ಸೋಮವಾರ, ಆಗಸ್ಟ್ 10, 2009

ದಿನಕ್ಕೊಂದು ಕವನ: (೨೧) ಚಿತ್ತದಾಗಸದಲ್ಲಿ

ಚಿತ್ತದಾಗಸದಲ್ಲಿ ಎತ್ತ ನೋಡಿದರತ್ತ ಚಿತ್ತಾರ. ತಾರೆಗಳು ಮಿನುಗುತ್ತಿವೆ
ಕತ್ತಲನು ಭೇದಿಸುವ ಹೊಳಪುಕಣ್ಗಳು ಕಂಡ ಕನಸಿನಾ ಹಾಡನ್ನು ಗುನುಗುತ್ತಿವೆ

ದೇಶಕಾಲಗಳಾಚೆ ಜೀವಜಾಲಗಳಾಚೆ ಭಾವಸಂಚಯದೊಡನೆ ಮೆರೆಯುವಾಸೆ
ಭಾವಿಸಿದ ಬದುಕಿನಲಿ ಭಾವಿಸದೆ ಬಂದಂಥ ನೋವುಗಳನೆಲ್ಲ ತಾ ಮರೆಯುವಾಸೆ
ಯಾವ ದೇಹದ ಹಂಗೂ ಯಾವ ಆತ್ಮದ ಗುಂಗೂ ಆವರಿಸದಂತೆ ತಾನಿರುವ ಆಸೆ
ಸಾವಿನಂತ್ಯದ ಭೀತಿಗೊಳಪಡದ ಬಾಳನ್ನು ಜೀವಮಾತ್ರವ ಮೀರಿ ಬಾಳುವಾಸೆ

ತಂಬೆಲರಲೊಂದಾಗಿ ತಂದಲಿನೊಡನೆ ತೂಗಿ ತನ್ನಿಚ್ಛೆಯಂತೆ ತಾ ತೊನೆಯುವಾಸೆ
ಅಂಬರವ ಸೀಳುತ್ತ ಅಂತೆಯೇ ಏರುತ್ತ ಅದರಾಚೆ ಏನಿದೆಯೊ ಕಾಣುವಾಸೆ
ಇಂಬಾಗಿ ನಿಂತವನು ಇಂಥ ಅದ್ಭುತ ಸೃಷ್ಟಿ ಎಂತು ಮಾಡಿದನೆಂದು ಅರಿಯುವಾಸೆ
ಅಂಬಾಗಿ ಮಾಯದಲಿ ಹೃದಯಗಳ ಒಳಹೊಕ್ಕು ಸಂಬಂಧಗೂಢಗಳ ತೆರೆಯುವಾಸೆ

ನಗುವ ಮಗುವಿನ ಮೊಗದ ಸೊಗವು ಸ್ಮೃತಿಪಟಲದಿಂದಗಲದಂತದನು ಬಂಧಿಸುವ ಆಸೆ
ಅಳುವ ಕಂದನ ಕರೆಗೆ ಓಗೊಡುತ ಧಾವಿಸುವ ಅಮ್ಮನಳಲಿನ ಆಳ ಅಳೆಯುವಾಸೆ
ಅರಳಿರುವ ಹೂವುಗಳ ಪರಿಮಳದಮೇಲೇರಿ ಆಗಸದಿ ತೇಲುತ್ತ ಹೋಗುವಾಸೆ
ಮರಳಿ ಬಾರದ ಕಡೆಗೆ ತೆರಳಿ ಘಮಘಮಿಸುತ್ತ ಘನವಿಶ್ವದಣುವಾಗಿ ಬೀಗುವಾಸೆ

ಚಿತ್ತದಾಗಸದಲ್ಲಿ ಎತ್ತ ನೋಡಿದರತ್ತ ಚಿತ್ತಾರ. ತಾರೆಗಳು ಮಿನುಗುತ್ತಿವೆ
ಸುತ್ತಲೂ ಕ್ಷುದ್ರಗ್ರಹಗಳು ಕಾಡುತಿದ್ದರೂ ಮತ್ತದೇ ಹಾಡನ್ನು ಗುನುಗುತ್ತಿವೆ

3 ಕಾಮೆಂಟ್‌ಗಳು:

  1. ವಾಕ್ಯ ಮೂಡ್ತ ಇಲ್ಲ ಸರ್....

    ಇದ್ದರಿರಬೇಕು ಇಂಥ ಆಶೆ
    ದಿಕ್ತಪ್ಪುವ ಚಿತ್ತಕ್ಕೆ
    ದಿಕ್ತೋರುವ ಭಾಷೆ
    ಚಿತ್ತದಾಗಸದಲಿ ನಿರ್ದಿಂತವಾಗೇರುವಾಶೆ
    ಅರ್ಥವಾದರು ಅರ್ಥವಾಗದಾಶೆ

    ಅಣು - ಎತ್ತರ
    ವಿಶ್ವದಣು - ಎತ್ತರೆತ್ತರ
    ಘನ ವಿಶ್ವದಣು - ಎತ್ತರೆತ್ತರೆತ್ತರ

    ದೇಹದ ಹಂಗು ... ಆತ್ಮದ ಗುಂಗು -> ಎತ್ತರೆತ್ತರೆತ್ತರಎತ್ತರೆತ್ತರೆತ್ತರ

    [ ಪದ ಪ್ರಯೋಗ ನನ್ನ ಎತ್ತರಕ್ಕೆ ನಿಲುಕದ್ದು ]

    ಪ್ರತ್ಯುತ್ತರಅಳಿಸಿ
  2. ನಿರ್ದಿಂತವಾಗೇರುವಾಶೆ=== ನಿರ್ದಿಗಂತವಾಗೇರುವಾಶೆ

    ಪ್ರತ್ಯುತ್ತರಅಳಿಸಿ
  3. ಶ್ರೀಕಾಂತ್ ಅವರೇ,
    ನಿಮ್ಮ ಮೆಚ್ಚುಗೆ ಮತ್ತು ದೃಷ್ಟಿಕೋನ ನನಗೆ ಸಂತಸ ತಂದಿವೆ.
    ಹೃತ್ಪೂರ್ವಕ ಧನ್ಯವಾದ.

    ಪ್ರತ್ಯುತ್ತರಅಳಿಸಿ