ಮಂಗಳವಾರ, ಆಗಸ್ಟ್ 18, 2009

ವಿವಿಧ ಕಾಯಿಲೆಗಳು ಮತ್ತು ಶ್ರೀರಾಮುಲು

ಈಚೆಗೆ ನನ್ನ ತಾಯಿಯವರನ್ನು ಚಿಕಿತ್ಸೆಗೆಂದು ಬೆಂಗಳೂರಿನ ಎರಡು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಟ್ಟು ಒಂದು ತಿಂಗಳ ಕಾಲ ಒಳರೋಗಿಯಾಗಿ ಸೇರಿಸಿದ್ದ ಸಂದರ್ಭದಲ್ಲಿ ನಾನು ಇಡೀ ತಿಂಗಳು ಹಗಲಿರುಳು ಆ ಎರಡು ಆಸ್ಪತ್ರೆಗಳಲ್ಲಿ ಕಳೆದೆ. ಆಗ ನಾನು ಗಮನಿಸಿದ ಸಂಗತಿಯೆಂದರೆ, ಡೆಂಗ್ಯೂ ಜ್ವರದಿಂದಾಗಿ ತೀವ್ರವಾಗಿ ಬಳಲುತ್ತಿದ್ದ ಒಳರೋಗಿಗಳು ಆ ಆಸ್ಪತ್ರೆಗಳಲ್ಲಿದ್ದರು. ಅವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿತ್ತು. ಹತ್ತಿಪ್ಪತ್ತು ದಿನಗಳ ಕಾಲ ರೋಗಿಗೆ ಚಿಕಿತ್ಸೆ ಕೊಡಿಸಿ, ಲಕ್ಷದ ಲೆಕ್ಕದಲ್ಲಿ ಹಣ ಖರ್ಚುಮಾಡಿ, ಒಳಗೆ ತೀವ್ರ ನಿಗಾ ಘಟಕದಲ್ಲಿ ರೋಗಿಯಿದ್ದರೆ ಹೊರಗೆ ರೋಗಿಯ ಬಂಧುಗಳು ಪ್ರತಿ ಕ್ಷಣವನ್ನೂ ಕಳವಳದಿಂದ ಕಳೆಯುತ್ತಿದ್ದುದನ್ನು ನಾನು ಕಣ್ಣಾರೆ ಕಂಡೆ.

ಸಾಮಾಜಿಕ ಕಾರ್ಯಗಳಿಗಾಗಿ ಊರೂರು-ಗಲ್ಲಿಗಲ್ಲಿ ಸುತ್ತುವ ನಾನು ಚಿಕನ್ ಗುನ್ಯಾ ಹಾವಳಿಗೆ ತುತ್ತಾದ ಬಡ ಸಂಸಾರಸ್ಥರನ್ನು ಸಾಕಷ್ಟು ನೋಡಿದ್ದೇನೆ. ಕುಟುಂಬಸದಸ್ಯರ ಚಿಕನ್ ಗುನ್ಯಾ ಮರಣದಿಂದಾಗಿ ಎಷ್ಟೋ ಬಡಸಂಸಾರಗಳು ದಿಕ್ಕೆಟ್ಟುಹೋಗಿರುವುದು ನನ್ನ ಗಮನಕ್ಕೆ ಬಂದಿದೆ.

H 1 N 1 (’ಹಂದಿಜ್ವರ’) ಕಾಯಿಲೆಯ ಘೋರಸ್ವರೂಪವಂತೂ ಇಡೀ ಜಗತ್ತಿಗೇ ವೇದ್ಯವಾಗಿದೆ. ಬೆಂಗಳೂರಿನಲ್ಲಿ ಅದು ಯುವಕ ಯುವತಿಯರನ್ನು ಬಲಿತೆಗೆದುಕೊಳ್ಳತೊಡಗಿದೆ.

ನಮ್ಮ ಆರೋಗ್ಯ ಮಂತ್ರಿಗಳು ತಾನು ಗಂಟೆಗೊಮ್ಮೆ ಎಲ್ಲ ಜಿಲ್ಲೆಗಳನ್ನೂ ಸಂಪರ್ಕಿಸುತ್ತಿದ್ದೇನೆಂದು ಹೇಳುತ್ತಾರೆ! ಇದೆಲ್ಲಾದರೂ ಸಾಧ್ಯವೆ? ಸಾಧ್ಯವಾದರೂ, ಒಂದೊಂದು ಜಿಲ್ಲೆಯ ಅಧಿಕಾರಿಗಳೊಡನೆ ಕೇವಲ ಒಂದೋ ಎರಡೋ ನಿಮಿಷ ಮಾತನಾಡಿ ನಮ್ಮ ಆರೋಗ್ಯ ಸಚಿವರು ಅದೇನು ಉಸ್ತುವಾರಿ ಮಾಡಿಯಾರು? ಇಷ್ಟು ದಿನಗಳೂ ಅಹರ್ನಿಶಿ ಅವರು ಹಾಗಾದರೆ ದೂರವಾಣಿಯಲ್ಲಿ ಮಾತಾಡುತ್ತಲೇ ಇದ್ದರೇ?! ಇಷ್ಟಾಗಿಯೂ ’ಹಂದಿಜ್ವರ’ ಶಂಕಿತರ ತಪಾಸಣಾ ವರದಿ ಹೊರಬೀಳುವಲ್ಲಿ ವಿಳಂಬ ಏಕೆ? ವರದಿ ವಿಳಂಬವಾದ (ದುರ್)ದೆಸೆಯಿಂದಲೇ ಬೆಂಗಳೂರಿನಲ್ಲಿ ಒಂದು ಸಾವು ಸಂಭವಿಸಲಿಲ್ಲವೆ?

ಬೆಂಗಳೂರು ಇಂದು ಅಕ್ಷರಶಃ ತಿಪ್ಪೆಗುಂಡಿಯಾಗಿದೆ. ಎಲ್ಲ ರಸ್ತೆಗಳಲ್ಲೂ ಎಲ್ಲ ಬಡಾವಣೆಗಳಲ್ಲೂ ಕೊಳೆತ ಕಸದ ರಾಶಿ ಎಲ್ಲೆಂದರಲ್ಲಿ ಕಣ್ಣಿಗೆ ರಾಚುತ್ತಿದೆ. ಮಧ್ಯಮ ದರ್ಜೆಯ ಬಹುಪಾಲು ಹೋಟೆಲ್‌ಗಳು ಜನರನ್ನು ಬೀದಿಯಲ್ಲಿ ನಿಲ್ಲಿಸಿ ತಿಂಡಿ ತಿನ್ನಿಸುತ್ತಿವೆ. ಕಳೆದ ವರ್ಷ ನಾಯಿಗಳ ಉಪಟಳದ ಬಗ್ಗೆ ಬೆಂಗಳೂರು ಮಹಾನಗರಪಾಲಿಕೆಯೊಡನೆ ಏರ್ಪಟ್ಟಿದ್ದ ಸಮಾಲೋಚನೆಯೊಂದರಲ್ಲಿ ಪಾಲಿಕೆಯು ಒಂದು ತಿಂಗಳೊಳಗೆ ಮರುಸಭೆ ಕರೆಯುವ ಆಶ್ವಾಸನೆಯನ್ನು ನನಗೆ ನೀಡಿತ್ತು. ಆದರೆ ವರ್ಷ ಕಳೆದರೂ ಇನ್ನೂ ಸಭೆಯ ಸುಳಿವೇ ಇಲ್ಲ! ಕಸ ವಿಲೇವಾರಿಗೆ ಜಿಪಿಎಸ್ ತಂತ್ರಜ್ಞಾನ ಬಳಸುವ ಆಶ್ವಾಸನೆಯೂ ಅಂದಿನ ಸಮಾಲೋಚನೆಯಲ್ಲಿ ಬಂದರೂ ಇದುವರೆಗೂ ಅದೂ ಕಾರ್ಯಗತವಾಗಿಲ್ಲ. ಪಾಲಿಕೆಯ ಆರೋಗ್ಯಾಧಿಕಾರಿಣಿಯವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆಂಬುದೇ ಗೊತ್ತಾಗುತ್ತಿಲ್ಲ. ರಾಜ್ಯದ ಇತರೆಡೆಗಳ ಸ್ಥಿತಿಯೂ ಭಿನ್ನವೇನಲ್ಲ.

ಮಂತ್ರಿಗಳು ಬರಿದೆ ಮಾತಾಡಬಾರದು. ಕೆಲಸ ಮಾಡಿ ತೋರಿಸಬೇಕು. ಮಾತಿಗೆ ಮರುಳಾಗುವಷ್ಟು ದಡ್ಡರಲ್ಲ ಜನತೆ ಎಂಬುದನ್ನು ಸದಾಕಾಲ ಅವರು ನೆನಪಿಟ್ಟುಕೊಳ್ಳಬೇಕು. ಜನತೆ ಅಂತಿಮವಾಗಿ ಪರಿಗಣಿಸುವುದು ಸರ್ಕಾರದ ಕಾರ್ಯಚಟುವಟಿಕೆಗಳ ಫಲಿತಾಂಶವನ್ನೇ ಹೊರತು ಸರ್ಕಾರವು ನೀಡುವ ಸಮರ್ಥನೆಗಳನ್ನಲ್ಲ.

ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಬಗ್ಗೆ ಹೇಳಬೇಕಾಗಿದೆ. ವರ್ಷಗಳ ಕಾಲ ಬಳ್ಳಾರಿಯಲ್ಲಿದ್ದ ನಾನು ಶ್ರೀರಾಮುಲು ಅವರನ್ನೂ ಮತ್ತು ರೆಡ್ಡಿ ಸೋದರರನ್ನೂ ಹತ್ತಿರದಿಂದ ಗಮನಿಸಿ ಬಲ್ಲೆ. ಶ್ರೀರಾಮುಲು ಓರ್ವ ಮಹತ್ವಾಕಾಂಕ್ಷಿ. ಆದರೆ ತಿಳಿವಳಿಕೆ ಕೊಂಚ ಕಮ್ಮಿ. ಕಾರ್ಯಸಾಧನೆಗಾಗಿ ಏನೂ ಮಾಡಬಲ್ಲ ಧೈರ್ಯ ಮತ್ತು ಉಮೇದು ಆತನದು. ಬಳ್ಳಾರಿಯಲ್ಲಿ ಮತ್ತು ಸುತ್ತಮುತ್ತ ಆತ ಮೊದಲಿನಿಂದಲೂ ಜನಪ್ರಿಯ. ಆತನ ಈ ಗುಣಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡವರು ಹಾಗೂ ಬಳಸಿಕೊಳ್ಳುತ್ತಿರುವವರು ಗಣಿರೆಡ್ಡಿ ಸೋದರರು. ಆದ್ದರಿಂದಲೇ ಅವರು ಸದಾಕಾಲ ಶ್ರೀರಾಮುಲುವಿನ ಸಮರ್ಥನೆಯಲ್ಲಿ ತೊಡಗಿರುತ್ತಾರೆ. ಶ್ರೀರಾಮುಲುವಿನ ನೆರವಿಲ್ಲದಿರುತ್ತಿದ್ದರೆ ರೆಡ್ಡಿ ಸೋದರರು ರಾಜಕೀಯ ಕ್ಷೇತ್ರದಲ್ಲಿ ಮಿಂಚಲು ಸರ್ವಥಾ ಸಾಧ್ಯವಾಗುತ್ತಿರಲಿಲ್ಲ. ಈಗಲೂ ಈ ಸೋದರರಿಗೆ ಶ್ರೀರಾಮುಲು ಹೆಸರೇ ಶ್ರೀರಕ್ಷೆ.

ಹೀಗಿರುವಾಗ, ಯಡಿಯೂರಪ್ಪನವರು ರೆಡ್ಡಿಗಳ ತೆಕ್ಕೆಯಿಂದ ಶ್ರೀರಾಮುಲುವನ್ನು ಬಿಡಿಸಬೇಕು. ಆದರೆ ಅದು ಸಾಧ್ಯವಾಗದಂತೆ ರೆಡ್ಡಿಗಳು ಶ್ರೀರಾಮುಲುವನ್ನು ತಮ್ಮ ಗಣಿ (ಅ)ವ್ಯವಹಾರದ ಪಾಲುದಾರನನ್ನಾಗಿ ಮಾಡಿಕೊಂಡುಬಿಟ್ಟಿದ್ದಾರೆ! ಜೊತೆಗೆ, ನಾಡಿನ ಖನಿಜಸಂಪತ್ತನ್ನು ಲೂಟಿಮಾಡಿ ಗಳಿಸಿದ ಹಣದಲ್ಲಿ ಒಂದಂಶವನ್ನು ಯಡಿಯೂರಪ್ಪನವರ ಸರ್ಕಾರದ ಭದ್ರತೆಗಾಗಿ ಖರ್ಚುಮಾಡಿ ಯಡಿಯೂರಪ್ಪನವರನ್ನೂ ದಾಕ್ಷಿಣ್ಯದಲ್ಲಿ ಸಿಕ್ಕಿಸಿದ್ದಾರೆ.

ಆದಾಗ್ಗ್ಯೂ, ಯಡಿಯೂರಪ್ಪ ಓರ್ವ ಸಮರ್ಥ ರಾಜಕಾರಣಿ ಮತ್ತು ಮುತ್ಸದ್ಧಿ ಆಗಿದ್ದಲ್ಲಿ ಯಾವ ದಾಕ್ಷಿಣ್ಯವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ರೆಡ್ಡಿ ಸೋದರರನ್ನೂ ಮತ್ತು ಶ್ರೀರಾಮುಲುವನ್ನೂ ಎಲ್ಲಿಡಬೇಕೋ ಅಲ್ಲಿಡಬೇಕು. ಆಗ ಮಾತ್ರ ರಾಜ್ಯದ ಏಳಿಗೆ ಸಾಧ್ಯ. ಇಂಥ ಧೈರ್ಯದ ನಡೆಯನ್ನು ನಾವು ಯಡಿಯೂರಪ್ಪನವರಿಂದ ನಿರೀಕ್ಷಿಸಬಹುದೇ? ಇದು ಈಗ ಮಿಲಿಯನ್ ಡಾಲರ್ ಪ್ರಶ್ನೆ!

6 ಕಾಮೆಂಟ್‌ಗಳು:

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ಆನ೦ದ ಸರ್,
    ಅ೦ದು ಸೂರತ್ ಹೀಗೆ ತಿಪ್ಪೆ ಗು೦ಡಿ ಎ೦ದು ಹೇಳಿ ಎಲ್ಲರೂ ವ್ಯ೦ಗ್ಯ ಮಾಡುತ್ತಿದ್ದರು .. ಆದರೆ ಈಗ ಸೂರತ್ ಬಹಳ ಸು೦ದರ ನಗರವಾಗಿದೆ ಎ೦ದು ಕೇಳಿದ್ದೇನೆ .. ಅ೦ದರೆ ನಮಗೆ ಬುದ್ದಿ ಕಲಿಯಲು ೧೦೦೦ ಜನ ಸಾಯ ಬೇಕು ಆಗ ನಾವು ಬುದ್ದಿ ಕಲಿಯುತ್ತೇವೆ .. ಹೀಗೆ ಹಂದಿಜ್ವರ ಎ೦ದು ಜನ ಸತ್ತರೆ ನಾವು ಬುದ್ದಿ ಕಲಿಯ ಬಹುದೇ ??

    ಪ್ರತ್ಯುತ್ತರಅಳಿಸಿ
  3. ನಿಜ ಆನಂದ್ ಸರ್
    ಈ ಶ್ರೀರಾಮುಲು ಮಂತ್ರಿಯಾಗಿ ನಡೆದುಕೊಳ್ಳುತ್ತಿರುವ ರೀತಿ ಮಾತ್ರ ಗುಮಾನಿಗೆ ಎಡೆಮಾಡಿಕೊಡುವಂತದ್ದು. ವಾರದ ಾರುದಿನ ಬಳ್ಳಾರಿಯಲ್ಲೇ ಇರುತ್ತಾರೆ. ನಿಜವಾಗಿ ಬಳ್ಳಾರಿಯಲ್ಲಿ ಇರುತ್ಥಾರೋ ಇನ್ನೆಲ್ಲಿಗಾದರೂ ಹಾರಿ ಹೋಗಿರುತ್ತಾರೋ ಒಂದೂ ತಿಳಿಯುವುದಿಲ್ಲ. ಒಂದಂತೂ ನಿಜ ಈ ರಾಮುಲು ಸಹವಾಸದಿಂದ ರೆಡ್ಡಿ ಬ್ರದರ್ಸ್ ಜೇಬು ಉಬ್ಬುತ್ತಿರುವುದು, ಅವರ ಸಹವಾಸದಿಂದ ರಾಮುಲು ತರದ ಒಬ್ಬ ಅನ್ ಫಿಟ್ ನಮ್ಮ ಆರೋಗ್ಯದ ಮಂತ್ರಿಯಾಗಿರುವುದು ಕನ್ನಡಿಗರ ದುರದೃಷ್ಟ. ಇತ್ತೀಚಿಗೆ ಶ್ರೀರಾಮುಲು ನೋಡುತ್ತಿದ್ದರೆ ಅವರು ಯಾವುದೂ ಭಯಂಕರ ರೋಗದಿಂದ ನರಳುತ್ತಿದ್ದಾರೇನೋ ಅನ್ನಿಸುತ್ತಿದೆ.

    ಪ್ರತ್ಯುತ್ತರಅಳಿಸಿ
  4. ಸಮಾಜಮುಖಿ ರೂಪಾ ಅವರೇ,
    ಸಾಹಿತಿ-ವಿದ್ವಾಂಸ ಡಾ.ಸತ್ಯನಾರಾಯಣ ಅವರೇ,
    ನಿಮ್ಮೀರ್ವರ ಕಳವಳ-ಕಳಕಳಿ ನನ್ನದೂ ಸಹ.
    ಸೂರತ್ ಪಕ್ಕದ ವಲ್‌ಸದ್ ಪಟ್ಟಣದಲ್ಲಿ ಮೂರು ವರ್ಷ ಇದ್ದ ನಾನು ಸೂರತ್‌ನ ಸೂರತ್ ಅನ್ನು ಚೆನ್ನಾಗಿ ಕಂಡಿದ್ದೇನೆ. ಎಸ್.ಆರ್.ರಾವ್ ಮಾಡಿದ ಯಜ್ಞವೆಲ್ಲ ನಂತರದ ದಿನಗಳಲ್ಲಿ ನೀರಿನಲ್ಲಿ ಹೋಮವಾಗಿ ಅದೇ ರಾವ್ ಅವರು ಬೇಸರಪಟ್ಟಿದ್ದನ್ನೂ ಗಮನಿಸಿದ್ದೇನೆ.
    ಬಳ್ಳಾರಿಯಲ್ಲಿದ್ದ ನನಗೆ ರೆಡ್ಡಿಗಳ ಬಗ್ಗೆ ಚೆನ್ನಾಗಿ ಗೊತ್ತು.
    ಯಾವುದಕ್ಕೂ ನಮ್ಮ ದೇವರೇ (ಮು.ಮಂ.) ಸರಿಯಿಲ್ಲ, ಏನು ಮಾಡೋದು?

    ಪ್ರತ್ಯುತ್ತರಅಳಿಸಿ
  5. ಯಾವ ರಾಜಕಾರಣಿಯೂ ಕೇವಲ ಜನಹಿತಾ ದೃಷ್ಟಿಯಿಂದ ಕಾರ್ಯ ನಿರ್ವಹಿಸುವುದಿಲ್ಲ. ಇದು ಸಾರ್ವಕಾಲಿಕ ಕಟು ಸತ್ಯ. ಅಂತಹ ರಾಜಕಾರಣಿಗಳನ್ನು ಆರಿಸಿ ಕಳುಹಿಸುವ ನಾವು ಈಗ ಅನುಭವಿಸುತ್ತಿದ್ದೇವೆ. ರಾಜಕಾರಣಿಗಳಲ್ಲೇ ಕೆಲವರು(ಅಲ್ಲೋ ಇಲ್ಲೋ) ಜನ ಹಿತ ದೃಷ್ಟಿಯನ್ನೂ ನೋಡುತ್ತಾರೆ(ಸ್ವ ಹಿತದೃಷ್ಟಿಯೊಡನೆ) ಅಂತಹವರನ್ನಾದರೂ ಗುರುತಿಸಿ ಆರಿಸಿ ಕಳುಹಿಸಿದರೆ ಮುಂದಿನ ದಿನಗಳಲ್ಲಿ ಇಂತಹ ಮಹಾಮಾರಿ ಕಾಯಿಲೆಗಳು ಬಂದಾಗ ತುಸು ಜವಾಬ್ದಾರಿಯಿಂದ ಕಾರ್ಯ ನಿಭಾಯಿಸುವಂತಾಗುವುದು.
    ಸಕಾಲಿಕ ಲೇಖನ. ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  6. ವಾಸ್ತವವನ್ನು ಅನಾವರಣಗೊಳಿಸಿರುವ ಪ್ರತಿಕ್ರಿಯೆಗಾಗಿ ಧನ್ಯವಾದ, ತೇಜಸ್ವಿನಿ ಹೆಗಡೆ ಅವರೇ.
    ಜಬ್ ಹಮಾರಾ ’ಸಪ್‌ನಾ’ ಹಕೀಕತ್ ಮೇ ಬದಲ್ ಗಯಾ
    ’ಹಮೇ ನ ಮಾಲೂಮ್ ಥಾ’ ಯಹ್ ಐಸಾ ಹೋಗಾ!
    ನಾಡಿನ ಹಕೀಕತ್ ಹೀಗಾಗಿದೆ ಅಲ್ಲವೆ?

    ಪ್ರತ್ಯುತ್ತರಅಳಿಸಿ