಚ್ಛಿನ್ನ ವಿಶ್ವಾಸದ ದೃಷ್ಟಿಯಿಂದ ಅತ್ಯವಶ್ಯ. ಈ ನಿಟ್ಟಿನಲ್ಲಿ ಆತ ತನ್ನ ಮತ್ತು ಕುಟುಂಬದವರ ಆಸ್ತಿ ವಿವರವನ್ನು ಇಚ್ಛುಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಬಹಿರಂಗಗೊಳಿಸಬೇಕಾದ್ದು ಆತನ ಸಾಮಾಜಿಕ ಹೊಣೆಗಾರಿಕೆ. ಈ ಹೊಣೆಗಾರಿಕೆಯ ಮುಂದೆ, ಮತ್ತು, ಸಮಾಜಕ್ಕೆ ನ್ಯಾಯಾಲಯಗಳಮೇಲಣ ವಿಶ್ವಾಸದ ಪ್ರಶ್ನೆಯ ಮುಂದೆ, ಆತ ಆಸ್ತಿ ವಿವರ ಬಹಿರಂಗಗೊಳಿಸದಿರಲು ನೀಡಬಲ್ಲ ಕಾರಣಗಳೆಲ್ಲವೂ ನಗಣ್ಯ.

ಆಸ್ತಿ ವಿವರ ಬಹಿರಂಗಗೊಳಿಸುವುದನ್ನು ಸಮರ್ಥಿಸಿ ನ್ಯಾಯಮೂರ್ತಿ ಶೈಲೇಂದ್ರಕುಮಾರ್ ಅವರು ಪತ್ರಿಕೆಗಳಲ್ಲಿ ಬರೆದಿರುವ ಲೇಖನವು ಯಥೋಚಿತವಾಗಿದೆ. ಒಂದಿಬ್ಬರು ಅತ್ಯಂತ ಹಿರಿಯ ನ್ಯಾಯವೇತ್ತರು ಶೈಲೇಂದ್ರಕುಮಾರ್ ಅವರ ಲೇಖನಕ್ಕೆ ಪ್ರತಿಕ್ರಿಯಿಸುತ್ತ, ’ನಿಮ್ಮ ಆಸ್ತಿಯನ್ನು ಬಹಿರಂಗಗೊಳಿಸಲು ಯಾರು ಬೇಡವೆಂದರು? ಬಹಿರಂಗಗೊಳಿಸಿ. ತಾವಾಗಿ ಆಸ್ತಿ ಬಹಿರಂಗಗೊಳಿಸಬಯಸುವ ನ್ಯಾಯಾಧೀಶರನ್ನು ಯಾರು ತಡೆಹಿಡಿದಿದ್ದಾರೆ? ಬಯಸುವವರು ಬಹಿರಂಗಗೊಳಿಸಲಿ’, ಎಂಬರ್ಥದ ಮಾತುಗಳನ್ನಾಡಿರುವುದು ನ್ಯಾಯಾಂಗಕ್ಕೆ ಶೋಭೆ ತರುವಂಥದಲ್ಲ. ಇದು ಹೇಗಾಯಿತೆಂದರೆ, ಸಾಮಾಜಿಕ ವಿಷಯವೊಂದರ ಬಗ್ಗೆ ’ಹೋರಾಡೋಣ’ ಎಂದು ಕರೆ ನೀಡಿದವರಿಗೆ, ’ನೀವು ಹೋರಾಡಿ. ಬೇಡ ಅಂದವರ್‍ಯಾರು?’ ಅಂದಂತಾಯಿತು!

ಬಯಸಿದವರಷ್ಟೇ ಆಸ್ತಿ ವಿವರ ಬಹಿರಂಗಪಡಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಎಲ್ಲ ಸ್ತರದ ಎಲ್ಲ ನ್ಯಾಯಾಧೀಶರೂ ಸ್ವಕುಟುಂಬದ ಆಸ್ತಿ ವಿವರ ಸಹಿತ ತಮ್ಮ ಆಸ್ತಿ ವಿವರವನ್ನು ಇಚ್ಛುಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಕಡ್ಡಾಯವಾಗಿ ಬಹಿರಂಗಗೊಳಿಸುವಂತಾದಾಗ ಮಾತ್ರ ನ್ಯಾಯವ್ಯವಸ್ಥೆಯಮೇಲೆ ಸಮಾಜಕ್ಕೆ ಸಂಪೂರ್ಣ ವಿಶ್ವಾಸ ಉಂಟಾಗುತ್ತದೆ.

ಪ್ರಮೋದ್ ಮುತಾಲಿಕ್ ಸಂಸ್ಕೃತಿ

ನನ್ನೊಡನೆ ಯಾವ ಸಂಪರ್ಕವನ್ನೂ ಹೊಂದಿರದಿದ್ದ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಈಚೆಗೆ ನನಗೊಂದು ಪತ್ರ ಬರೆದು ’ಅಸಹಾಯಕ ಬಿ.ಜೆ.ಪಿ. ಸರಕಾರ’ದ ವಿಚಾರವಾಗಿ ’ಸಮಾಲೋಚನೆ ಹಾಗೂ ಪರಿಹಾರ ಮಾರ್ಗ’ ಚರ್ಚಿಸಲು ತಾನು ನನ್ನನ್ನು ಭೇಟಿಯಾಗಲು ಇಚ್ಛಿಸಿರುವುದಾಗಿಯೂ ಇದೇ ದಿನಾಂಕ ೨೦ ಮತ್ತು ೨೪ರಂದು ತಾನು ಬೆಂಗಳೂರಿಗೆ ಬರುತ್ತಿರುವುದಾಗಿಯೂ ಭೇಟಿಗೆ ಅವಕಾಶ ಮಾಡಿಕೊಡಬೇಕೆಂದೂ ವಿನಂತಿಸಿದರು. ಈ ಪತ್ರ ಸಾಮಾನ್ಯ ಅಂಚೆಯ ಮೂಲಕ ನನಗೆ ದಿನಾಂಕ ೨೨ರ ಸಂಜೆ ತಲುಪಿತು. ಮರುದಿನ ಬೆಳಗ್ಗೆ ನಾನು ಮುತಾಲಿಕ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ೨೪ರ ಭೇಟಿಗೆ ಸಮ್ಮತಿ ವ್ಯಕ್ತಪಡಿಸಿದೆ. ೨೪ರಂದು ತಾನು ಬೆಂಗಳೂರಿಗೆ ಬಂದವನು ನನ್ನನ್ನು ಪುನಃ ಸಂಪರ್ಕಿಸುವುದಾಗಿ ಅವರು ಉತ್ತರಿಸಿದರು.

೨೪ರಂದು ನಾನು ನನ್ನೆಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿ ಮುತಾಲಿಕ್‌ಗಾಗಿ ಕಾದೆ. ಆದರೆ ಅವರು ನನ್ನನ್ನು ಸಂಪರ್ಕಿಸಲೂ ಇಲ್ಲ, ಆ ಬಗ್ಗೆ ಮಾಹಿತಿಯೇನನ್ನೂ ನನಗೆ ತಲುಪಿಸಲೂ ಇಲ್ಲ! ೨೬ರ ಮಧ್ಯಾಹ್ನದ ಈ ಹೊತ್ತಿನವರೆಗೂ ಅವರಿಂದಾಗಲೀ ಅವರ ಕಡೆಯವರಿಂದಾಗಲೀ ಯಾವ ಸುದ್ದಿಯೂ ಇಲ್ಲ! ಇದು ಮುತಾಲಿಕ್ ಅವರು ನನಗೆ ಮಾಡಿರುವ ಅವಮಾನವೆಂದೇ ನಾನು ಭಾವಿಸಬೇಕಾಗುತ್ತದೆ.

ಭೇಟಿಗಾಗಿ ವಿನಂತಿಸಿಕೊಂಡು, ಸಂಪರ್ಕಿಸುತ್ತೇನೆಂದು ತಿಳಿಸಿ, ಅನಂತರ ಸಂಪರ್ಕಿಸುವುದಿರಲಿ, ಕನಿಷ್ಠಪಕ್ಷ ಆ ಬಗ್ಗೆ ಮಾಹಿತಿ ತಲುಪಿಸುವ ಸಂಸ್ಕೃತಿಯನ್ನೂ ಹೊಂದಿರದ ಈ ವ್ಯಕ್ತಿ ತಾನು ಈ ನಾಡಿನ ಧರ್ಮ-ಸಂಸ್ಕೃತಿಯ ರಕ್ಷಣೆ ಮಾಡುತ್ತೇನೆಂದು ಹೊರಟಿರುವುದನ್ನು ನೋಡಿದರೆ ನನಗೆ ಸೋಜಿಗವೆನಿಸುತ್ತದೆ!

ನಿಗದಿಯನುಸಾರ ೨೪ರಂದು ಮುತಾಲಿಕ್ ನನ್ನನ್ನು ಭೇಟಿಯಾಗಿದ್ದರೆ ನಾನು ಅವರಿಗೆ ಅಂದು ಈ ಕೆಳಗಿನ ಮಾತುಗಳನ್ನು ಹೇಳುವವನಿದ್ದೆ:

’ದ್ವೇಷ ಮತ್ತು ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವುದು ಸಂಸ್ಕೃತಿಯಲ್ಲ. ಅಂಥವರನ್ನು ಸಮಾಜ ಎಂದೂ ಒಪ್ಪದು. ಇಂದಿನ ಪೀಳಿಗೆಗೆ ಈ ನೆಲದ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿದಾಗ ಎಲ್ಲ ಸಮಸ್ಯೆಗಳೂ ತಾನಾಗಿಯೇ ನಿವಾರಣೆಯಾಗುತ್ತವೆ. ಆದ್ದರಿಂದ ಇಂದಿನ ಪೀಳಿಗೆಗೆ ಈ ನೆಲದ ಸಂಸ್ಕೃತಿಯ ಬಗ್ಗೆ ವಿಸ್ತೃತ ತಿಳಿವಳಿಕೆ ನೀಡಬೇಕಾದ್ದು ಇಂದಿನ ಅಗತ್ಯ. ಹಾಗೆ ತಿಳಿವಳಿಕೆ ಹೊಂದಿದವರ ಸಂಖ್ಯೆ ಕ್ರಮೇಣ ಹೆಚ್ಚುತ್ತ ಸಾಗಿ ಮುಂದೊಂದು ದಿನ ಅವರೇ ನಾಡಿನ ಆಡಳಿತದ ಚುಕ್ಕಾಣಿ ಹಿಡಿಯುವಂಥ ಸನ್ನಿವೇಶ ಸೃಷ್ಟಿಯಾದಾಗ ಅಸಹಾಯಕ-ಭ್ರಷ್ಟ-ದುಷ್ಟ ಸರ್ಕಾರಗಳಿಂದ ನಮಗೆ ಮುಕ್ತಿ ದೊರೆಯುತ್ತದೆ. ಅಲ್ಲಿಯತನಕ ನಮಗೆ ತಾಳ್ಮೆ ಬೇಕು ಮತ್ತು ಅನವರತ ಇತ್ಯಾತ್ಮಕ ಪ್ರಯತ್ನ ಸಾಗಿರಬೇಕು.’

ಈ ಮಾತುಗಳನ್ನು ನಾನು ಮುತಾಲಿಕ್ ಅವರಿಗೆ ಸಕಾರಣ ವಿವರಿಸುವವನಿದ್ದೆ.

ಇಂದಿನ ದಿನಪತ್ರಿಕೆಯೊಂದರ ಪತ್ರ ವಿಭಾಗದಲ್ಲಿ ನನ್ನ ಈ ಮನದಳಲಿನ ಪತ್ರ ಪ್ರಕಟಗೊಂಡಿದ್ದು ಅದನ್ನು ಮುತಾಲಿಕ್ ಗಮನಿಸಿರುತ್ತಾರೆ. ಆದ್ದರಿಂದ ಇನ್ನು ಅವರಿಗೆ ನಾನು ಹೇಳುವ ಅಗತ್ಯವಿಲ್ಲ.

ಭಾನುವಾರ, ಆಗಸ್ಟ್ 23, 2009

ಮೋದಕಪ್ರಿಯನಿಗೆ ಮೋದಕ ಮಾಲೆ

ಬಣ್ಣಬಣ್ಣದ ಗಣಪ
ಚೆನ್ನಮಣ್ಣಿನ ಗಣಪ
ನಿನ್ನ ವೈಭವ ಕಂಡು
ಕಣ್ಣು ತುಂಬಿತು ಕಣಪ

***

ಗಣಪಾ, ನಿನಗೆ ತರಾವರಿ ವೇಷ
ಜೊತೆಗೆ ಕೈಯಲ್ಲಿ ಅಂಕುಶ, ಪಾಶ
ಮೂಷಿಕ ಹೊತ್ತಿದೆ ಉದರಮಂಜೂಷ
ಈ ಪರಿ ನೋಡಲು ನಮಗೆ ಸಂತೋಷ

***

ತಂಡುಲ ದುಬಾರಿ
ಸೊಂಡಿಲ ಗಣಪಾ,
ಈ ಸಲ ನಿನಗೆ
ಕಡುಬಿಲ್ಲ ಕಣಪಾ

***

ಅಕ್ಕಿ, ಬೇಳೆ, ಬೆಲ್ಲ
ತುಟ್ಟಿಯಾಗಿವೆ ಎಲ್ಲ
ಮೋದಕ ಮಾಡಲು ನಮಗೆ
ಮೋದವೇ ಕೊರತೆಯಲ್ಲಾ!

***

ವಿದ್ವತ್ ಕೊಡು ಅಂತೀವಿ
ಗಣಪ, ನಿನ್ನ ಬಳಿ
ವಿದ್ಯುತ್ ಕೊಡು ಅಂತೀವಿ
ಅಪ್ಪ ಈಶ್ವರಪ್ಪನ ಬಳಿ

***

ಚುನಾವಣೆ, ಉಪಚುನಾವಣೆ
ಜನರ ಪಾಲಿಗೆ ತೀರದ ಬವಣೆ!
ವಿನಾಯಕಾ, ಪರಿಹರಿಸಯ್ಯ
ಜನನಾಯಕರ ಈ ಚಿತಾವಣೆ!

***

ಗುದ್ದಿದ ರಾವಣನಿಗೆ
ಬುದ್ಧಿ ಕಲಿಸಿದೆ ನೋಡು
ಸದ್ಯದ ರಾವಣರನ್ನು
ಗುದ್ದಿ ಸರಿಮಾಡು

***

ಬುದ್ಧಿ ಇದ್ದರೆ ಸಿದ್ಧಿ
ನಮ್ತಲೇಲೋ, ಲದ್ದಿ!
ಸಿದ್ಧಿ ಮತ್ತು ಬುದ್ಧಿ
ಹೊಂದಿ ಗಣಪಾ, ಗೆದ್ದಿ!

***

ಬೆವರಿಂದ ಹುಟ್ಟಿದೆ
ಮಣ್ಣಲ್ಲಿ ಮೂರ್ತಗೊಂಡೆ
ನೀರಲ್ಲಿ ಕರಗಿದೆ
ಮೂರರ ಮಹತ್ವವನೂ
ಜಗತ್ತಿಗೆ ಸಾರಿದೆ

***

ಅಮ್ಮನ ಸೆರಗು ಹಿಡಿದು ಬರ್‍ತೀಯ
ಚಿಕ್ಕಮ್ಮನ ಮಡಿಲೊಳಗೆ ಹೋಗ್ತೀಯ
ತಾಯಿ, ಮಲತಾಯಿ ಇಬ್ಬರನ್ನೂ
ಸಮಾನವಾಗಿ ಕಾಣ್ತೀಯ

***

ಸೋತೆ ನಾ ಜಗದೆದುರು
ಗಜವದನ.
ಸೋಲಿಸಬಲ್ಲುದೆ
ಗಜವ ದನ?

***

ಚಂದ ಸಂವಿಧಾನ ಹೊಂದಿದ ನಮ್ಮದು
’ಗಣತಂತ್ರ’
ತಂದೆತಾಯಿಯನು ಸುತ್ತಿದ ನಿನ್ನದು
’ಗಣಪ ತಂತ್ರ’!

***

ಗಣಪ ದೇವರಿಗೆ
ಮೂಷಿಕ ವಾಹನ
ಗಣಕ ಯಂತ್ರಕ್ಕೆ
ಮೂಷಿಕ ಚಾಲನ

***

ಮನೆಯಲ್ಲಿ ಜಪ
’ಹೇರಂಬ’
ಬಾರ್‌ನಲ್ಲಿ ಆಲಾಪ
’ಹೇ ರಂಭ’!

***

ಸಿಂಗಾರ ಮಂಟಪದಲ್ಲಿ
ಗಾಡ್ ಗಣೇಶ
ಮುಂಗಾರು ಮಳೆಯಲ್ಲಿ
ಸ್ಟಾರ್ ಗಣೇಶ

-೦-

ಶನಿವಾರ, ಆಗಸ್ಟ್ 22, 2009

ಪಂಚಕ್ಷೇತ್ರದ ಪಂಚಾಂಗಶ್ರವಣ

ಸೋಲಿಲ್ಲ ತನಗೆಂದು ಸೋಮಣ್ಣ ಮೆರೆಯುತಿರೆ
ಸೋಲಿಸಿದರೈ ಅವನ ಮತದಾರರು!
ಮೂಲ ಪಕ್ಷವ ಬಿಟ್ಟು ಜಿಗಿಯುವಾ ಜನಗಳಿಗೆ
ಕಾಲಕಾಲಕ್ಕು ಇದು ಪಾಠವಯ್ಯ!

***

ಪ್ರಾಮಾಣಿಕತೆ ಇಲ್ಲ ಪಕ್ಷನಿಷ್ಠೆಯು ಇಲ್ಲ
ತಾನೋರ್ವ ಸ್ಟಾರ್ ಎಂಬ ಜಂಬ ಬೇರೆ!
ಈ ಮಾನ್ಯ ಯೋಗೀಶ್ವರನು ತಾನು ಜನಗಳನು
ಯಾಮಾರಿಸಲುಹೋಗಿ ಸೋತನಯ್ಯೊ!

***

ಗೆದ್ದು ’ಕೈ’ಕೊಟ್ಟರೈ ಮಗನ ಕಣಕಿಟ್ಟರೈ
ಒದ್ದು ಕ್ಷೇತ್ರವ ಹೋದ ಖರ್ಗೆಯವರು!
ಬುದ್ಧೂಗಳಲ್ಲ ಜನ ಬಲು ಬುದ್ಧಿಶಾಲಿಗಳು
ಗುದ್ದು ಕೊಟ್ಟರು ಚೆನ್ನ ಮಲ್ಕಾರ್ಜುನ!

***

ಕೊಳ್ಳೆಗಾಲದಲ್ನಾವು ಕೊಳ್ಳೆಹೊಡೆವುವು ಮತವ
ಒಳ್ಳೆ ಜಯ ನಮಗೆಂಬ ’ಕೈ’ ನಂಬ್ಕೆಯ
ಸುಳ್ಳುಮಾಡಿದರಲ್ಲಿ ಮತದಾರ ಜನ ಮತ್ತು
ಮಳ್ಳನಂತಿದ್ದ ಮತಿವಂತ ಭರಣಿ!

***

ರಾಮನಗರದಲಿಂದು ಆ ’ಕುಮಾರ’ನ ಅಲೆಯು
ಎಂದು ಶ್ರುತಪಡಿಸಿದರು ಅಲ್ಲಿ ಜನರು
ಆ ’ಮಗ’ನ ಕೆಲಸಕ್ಕು ಮತ್ತು ಕಣ್ಣೀರಿಗೂ
ಮನಸೋತು ಗೆಲಿಸಿದರು ಅಶ್ವತ್ಥನ

***

ಸಿಕ್ಕ ಜೋಡಿಯೆ ಲಾಭ ಕಮಲಕ್ಕೆ, ಆದರೇನ್
ಬಕ್ಕಬಾರಲು ಬಿತ್ತು ಆಪರೇಷನ್!
ಸಿಕ್ಕಲಾರದ ಸೀಟು ಸಿಕ್ಕಿಬಿಟ್ಟವು, ಅಸಲು
ದಕ್ಕಬೇಕಾದವೇ ಕೈಕೊಟ್ಟವು!

***

ಕಾಂಗ್ರೆಸ್‌ನ ಸ್ಥಿತಿ ಮಾತ್ರ ಬಲು ಶೋಚನೀಯವೈ
ಇದ್ದ ನಾಲ್ಕರಲಿ ದಕ್ಕಿದ್ದು ಒಂದೆ!
ಭಾಂಗ್ರ ನೃತ್ಯವ ಮಾಡಿದರು ಎಲ್ಲ ನಾಯಕರು
ಹಾಂಗಾದ್ರು ಮತದಾರ ಒಲಿಯಲಿಲ್ಲ!

***

ದೆಸೆ ಅಂದ್ರೆ ತೆನೆಹೊತ್ತ ಮಹಿಳೆಯದು ಈ ಬಾರಿ
ಕಸಿದುಕೊಂಡಳು ಚನ್ನಪಟ್ಣವನ್ನೂ!
ಒಸಿ ಕೆಲಸ, ಮತ್ತೆಲ್ಲ ಕಣ್ಣೀರು, ಇವು ಎರಡು
ಹುಸಿಹೋಗಲಿಲ್ಲ, ಭಲೆ, ಗೌಡ್ರ ಬ್ರೈನು!

***

ಪಂಚಕ್ಷೇತ್ರದ ಈ ಪಂಚಾಂಗಶ್ರವಣದಿಂ
ಕೊಂಚವಾದರು ನಮ್ಮ ’ಕಮಲ’-’ಕೈ’ಗೆ
ಮಿಂಚಬಹುದೇ ಅರಿವು? ತಿಳಿಯಬಹುದೇ ಜನರ
ವಂಚಿಸಲು ಸಾಧ್ಯವಿಲ್ಲೆಂಬ ಸತ್ಯ?

ಗುರುವಾರ, ಆಗಸ್ಟ್ 20, 2009

ಜಸ್ವಂತ್ ಸಿಂಗ್ ಪುಸ್ತಕದಲ್ಲೇನಿದೆ?

ಪ್ರಸ್ತುತ ವಿವಾದಕ್ಕೀಡಾಗಿರುವ ತಮ್ಮ ’ಜಿನ್ನಾ: ಇಂಡಿಯಾ, ಪಾರ್ಟಿಷನ್, ಇಂಡಿಪೆಂಡೆನ್ಸ್’ ಪುಸ್ತಕದಲ್ಲಿ ಜಸ್ವಂತ್ ಸಿಂಗ್ ಒಂದು ಕಡೆ ಹೀಗೆ ಹೇಳುತ್ತಾರೆ:

"ಭಾರತದ ಮಣ್ಣಿನಿಂದ ರೂಪುಗೊಂಡು ಭಾರತೀಯ ಅನುಭವದಿಂದ ಹದಗೊಂಡ ಭಾರತೀಯ ತಾನೆಂಬ ತನ್ನ ಮೂಲವನ್ನು ತಿರಸ್ಕರಿಸಿದುದು ಜಿನ್ನಾ ಅವರ ಭಾವನೆಯ ಪ್ರಾಥಮಿಕ ಮತ್ತು ರಾಚನಿಕ ಪ್ರಮಾದ."

ಮುಂದುವರಿದು ಜಸ್ವಂತ್ ಸಿಂಗ್ ಹೇಳುತ್ತಾರೆ:

"ಸರಿಯಲ್ಲದ ಈ ’ಅಲ್ಪಸಂಖ್ಯಾತ ಭಾವಲಕ್ಷಣ’ದಿಂದಾಗಿ ದೇಶವಿಭಜನೆಯೆಂಬ ಒಣ ಅವಿವೇಕವು ಮೊಟ್ಟಮೊದಲು ಅಣಿಗೊಂಡದ್ದು. ಅನಂತರ ಈ ಅವಿವೇಕವು (ತನಗೆದುರಾದ) ತಡೆಯನ್ನು ನೀಗಿಕೊಳ್ಳುತ್ತ ಅವಿಚ್ಛಿನ್ನ ಭಾರತದ ಸಂಪೂರ್ಣ ರಚನೆಯನ್ನು ಮತ್ತು ಭವ್ಯ ಸೌಧವನ್ನು ಸಂಕಟಕ್ಕೀಡುಮಾಡಿತು. ಇದಕ್ಕೆ ಉತ್ತರವು (ಮದ್ದು?) ದೇಶವಿಭಜನೆಯಲ್ಲಿ ಮಾತ್ರ ಲಭ್ಯ ಎಂದು ಜಿನ್ನಾ ಪ್ರತಿಪಾದಿಸಿದರು ಮತ್ತು ನೆಹರು, ಪಟೇಲ್ ಹಾಗೂ ಕಾಂಗ್ರೆಸ್‌ನ ಇತರರು ಕೂಡ ಕೊನೆಗೆ ಒಪ್ಪಿದರು. ಹೀಗೆ ಪಾಕಿಸ್ತಾನ ಜನ್ಮತಳೆಯಿತು."

ಪುಸ್ತಕದಲ್ಲಿ ಇನ್ನೊಂದು ಕಡೆ ಜಸ್ವಂತ್ ಸಿಂಗ್ ಹೇಳುತ್ತಾರೆ:

"ಜಿನ್ನಾರ ವಿರೋಧ ಹಿಂದೂಗಳಮೇಲಾಗಲೀ ಹಿಂದೂ ಧರ್ಮದಮೇಲಾಗಲೀ ಆದುದಾಗಿರಲಿಲ್ಲ, ಮುಸ್ಲಿಂ ಲೀಗ್‌ನ ನಿಜವಾದ ಎದುರಾಳಿ ಕಾಂಗ್ರೆಸ್ ಎಂದು ಜಿನ್ನಾ ಭಾವಿಸಿದ್ದರು ಮತ್ತು ಲೀಗ್ ಅನ್ನು ಸ್ವಯಂ ತನ್ನ ’ಆತ್ಮವಿಸ್ತರಣೆ’ಯಂತೆ ಪರಿಗಣಿಸಿದ್ದರು. ಮುಸ್ಲಿಮರನ್ನು ರಕ್ಷಿಸುವಲ್ಲಿ ಕಾಂಗ್ರೆಸ್ ಸರ್ಕಾರಗಳ ಅಸಾಮರ್ಥ್ಯವನ್ನು ರುಜುವಾತುಪಡಿಸಲು ಜಿನ್ನಾ ಬಹಳಷ್ಟು ಹಿಂದೂ-ಮುಸ್ಲಿಂ ಗಲಭೆಗಳನ್ನು (೧೯೪೬; ಬಂಗಾಳ, ಬಿಹಾರ, ಇತ್ಯಾದಿ) ಹುಟ್ಟುಹಾಕಿದರು.......ಜಿನ್ನಾರೊಂದಿಗಿನ ಅಸಂಖ್ಯಾತ ಸಂಭಾಷಣೆಗಳಲ್ಲಿ ಹಿಂದೂಗಳ ಅಥವಾ ಹಿಂದೂ ಧರ್ಮದ ವಿರುದ್ಧ ಅವರು ಮಾತಾಡಿದ ನೆನಪು ನನಗೆ ವಿರಳ. ಅವರ ವಿರೋಧ ಏನಿದ್ದರೂ ಕಾಂಗ್ರೆಸ್ ನಾಯಕತ್ವದಮೇಲೆಯೇ ಕೇಂದ್ರೀಕೃತವಾಗಿತ್ತು ಮತ್ತು ಆ ವಿರೋಧವು ಅನಂತರದಲ್ಲಿ ಬಹುತೇಕ ದ್ವೇಷವಾಗಿ ಬೆಳೆಯಿತು (ಎಂ.ಆರ್.ಎ.ಬೇಗ್, ಜಿನ್ನಾರ ಕಾರ್ಯದರ್ಶಿ)."

ಮತ್ತೊಂದು ಕಡೆ ಸಿಂಗ್ ಹೇಳುತ್ತಾರೆ:

"ಇವೆಲ್ಲದರಲ್ಲೂ ಧರ್ಮ ಎಂಬುದು ಸಂಪೂರ್ಣವಾಗಿ ಪ್ರಾಸಂಗಿಕವಾದುದಾಗಿತ್ತು; ತನಗೆ ಬೇಕಿದ್ದ ವ್ಯಕ್ತಿತ್ವ ಮತ್ತು ಗುಣಗಳನ್ನು ಜಿನ್ನಾರಿಗೆ ಪಾಕಿಸ್ತಾನ ಮಾತ್ರ ಕೊಟ್ಟಿತು. ಪಾಕಿಸ್ತಾನವನ್ನು ಗಳಿಸಲು ಜಿನ್ನಾ ಅಗತ್ಯವಾಗಿದ್ದರೆ, ಜಿನ್ನಾನ ಬಯಕೆ ಈಡೇರಿಕೆಗೆ ಪಾಕಿಸ್ತಾನವೂ ಅಗತ್ಯವಾಗಿತ್ತು."

ಮಗದೊಂದು ಕಡೆ ಸಿಂಗ್ ಹೇಳುತ್ತಾರೆ:

".....೧೯೩೯ರ ದಂಗೆಯ ಸ್ಫೋಟ ಮತ್ತು ೧೯೪೭ರ ವಿಭಜನೆ ಈ ಅವಧಿಯ ಮಧ್ಯೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಶೋಚನೀಯ ಮಟ್ಟದಲ್ಲಿ ವಾಸ್ತವಿಕತೆ, ದೂರದೃಷ್ಟಿ, ಉದ್ದೇಶ ಮತ್ತು ಇಚ್ಛಾಶಕ್ತಿ ಇವುಗಳ ಕೊರತೆಯನ್ನು ಹೊಂದಿತ್ತೆಂದು ಅತ್ಯಂತ ದುಃಖದಿಂದ ಹೇಳಬೇಕಾಗಿದೆ."

ಹೀಗೆ, ತಮ್ಮ ಪುಸ್ತಕದಲ್ಲಿ ಜಸ್ವಂತ್ ಸಿಂಗ್ ಅವರು ಇತಿಹಾಸದ ವಾಸ್ತವವನ್ನು ಗ್ರಹಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆಯೇ ಹೊರತು ಎಲ್ಲಿಯೂ ಜಿನ್ನಾರನ್ನು ಅನವಶ್ಯವಾಗಿ ಹಾಡಿ ಹೊಗಳಿಲ್ಲ, ಮುಸ್ಲಿಮರ ತುಷ್ಟೀಕರಣದ ಯತ್ನ ಮಾಡಿಲ್ಲ ಮತ್ತು ಮುಖ್ಯವಾಗಿ ಇಂದಿನ ಭಾರತದ ಒಟ್ಟಂದಕ್ಕೆ ಧಕ್ಕೆ ತರುವಂಥದೇನನ್ನೂ ಬರೆದಿಲ್ಲ. ಅಂದಿನ ಕಾಂಗ್ರೆಸ್ ಪಕ್ಷದ ಬಗ್ಗೆ ಜಿನ್ನಾರಿಗಿದ್ದ ಶಂಕೆಗಳನ್ನು ಮತ್ತು ಆ ಶಂಕೆಗಳಿಂದಾಗಿ ಆತ ಪ್ರತ್ಯೇಕ ಪಾಕಿಸ್ತಾನ ರಚನೆಯ ಹಠಕ್ಕೆ ಬಿದ್ದುದನ್ನು ಪುಸ್ತಕದಲ್ಲಿ ಸಿಂಗ್ ವಿಶದಪಡಿಸಿದ್ದಾರಷ್ಟೆ.

ಸಿಂಗ್ ಅವರ ಈ ರೀತಿಯ ವಿಶದೀಕರಣದಿಂದ ಭಾರತದಲ್ಲಿನ ಹಿಂದೂ-ಮುಸ್ಲಿಂ ಸಾಮರಸ್ಯಕ್ಕಾಗಲೀ ಭಾರತ-ಪಾಕಿಸ್ತಾನ ಮೈತ್ರಿಗಾಗಲೀ ಇತ್ಯಾತ್ಮಕ ಕೊಡುಗೆ ಉಂಟಾದೀತೇ ಹೊರತು ನೇತ್ಯಾತ್ಮಕ ಕೊಡುಗೆ ಸರ್ವಥಾ ಉಂಟಾಗುವುದಿಲ್ಲ. ಜಿನ್ನಾ ಅವರು ಧರ್ಮದ ಕಾರಣದಿಂದಾಗಿ ಪ್ರತ್ಯೇಕ ರಾಷ್ಟ್ರವನ್ನು ಕೇಳಲಿಲ್ಲ, ರಾಜಕೀಯ ಕಾರಣದಿಂದಾಗಿ ಕೇಳಿದರು ಎಂಬುದು ಸಿಂಗ್ ಅವರ ಅಂಬೋಣ. ವಿಭಜನೆಯು ಧರ್ಮದ್ವೇಷದ ಕಿಚ್ಚನ್ನು ಹಚ್ಚಿದ್ದನ್ನು ಸಿಂಗ್ ಅವರೂ ಒಪ್ಪುತ್ತಾರೆ. ಇವೆಲ್ಲದರ ಮೂಲ ಕಾರಣವನ್ನು ಬಯಲಿಗೆಳೆಯುವ ಪ್ರಯತ್ನವನ್ನು ಸಿಂಗ್ ಮಾಡಿದ್ದಾರೆ. ಆ ಯತ್ನದ ಹಾದಿಯಲ್ಲಿ ಜಿನ್ನಾರ ಬಗ್ಗೆ ಸ್ಪಷ್ಟೀಕರಣದ ನುಡಿಗಳು ಬಂದಿವೆ. ನಾವು ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಪುಸ್ತಕದ ಯಾವ ಭಾಗವೂ ಓದುಗನು ಜಸ್ವಂತ್ ಸಿಂಗ್ ಅವರ ದೇಶಭಕ್ತಿಯನ್ನು ಅನುಮಾನಿಸುವಂತೆ ಮೂಡಿಬಂದಿಲ್ಲ. ಸಿಂಗ್ ಅವರು ಈ ದೇಶದ ಮಾಜಿ ಸೈನಿಕನೆಂಬುದನ್ನು ಈ ಸಂದರ್ಭದಲ್ಲಿ ನಾವು ನೆನಪಿಟ್ಟುಕೊಳ್ಳಬೇಕು.

ಹೀಗಿರುವಾಗ, ಬಿಜೆಪಿ ಪಕ್ಷದಿಂದ ಸಿಂಗ್ ಅವರ ಉಚ್ಚಾಟನೆ ತಪ್ಪು ನಡೆಯೆಂದೇ ಹೇಳಬೇಕಾಗುತ್ತದೆ. ಸಿಂಗ್ ಉಚ್ಚಾಟನೆಗೆ ಇತರ ಒಳ ಕಾರಣಗಳೂ ಇರುವ ಸಂಗತಿ ರಹಸ್ಯವಾಗಿಯೇನೂ ಉಳಿದಿಲ್ಲ. ಅದೇನೇ ಇರಲಿ, ’ವಿನಾಶ ಕಾಲೇ ವಿಪರೀತ ಬುದ್ಧಿಃ’ ಎಂಬಂತಾಗಬಾರದು ಬಿಜೆಪಿಯ ಈ ಬುದ್ಧಿಪರಾಕ್ರಮ. ಏಕೆಂದರೆ, ಈ ದೇಶವನ್ನು ಯಾವುದೇ ಒಂದು ಪಕ್ಷದ ಏಕಚಕ್ರಾಧಿಪತ್ಯಕ್ಕೆ ಬಲಿಕೊಡಬಾರದು. ಯಾವ ಪಕ್ಷದ ಆಡಳಿತವೇ ಇರಲಿ, ಪ್ರಬಲ ಎದುರಾಳಿ ಪಕ್ಷ ನಮಗಿಂದು ಅತ್ಯವಶ್ಯ. ಇಂಥ ಸಂದರ್ಭದಲ್ಲಿ ಬಿಜೆಪಿಯು ಆತ್ಮಹತ್ಯಾಮಾರ್ಗ ತುಳಿಯದೆ ಬಹಳ ಎಚ್ಚರದಿಂದ ಹೆಜ್ಜೆಯಿಡಬೇಕು.

ಬುಧವಾರ, ಆಗಸ್ಟ್ 19, 2009

ಗಣಪತಿ ಬರೆದ ಮಹಾಪ್ರಬಂಧ

ಓಂ ಶ್ರೀ ಗಣೇಶಾಯ ನಮಃ, ಓಂ ಶ್ರೀ ಗಣೇಶಾಯ ನಮಃ.

ಯಾವುದೇ ಕೆಲಸವನ್ನು ಆರಂಭಿಸಬೇಕಾದರೆ ಮೊದಲು ಗಣಪತಿಗೆ ’ಹಾಯ್’ ಹೇಳಿ ಮುಂದುವರಿಯಬೇಕು. ಒಂದು ಸಲ ’ಹಾಯ್’ ಹೇಳಿದರೆ ಸಾಕು, ಆದರೆ ನಾನಿಲ್ಲಿ ಎರಡು ಸಲ ಹೇಳಿದ್ದೇನೆ. ಯಾಕೆಂದರೆ ಇದು ಗಣಪತಿಯ ಕುರಿತಾದ್ದೇ ಬರಹ.

ಪೀಠಿಕೆ
--------
ಹರಿಕಥೆಯ ಪೇಳ್ವೆನು ಭಕ್ತರಿಗಿಂದು
ಹರಸುತನೆ ಹರಸುತನೆ ಓದು
ನೀನೂ ಚತುರ್ಥಿಯಂದು
ಇಲ್ಲಿಗೆ ಬಂದು.

ಯಾವುದೇ ಹರಿಕಥೆಯಾಗಲೀ ಗಣಪತಿಯ ಪದ್ಯರೂಪಿ ಸ್ತುತಿಯೊಂದಿಗೆ ಆರಂಭವಾಗಬೇಕು. ಎಂದೇ ಈ ಹರಿಕಥೆಯ ಆರಂಭದಲ್ಲಿ ಗಣಪತಿ ಕುರಿತ ಈ ಪದ್ಯ. ಆದರೆ ಈ ಪದ್ಯವು ಸ್ತುತಿಯಲ್ಲ, ವಸ್ತುಸ್ಥಿತಿ. ಬರಲಿರುವ ಚತುರ್ಥಿಯಂದು ಗಣಪ ನಮ್ಮ ಬಳಿಗೆ ಬರುತ್ತಾನಷ್ಟೆ. ಆಗ ಅವನೂ ಓದಲಿ ಈ ಹರಿಕಥೆ.

ಅಂದಹಾಗೆ, ಮೇಲಿನ ಪದ್ಯದಲ್ಲಿ ನಾನು ಎರಡು ಸಲ ’ಹರಸುತನೆ’ ಎಂದದ್ದರ ಅರ್ಥ ಇಂತಿದೆ. ಮೊದಲನೆಯದರ ಅರ್ಥ ’ಹರನ ಮಗನೆ’ ಎಂದು. ಎರಡನೆಯದರ ಅರ್ಥ ’ಹರಸುತ್ತಲೇ’ ಎಂದು. ಹರಿಕಥೆ ದಾಸರ ಶಬ್ದಚಮತ್ಕಾರ ಇದು. ಇಷ್ಟಕ್ಕೂ, ಹರಿಕಥೆಯೆಂದರೆ ಹಾರ್‍ಮೋನಿಯಂ ತಬಲಾ ಮತ್ತು ಹರಿದಾಸರ ಕೈಯಲ್ಲಿನ ಚಿಟಿಕೆ ಇವುಗಳ ಜೊತೆಗೆ ಅವರ ಬಾಯಿಂದಲೂ ಹೊರಡುವ ನಾನಾ ಬಗೆಯ ಶಬ್ದಗಳ ಅರ್ಥಾತ್ ಸೌಂಡ್‌ಗಳ ಚಮತ್ಕಾರವೇ ತಾನೆ!

ನನ್ನ ಈ ಹರಿಕಥೆ ಹರಿಕಥೆಯಲ್ಲ, ಹರಕಥೆ. ಹರಸುತನ ಕಥೆ.

ಹರಿ ಹರ ಒಂದೇ. ಅದು ದಾವಣಗೆರೆಯ ಪಕ್ಕದಲ್ಲಿದೆ. ವಿಶ್ವ ಭೂಪಟದಲ್ಲಿ ಇನ್ನೊಂದು ಹರಿಹರ ನನಗಂತೂ ಕಂಡಿಲ್ಲ.

ಇಷ್ಟಕ್ಕೂ ನನ್ನ ಈ ಹರಿಕಥೆ ಹರಿಕಥಾ ದಾಸರು ಮಾಡುವಂಥ ಆ ಟೈಪ್ ಹರಿಕಥೆ ಅಲ್ಲ.
’ಸುಮ್ನೆ ಹರಿಕಥೆ ಹಚ್ಬೇಡ. ಷಾರ್ಟಾಗಿ ಹೇಳ್ಬಿಡು’, ಅಂತಾರಲ್ಲಾ ಆ ಟೈಪ್ ಹರಿಕಥೆ ಇದು.

ಕಥೆ
-----

ತಿಪ್ಪೇಶಿ ಎಮ್ಮೆ ಕಟ್ಟಿದ.
ಪಾಸಾದ.

ಎಂ.ಎ. ಪಾಸಾದಮೇಲೆ ಏನು ಮಾಡಬೇಕು? ಪಿ.ಎಚ್.ಡಿ. ಮಾಡಬೇಕು.

ಭಾರತದ ಎಲ್ಲ ತಂದೆತಾಯಂದಿರಂತೆಯೇ ತಿಪ್ಪೇಶಿಯ ಮಾತಾಪಿತೃರೂ ತಮ್ಮ ಮಗ ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂದು ಬಯಸಿದ್ದರು. ಆದರೆ ತಿಪ್ಪೇಶಿ ಎಮ್ಮೆ ಆದ.

ಪಿ.ಎಚ್.ಡಿ. ಮಾಡಿ ಡಾಕ್ಟರ್ ಆಗಿ ತೋರಿಸ್ತೀನಿ ಅಂದುಕೊಂಡು ಪಿ.ಎಚ್.ಡಿ. ಮಾಡಲು ನಿರ್ಧರಿಸಿದ.

ಯಾವ ವಿಷಯದಮೇಲೆ ಪಿ.ಎಚ್.ಡಿ. ಮಾಡೋದು? ದಿನಪತ್ರಿಕೆಯಮೇಲೆ ಕಣ್ಣಾಡಿಸಿದ. ಆ ದಿನ ಮೂವರು ಪಿ.ಎಚ್.ಡಿ. ಗಳಿಸಿದ ಸುದ್ದಿಗಳಿದ್ದವು. ಅವರು ಆಯ್ದುಕೊಂಡಿದ್ದ ವಿಷಯಗಳು:

(೧) ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಭಾರತದಮೇಲೆ ಹಂದಿಜ್ವರದ ಪರಿಣಾಮ.
(೨) ದರೋಡೆಕೋರರ ಮನಃಸ್ಥಿತಿ: ಒಂದು ಮನೋ ಅರ್ಥೋ ಸಮಾಜೋ ವೈಜ್ಞಾನಿಕ ವಿಶ್ಲೇಷಣೆ.
(೩) ನೊಣ ಹೊಡೆಯುವುದಕ್ಕೂ ಸೊಳ್ಳೆ ಹೊಡೆಯುವುದಕ್ಕೂ ಇರುವ ಸಾಮ್ಯ ಹಾಗೂ ವ್ಯತ್ಯಾಸ: ಒಂದು ಕ್ಷ ಕಿರಣ.

ಊಹ್ಞೂ. ಇಂಥ ಕ್ಲಿಷ್ಟ ದುಷ್ಟ ನಿಕೃಷ್ಟ ವಿಷಯಗಳನ್ನು ಪಿ.ಎಚ್.ಡಿ.ಗೆ ಆಯ್ದುಕೊಳ್ಳಲು ತಿಪ್ಪೇಶಿಯ ಮನಸ್ಸು ಒಪ್ಪಲಿಲ್ಲ. ಯಾವುದಾದರೂ ಸರಳ ಸುಂದರ ಆಕರ್ಷಕ ವಿಷಯ ಆಗಬೇಕು. ಯಾವುದು?

’ಈ ಸಲ ಗಣಪ್ಪಂಗೆ ಸರ್ವಜ್ಞನ ಡ್ರೆಸ್ ಹಾಕಣ್ವಾ ಅಣ್ಣಾ?’ ಅಂತ ತಮ್ಮರಾಯ ಕೇಳಿದ್ದೇ ತಡ ತಿಪ್ಪೇಶಿಯ ತಲೆಯಲ್ಲಿ ವಿದ್ಯುತ್ ಸಂಚಾರವಾಯಿತು! (ಈಶ್ವರಪ್ಪನವರಿಗೆ ಹೇಳ್ಬೇಡಿ, ಹರಿಸಿ ಇತ್ಲಾಗೆ ಅಂತಾರೆ.)

’ಗಣಪತಿಯನ್ನು ಬಿಟ್ಟು ಬೇರಾವ ದೇವರನ್ನೂ ನಾವು ವಿಧವಿಧ ಮಾಡರ್ನ್ ವೇಷಭೂಷಣಗಳಲ್ಲಿ ಮತ್ತು ವಿವಿಧ ಪಾತ್ರಗಳಲ್ಲಿ ಪ್ರದರ್ಶನಕ್ಕಿಡುವುದಿಲ್ಲ. ಬೇರಾವ ದೇವರಿಗೂ ಸಲ್ಲದ ಈ ಗೌರವ (ಅಥವಾ ಹಿಂಸೆ) ಗಣಪತಿಗೆ ಮಾತ್ರ ಯಾಕೆ?’ ತಿಪ್ಪೇಶಿಯ ಪಿ.ಎಚ್.ಡಿ. ಸಂಶೋಧನೆಗೆ ವಿಷಯ ಸಿಕ್ಕಿಬಿಟ್ಟಿತು.

ಗಜಾನನ, ಏಕದಂತ, ಮಹೋದರ, ವಕ್ರತುಂಡ, ಲಂಬೋದರ, ವಿಘ್ನೇಶ್ವರ, ವಿಘ್ನರಾಜ, ವಿಘ್ನನಾಶಕ, ಸುಮುಖ, ಗಜಕರ್ಣ, ಧೂಮ್ರಜ, ಧೂಮ್ರಕೇತು, ಗಣಾಧಿಪ, ಗಣಾಧ್ಯಕ್ಷ, ಗಣಪತಿ, ಗಣನಾಥ, ಗಣನಾಯಕ, ಗಣೇಶ, ಗೌರೀತನಯ, ಗಜಮುಖ, ಗೌರೀಸುತ, ಹೇರಂಬ, ಭಾಲಚಂದ್ರ, ವಿಕಟ, ಮೂಷಿಕವಾಹನ, ಮೋದಕಹಸ್ತ, ಗಜವದನ, ಸಿದ್ಧಿದಾತ, ವಿಘ್ನಹರ, ವಿನಾಯಕ

ಮುಂತಾದ ಗಣಪತಿಯ ವಿವಿಧ ಹೆಸರುಗಳನ್ನು ಒಂದೇ ಉಸುರಿಗೆ ಒದರಬಲ್ಲ ಪ್ರೊ. ಶಿವಪುತ್ರಪ್ಪಾ ಬಸವರಾಜಪ್ಪಾ ಕಂಚಿನಮನಿ ಇವರು ತಿಪ್ಪೇಶಿಯ ಪ್ರಸ್ತುತ ಸಂಶೋಧನೆಗೆ ಗೈಡ್ ಆದರು.

’ಅವರು ಕಂಚಿನಮನಿ ಇರಲಿಕ್ಕಿಲ್ಲ, ಹಂಚಿನಮನಿ ಇದ್ದಾರು. ಅಥವಾ ಅದು ಇಂಗ್ಲಿಷ್ ಮನಿಯೇ?’

ಹೀಗೊಂದು ಸಂಶಯ ತಿಪ್ಪೇಶಿಗೆ ಬಂದು ಈ ಸಂಶಯಭರಿತ ವಿಷಯವೇ ಸಂಶೋಧನೆಗೆ ಯೋಗ್ಯ ಎಂದು ಅವನಿಗನ್ನಿಸಿತಾದರೂ ಈ ವಿಷಯದ ಸಾರ್ವತ್ರಿಕತೆಯ ಕೊರತೆಯಿಂದಾಗಿ ಇದರ ಸುದ್ದಿಗೆ ಹೋಗದೆ ಗಣಪತಿಗೇ ಅಂಟಿಕೊಂಡ.

ಲೈಬ್ರೆರಿಗಳಿಗೆ ಹೋಗಿ ಪುಸ್ತಕಗಳನ್ನು ತಿರುವಿಹಾಕತೊಡಗಿದ ತಿಪ್ಪೇಶಿ. ಎಲ್ಲ ಪುಸ್ತಕಗಳಲ್ಲಿದ್ದುದೂ ಒಂದೇ ಮಾಹಿತಿ: ’ಭಾರತೀಯರಲ್ಲಿ ರಾಷ್ಟ್ರೀಯತೆಯನ್ನು ಹುರಿದುಂಬಿಸಿ ವಿದೇಶಿ ದಬ್ಬಾಳಿಕೆಯ ವಿರುದ್ಧ ಭಾರತೀಯರನ್ನು ಒಗ್ಗೂಡಿಸುವ ಮಹಾನ್ ಉದ್ದೇಶದಿಂದ ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣೇಶ ಚತುರ್ಥಿಗೆ ಸಾರ್ವಜನಿಕ ಉತ್ಸವದ ಮತ್ತು ಸಾರ್ವತ್ರಿಕ ಆಚರಣೆಯ ರೂಪು ನೀಡಿದರು.’

ಇದಿಷ್ಟಕ್ಕೇ ತಿಪ್ಪೇಶಿಗೆ ಸಮಾಧಾನವಾಗಲಿಲ್ಲ. ಇನ್ನೂ ಡೀಟೈಲ್‌ಗಳಿಗಾಗಿ ತಡಕಾಡಿದ. ತಾಳೆಗರಿ ಗ್ರಂಥಗಳನ್ನು ತಿರುವಿಹಾಕಿದ. ಶಿಲಾಶಾಸನಗಳನ್ನು ಓದಿದ. ಪ್ರಯೋಜನವಾಗಲಿಲ್ಲ. ಕೊನೆಗೊಂದು ದಿನ,

’ಗಜಮುಖನೇ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನಾ ಕಲ್ಪತರು ನೀನೇ’
ಹಾಡನ್ನು ಇಪ್ಪತ್ತೊಂದು ಸಲ ಹಾಡಿ ಮಲಗಿದ.

ಕರೆದರೆ ಓ ಎನ್ನನೇ ಶಿವ(ಸೂ)ನು?

ಆ ರಾತ್ರಿ ತಿಪ್ಪೇಶಿಯ ಕನಸಿನಲ್ಲಿ ಸಾಕ್ಷಾತ್ ಗಣಪತಿಯೇ ಪ್ರತ್ಯಕ್ಷನಾದ!

ತನ್ನ ಪಿ.ಎಚ್.ಡಿ. ವಿಷಯವನ್ನು ಡೀಟೈಲ್ ಆಗಿ ಗಣಪತಿಗೆ ತಿಳಿಸಿದ ತಿಪ್ಪೇಶಿ. ವಿಧವಿಧ ಮಾಡರ್ನ್ ವೇಷಭೂಷಣಗಳಲ್ಲಿ ಮತ್ತು ವಿವಿಧ ಪಾತ್ರಗಳಲ್ಲಿ ಪ್ರದರ್ಶನಕ್ಕೊಳಗಾಗಿರುವುದೇಕೆಂದು ಗಣಪತಿಯನ್ನು ಪ್ರಶ್ನಿಸಿದ.

’ಅವರವರ ಭಾವಕ್ಕೆ, ಅವರವರ ಭಕುತಿಗೆ ತಕ್ಕಂತೆ ಅವರವರಿಗೆ ಬೇಕಾದ ವೇಷಭೂಷಣಗಳಲ್ಲಿ ಮತ್ತು ಪಾತ್ರಗಳಲ್ಲಿ ನಾನು ಅವತರಿಸುತ್ತೇನೆ ವತ್ಸಾ’, ಎಂದ ಗಣಪತಿ.

’ಭಕ್ತರಿಗೆ ಬೇಕಾದ ರೀತಿಯಲ್ಲಿ ಅವತರಿಸುವ ಕೆಲಸವನ್ನು ನೀನು ಮಾತ್ರ ಯಾಕೆ ಮಾಡುತ್ತೀ, ಇನ್ನಾವ ದೇವರೂ ಯಾಕೆ ಮಾಡುವುದಿಲ್ಲ? ಅಥವಾ, ಭಕ್ತರು ಯಾಕೆ ನಿನ್ನನ್ನು ಮಾತ್ರ ತಮಗೆ ಬೇಕಾದ ರೀತಿಗಳಲ್ಲಿ ಅವತರಿಸಿಸುತ್ತಾರೆ, ಬೇರಾವ ದೇವರನ್ನೂ ಆ ರೀತಿಯೆಲ್ಲ ಅವತರಿಸಿಸುವುದಿಲ್ಲ ಯಾಕೆ?’ ಎಂದು ಮರುಪ್ರಶ್ನೆ ಹಾಕಿದ ತಿಪ್ಪೇಶಿ. ಆಗ ಗಣಪತಿ ಹೇಳಿದ,

’ವತ್ಸಾ, ಇದಕ್ಕೆ ಉತ್ತರವನ್ನು ನಾನು ಡೀಟೈಲ್ ಆಗಿ ತಿಳಿಸುತ್ತೇನೆ. ಈಗ ಹೇಳತೊಡಗಿ ನಿನ್ನ ಸವಿನಿದ್ದೆಗೆ ಭಂಗ ತರಲಿಚ್ಛಿಸುವುದಿಲ್ಲ. ಹೇಗೂ ನಿನಗೆ ಪಿ.ಎಚ್.ಡಿ.ಗಾಗಿ ಈ ವಿಷಯದಲ್ಲಿ ಮಹಾಪ್ರಬಂಧವೇ ಬೇಕಷ್ಟೆ. ಮಹಾಪ್ರಬಂಧವನ್ನು ನಾನೇ ರಚಿಸಿ ನಿನಗೆ ಈಮೈಲ್ ಮಾಡುತ್ತೇನೆ. ವ್ಯಾಸೋಕ್ತ ಮಹಾಭಾರತವನ್ನು ಸರಸರನೆ ಲೀಲಾಜಾಲವಾಗಿ ಬರೆದು ಮುಗಿಸಿರುವ ನನಗೆ ಈ ನಿನ್ನ ಮಹಾಪ್ರಬಂಧವೇನು ಮಹಾ? ಇದೀಗಲೇ ಬರೆದು ಮುಗಿಸಿ ಈಮೈಲ್ ಮಾಡುತ್ತೇನೆ. ಬೆಳಗ್ಗೆ ಎದ್ದವನು ನೀನು ಕಂಪ್ಯೂಟರ್‌ನಲ್ಲಿ ಮೈಲ್‌ಬಾಕ್ಸ್ ಓಪನ್ ಮಾಡು. ನನ್ನ, ಊಹ್ಞೂ, ನಿನ್ನ ಮಹಾಪ್ರಬಂಧ ಅಲ್ಲಿ ರೆಡಿ ಇರುತ್ತದೆ.’

ಇಷ್ಟು ಹೇಳಿದವನೇ ಗಣಪತಿಯು ತಿಪ್ಪೇಶಿಯ ಪ್ರತಿಕ್ರಿಯೆಗೂ ಕಾಯದೆ ಅಂತರ್ಧಾನವಾಗಿಬಿಟ್ಟ.

ಮರುದಿನ ಎದ್ದವನೇ ತಿಪ್ಪೇಶಿಯು ತನ್ನ ಕಂಪ್ಯೂಟರ್ ಬಳಿಗೋಡಿದ. ಗಜಾನನನ ವಾಹನನಾದ ಮೂಷಿಕಪ್ರಭುವಿನ ನೆರವಿನಿಂದ ಈಮೈಲ್ ಬಾಕ್ಸ್ ಓಪನ್ ಮಾಡಿದ.

ವಾಹ್!
ಗಣಪತಿ ಕಳಿಸಿದ ಮಹಾಪ್ರಬಂಧದ ಕಡತ ಅಲ್ಲಿತ್ತು!

ಮೂಷಿಕದ ನೆರವಿಂದ ಆ ಕಡತದಮೇಲೆ ಕೈಬಾಣ ಹಾಯಿಸಿ ಮೂಷಿಕದ ಬೆನ್ನನ್ನು ತನ್ನ ಬೆರಳಿಂದ ಒಮ್ಮೆ ಮೃದುವಾಗಿ ಒತ್ತಿದ. ಕಡತ ತೆರೆದುಕೊಂಡಿತು.

ಓಹ್!
ಇದೇನಿದು?! ಅಂಕಿಗಳನ್ನು ಹೋಲುವ ಗಜಿಬಿಜಿ ಸನ್ನೆಗಳು, ಅರ್ಥವಾಗದ ಭಾಷೆಯ ಹುಚ್ಚಾಪಟ್ಟೆ ಆಕೃತಿಯ ಅಕ್ಷರಗಳು, ಬಗೆಬಗೆಯ ಗೀಟುಗಳು, ನಕ್ಷತ್ರಗಳು ಮತ್ತು ಇನ್ನೂ ಏನೇನೋ ಚಿತ್ರ-ವಿಚಿತ್ರಗಳು! ಇದೆಂಥ ಮಹಾಪ್ರಬಂಧ? ಇದನ್ನು ಓದುವುದಾದರೂ ಹೇಗೆ?

ಕಂಪ್ಯೂಟರ್ ಎಕ್ಸ್‌ಪರ್ಟ್ ಮಿತ್ರನೋರ್ವನನ್ನು ಕರೆಸಿದ ತಿಪ್ಪೇಶಿ. ಆ ಮಿತ್ರ,
’ಇದೇನ್ ಮಹಾ. ಒಂದ್ನಿಮಿಷದಲ್ಲಿ ಇದನ್ನ ಸರಿಮಾಡಿಕೊಡ್ತೀನಿ, ಆಗ ಓದ್ಬಹುದು’, ಎಂದು ನುಡಿದು ಸರಿಮಾಡಲು ಕುಳಿತ.

ಇಪ್ಪತ್ತೊಂದು ದಿನ ಆಯಿತು, ಇನ್ನೂ ಸರಿಮಾಡುತ್ತಲೇ ಇದ್ದಾನೆ ಆ ಕಂ.ಎ.ಮಿತ್ರ! ಅದು ದೇವರ ಭಾಷೆಯೋ ಅಥವಾ ಕಂಪ್ಯೂಟರ್ ದೋಷವೋ ಅವನಿಗೆ ಗೊತ್ತಾಗುತ್ತಿಲ್ಲ.

ಈ ಮಧ್ಯೆ ಏನಾಯಿತೆಂದರೆ ಗಣಪತಿಯು ತಿಪ್ಪೇಶಿಗೆ ಮಹಾಪ್ರಬಂಧ ಕಳಿಸಿರುವ ಸುದ್ದಿಯು ಅವನ ತಮ್ಮನ ಮುಖೇನ ಜಗತ್ತಿಗೆಲ್ಲ ಟಾಂಟಾಂ ಆಯಿತು. ಪರಿಣಾಮ,

ಭಾರತದ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಪ್ರಪಂಚದ ಅನೇಕ ವಿಶ್ವವಿದ್ಯಾಲಯಗಳು ಸದರಿ ಮಹಾಪ್ರಬಂಧವನ್ನು ತೆಕ್ಕೆಗೆ ಹಾಕಿಕೊಳ್ಳಲು ಕ್ಯೂ ಹಚ್ಚಿವೆ! ಈಗಿರುವ ಪೊಸಿಷನ್‌ನಲ್ಲಿಯೇ ಅದನ್ನು ಸ್ವೀಕರಿಸಿ ತಿಪ್ಪೇಶಿಗೆ ಡಾಕ್ಟರೇಟ್ ದಯಪಾಲಿಸಲು ಅವೆಲ್ಲ ತುದಿಗಾಲಲ್ಲಿ ನಿಂತಿವೆ! ಕಾಲಾಂತರದಲ್ಲಿ ಅದು ತಿಳಿಯಾದರೆ ವಿಶ್ವವಿದ್ಯಾಲಯಕ್ಕೆ ಭಗವಾನ್ ಪ್ರಣೀತ ವಿಷಯವೊಂದರ ಸ್ವಾಮ್ಯ ದೊರೆತಂತಾಯಿತು. ಒಂದುವೇಳೆ ಆಗದೇನೇ ಇದ್ದರೂ ನೋ ಪ್ರಾಬ್ಲಮ್, ಭಗವಂತನೇ ಬರೆದು ಕಳಿಸಿದ ಮಹಾಪ್ರಬಂಧವೊಂದರ ಒಡೆತನವೆಂದರೇನು ಸಾಮಾನ್ಯವೇ?

ಡಾಕ್ಟರೇಟ್ ಸ್ವೀಕರಿಸಲು ತಿಪ್ಪೇಶಿ ಕೇಳಿದ ರೇಟ್ ಕೊಡಲು ವಿ.ವಿ.ಗಳು ತಯಾರಾಗಿವೆ.

ಉಪಸಂಹಾರ
---------------

ಈಗ ತಾನೇ ಬಂದ ಸುದ್ದಿ:
ತಿಪ್ಪೇಶಿಯ ಕಂ.ಎ.ಮಿತ್ರನು ಸದರಿ ಪ್ರಬಂಧಭಾಷೆಯನ್ನು ತಿಳಿಗೊಳಿಸುವ ಯತ್ನದಲ್ಲಿ ಆ ಕಡತವನ್ನೇ ಹೊಲಬುಗೆಡಿಸಿಬಿಟ್ಟನಂತೆ! ಪರಿಣಾಮ, ಅದರಲ್ಲಿದ್ದದ್ದೆಲ್ಲ ಅಳಿಸಿಹೋಗಿಬಿಟ್ಟಿದೆಯಂತೆ!

ಎಲ್ಲ ದೈವೇಚ್ಛೆ!
ದೇವರ ವಿಷಯವನ್ನೇ ಕೆದಕಲು ಹೊರಟರೆ ಇನ್ನೇನಾಗುತ್ತದೆ!

ಓಂ ಶ್ರೀ ವಿಘ್ನರಾಜಾಯ ನಮಃ.

ಮಂಗಳವಾರ, ಆಗಸ್ಟ್ 18, 2009

ವಿವಿಧ ಕಾಯಿಲೆಗಳು ಮತ್ತು ಶ್ರೀರಾಮುಲು

ಈಚೆಗೆ ನನ್ನ ತಾಯಿಯವರನ್ನು ಚಿಕಿತ್ಸೆಗೆಂದು ಬೆಂಗಳೂರಿನ ಎರಡು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಟ್ಟು ಒಂದು ತಿಂಗಳ ಕಾಲ ಒಳರೋಗಿಯಾಗಿ ಸೇರಿಸಿದ್ದ ಸಂದರ್ಭದಲ್ಲಿ ನಾನು ಇಡೀ ತಿಂಗಳು ಹಗಲಿರುಳು ಆ ಎರಡು ಆಸ್ಪತ್ರೆಗಳಲ್ಲಿ ಕಳೆದೆ. ಆಗ ನಾನು ಗಮನಿಸಿದ ಸಂಗತಿಯೆಂದರೆ, ಡೆಂಗ್ಯೂ ಜ್ವರದಿಂದಾಗಿ ತೀವ್ರವಾಗಿ ಬಳಲುತ್ತಿದ್ದ ಒಳರೋಗಿಗಳು ಆ ಆಸ್ಪತ್ರೆಗಳಲ್ಲಿದ್ದರು. ಅವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿತ್ತು. ಹತ್ತಿಪ್ಪತ್ತು ದಿನಗಳ ಕಾಲ ರೋಗಿಗೆ ಚಿಕಿತ್ಸೆ ಕೊಡಿಸಿ, ಲಕ್ಷದ ಲೆಕ್ಕದಲ್ಲಿ ಹಣ ಖರ್ಚುಮಾಡಿ, ಒಳಗೆ ತೀವ್ರ ನಿಗಾ ಘಟಕದಲ್ಲಿ ರೋಗಿಯಿದ್ದರೆ ಹೊರಗೆ ರೋಗಿಯ ಬಂಧುಗಳು ಪ್ರತಿ ಕ್ಷಣವನ್ನೂ ಕಳವಳದಿಂದ ಕಳೆಯುತ್ತಿದ್ದುದನ್ನು ನಾನು ಕಣ್ಣಾರೆ ಕಂಡೆ.

ಸಾಮಾಜಿಕ ಕಾರ್ಯಗಳಿಗಾಗಿ ಊರೂರು-ಗಲ್ಲಿಗಲ್ಲಿ ಸುತ್ತುವ ನಾನು ಚಿಕನ್ ಗುನ್ಯಾ ಹಾವಳಿಗೆ ತುತ್ತಾದ ಬಡ ಸಂಸಾರಸ್ಥರನ್ನು ಸಾಕಷ್ಟು ನೋಡಿದ್ದೇನೆ. ಕುಟುಂಬಸದಸ್ಯರ ಚಿಕನ್ ಗುನ್ಯಾ ಮರಣದಿಂದಾಗಿ ಎಷ್ಟೋ ಬಡಸಂಸಾರಗಳು ದಿಕ್ಕೆಟ್ಟುಹೋಗಿರುವುದು ನನ್ನ ಗಮನಕ್ಕೆ ಬಂದಿದೆ.

H 1 N 1 (’ಹಂದಿಜ್ವರ’) ಕಾಯಿಲೆಯ ಘೋರಸ್ವರೂಪವಂತೂ ಇಡೀ ಜಗತ್ತಿಗೇ ವೇದ್ಯವಾಗಿದೆ. ಬೆಂಗಳೂರಿನಲ್ಲಿ ಅದು ಯುವಕ ಯುವತಿಯರನ್ನು ಬಲಿತೆಗೆದುಕೊಳ್ಳತೊಡಗಿದೆ.

ನಮ್ಮ ಆರೋಗ್ಯ ಮಂತ್ರಿಗಳು ತಾನು ಗಂಟೆಗೊಮ್ಮೆ ಎಲ್ಲ ಜಿಲ್ಲೆಗಳನ್ನೂ ಸಂಪರ್ಕಿಸುತ್ತಿದ್ದೇನೆಂದು ಹೇಳುತ್ತಾರೆ! ಇದೆಲ್ಲಾದರೂ ಸಾಧ್ಯವೆ? ಸಾಧ್ಯವಾದರೂ, ಒಂದೊಂದು ಜಿಲ್ಲೆಯ ಅಧಿಕಾರಿಗಳೊಡನೆ ಕೇವಲ ಒಂದೋ ಎರಡೋ ನಿಮಿಷ ಮಾತನಾಡಿ ನಮ್ಮ ಆರೋಗ್ಯ ಸಚಿವರು ಅದೇನು ಉಸ್ತುವಾರಿ ಮಾಡಿಯಾರು? ಇಷ್ಟು ದಿನಗಳೂ ಅಹರ್ನಿಶಿ ಅವರು ಹಾಗಾದರೆ ದೂರವಾಣಿಯಲ್ಲಿ ಮಾತಾಡುತ್ತಲೇ ಇದ್ದರೇ?! ಇಷ್ಟಾಗಿಯೂ ’ಹಂದಿಜ್ವರ’ ಶಂಕಿತರ ತಪಾಸಣಾ ವರದಿ ಹೊರಬೀಳುವಲ್ಲಿ ವಿಳಂಬ ಏಕೆ? ವರದಿ ವಿಳಂಬವಾದ (ದುರ್)ದೆಸೆಯಿಂದಲೇ ಬೆಂಗಳೂರಿನಲ್ಲಿ ಒಂದು ಸಾವು ಸಂಭವಿಸಲಿಲ್ಲವೆ?

ಬೆಂಗಳೂರು ಇಂದು ಅಕ್ಷರಶಃ ತಿಪ್ಪೆಗುಂಡಿಯಾಗಿದೆ. ಎಲ್ಲ ರಸ್ತೆಗಳಲ್ಲೂ ಎಲ್ಲ ಬಡಾವಣೆಗಳಲ್ಲೂ ಕೊಳೆತ ಕಸದ ರಾಶಿ ಎಲ್ಲೆಂದರಲ್ಲಿ ಕಣ್ಣಿಗೆ ರಾಚುತ್ತಿದೆ. ಮಧ್ಯಮ ದರ್ಜೆಯ ಬಹುಪಾಲು ಹೋಟೆಲ್‌ಗಳು ಜನರನ್ನು ಬೀದಿಯಲ್ಲಿ ನಿಲ್ಲಿಸಿ ತಿಂಡಿ ತಿನ್ನಿಸುತ್ತಿವೆ. ಕಳೆದ ವರ್ಷ ನಾಯಿಗಳ ಉಪಟಳದ ಬಗ್ಗೆ ಬೆಂಗಳೂರು ಮಹಾನಗರಪಾಲಿಕೆಯೊಡನೆ ಏರ್ಪಟ್ಟಿದ್ದ ಸಮಾಲೋಚನೆಯೊಂದರಲ್ಲಿ ಪಾಲಿಕೆಯು ಒಂದು ತಿಂಗಳೊಳಗೆ ಮರುಸಭೆ ಕರೆಯುವ ಆಶ್ವಾಸನೆಯನ್ನು ನನಗೆ ನೀಡಿತ್ತು. ಆದರೆ ವರ್ಷ ಕಳೆದರೂ ಇನ್ನೂ ಸಭೆಯ ಸುಳಿವೇ ಇಲ್ಲ! ಕಸ ವಿಲೇವಾರಿಗೆ ಜಿಪಿಎಸ್ ತಂತ್ರಜ್ಞಾನ ಬಳಸುವ ಆಶ್ವಾಸನೆಯೂ ಅಂದಿನ ಸಮಾಲೋಚನೆಯಲ್ಲಿ ಬಂದರೂ ಇದುವರೆಗೂ ಅದೂ ಕಾರ್ಯಗತವಾಗಿಲ್ಲ. ಪಾಲಿಕೆಯ ಆರೋಗ್ಯಾಧಿಕಾರಿಣಿಯವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆಂಬುದೇ ಗೊತ್ತಾಗುತ್ತಿಲ್ಲ. ರಾಜ್ಯದ ಇತರೆಡೆಗಳ ಸ್ಥಿತಿಯೂ ಭಿನ್ನವೇನಲ್ಲ.

ಮಂತ್ರಿಗಳು ಬರಿದೆ ಮಾತಾಡಬಾರದು. ಕೆಲಸ ಮಾಡಿ ತೋರಿಸಬೇಕು. ಮಾತಿಗೆ ಮರುಳಾಗುವಷ್ಟು ದಡ್ಡರಲ್ಲ ಜನತೆ ಎಂಬುದನ್ನು ಸದಾಕಾಲ ಅವರು ನೆನಪಿಟ್ಟುಕೊಳ್ಳಬೇಕು. ಜನತೆ ಅಂತಿಮವಾಗಿ ಪರಿಗಣಿಸುವುದು ಸರ್ಕಾರದ ಕಾರ್ಯಚಟುವಟಿಕೆಗಳ ಫಲಿತಾಂಶವನ್ನೇ ಹೊರತು ಸರ್ಕಾರವು ನೀಡುವ ಸಮರ್ಥನೆಗಳನ್ನಲ್ಲ.

ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಬಗ್ಗೆ ಹೇಳಬೇಕಾಗಿದೆ. ವರ್ಷಗಳ ಕಾಲ ಬಳ್ಳಾರಿಯಲ್ಲಿದ್ದ ನಾನು ಶ್ರೀರಾಮುಲು ಅವರನ್ನೂ ಮತ್ತು ರೆಡ್ಡಿ ಸೋದರರನ್ನೂ ಹತ್ತಿರದಿಂದ ಗಮನಿಸಿ ಬಲ್ಲೆ. ಶ್ರೀರಾಮುಲು ಓರ್ವ ಮಹತ್ವಾಕಾಂಕ್ಷಿ. ಆದರೆ ತಿಳಿವಳಿಕೆ ಕೊಂಚ ಕಮ್ಮಿ. ಕಾರ್ಯಸಾಧನೆಗಾಗಿ ಏನೂ ಮಾಡಬಲ್ಲ ಧೈರ್ಯ ಮತ್ತು ಉಮೇದು ಆತನದು. ಬಳ್ಳಾರಿಯಲ್ಲಿ ಮತ್ತು ಸುತ್ತಮುತ್ತ ಆತ ಮೊದಲಿನಿಂದಲೂ ಜನಪ್ರಿಯ. ಆತನ ಈ ಗುಣಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡವರು ಹಾಗೂ ಬಳಸಿಕೊಳ್ಳುತ್ತಿರುವವರು ಗಣಿರೆಡ್ಡಿ ಸೋದರರು. ಆದ್ದರಿಂದಲೇ ಅವರು ಸದಾಕಾಲ ಶ್ರೀರಾಮುಲುವಿನ ಸಮರ್ಥನೆಯಲ್ಲಿ ತೊಡಗಿರುತ್ತಾರೆ. ಶ್ರೀರಾಮುಲುವಿನ ನೆರವಿಲ್ಲದಿರುತ್ತಿದ್ದರೆ ರೆಡ್ಡಿ ಸೋದರರು ರಾಜಕೀಯ ಕ್ಷೇತ್ರದಲ್ಲಿ ಮಿಂಚಲು ಸರ್ವಥಾ ಸಾಧ್ಯವಾಗುತ್ತಿರಲಿಲ್ಲ. ಈಗಲೂ ಈ ಸೋದರರಿಗೆ ಶ್ರೀರಾಮುಲು ಹೆಸರೇ ಶ್ರೀರಕ್ಷೆ.

ಹೀಗಿರುವಾಗ, ಯಡಿಯೂರಪ್ಪನವರು ರೆಡ್ಡಿಗಳ ತೆಕ್ಕೆಯಿಂದ ಶ್ರೀರಾಮುಲುವನ್ನು ಬಿಡಿಸಬೇಕು. ಆದರೆ ಅದು ಸಾಧ್ಯವಾಗದಂತೆ ರೆಡ್ಡಿಗಳು ಶ್ರೀರಾಮುಲುವನ್ನು ತಮ್ಮ ಗಣಿ (ಅ)ವ್ಯವಹಾರದ ಪಾಲುದಾರನನ್ನಾಗಿ ಮಾಡಿಕೊಂಡುಬಿಟ್ಟಿದ್ದಾರೆ! ಜೊತೆಗೆ, ನಾಡಿನ ಖನಿಜಸಂಪತ್ತನ್ನು ಲೂಟಿಮಾಡಿ ಗಳಿಸಿದ ಹಣದಲ್ಲಿ ಒಂದಂಶವನ್ನು ಯಡಿಯೂರಪ್ಪನವರ ಸರ್ಕಾರದ ಭದ್ರತೆಗಾಗಿ ಖರ್ಚುಮಾಡಿ ಯಡಿಯೂರಪ್ಪನವರನ್ನೂ ದಾಕ್ಷಿಣ್ಯದಲ್ಲಿ ಸಿಕ್ಕಿಸಿದ್ದಾರೆ.

ಆದಾಗ್ಗ್ಯೂ, ಯಡಿಯೂರಪ್ಪ ಓರ್ವ ಸಮರ್ಥ ರಾಜಕಾರಣಿ ಮತ್ತು ಮುತ್ಸದ್ಧಿ ಆಗಿದ್ದಲ್ಲಿ ಯಾವ ದಾಕ್ಷಿಣ್ಯವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ರೆಡ್ಡಿ ಸೋದರರನ್ನೂ ಮತ್ತು ಶ್ರೀರಾಮುಲುವನ್ನೂ ಎಲ್ಲಿಡಬೇಕೋ ಅಲ್ಲಿಡಬೇಕು. ಆಗ ಮಾತ್ರ ರಾಜ್ಯದ ಏಳಿಗೆ ಸಾಧ್ಯ. ಇಂಥ ಧೈರ್ಯದ ನಡೆಯನ್ನು ನಾವು ಯಡಿಯೂರಪ್ಪನವರಿಂದ ನಿರೀಕ್ಷಿಸಬಹುದೇ? ಇದು ಈಗ ಮಿಲಿಯನ್ ಡಾಲರ್ ಪ್ರಶ್ನೆ!

ಬುಧವಾರ, ಆಗಸ್ಟ್ 12, 2009

ಇನ್ನಷ್ಟು ಅರವಜ್ಞ ವಚನಗಳು


(ಅಬಲೂರಿನಲ್ಲಿ ಸರ್ವಜ್ಞನ ಮನೆ)
(ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್)
-೦-

ಹಲಸೂರು ವಳ್ಳುವರ್ ಆಯ್ನಾವ್ರ ಸರ್ವಜ್ಞ
ಅಬಲೂರಿನಲ್ಲಿ ಬರಿ ಜೊಂಡು ಬೂಸಿಯಗೆ
ಮಿದುಳು ಒಸಿ ಮೊಂಡು ಅರವಜ್ಞ

***

ಪ್ರತಿಮೆ ವೋಟಿಗೆ ಬೇಕು ಪ್ರತಿಮೆ ಪೋಟಿಗೆ ಬೇಕು
ಅತಿದೊಡ್ಡ ಸಂತ ಸರ್ವಜ್ಞ ಅವನ ಮನೆ
ಗತಿಗೇಡು ಆಯ್ತೆ ಅರವಜ್ಞ

***

ಸರ್ವಜ್ಞನೆಂಬುವನು ಗರ್ವದಲಿ ಚೆನ್ನೈಲಿ
ಮೆರೆವ ಕಾಲದಲೆ ಅಬಲೂರಿನಲ್ಲೆಮಗೆ
ಮರೆತುಹೋದನೇ ಅರವಜ್ಞ

***

ತಿರುವಳ್ಳುವರ್ನಂತೆ ಸರ್ವಜ್ಞನೂ ಸಬಲ
ಚೆನ್ನೈಲಿ ಮಾತ್ರ ಅಬಲೂರಿನಲಿ ಅವನು
ದುರ್ಬಲನೆ ಆದ ಅರವಜ್ಞ

***

ನಮ್ಮ ಡೀಎಂಕೆ ರಾಷ್ಟ್ರೀಯವಾಯ್ತೀಗ
ಮಾನಗರದಲ್ಲಿ ಮೀಸಲಿಡಿ ನಮಗೆಲ್ಲ
ಬೆಂಗ್ಳೂರ್ ನಮದು ಅರವಜ್ಞ

***

ಉಳ್ಳವರ್ ಸ್ಥಾಪಿಸಲು ವಳ್ಳುವರ್ ಪ್ರತಿಮೆಯನು
ಒಳ್ಳೆ ಪ್ಲಾನಿಂದ ಬೂಸಿಯನು ಕ್ಯಾಷ್ ಮಾಡಿ
ಕೊಳ್ಳಲನುವಾದ ಅರವಜ್ಞ

***

ವಳ್ಳುವರ್ ಪ್ರತಿಮೆ ತಾ ದಳ್ಳುರಿಯ ಕಳೆದೀತೆ
ಒಳ್ಳೆ ಬಾಂಧವ್ಯ ಬೆಸೆದೀತೆ ನೆರೆರಾಜ್ಯ
ಎಳ್ಳು ಬೀರೀತೆ ಅರವಜ್ಞ

ಮಂಗಳವಾರ, ಆಗಸ್ಟ್ 11, 2009

ಕರುಣಾನಿಧಿಯನ್ನು ನಂಬಿ ಕೆಡದಿರೋಣ

ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣ ಮಾಡಿದ ಮರುದಿನವೇ ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ಕರೆದು ಕರುಣಾನಿಧಿಯವರು, ’ಪ್ರತಿಮೆ ಅನಾವರಣವು ಕಾವೇರಿ ಜಲವಿವಾದದ ಚೌಕಾಸಿ ಅಲ್ಲ’, ಎಂದಿದ್ದಾರೆ!

’ಜಲವಿವಾದ ಬಗೆಹರಿಸಿಕೊಳ್ಳುವತ್ತ ಇದು ಮೊದಲ ಹೆಜ್ಜೆ’, ಅನ್ನಬಹುದಿತ್ತು ಅವರು; ಆದರೆ ಹಾಗನ್ನಲಿಲ್ಲ! ಸೌಹಾರ್ದದ ಬಗ್ಗೆ ಪತ್ರಕರ್ತರೆದುರು ಒಟ್ಟಾರೆಯಾಗಿ ಸಾರಿಸಿ ಹೇಳಿ ಮುಗಿಸಿದ್ದಾರೆ ಅಷ್ಟೆ.

ನಮ್ಮ ಯಡಿಯೂರಪ್ಪನವರು ಮಾತ್ರ ಕರುಣಾನಿಧಿಯವರಮೇಲೆ ಅಪರಿಮಿತ ವಿಶ್ವಾಸ ಹೊಂದಿರುವಂತಿದೆ! ನಂಬಿಕೆಯೆಂಬುದು ಒಳ್ಳೆಯದೇ. ’ನಂಬಿ ಕೆಟ್ಟವರಿಲ್ಲವೊ, ರಂಗಯ್ಯನ ನಂಬಲಾರದೆ ಕೆಟ್ಟರು’, ಎಂದಿದ್ದಾರೆ ಪುರಂದರ ದಾಸರು. ಅದರಂತೆ ಕರ್ನಾಟಕದ ’ತಂಬಿ’ ಈಗ ತಮಿಳುನಾಡಿನ ’ಅಣ್ಣ’ನನ್ನು ನಂಬಿದ್ದಾನೆ. ಆದರೆ ಇತಿಹಾಸದಿಂದ ನಾವು ಪಾಠ ಕಲಿಯಬೇಕು.

ಕಾವೇರಿ ಜಲವಿವಾದ ಬಗೆಹರಿಯುವ ನಿಟ್ಟಿನಲ್ಲಿ ನಮ್ಮ ಇದುವರೆಗಿನ ನಿರೀಕ್ಷೆಗಳೆಲ್ಲ ಹುಸಿಯಾಗಿವೆ. ನಮ್ಮ ನೆಲ-ಜಲ-ಭಾಷೆ ಇವುಗಳ ವಿಷಯದಲ್ಲಿ ನ್ಯಾಯ ದೊರಕಿಸಿಕೊಳ್ಳುವ ಹಾದಿಯಲ್ಲಿ ಇದುವರೆಗೆ ನಾವು ಕೇಂದ್ರ ಸರ್ಕಾರದಮೇಲೆ ಹಾಗೂ ಸಂಬಂಧಿತ ನೆರೆರಾಜ್ಯಗಳಮೇಲೆ ಇಟ್ಟ ನಂಬಿಕೆಗಳಿಗೆಲ್ಲ ಮೋಸವಾಗಿದೆ. ಕೇಂದ್ರ ಸರ್ಕಾರದಮೇಲೆ ಮತ್ತು ನೆರೆರಾಜ್ಯಗಳಮೇಲೆ ನಾವು ವಿಶ್ವಾಸವಿಡುತ್ತಲೇ ಬಂದಿದ್ದೇವೆ, ಆದರೆ ಅವು ಎಂದಿಗೂ ನಮ್ಮ ನಂಬಿಕೆಗೆ ತಕ್ಕಂತೆ ನಡೆದುಕೊಂಡಿಲ್ಲ. ಪ್ರಸ್ತುತ ನಂಬಿಕೆಯ ಗತಿಯೂ ಅದೇ ರೀತಿ ಆಗಬಾರದು. ಜೊತೆಗೆ, ತಮಿಳುನಾಡಿನೊಂದಿಗಿನ ವಿವಾದಗಳನ್ನು ಬಗೆಹರಿಸಿಬಿಟ್ಟೆನೆಂಬ ಕೀರ್ತಿ ತನ್ನದಾಗಿಸಿಕೊಳ್ಳಲು ಯಡಿಯೂರಪ್ಪನವರು ಕನ್ನಡಿಗರ ಹಿತಾಸಕ್ತಿ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು.

ಕರುಣಾನಿಧಿಯವರನ್ನಿರಲಿ, ಈ ವಿಷಯದಲ್ಲಿ ನಮ್ಮ ಯಡಿಯೂರಪ್ಪನವರನ್ನು ನಂಬಬಹುದೇ?

ಸೋಮವಾರ, ಆಗಸ್ಟ್ 10, 2009

ದಿನಕ್ಕೊಂದು ಕವನ: (೨೧) ಚಿತ್ತದಾಗಸದಲ್ಲಿ

ಚಿತ್ತದಾಗಸದಲ್ಲಿ ಎತ್ತ ನೋಡಿದರತ್ತ ಚಿತ್ತಾರ. ತಾರೆಗಳು ಮಿನುಗುತ್ತಿವೆ
ಕತ್ತಲನು ಭೇದಿಸುವ ಹೊಳಪುಕಣ್ಗಳು ಕಂಡ ಕನಸಿನಾ ಹಾಡನ್ನು ಗುನುಗುತ್ತಿವೆ

ದೇಶಕಾಲಗಳಾಚೆ ಜೀವಜಾಲಗಳಾಚೆ ಭಾವಸಂಚಯದೊಡನೆ ಮೆರೆಯುವಾಸೆ
ಭಾವಿಸಿದ ಬದುಕಿನಲಿ ಭಾವಿಸದೆ ಬಂದಂಥ ನೋವುಗಳನೆಲ್ಲ ತಾ ಮರೆಯುವಾಸೆ
ಯಾವ ದೇಹದ ಹಂಗೂ ಯಾವ ಆತ್ಮದ ಗುಂಗೂ ಆವರಿಸದಂತೆ ತಾನಿರುವ ಆಸೆ
ಸಾವಿನಂತ್ಯದ ಭೀತಿಗೊಳಪಡದ ಬಾಳನ್ನು ಜೀವಮಾತ್ರವ ಮೀರಿ ಬಾಳುವಾಸೆ

ತಂಬೆಲರಲೊಂದಾಗಿ ತಂದಲಿನೊಡನೆ ತೂಗಿ ತನ್ನಿಚ್ಛೆಯಂತೆ ತಾ ತೊನೆಯುವಾಸೆ
ಅಂಬರವ ಸೀಳುತ್ತ ಅಂತೆಯೇ ಏರುತ್ತ ಅದರಾಚೆ ಏನಿದೆಯೊ ಕಾಣುವಾಸೆ
ಇಂಬಾಗಿ ನಿಂತವನು ಇಂಥ ಅದ್ಭುತ ಸೃಷ್ಟಿ ಎಂತು ಮಾಡಿದನೆಂದು ಅರಿಯುವಾಸೆ
ಅಂಬಾಗಿ ಮಾಯದಲಿ ಹೃದಯಗಳ ಒಳಹೊಕ್ಕು ಸಂಬಂಧಗೂಢಗಳ ತೆರೆಯುವಾಸೆ

ನಗುವ ಮಗುವಿನ ಮೊಗದ ಸೊಗವು ಸ್ಮೃತಿಪಟಲದಿಂದಗಲದಂತದನು ಬಂಧಿಸುವ ಆಸೆ
ಅಳುವ ಕಂದನ ಕರೆಗೆ ಓಗೊಡುತ ಧಾವಿಸುವ ಅಮ್ಮನಳಲಿನ ಆಳ ಅಳೆಯುವಾಸೆ
ಅರಳಿರುವ ಹೂವುಗಳ ಪರಿಮಳದಮೇಲೇರಿ ಆಗಸದಿ ತೇಲುತ್ತ ಹೋಗುವಾಸೆ
ಮರಳಿ ಬಾರದ ಕಡೆಗೆ ತೆರಳಿ ಘಮಘಮಿಸುತ್ತ ಘನವಿಶ್ವದಣುವಾಗಿ ಬೀಗುವಾಸೆ

ಚಿತ್ತದಾಗಸದಲ್ಲಿ ಎತ್ತ ನೋಡಿದರತ್ತ ಚಿತ್ತಾರ. ತಾರೆಗಳು ಮಿನುಗುತ್ತಿವೆ
ಸುತ್ತಲೂ ಕ್ಷುದ್ರಗ್ರಹಗಳು ಕಾಡುತಿದ್ದರೂ ಮತ್ತದೇ ಹಾಡನ್ನು ಗುನುಗುತ್ತಿವೆ

ಭಾನುವಾರ, ಆಗಸ್ಟ್ 9, 2009

ಸಂಪಂಗಿ, ಸರ್ವಜ್ಞ...ಅಣಕವಾಡು

ಜೈ ಜಗದೀಶ್ ಹರೇ,
ಸ್ವಾಮಿ, ಜೈ ಜಗದೀಶ್ ಹರೇ,
ಭಕ್ತ್ ಜನೋಂಕೇ ಸಂಕಟ್
ಕ್ಷಣ್ ಮೇ ದೂರ್ ಕರೇ

* ಜೈ ಜಗದೀಶ್ ಶೆಟ್ರೇ,
ಸ್ವಾಮಿ, ಜೈ ಜಗದೀಶ್ ಶೆಟ್ರೇ,
ಸಂಪಂಗೀ ಕಾ ಸಂಕಟ್
ಕ್ಷಣ್ ಮೇ ಜೋರ್ ಕರೇ

***

ಈಚಲಾ ಮರಹೀನ ನೀಚರಾ ನೆರೆಹೀನ
ಮೋಚಿದಾ ಹೆಣ್ಣು ತರಹೀನ ಮನೆಯೊಳಗೆ
ಪೇಚಾಟ ಹೀನ ಸರ್ವಜ್ಞ

* ಕರವೇ ಕರಾಳದಿನ ಕನ್ನಡಿಗಗಿದು ಸುದಿನ?
ತಮಿಳರಿಗೆ ಮಾತ್ರ ಸಖ್ಖತ್ತು ದಿನ! ಶಾಸ್ತ್ರಿ ನೀ
ಪರಮ ಮತಿಹೀನ ಅರವಜ್ಞ

***

ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರು
ಗೋರ್ಕಲ್ಲಮೇಲೆ ಮಳೆಗರೆದೊಲಾಕಲ್ಲು
ನೀರ್ಕುಡಿಯಲಹುದೆ ಸರ್ವಜ್ಞ

* ಬೂಸಿಯಗೆ ಬುದ್ಧಿಯನು ಭೇಷಾಗಿ ಹೇಳಿದರು
ಕಾಸಿನಷ್ಟೂನು ಬೆಲೆಯಿಲ್ಲ ತಮಿಳರಿಗೆ
ಪೂಸಿಹೊಡೆದೇಬಿಟ್ಟ ಅರವಜ್ಞ
(ಬೂಸಿಯ = ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ)

***

ಜಯ್ ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ!

* ಜಯ ಬಿಬಿಎಂಪಿಲಿ ಕಮಲಕೆ ಗೊತ್ತೇ,
ಜಯವೇ ನಮಗೆ ನೋಡ್ತಿರಿ ಮತ್ತೆ!

ದಿನಕ್ಕೊಂದು ಕವನ: (೨೦) ನಾನೊಬ್ಬ ಕವಿ

ನಾನೊಬ್ಬ ಕವಿ
ಎದೆಭಾರವನ್ನು ಪದಗಳಲ್ಲಿಳಿಸುವವನು
ಹೃದಯ ತುಂಬಿದಾಗ
ಹಾಳೆಗಳಮೇಲೆ
ಹದುಳವಾಗಿ
ಹರಿಸುವವನು
ಶಬ್ದಗಳಿಗೆಂದೂ ಹುಡುಕಾಡದವನು
ನಿಶ್ಶಬ್ದವಾಗಿದ್ದೂ ಶಬ್ದ ಹುಟ್ಟಿಸುವವನು

ನಾನೊಬ್ಬ ಕವಿ
ಪತ್ರಿಕೆಗಳಲ್ಲಿ ಹೆಚ್ಚು ಜಾಗ ತಿನ್ನದವನು
(ಆದಾಗ್ಗ್ಯೂ ಓದುಗನ ತಲೆ ತಿನ್ನುವವನು)
ಜಾಗ ಇದ್ದರೆ ಹಿಗ್ಗುವವನು
ಇಲ್ಲದಿದ್ದರೆ ಕುಗ್ಗುವವನು
ಖಾಲಿ ಜಾಗ ಉಳಿದರೆ ಅಲ್ಲಿ ನಾನು
ಸ್ಪೇಸ್ ಫಿಲ್ಲರ್ ಆಗಿ
ಉಪಯೋಗಿಸಲ್ಪಟ್ಟು
ಉಳಿಸುವೆನು
ಮರ್ಯಾದೆ
ಕಳೆದುಕೊಳ್ಳುವೆನು.
(ಹೇಳಿದ್ದರಂತೆ ಹಿಂದೊಬ್ಬ ಸಂಪಾದಕರು
’ಜಾಗ ಉಳಿಯಿತೇ? ತುರುಕಿ ಶಾಸ್ತ್ರಿಯನು.’)

ನಾನೊಬ್ಬ ಕವಿ
ಸಾಹಿತ್ಯ ಸಮ್ಮೇಳನಗಳ ಅನಿವಾರ್ಯ ಅಂಗ
ವಿಚಾರ ಸಂಕಿರಣಗಳಿಗೂ ನನ್ನ ಸಂಗ
ನನ್ನ ಗೋಷ್ಠಿಗೆ ಬೇಡ ಯಾವುದೂ ವಿಷಯ
ಎವರ್ ರೆಡಿ ಈ ಕವಿ ಮಹಾಶಯ!

ಏಕೆನ್ನುವಿರೋ?

ಕವನ ಇಂದು ಅಗ್ಗ
ಕವಿಗಳು ಅಗ್ಗದಲ್ಲಿ ಅಗ್ಗ
ತೋಚಿದ್ದನ್ನು ಗೀಚಿದರೆ ಅದೇ ಕವನ.
ಬೇಕಾದವರನ್ನೆಲ್ಲ ಎಲ್ಲಿ ಹಾಕುವುದೆಂದು
ತೋಚದಾದಾಗ
ಅವರಿಗೆಲ್ಲ
ಕವಿಗೋಷ್ಠಿಯಲ್ಲಿ ಸ್ಥಾನ!

ಆದರೂ,

ಕಾರ್ಡು ಗೀಚಿ ಕರೆದರೂ ಸಾಕು
ಹೋಗುತ್ತೇನೆ ನಾನೂ.
ಏಕೆ ಗೊತ್ತೆ?
ಹೋಗದೇ ಇದ್ದರೆ
ಒಂದು ದಿನ
ಈ ಜನಗಳ ಮಧ್ಯೆ
ಇಲ್ಲವಾಗಿಹೋದೇನು!

ಶನಿವಾರ, ಆಗಸ್ಟ್ 8, 2009

ತಿರುವಳ್ಳುವರ್ ಪ್ರತಿಮೆ : ಮುಂದೇನು?

ಪರ-ವಿರೋಧಗಳ ಮಧ್ಯೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯು ಅನಾವರಣಗೊಳ್ಳುತ್ತಿದೆ. ಅನಾವರಣವನ್ನು ಸಮರ್ಥಿಸುತ್ತ ಕರ್ನಾಟಕದ ಉಚ್ಚ ನ್ಯಾಯಾಲಯವು ಕನ್ನಡಪರ ಸಂಘಟನೆಗಳಿಗೆ ದಂಡಿಯಾಗಿ ಉಪದೇಶವನ್ನೂ ನೀಡಿದೆ!

ಇನ್ನೀಗ ಆಗಬೇಕಿರುವುದು, ಕಾವೇರಿ ಜಲವಿವಾದ, ಹೊಗೇನಕಲ್ ಹಗರಣ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಮುಂತಾಗಿ ತಮಿಳುನಾಡಿನೊಡನೆ ಜ್ವಲಂತವಾಗಿರುವ ಕರ್ನಾಟಕದ ಸಮಸ್ಯೆಗಳ ನಿವಾರಣೆ ಮತ್ತು ಬೆಂಗಳೂರಿನಲ್ಲಿ ತಮಿಳರೂ ಸೇರಿದಂತೆ ಕನ್ನಡೇತರರು ಮೇಲುಗೈ ಸಾಧಿಸಹೊರಡದೆ ಕನ್ನಡಿಗರೊಡನೆ ಬೆರೆತು, ಕನ್ನಡವನ್ನೇ ಮಾತಾಡುತ್ತ, ತಾವೂ ಕನ್ನಡನಾಡಿನ ಪ್ರಜೆಗಳೆಂಬ ವಾಸ್ತವವನ್ನು ಮನಸಾ ಸ್ವೀಕರಿಸಿ ಸಮಾನಭಾವದಿಂದ ಸಾಗುವಂಥ ವಾತಾವರಣದ ಸೃಷ್ಟಿ.

ತಮಿಳುನಾಡಿನೊಡನೆ ಮಾತುಕತೆ ಮೂಲಕ ಸಮಸ್ಯೆಗಳನ್ನು ನಿವಾರಿಸುವುದಾಗಿ ನಮ್ಮ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಹೇಳಿದ್ದಾರೆ. ಪ್ರತಿಮೆಯ ಸ್ಥಾಪನೆಯಾದ ಮರುಕ್ಷಣವೇ ಅವರು ಈ ಆಶ್ವಾಸನೆಯನ್ನು ಗಾಳಿಗೆ ತೂರಿಬಿಡುವ ಲಕ್ಷಣ ಅವರ ಇದುವರೆಗಿನ ಕಾರ್ಯವೈಖರಿಯನ್ನು ಗಮನಿಸಿದಾಗ ಕಾಣುತ್ತದೆ. ನಾಡಿನ ನೆಲ-ಜಲ-ಭಾಷೆಗಳ ವಿಷಯದಲ್ಲಿ ಹೀಗೆ ಮಾಡಿದರೆ ಅದು ಅಕ್ಷಮ್ಯ ಅಪರಾಧ. ನಾಡಿನ ಕೋಟ್ಯಂತರ ಜನರು ಈ ವಿಷಯದಲ್ಲಿ ಮುಖ್ಯಮಂತ್ರಿಗಳ ಭವಿಷ್ಯದ ನಡೆಯೇನೆಂಬುದನ್ನು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಮುಖ್ಯಮಂತ್ರಿಯವರು ತಾನು ನುಡಿದಂತೆ ನಡೆದು ತೋರಿಸಬೇಕು.

ಸಮಸ್ಯೆಗಳು ನ್ಯಾಯಮಂಡಳಿ ಮತ್ತು ನ್ಯಾಯಾಲಯಗಳ ಮೆಟ್ಟಿಲು ಹತ್ತಿದ್ದರೂ ಉಭಯ ರಾಜ್ಯಗಳು ಒಂದು ಒಪ್ಪಂದಕ್ಕೆ ಬಂದರೆ ಸಮಸ್ಯೆಗಳ ಇತ್ಯರ್ಥವು ಕಗ್ಗಂಟೇನಲ್ಲ. ಉಭಯ ರಾಜ್ಯಗಳೂ ಒಪ್ಪಂದವನ್ನು ನ್ಯಾಯಮಂಡಳಿ ಮತ್ತು ನ್ಯಾಯಾಲಯಗಳಿಗೆ ಸೂಕ್ತ ಮನವಿಯೊಂದಿಗೆ ಕಾನೂನು ರೀತ್ಯಾ ಸಲ್ಲಿಸಿದರಾಯಿತು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿಕೆ ವಿರೋಧಿಸಿ ಗಾಂಧಿ ಎಂಬುವವರು ತಾನು ಹೂಡಿರುವ ಮೊಕದ್ದಮೆಯನ್ನೂ ಕರುಣಾನಿಧಿ ಒಂದು ಸೂಚನೆ ಕೊಟ್ಟರೆ ಸಾಕು, ಹಿಂತೆಗೆದುಕೊಂಡುಬಿಡುತ್ತಾರೆ.

ಇನ್ನು, ಬೆಂಗಳೂರಿನಲ್ಲಿ ತಮಿಳರೂ ಸೇರಿದಂತೆ ಕನ್ನಡೇತರರ ವಿಷಯ. ಈ ವಿಷಯದಲ್ಲಿ ಸರ್ಕಾರದಷ್ಟೇ ಬೆಂಗಳೂರಿನ ಕನ್ನಡಿಗರೂ ಜವಾಬ್ದಾರರು. ಸರ್ಕಾರವು ಯಾವುದೇ ಕಾರಣಕ್ಕಾಗಲೀ ಕನ್ನಡೇತರರನ್ನು ಓಲೈಸುವ ಕೆಲಸಕ್ಕಿಳಿಯಬಾರದು. ಈ ಅನುಮಾನದಿಂದಲೇ ಹಲವರು ಪ್ರತಿಮೆ ಅನಾವರಣವನ್ನು ವಿರೋಧಿಸಿದ್ದೆಂಬುದನ್ನು ಸರ್ಕಾರವು ನೆನಪಿಟ್ಟುಕೊಳ್ಳಬೇಕು.

ಬೆಂಗಳೂರಿನಲ್ಲಿ (ಮತ್ತು ಇಡೀ ಕರ್ನಾಟಕದಲ್ಲೂ ಕೂಡ) ಕನ್ನಡಿಗರು ಕನ್ನಡೇತರರೊಡನೆ ಕನ್ನಡದಲ್ಲೇ ಮಾತನಾಡಬೇಕು ಮತ್ತು ವ್ಯವಹರಿಸಬೇಕು. ಇಂದಿನಿಂದ ಹೀಗೊಂದು ದೃಢಸಂಕಲ್ಪ ಮಾಡಬೇಕು.

ಇದೇ ವೇಳೆ, ಕರ್ನಾಟಕದ ರಾಜಧಾನಿಯಲ್ಲಿ ಕನ್ನಡಿಗರೀಗಾಗಲೇ ಅಲ್ಪಸಂಖ್ಯಾತರಾಗಿಬಿಟ್ಟಿರುವುದರಿಂದ ಇನ್ನುಮೇಲೆ ಅನ್ಯ ರಾಜ್ಯಗಳಿಂದ ಬೆಂಗಳೂರಿಗೆ ಜನರ ಪ್ರವಾಹೋಪಾದಿಯ ವಲಸೆಯನ್ನು ನಿಯಂತ್ರಿಸಲು ಸರ್ಕಾರವು ಕಾನೂನಿನ ಚೌಕಟ್ಟಿನೊಳಗೇ ಕ್ರಮಗಳನ್ನು ಕೈಗೊಳ್ಳಬೇಕು. ಉದ್ಯಮ, ನೌಕರಿ ಇತ್ಯಾದಿ ವಿಷಯಗಳಲ್ಲಿ ಇಂಥ ಕ್ರಮಗಳನ್ನು ಕೈಗೊಳ್ಳಲು ಸರ್ವಥಾ ಸಾಧ್ಯ.

ಶಾಲಾ ಪಠ್ಯದಲ್ಲಿ ಸರ್ವಜ್ಞನ ಬಗ್ಗೆ ಪಾಠವನ್ನು ತಮಿಳುನಾಡು ಸರ್ಕಾರವೂ, ತಿರುವಳ್ಳುವರ್ ಕುರಿತು ಪಾಠವನ್ನು ಕರ್ನಾಟಕ ಸರ್ಕಾರವೂ ಅಳವಡಿಸಲಿ. ತಿರುವಳ್ಳುವರ್ ಪ್ರತಿಮೆಯ ಅನಾವರಣವಾಗಿ ನಾಲ್ಕು ದಿನಗಳ ಅನಂತರ ಸರ್ವಜ್ಞನ ಪ್ರತಿಮೆಯು ಅನಾವರಣಗೊಳ್ಳುತ್ತಿದೆ. ಸರ್ವಜ್ಞನ ಪಾಠವನ್ನು ತಮಿಳುನಾಡು ಸರ್ಕಾರವು ಶಾಲಾಪಠ್ಯದಲ್ಲಿ ಅಳವಡಿಸಿದ ಶೈಕ್ಷಣಿಕ ವರ್ಷದ ಮುಂದಿನ ವರ್ಷ ನಾವು ತಿರುವಳ್ಳುವರ್ ಪಾಠವನ್ನು ಅಳವಡಿಸೋಣ. ಇದಕ್ಕೆ ತಮಿಳುನಾಡು ಸರ್ಕಾರ ಒಪ್ಪಲಿ. ಆಗ ನಮಗೆ ತಮಿಳುನಾಡು ಸರ್ಕಾರದಮೇಲೆ ನಂಬಿಕೆಯೂ ಬರುತ್ತದೆ, ಸೌಹಾರ್ದವೆಂಬ ಮಾತಿಗೆ ಬೆಲೆಯೂ ಇರುತ್ತದೆ.

ದಿನಕ್ಕೊಂದು ಕವನ: (೧೯) ಗಿಳಿಯು ಪಂಜರದಲ್ಲಿ

-೧-

ಮರದಮೇಲೆ ಕುಳಿತಿರುವ
ಗಿಳಿಯನ್ನು ನೋಡಿರಿ!

ಸುತ್ತೆಲ್ಲ ಹಸಿರು
ಮತ್ತು
ತೆರೆದ ಬಾನು.

ಗಾಳಿ ಬೀಸಿದಂತೆ
ಮರದಲ್ಲೆ
ನವಿರುಯ್ಯಾಲೆ.

ತನ್ನ ಭಾರಕ್ಕೇ
ತಾನೂ
ಮರದ ಟೊಂಗೆಯೂ
ತನನನನ!
ಮೋಜು!

ಮರು ಗಳಿಗೆ
ಗಿಳಿಗೆ
ಮರ ಬೇಡವಾಯ್ತೊ
ಆಕಾಶಕ್ಕೆ ನೆಗೆತ
ಬಾನ್ ವಾಯೇಜು!

ತನ್ನ ಮರ ಎಷ್ಟು ಚಂದ!
ಹತ್ತಿರದಿಂದ
ಹಾಗೂ ದೂರದಿಂದ.

ಅಗೋ, ಇನ್ನೊಂದು ಮರ
ಉಂಟಲ್ಲ ಅಲ್ಲಿ
ಅದೂ ಚಂದ!
ಈಗ ಗಿಳಿ ಅಲ್ಲಿ.

ಈ ಮರ, ಆ ಮರ
ಆ ಮರ, ಈ ಮರ
ಮರ, ಬಾನು
ಬಾನು, ಮರ
ಎಂಥ ಸಡಗರ!

-೨-

ಇಂಥ ಗಿಳಿಯನ್ನು
ಹಿಡಿದು
ಪಂಜರದೊಳಿಟ್ಟರೆ ಹೇಗೆ?

-೩-

ನಿಮ್ಮದು
ಎಂಥ ಬಾಳಿನ ಬಗೆ?!

ಶುಕ್ರವಾರ, ಆಗಸ್ಟ್ 7, 2009

ದಿನಕ್ಕೊಂದು ಕವನ: (೧೮) ನಮ್ಮೂರ ಸಂತೆ

ನಮ್ಮೂರ ಸಂತೆ
ಸುತ್ತಮುತ್ತ ಹೆಸರುವಾಸಿ
ಸಕಲ ವಸ್ತುಗಳು ಲಭ್ಯ
ಒಂದೇ ಕಡೆಯಲ್ಲಿ
ವಾರಕ್ಕೊಮ್ಮೆ ಇಲ್ಲಿ

ಸುತ್ತಲ ಹಳ್ಳಿಗಳ ಜನ
ಮುತ್ತುತ್ತಾರೆ ಆ ದಿನ
ಮಾರುಕಟ್ಟೆ ತುಂಬಿ
ಮಗ್ಗುಲಿನ ಬಯಲು ತುಂಬಿ
ಸಂದುಗೊಂದುಗಳಲ್ಲಿ
ರಸ್ತೆಯಲ್ಲಿ
ಗಲ್ಲಿ ಗಲ್ಲಿ
ಕೊನೆಗೆ
ಸಾರ್ವಜನಿಕ ಮೂತ್ರಿಯಲ್ಲಿ
ಕೂಡ
ಬಟ್ಟೆ ಹಾಸಿಕೊಂಡು
ಬುಟ್ಟಿ ಇಟ್ಟುಕೊಂಡು
ಕೂತಿರುತ್ತಾರೆ ಮಾರುವವರು
ಮುತ್ತಿರುತ್ತಾರೆ ಊರಿನವರು
ಪರ ಊರಿನವರು

ನಮ್ಮೂರ ಸಂತೆ
ಬಲು ಜೋರು
ಜನಗಳ ಜೊತೆಗೆ
ದನಗಳೂ ಹತ್ತಾರು!
ನಾವು ಕೈಯಿಟ್ಟಲ್ಲಿ
ಅವು ಬಾಯಿಡುತ್ತವೆ
ಬಡಿತ ತಿಂದು
ಮುಂದೆ ಕಾಲಿಡುತ್ತವೆ
ನಮ್ಮ ಚೀಲದಮೇಲೆ ಕಾಲು
ಇನ್ನೊಂದು ಬುಟ್ಟಿಯಮೇಲೆ ಕಣ್ಣು
ಬೇಕು ಭಾರೀ ಹುಷಾರು

ನಮ್ಮೂರ ಸಂತೆ
ಕಳ್ಳರ ತಾಣ
ರಷ್‌ನಲ್ಲಿ ನುಗ್ಗುವಾಗ ನಮ್ಮ
ಜೇಬಿಗೆ ಕೈತೂರಿಸುವವರು
ತರಕಾರಿಗೆ ಬಗ್ಗಿದಾಗ ಕೊರಳ
ಸರ ಹಾರಿಸುವವರು
ಏನೂ ದೊರೆಯದಾದಾಗ
ಗಿರಾಕಿಗಳಂತೆ ನಟಿಸಿ
ತರಕಾರಿಯನ್ನೇ ತಮ್ಮ
ಚೀಲಕ್ಕಿಳಿಸುವವರು
ಇಂಥವರು
ಸುಮಾರು ಮಂದಿ

ನಮ್ಮೂರ ಸಂತೆ
ತುಂಬ ಸೋವಿ
ಒಂದು ರೂಪಾಯಿ ಅಂದದ್ದನ್ನು
ನಾಲ್ಕಾಣೆಗೇ ಕೊಡುತ್ತಾರೆ
ಕಾಣೆ ನೋಡದೆ ತೂಗಿಸಿಕೊಂಡರೆ
ತುಂಬಾ ಮುಂಗೋಲು ತೂಗುತ್ತಾರೆ

ನಮ್ಮೂರ ಸಂತೆ
ಹಗಲು ಮಾತ್ರವಲ್ಲ
ರಾತ್ರಿಯೂ ಇರುತ್ತದೆ.
ಹಗಲು ಪುರುಸೊತ್ತಾಗದಿದ್ದವರು,
ಸೋವಿ ರೇಟಿಗೆ ಸಾಮಾನು
ಬಯಸುವವರು
ಬರುತ್ತಾರೆ ರಾತ್ರಿ,
ಉಳಿದದ್ದು ಬಳಿದದ್ದು
ಅವರಿಗೆ
ಕಡಿಮೆ ದರದಲ್ಲಿ
ಖಾತ್ರಿ.

ಗುರುವಾರ, ಆಗಸ್ಟ್ 6, 2009

ದಿನಕ್ಕೊಂದು ಕವನ: (೧೭) ನನ್ನ ಜೀವನ

ಅರ್ಥರಹಿತ ಪದಪುಂಜವನ್ನು
ಕವಿತೆಯೆಂದು ಕರೆಯುವ
ದುಸ್ಸಾಹಸದಂತೆ
ನನ್ನ ಜೀವನ

ಕಥೆಯೆಂದೊರೆವ ಹೇಳಿಕೆಗೆ
ಅರಿವಾಗದ ತಿರುವು ಕೊಡುವ
ಅನರ್ಥದಂತೆ
ನನ್ನ ಜೀವನ

ತಲೆಬುಡವಿಲ್ಲದೆ ಸಾಗುವ
ತರಾವರಿ ಮಸಾಲೆಭರಿತ
ಧಾರಾವಾಹಿ ಕಾದಂಬರಿಯಂತೆ
ನನ್ನ ಜೀವನ

ಪದಗಳ ಬಂಧವೇ ಮುಖ್ಯವಾಗಿ
ಪದಾರ್ಥವೇ ಶೂನ್ಯವಾದ
ಪ್ರಬಂಧದಂತೆ
ನನ್ನ ಜೀವನ

ನಗುವಿನ ಬದಲು ಅಳು ಉಕ್ಕಿಸುವ
ಹಾಸ್ಯವೆಂಬುದು ಅಪಹಾಸ್ಯವಾಗುವ
ನಗೆಬರಹದಂತೆ
ನನ್ನ ಜೀವನ

ಓದಿದರೆ ತಲೆಕೆಡುವ
ನೋಡಿದರೆ ಕಂಗೆಡುವ
ನವ್ಯ
ಅಸಂಗತ
ನಾಟಕದಂತೆ
ನನ್ನ ಜೀವನ

ಅರ್ಥವಿಲ್ಲದ
ಶಬ್ದ,
ಲಾಲಿತ್ಯವಿಲ್ಲದ
ಸಾಹಿತ್ಯ
ನನ್ನ ಜೀವನ

ಬುಧವಾರ, ಆಗಸ್ಟ್ 5, 2009

ಅರವಜ್ಞ ವಚನಗಳು

(ತಮಾಷೆಗಾಗಿ)
-----------------
ಅರವಜ್ಞನೆಂಬುವನು ಗರ್ವದಿಂದಾದವನು
ಸರ್ವರೊಳಗೊಂದೊಂದು ಪದವಿಟ್ಟು ಅವರನ್ನೆ
ದೂರ್ವನಿವನಯ್ಯ ಅರವಜ್ಞ

***

ಹೊಗೆನಕಲ್ ಅರವರದು ಕಾವೇರಿ ಅರವರದು
ಬೆಂಗ್ಳೂರು ಸಿಟಿ ಕೂಡ ಅರವರದು ಕನ್ನಡಿಗ
ನಿನ್ನದೇನುಂಟು ಅರವಜ್ಞ

***

ಅರವ ಬಹು ಹಳೆ ಭಾಷೆ ಅರವ ಬಹು ಹಿರಿ ಭಾಷೆ
ಅರವ ತಾ ಶಾಸ್ತ್ರೀಯ ಭಾಷೆಯೈ ಜಗದಲ್ಲಿ
ಅರವಕೆಣೆಯಿಲ್ಲ ಅರವಜ್ಞ

***

ಕರುಣೆಯಾ ನಿಧಿ ನಾನು ತಮಿಳಿಗರ ವಿಧಿ ನಾನು
ಹಿರಿತನದಿ ನಾಡಿಗೇ ದೊರೆ ನಾನು ಕನ್ನಡಕೆ
ಉರುಳಯ್ಯ ನಾನು ಅರವಜ್ಞ

***

ತಿರುವಳ್ಳುವರ್ ಪ್ರತಿಮೆ ಬೆಂಗಳೂರಿಗೆ ಬೇಕು
ಅರವರಾ ಬುಡ ಭದ್ರ ಆಗ್ಬೇಕು ಚೆನ್ನೈಗೆ
ಸರ್ವಜ್ಞ ಸಾಕು ಅರವಜ್ಞ

(ಅರವ (ನಾಮಪದ) = ತಮಿಳು ಭಾಷೆ; ತಮಿಳು)

ದಿನಕ್ಕೊಂದು ಕವನ: (೧೬) ಒಂದು ಹಕ್ಕಿಯ ಕಥೆ

ಹಕ್ಕಿಯೊಂದು ಹಾರುತ್ತಿತ್ತು
ಹಿಂತಿರುಗಿ ನೋಡದೇ
ಮುಂದಕ್ಕೆ ಸಾಗಿತ್ತು
ಮುಂದಾಲೋಚನೆಯಿಂದ
ಮೇಲಕ್ಕೆ ಏರಿತ್ತು
ಗಿರಿಪಂಕ್ತಿಗಳೆಡೆಯಲ್ಲಿ ತೂರುತ್ತಿತ್ತು

ಹೀಗೇ ಸಾಗುತ್ತ ಅದಕ್ಕೊಮ್ಮೆ
ಹಿಂತಿರುಗಿ ನೋಡುವ ಮನಸ್ಸಾಯಿತು
ತಿರುಗಿಸಿತು ಕತ್ತು
ಹಿಂದಿದ್ದ ಹಕ್ಕಿಗಳೆಲ್ಲ ಮುಂದಕ್ಕೆ ಹೋಗಿ
ಇದು ಹಿಂದೆಬಿತ್ತು

ಹಾಗೇ ಹೋಗುತ್ತ ಇನ್ನೊಮ್ಮೆ
ದೃಷ್ಟಿ ಹರಿಸಿತು ಕೆಳಗೆ
’ಅಬ್ಬ ಭೂಮಿಯೆ!
ನಾನೆಷ್ಟು ಮೇಲೆ!’
ಅಚ್ಚರಿಪಡುತ್ತ ನಿಂತಿತು
ಒಂದು ಕ್ಷಣ ಹಾಗೇ

ಮರುಕ್ಷಣವೆ
ಧೊಪ್ಪನೆ ಬಿತ್ತು
ಭೂಮಿಯಮೇಲೆ!
ಹೆಣದ ಸುತ್ತಲು ನೆರೆದ
ಹಕ್ಕಿಗಳು ಅಂದುಕೊಂಡವು
’ಇದೆಂಥ ಲೀಲೆ!’

ಮಂಗಳವಾರ, ಆಗಸ್ಟ್ 4, 2009

ದಿನಕ್ಕೊಂದು ಕವನ: (೧೫) ಸಂಗತಿ

ಕೋತಿಯೊಂದು
ಬೀಡಿಯಂಗಡಿಗೆ ನುಗ್ಗಿ
ಬಾಳೆಗೊನೆಗೆ ಕೈಹಾಕಿತು
ಅಂಗಡಿಯಾತ
ಕೋಲಿಂದ ಒಂದು ಕೊಟ್ಟ
ಓಡಿಹೋಯಿತು
*
ಅಲ್ಲೇ ಸನಿಹದ
ಫುಟ್‌ಪಾತ್‌ನಲ್ಲಿ
ಸ್ಟಿಕ್ಕರ್‌ಗಳು
ಮಾರಾಟಕ್ಕಿವೆ
*
ಕೋತಿ
ಬಹುಮಹಡಿ ಕಟ್ಟಡವೊಂದರ
ತಾರಸಿಯೇರಿ ಕುಳಿತು
ಕೆ

ಗೆ
ಜನ
ಬಣ್ಣಬಣ್ಣದ ಸ್ಟಿಕ್ಕರ್‌ಗಳನ್ನ
ಕೊಳ್ಳುವುದನ್ನು
ನೋಡತೊಡಗಿತು
*
’ಕಾಡು ಉಳಿಸಿ’
’ಬದುಕುವ ಹಕ್ಕು ಎಲ್ಲರಿಗೂ ಇದೆ’
’ಪ್ರಾಣಿದಯೆ ಇರಲಿ’
ಎಂಬ
ಸ್ಟಿಕ್ಕರ್‌ಗಳನ್ನು
ಒಬ್ಬ ಖರೀದಿಸಿದ

ತಿರುವಳ್ಳುವರ್ ಪ್ರತಿಮೆಯ ಸುತ್ತ

* ತಿರುವಳ್ಳುವರ್ ಮತ್ತು ಸರ್ವಜ್ಞ ಪ್ರತಿಮೆಗಳ ಸ್ಥಾಪನೆಯ ಉದ್ದೇಶ ಆ ಕವಿಗಳಮೇಲಿನ ಅಭಿಮಾನವಲ್ಲ. ಬೆಂಗಳೂರಿನಲ್ಲಿ ತಮಿಳರು ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪಿಸಿರುವುದು ಕರ್ನಾಟಕದ ರಾಜಧಾನಿಯಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸುವ ಉದ್ದೇಶದಿಂದ. ಇದಕ್ಕೆ ಪ್ರತಿಯಾಗಿ ಕನ್ನಡಿಗರು ತಮಿಳುನಾಡಿನ ರಾಜಧಾನಿಯಲ್ಲಿ ಸರ್ವಜ್ಞನ ಪ್ರತಿಮೆಯನ್ನು ಸ್ಥಾಪಿಸುವ ನಿರ್ಧಾರ ತಳೆಯುವುದು ಅನಿವಾರ್ಯವಾಯಿತು.

* ಇದೀಗ ಎಲ್ಲ ರಾಜಕೀಯ ಪಕ್ಷಗಳೂ ತಿರುವಳ್ಳುವರ್ ಪ್ರತಿಮೆಯ ಅನಾವರಣವನ್ನು ಬೆಂಬಲಿಸುತ್ತಿರುವುದು ಬಿಬಿಎಂಪಿ ಚುನಾವಣೆಯಲ್ಲಿ ತಮಿಳರ ಮತ ಗಳಿಕೆಯ ದೃಷ್ಟಿಯಿಂದಲೇ ಹೊರತು ತಮಿಳುನಾಡಿನೊಡನೆ ಯಾವ ಸೌಹಾರ್ದದ ಉದ್ದೇಶದಿಂದಲೂ ಅಲ್ಲ. ಏಕೆಂದರೆ, ದೇಶದ ಎಲ್ಲ ಪಕ್ಷಗಳ ಎಲ್ಲ ರಾಜಕಾರಣಿಗಳೂ ಅಂತರಂಗದಲ್ಲಿ ಸದಾ ಮಿತ್ರರೇ.

* ಬೆರಳೆಣಿಕೆಯ ಹಿರಿಯ ಸಾಹಿತಿಗಳು ಬೆಂಬಲಿಸುತ್ತಿರುವುದು ತಮ್ಮ ಪ್ರವೃತ್ತಿಬಂಧುದ್ವಯರಮೇಲಿನ ಅಭಿಮಾನದಿಂದ ಮತ್ತು ಆ ಕವಿಶ್ರೇಷ್ಠದ್ವಯರ ಪಂಗಡಕ್ಕೆ ಸೇರಿದ ಶ್ರೇಷ್ಠರು ತಾವೆಂದು ಈ ಮೂಲಕ ಪರೋಕ್ಷವಾಗಿ ಸಾರುವ ಉದ್ದೇಶದಿಂದ. ಈ ಹಿರಿಯ ಸಾಹಿತಿಗಳು ತಮಿಳುನಾಡು ಸರ್ಕಾರವನ್ನು ಮತ್ತು ತಮಿಳರನ್ನು ಅರ್ಥಮಾಡಿಕೊಂಡ ಬಗೆ ಇವರ ಮುಗ್ಧತೆಯನ್ನು ತೋರಿಸುತ್ತದೆ.

* ಕನ್ನಡಪರ ಸಂಘಟನೆಗಳು ವಿರೋಧಿಸುತ್ತಿರುವುದರಲ್ಲಿ ಸ್ವಾರ್ಥ ಇರಬಹುದಾದರೂ ವಿರೋಧವು ಸಕಾರಣವಾದುದಾಗಿದೆ.

* ಚೆನ್ನೈನಲ್ಲಿ ಕನ್ನಡಿಗರು ತಮ್ಮ ಬುಡ ಭದ್ರಪಡಿಸಿಕೊಳ್ಳಲು, ತಮ್ಮ ಬೇರುಗಳನ್ನು ವಿಸ್ತರಿಸಲು ಮತ್ತು ತಮ್ಮ ಬಾಹುಗಳನ್ನು ಚಾಚಲು ಸರ್ವಜ್ಞನ ಪ್ರತಿಮೆಯನ್ನು ಎಂದೂ ಬಳಸಿಕೊಳ್ಳುವುದಿಲ್ಲ; ಆದರೆ ಬೆಂಗಳೂರಿನ ತಮಿಳರ ಬಗ್ಗೆ ಈ ಭರವಸೆ ಇಲ್ಲ.

* ಈಗಾಗಲೇ ಕನ್ನಡಿಗರು ಅಲ್ಪಸಂಖ್ಯಾತರಾಗಿರುವ ಮತ್ತು ಕನ್ನಡವು ತೀವ್ರಗತಿಯಲ್ಲಿ ಮಾಯವಾಗುತ್ತಿರುವ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯ ಅನಾವರಣವನ್ನು ಕೇವಲ ’ಕವಿಗೌರವ ಮತ್ತು ಸೌಹಾರ್ದ’ದ ದೃಷ್ಟಿಯಿಂದ ಮಾತ್ರ ನೋಡಿದರೆ ಸಾಲದು. ರಾಜಧಾನಿಯಲ್ಲಿ ಕನ್ನಡದ ಮತ್ತು ಕನ್ನಡಿಗರ ರಕ್ಷಣೆಯ ದೃಷ್ಟಿಯಿಂದಲೂ ನೋಡಬೇಕು. ಕನ್ನಡ ಮತ್ತು ಕನ್ನಡಿಗರು ಗಟ್ಟಿಮುಟ್ಟಾಗಿ ಉಳಿದರೆ ತಾನೇ, ಕವಿ, ಸೌಹಾರ್ದ ಇತ್ಯಾದಿ?

* ಇಷ್ಟಕ್ಕೂ ಎರಡೂ ಪ್ರತಿಮೆಗಳನ್ನೂ ಏಕಕಾಲದಲ್ಲಿ ಅನಾವರಣಗೊಳಿಸಲು ಸಾಧ್ಯವಿಲ್ಲವೆ? ಇದರಲ್ಲೂ ತಮಿಳರದೇ ಮೇಲುಗೈಯಾಗಬೇಕೆ? ಈ ಚಿಕ್ಕ ವಿಷಯದಲ್ಲೂ ಕನ್ನಡಿಗರಾದ ನಾವು ಬೆನ್ನು ಬಗ್ಗಿಸುತ್ತೇವೆಂದರೆ ಇನ್ನು ಕಾವೇರಿ, ಹೊಗೇನಕಲ್, ಶಾಸ್ತ್ರೀಯ ಭಾಷೆ....ಈ ವಿಷಯಗಳಲ್ಲಿ ಮುಂದೆ ನಮ್ಮ ಪಾಡೇನು?! ಕನ್ನಡಿಗರಾದ ನಾವು ಈ ಪಾಟಿ ಹೇಡಿಗಳೇ?!

* ತಿರುವಳ್ಳುವರ್ ಪ್ರತಿಮೆಯ ಅನಾವರಣ ಭಾನುವಾರದಂದು. ಗರಿಷ್ಠ ಸಂಖ್ಯೆಯ ತಮಿಳರು ಅನಾವರಣ ಸಮಾರಂಭಕ್ಕೆ ಹಾಜರಾಗಲು ಅನುಕೂಲ. ಅದೇ, ಸರ್ವಜ್ಞನ ಪ್ರತಿಮೆಯ ಅನಾವರಣ ಗುರುವಾರದಂದು! ಹೇಗಿದೆ ತಮಿಳರ ಐಡಿಯಾ!

* ’ಕನ್ನಡ ನೆಲ-ಜಲ-ಭಾಷೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ’ ಎಂಬ ಹಳಸಲು ಮಾತನ್ನು ನಮ್ಮ ಎಲ್ಲ ರಾಜಕಾರಣಿಗಳಂತೆಯೇ ಯಡಿಯೂರಪ್ಪನವರೂ ನೂರಾಒಂದನೇ ಸಲ ಹೇಳುತ್ತಿದ್ದಾರೆ. ಸಮಸ್ಯೆಗಳನ್ನು ತಮಿಳುನಾಡಿನೊಡನೆ ಮಾತುಕತೆ ಮೂಲಕ ಪರಿಹರಿಸಿಕೊಳ್ಳುವುದಾಗಿಯೂ ಹೇಳುತ್ತಿದ್ದಾರೆ. ಕಾವೇರಿ ವಿವಾದ, ಹೊಗೇನಕಲ್ ವಿವಾದ, ಶಾಸ್ತ್ರೀಯಭಾಷೆ ವಿವಾದ ಮೊದಲಾದ ವಿವಾದಗಳು ಬಗೆಹರಿದ ನಂತರ ಇಬ್ಬರೂ ಒಟ್ಟಾಗಿ ಎರಡೂ ಪ್ರತಿಮೆಗಳನ್ನೂ ವಿಜೃಂಭಣೆಯಿಂದ ಅನಾವರಣ ಮಾಡೋಣ ಎಂದು ಯಡಿಯೂರಪ್ಪನವರು ಕರುಣಾನಿಧಿಯವರನ್ನು ಮಾತುಕತೆ ಮೂಲಕ ಒಪ್ಪಿಸಬಹುದಲ್ಲವೆ? ಇದೇ ಸಾಧ್ಯವಾಗದಿದ್ದರೆ ಇನ್ನು ವಿವಾದಗಳೆಲ್ಲ ಮಾತುಕತೆ ಮೂಲಕ ನ್ಯಾಯಯುತವಾಗಿ ಬಗೆಹರಿಯುವುದು ಸಾಧ್ಯವೆ?!

* ಚಾರ್ಲಿ ಚಾಪ್ಲಿನ್ ಪ್ರತಿಮೆಯ ಗೊಟಾಳೆ ಆಯಿತು, ಈಗ ತಿರುವಳ್ಳುವರ್ ಪ್ರತಿಮೆಯ ಗೊಟಾಳೆ! ಸಮಾಜದ ಮನಸ್ಸನ್ನು ಒಡೆದು ಪ್ರತಿಮೆಗಳನ್ನು ಸ್ಥಾಪಿಸುವ ತುರ್ತು ಅಂಥಾದ್ದೇನಿದೆ? ಗಾಂಧೀಜಿಯ ಆದರ್ಶಗಳಿಗೆ ಚಿಕ್ಕಾಸಿನ ಬೆಲೆಯನ್ನೂ ಕೊಡದ ನಾವು ಆ ವ್ಯಕ್ತಿಯ ಪ್ರತಿಮೆಗಳನ್ನು ಮಾತ್ರ ಗಲ್ಲಿಗೊಂದರಂತೆ ಸ್ಥಾಪಿಸಿ ಏನು ಸಾಧಿಸಿದ್ದೇವೆ?

* ಕೊನೆಗೊಂದು ಕಟಕಿ: ಉಳ್ಳವರ್ ತಿರುವಳ್ಳುವರ್ ಪ್ರತಿಮೆಯ ಸ್ಥಾಪಿಸುವರ್. ತಿರಿದುಣ್ಣುವರ್ ಅದರ ಕೆಳಗೆ ಕುಳಿತು ಸುರಿದುಣ್ಣುವರ್! ಅಕಟಕಟಾ!

ಸೋಮವಾರ, ಆಗಸ್ಟ್ 3, 2009

ದಿನಕ್ಕೊಂದು ಕವನ: (೧೪) ಮಾತಿನ ಮನೆಯಿಂದ...

ಮಾತಿನ ಮನೆಯಿಂದ ಹೊರಬಂದು
ನೋಡಿದರೆ ಮೌನದಾಗಸದ ವೈಶಾಲ್ಯ
ಅರಿವಾಗುವುದು. ಉಜ್ವಲ ಚಿಂತನೆ
ಯ ಸೂರ್ಯ ಜಾಗೃತಿಯ ಹಗಲಿಗೆ
ದಾರಿತೋರುವನು. ಚಿತ್ತಶಾಂತಿ
ಯ ಚಂದ್ರ ವಿಶ್ರಾಂತಿಯ ರಾತ್ರಿಗೆ
ತಂಪೆರೆಯುವನು. ಸುಪ್ತ ಬಯಕೆಗಳು
ತಾರೆಗಳಾಗಿ ಮಿನುಗುವುವು ನಿಶೆಯಲಿ
ಮನಸು ಕಾಣುವ ಕನಸಿನಲಿ ಖುಷಿ
ನೀಡುವುವು. ಆಗಾಗ ಬೇಸರ
ದ ಮೋಡ ಕವಿದರೂ ಮೌನದಾಗಸ
ದಲ್ಲಿ ಕರಗಿ ಅದು
ನೆಲಕಚ್ಚುವುದು
ನಿಶ್ಚಿತ.
ಮೈತೊಳೆದಂತೆ ಮತ್ತೆ ಮೈ
ದಳೆವ ಆಗಸವೀಗ ಶುಭ್ರ,
ನಿರಭ್ರ.

ಆದರೆ,
ಅರಮನೆಯ ಭ್ರಮೆ
ಯ ಸೆರೆಮನೆಯಿಂದ
ಹೊರಬರುವುದೇ
ಕಷ್ಟ.

ಭಾನುವಾರ, ಆಗಸ್ಟ್ 2, 2009

ದಿನಕ್ಕೊಂದು ಕವನ: (೧೩) ಸತ್ತವರು ಮತ್ತು ನಾವು

ಸತ್ತವರ ಸ್ಮರಣೆಗಾಗಿ
ಸ್ಮಾರಕ ನಿರ್ಮಿಸುತ್ತೇವೆ
ಸ್ಮರಿಸುವವರೂ ಸಾಯುತ್ತಾರೆ
ಸ್ಮಾರಕದಡಿ ಸತ್ತ ವ್ಯಕ್ತಿ
ಮತ್ತೆ ಮತ್ತೆ ಸಾಯುತ್ತದೆ

ಸತ್ತವರ ಶ್ರಾದ್ಧ ಮಾಡುತ್ತೇವೆ
ಸ್ವರ್ಗಕ್ಕೆ ಪಾಸ್‌ಪೋರ್ಟ್ ನೀಡುತ್ತೇವೆ
ಆಗಾಗ ಅವರನ್ನು ಸ್ವರ್ಗದಿಂದ
ಈಚೆಗೆ ಎಳೆದಾಡುತ್ತೇವೆ

ಸತ್ತವರಿಗೆ ಬಿರುದು ದಯಪಾಲಿಸುತ್ತೇವೆ
ಬಿರುದಿಗೆ ಕಾರಣ ಅವರು ಸತ್ತದ್ದು
ಎಂಬ ಸತ್ಯ ಮರೆಮಾಚಿ
ಬಿರುದಾಂಕಿತರು ಬದುಕಿರಬೇಕಿತ್ತು
ಎಂದು ಹಳಹಳಿಸುತ್ತ
ಸಾವನ್ನು ಖಾತ್ರಿ ಮಾಡುತ್ತೇವೆ

ಸತ್ತವರ ಚರಿತ್ರೆ ಬರೆಯುತ್ತೇವೆ
ಬದುಕಿರುವವರನ್ನು ಮರೆಯುತ್ತೇವೆ
ಬದುಕು ಚರಿತ್ರೆಯಾಗಬೇಕಾದರೆ
ಸಾಯಬೇಕು
ಎಂದು ಒರೆಯುತ್ತೇವೆ

ಸತ್ತವರೊಡನೆ
ನಾವೂ
ಸಾಯುತ್ತಿರುತ್ತೇವೆ

ಶನಿವಾರ, ಆಗಸ್ಟ್ 1, 2009

ರಫಿ-ಮುಖೇಶ್-ಕಿಶೋರ್



ಸುಗಮ ಸಂಗೀತದ ಮೂರು ಉತ್ಕೃಷ್ಟ ಮಾದರಿಗಳನ್ನು ರಫಿ-ಮುಖೇಶ್-ಕಿಶೋರ್ ತ್ರಯರು ನಮಗೆ ನೀಡಿ ಹೋಗಿದ್ದಾರೆ.

ಮಾಧುರ್ಯವೇ ಮೈವೆತ್ತಂಥ ಸಿರಿಕಂಠದ ಗಾಯನ ರಫಿಯದು. ’ಚೌದವೀನ್ ಕಾ ಚಾಂದ್ ಹೋ’, ’ಚಾಹೂಂಗಾ ಮೈ ತುಝೆ’, ’ರಂಗ್ ಔರ್ ನೂರ್ ಕೀ’, ’ತುಝ್‌ಕೋ ಪುಕಾರೇ ಮೇರಾ ಪ್ಯಾರ್’ ಹೀಗೆ ಸಾಲುಸಾಲು ಉದಾಹರಣೆಗಳನ್ನು ಕೊಡಬಹುದು.

ಭಾವಭರಿತ-ದುಃಖಾರ್ದ್ರ ಗಾಯನಕ್ಕೆ ಹೇಳಿ ಮಾಡಿಸಿದಂಥ ಶಾರೀರ ಮುಖೇಶ್‌ನದು. ’ಆ, ಲೌಟ್‌ಕೇ ಆಜಾ’, ’ಜಾನೇ ಕಹ್ಞಾ, ಗಯೇ ವೋ ದಿನ್’, ’ಖುಷ್ ರಹೋ ಹರ್ ಖುಷೀ ಹೈ’, ’ಕಹೀ ದೂರ್ ಜಬ್ ದಿನ್ ಢಲ್ ಜಾಯೇ’ ಹೀಗೆ ಒಂದೊಂದು ಹಾಡೂ ಕೇಳುಗನ ಕಣ್ಣಲ್ಲಿ ನೀರು ತುಂಬುವಂಥದು.

ಹೃದಯಂಗಮ-ವೈವಿಧ್ಯಮಯ ಕಂಠಸಿರಿ ಕಿಶೋರ್‌ನದು. ’ನಾಚ್ ಮೇರೀ ಜಾನ್’, ಹಾಡನ್ನು ಹಾಡಿರುವ ಕಿಶೋರ್‌ನೇ ’ಯೇ ಜೀವನ್ ಹೈ’, ಹಾಡನ್ನೂ ಹಾಡಿದ್ದಾನೆ. ’ತೆರೀ ದುನಿಯಾ ಸೇ, ಹೋಕೇ ಮಜ್‌ಬೂರ್ ಚಲಾ’, ಎಂದು ಹಾಡಿರುವವನೇ ’ಜಿಂದಗೀ ಏಕ್ ಸಫರ್ ಹೈ ಸುಹಾನಾ’, ಎಂದು ’ಒಲೈಯೋ ಲೈಯೋ’ಗರೆದಿದ್ದಾನೆ, ’ಜೈ ಜೈ ಶಿವ್ ಶಂಕರ್’, ಎಂದು ಕೇಳುಗರಿಗೆಲ್ಲ ಮತ್ತೇರಿಸಿದ್ದಾನೆ.

ಈ ತ್ರಿಮೂರ್ತಿಗಳ ಈ ವೈಶಿಷ್ಟ್ಯಗಳಿಂದ, ಒಟ್ಟು ಸುಗಮ ಸಂಗೀತದ ಸಂಪೂರ್ಣ ರಸಾನುಭವ ನಮಗೆ ಲಭ್ಯವಾಗಿದೆ. ಇವರ ಕಂಠಸಿರಿಯ ಮತ್ತು ಗಾಯನದ ಪ್ರಭೆಯು ಗರಿಷ್ಠ ಮಟ್ಟದಲ್ಲಿ ಹೊರಹೊಮ್ಮಲು ಅನುವಾಗುವಂಥ ಸಶಕ್ತ ಪದ-ಅರ್ಥಗಳನ್ನೊಳಗೊಂಡ ಗೀತೆಗಳು ಹಾಗೂ ತಕ್ಕುದಾದ ಸಂಗೀತ ಇವು ರಸಾನುಭವವನ್ನು ಪರಿಪೂರ್ಣವಾಗಿಸಿವೆ. ಹಿಂದಿ ಚಲನಚಿತ್ರ ಕ್ಷೇತ್ರದಲ್ಲಿ ಇವಿಷ್ಟೂ ಇತ್ಯಾತ್ಮಕ ಅಂಶಗಳೂ ಏಕಕಾಲಕ್ಕೇ ಅವತರಿಸಿ ಒಟ್ಟುಗೂಡಿದುದು ಕೇಳುಗರಾದ ನಮ್ಮ ಭಾಗ್ಯವೇ ಸರಿ.

ಪ್ರಪಂಚದಲ್ಲಿ ’ಅತಿ ಹೆಚ್ಚು ಜನ ಅತಿ ದೀರ್ಘ ಕಾಲ’ ಆಲಿಸಿಕೊಂಡುಬಂದಿರುವ ಸಂಗೀತಭಾಗವೆಂದರೆ ೫೦ರಿಂದ ೮೦ರ ದಶಕದವರೆಗಿನ ಹಿಂದಿ ಚಲನಚಿತ್ರ ಸಂಗೀತ. ಆ ಅವಧಿಯ ಗಾಯಕರ ಪೈಕಿ (ಗಾಯಕಿಯರನ್ನು ಹೊರತುಪಡಿಸಿ) ಮುಂಚೂಣಿಯಲ್ಲಿದ್ದವರು ರಫಿ-ಮುಖೇಶ್-ಕಿಶೋರ್ ತ್ರಿಮೂರ್ತಿಗಳೇ ತಾನೇ.

ಇಂದಿನ ಚಲನಚಿತ್ರ ಸಂಗೀತವು ಬೇರೆಯದೇ ಮಜಲು ತಲುಪಿದೆ. ’ಅಂದಿಗೆ ಅದು ಚಂದ, ಇಂದಿಗೆ ಇದೇ ಚಂದ’, ಎನ್ನುವ ಅಭಿಪ್ರಾಯ ಚಾಲನೆಯಲ್ಲಿದೆ. ಕಾಲ ಬದಲಾದಂತೆ ಸಮಾಜದ ಅಭಿರುಚಿಗಳೂ ಬದಲಾಗುವುದು ಸಾಮಾನ್ಯ. ಆದರೆ ಒಂದು ಮಾತಂತೂ ಸತ್ಯ. ಇಂದಿನ ಬಹುತೇಕ ಚಿತ್ರಗೀತೆಗಳು ಅಂದಿನ ಬಹುತೇಕ ಚಿತ್ರಗೀತೆಗಳಿಗೆ ಹೋಲಿಸಿದಲ್ಲಿ ಅಲ್ಪಾಯುಷಿಗಳು. ಸಂಗೀತವು ಬಹುಕಾಲ ಬಾಳಬೇಕೆಂದರೆ ಅದು ಹೇಗಿರಬೇಕು ಮತ್ತು ಅದರಲ್ಲಿ ಏನಿರಬೇಕು ಎಂಬುದನ್ನು ಈ ಮೂಲಕ ಸಮಾಜವೇ ನಿರ್ಧರಿಸಿಬಿಟ್ಟಿದೆ!

ದಿನಕ್ಕೊಂದು ಕವನ: (೧೨) ಗೊತ್ತಿದ್ದಿದ್ದರೆ...

ಮುಂದೊಮ್ಮೆ
ಅಪಹರಣವೆಂಬುದು
ಇಷ್ಟು ಕ್ಷುಲ್ಲಕವಾಗುತ್ತದೆಂದು
ಗೊತ್ತಿದ್ದಿದ್ದರೆ
ರಾವಣ ಅಂದು
ಸೀತೆಯನ್ನು ಅಪಹರಿಸುತ್ತಲೇ ಇರಲಿಲ್ಲ
ಅಗ್ನಿಪರೀಕ್ಷೆಯ
ದುರುಪಯೋಗ ಉಂಟಾಗುತ್ತದೆಂದು
ಊಹಿಸಿದ್ದರೆ ರಾಮ
ಹೆಂಡತಿಯನ್ನು ಬೆಂಕಿಗೆಸೆಯುತ್ತಲೇ ಇರಲಿಲ್ಲ

ಸ್ವಾರ್ಥಸಾಧನೆಗಾಗಿ
ಚಪ್ಪಲಿ ಹೊರುವವರ
ಕಲ್ಪನೆಯಿದ್ದಿದ್ದರೆ ಭರತ
ಅಣ್ಣನ ಪಾದರಕ್ಷೆ ಹೊರುತ್ತಲೇ ಇರಲಿಲ್ಲ
’ಹೆನ್‌ಪೆಕ್ಡ್’, ’ಜೋರೂ ಕಾ ಗುಲಾಂ’
’ಪತ್ನೀದಾಸ’, ’ಮಗನಿಗೇ ಮೋಸ’
ಈ ಪದಗಳ ಸುಳಿವು
ಕಂಡಿದ್ದರೆ ದಶರಥ
ಕೈಕೇಯಿಗೆ ವಚನಕೊಡುತ್ತಲೇ ಇರಲಿಲ್ಲ

ಹೆಣ್ಣಿಗಾಗಿ ಹೊಡೆದಾಡುವವರು
ಹುಟ್ಟಿಕೊಳ್ಳುತ್ತಾರೆಂದು
ಹೊಳೆದಿದ್ದರೆ ತಲೆಗೆ
ರಾಘವ ಬಿಲ್ಲು ಮುರಿಯುತ್ತಲೇ ಇರಲಿಲ್ಲ
ಕಾರ್ಯವಾಸಿ ಕೈಜೋಡಿಸುವವರು
ಕಾಣಿಸಿಕೊಳ್ಳುತ್ತಾರೆಂದು
ತಿಳಿದಿದ್ದರೆ ಹೃದಯಕ್ಕೆ
ಕಪಿಯು ಕೈಮುಗಿದು ನಿಲ್ಲುತ್ತಲೇ ಇರಲಿಲ್ಲ

ಮುಂದೆ ಹೀಗೆಲ್ಲ
ಅನರ್ಥಗಳಾಗುತ್ತವೆಂದು
ಅರಿತಿದ್ದಿದ್ದರೆ
ವಾಲ್ಮೀಕಿ
(ಅಥವಾ ಆ
ಆತ)
ರಾಮಾಯಣ
ಬರೆಯುತ್ತಲೇ ಇರಲಿಲ್ಲ