ಮಂಗಳವಾರ, ಮೇ 19, 2009

ಎಲೆಕ್ಷನ್ ಗುಳಿಗೆಗಳು! - 2

* ಮನಮೋಹನ್ ಸಿಂಗರಿಗೂ ಎಲ್.ಕೆ. ಅಡ್ವಾಣಿ ಅವರಿಗೂ ಏನು ವ್ಯತ್ಯಾಸ?
- ಒಬ್ಬರು ದೇಹಕ್ಕೆ ತಲೆಬಾಗುವವರು, ಇನ್ನೊಬ್ಬರು ದೇಶಕ್ಕೆ ತಲೆಬಾಗುವವರು.

***

* ಲಾಲ್ ಕೃಷ್ಣ ಅಡ್ವಾಣಿ ನಿವೃತ್ತಿ ಹೊಂದುತ್ತಾರಾ ಶ್ರೀಕೃಷ್ಣಾ?
- ಸೇವಾವೃತ್ತಿಗೆ ನಿವೃತ್ತಿ ಎಂಬುದಿಲ್ಲ ಅರ್ಜುನಾ.

***

* ಮನಮೋಹನ್ ಸಿಂಗರಿಗೆ ಮೊದಲ ವಿದೇಶಿ ಅಭಿನಂದನೆ ಜರ್ದಾರಿಯಿಂದ ಬಂತಂತೆ.
- ಮೊದಲ ವಿದೇಶಿ ಸಮಸ್ಯೆಯೂ ಜರ್ದಾರಿಯೇ.

***

* ತೃಣ-ಮೂಲ, ಆದರೆ ಸಾಧನೆ ಬೆಟ್ಟದಷ್ಟು!
- ’ತೃಣ ಒಂದು ಗಿರಿಯಾಗಿ, ಗಿರಿಗಿಂತ ಘನವಾಗಿ, ಎಣಿಸಲಾರದ ಮುದದೊಳ್ ಮಿಂದೆ ನಾನು; ಸೋನ್ಯಾದಿ ಜನವಂದ್ಯ, ಮಾನ್ಯ ಮನಮೋಹನಾ, ನಾನ್ಕೇಳಿದ್ಖಾತೆಗಳ ನೀಡೊ ಎನ್ನೊಡೆಯಾ’, ಎನ್ನುತ್ತಿದ್ದಾರೆ ಮಮತಾ ಬ್ಯಾನರ್ಜಿ.

***

* ಮಮತಾ ಬ್ಯಾನರ್ಜಿಯ ಅರ್ಜಿ?
- ರೈಲ್ವೆ ಖಾತೆಗೆ. ಕೊಡೋದು ಬಿಡೋದು ಮನಮೋಹನ್ ಮರ್ಜಿ.

***

* ಲಾಲು ಮತ್ತು ಮುಲಾಯಂ ಮಂತ್ರಿಗಳಾಗೋಕೆ ಯೋ(ಯಾ)ಚಿಸ್ತಿರೋದು ಆಶ್ಚರ್ಯವಲ್ಲವೆ?
- ಖಂಡಿತ ಅಲ್ಲ. ಅವರು ಡೀಸೆಂಟಾಗಿ ಎಂಪಿ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಸುಮ್ಮನಿದ್ದಿದ್ದರೆ ಅದು ಆಶ್ಚರ್ಯ.

***

* ಏನ್ ಸಾರ್, ಹೀಗಾಯ್ತು ಲಾಲೂ ಅವಸ್ಥೆ!
- ಹಳಿ ಇಲ್ಲದೆ ರೈಲ್ ಬಿಟ್ರೆ ಇನ್ನೇನಾಗುತ್ತೆ?!

***

* ಲಾಲು ಮುಲಾಯಮ್‌ಗಳಿಗೆ ಮರ್ಯಾದೆ ಇದೆಯೇ?
- ಅದರ ಹಂಗಿದೆಯೇ ಅಂತ ಕೇಳಿ.

***

* ರಾಮ್ ವಿಲಾಸ್ ಪಾಸ್ವಾನಾ?
- ಅಲ್ಲ. ರಾಮ್ ಬಕ್ವಾಸ್, ಪಸೀನಾ!

***

* ಖರ್ಗೆ, ಧರಂ, ಮೊಯ್ಲಿ, ಎಸ್ಸೆಂ, ಕೆ.ಎಚ್. ಎಲ್ಲರೂ ಮಂತ್ರಿಗಳಾಗ್ಬೇಕಂತೆ!
- ಗೆದ್ದಿದ್ದು ಬರೀ ಆರು, ಮಂತ್ರಿಗಿರಿ ಆಸೆ ಜೋರು!

***

* ಮೂರು ಸೀಟು ಇಟ್ಕೊಂಡು ಕುಮಾರಸ್ವಾಮಿ ಕೇಂದ್ರ ಮಂತ್ರಿ?!
- ಹದಿಮೂರು ಪಾರ್ಟಿ ಹಾಕ್ಕೊಂಡು ದೇವೇಗೌಡ್ರು ಪ್ರಧಾನ ಮಂತ್ರಿ ಆಗ್ಲಿಲ್ವೆ?

***

* ಮಂತ್ರಿಯಾಗುವ ಅರ್ಹತೆ ಸಮರ್ಥಿಸಿಕೊಳ್ಳಲು ಕುಮಾರಸ್ವಾಮಿ ದೆಹಲಿಗೆ ಯಾವ ದಾಖಲೆ ತಗೊಂಡು ಹೋಗ್ತಾರೆ?
- ತಾನು ಯುವಕ ಎಂದು ದೃಢಪಡಿಸುವ ’ಯೂತ್ ಸರ್ಟಿಫಿಕೇಟ್’; ತಹಸೀಲ್ದಾರ್ ಸಹಿ ಮಾಡಿದ್ದು!

***

* ಜಯಪ್ರದಾ ಗೆದ್ದುಬಿಟ್ರು!
- ಮತ್ತ್ಯಾಕೆ ಆ ಹೆಸರು ಇಟ್ಕೊಂಡಿದ್ದು ಅಂತೀರಿ.

***

* ಅಜಂ?
- ಖತಂ.

***

* ಅಜರ್?
- ಸಿಕ್ಸರ್! (ಈ ಮೊದಲು ಮ್ಯಾಚ್ ಫಿಕ್ಸರ್.) (ಈಗ ಅಜರ್ ಮೇಲೆ ಅಲ್ಲಾಹ್ ಕೀ ನಜರ್.)

***

* ಜಯಲಲಿತಾ ಭಾಳ ಆಸೆ ಇಟ್ಕೊಂಡಿದ್ರು.
- ಆದ್ರೆ ಜನ ಎಐಎಡಿಎಮ್‌ಕೆ ಎಮಕೆ ಮುರಿದ್ರು!

***

* ಮಾಯಾವತಿ ಪ್ರಧಾನಿ ಆಗೋ ಕನಸು ಕಂಡಿದ್ರು!
- ಏನ್ಮಾಡೋದು, ಮಾಯಾ-ಮಂತ್ರ ಕೆಲಸ ಮಾಡ್ಲಿಲ್ಲ; ಮಾಯಾ-ಜಾಲಕ್ಕೆ ಮಿಕ ಬೀಳ್ಲಿಲ್ಲ! ಮುಂದೆ ಇನ್ನೇನು ಮಾಯಾ-ಬಜಾರ್ ಕಾದಿದೆಯೋ!

***

* ತೃತಿಯ ರಂಗ ಈಗ ಏನಾಗಿದೆ?
- ಅದ್ವಿತೀಯ ಮಂಗ!

***

* ಸಂಘಟನೆ ಕೊರತೆ ಸೋಲಿಗೆ ಕಾರಣ ಅಂತಾರೆ ದೇಶಪಾಂಡೆ.
- ಜೊತೆಗೆ ಅನೇಕ ಘಟನೆಗಳೂ ಕಾರಣ ಅಂತಾರೆ ಸಿದ್ರಾಮಯ್ಯ!

***

* ಕಡಿಮೆ ಮತದಾನ ಎನ್‌ಡಿಎ ಸೋಲಿಗೆ ಕಾರಣ: ಉದಾಸಿ
- ಜನರ ಉದಾಸೀನ ಕಡಿಮೆ ಮತದಾನಕ್ಕೆ ಕಾರಣ: ತಿಪ್ಪೇಶಿ

***

* ಮೋದಿ, ವರುಣ್ ಹೇಳಿಕೆಗಳಿಂದ ಎನ್‌ಡಿಎ ನಷ್ಟಕ್ಕೀಡಾಯಿತು ಅಂದಿದ್ದಾರೆ ಶರದ್ ಯಾದವ್.
- ಏಕಕಾಲದಲ್ಲಿ ಮೋದಿ-ವರುಣ್‌ರನ್ನೂ ಮತ್ತು ಮತದಾರರನ್ನೂ ಅವಮಾನಿಸಿದ್ದಕ್ಕಾಗಿ ಹಾಗೂ ಎನ್‌ಡಿಎ ಅನ್ನು ಅನ್‌ಡರ್ ಎಸ್ಟಿಮೇಟ್ ಮಾಡಿದ್ದಕ್ಕಾಗಿ ಶರದ್‌ಜಿ ವಿರುದ್ಧ ಬಿಟ್ಬಂದ್ಹಳ್ಳಿ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡ್ತಾನಂತೆ ತಿಪ್ಪೇಶಿ!

***

* ಲಾಸ್ಟ್ ಕ್ವೆಶ್ಚನ್: ಮನಮೋಹನ್ ಸಿಂಗ್ ಅವರ ಮುಂದಿನ ನಡೆಗಳು ಏನೇನು?
- ಅಂತರಾತ್ಮದ ಕರೆಗೆ ಓಗೊಡುವುದು, ಅನಾರೋಗ್ಯದ ವಿಷಯ ಬಹಿರಂಗಪಡಿಸುವುದು ಮತ್ತು ರಾಹುಲ್‌ಗೆ ಪಟ್ಟ ಬಿಟ್ಟುಕೊಡುವುದು. ಆರು ತಿಂಗಳೊಳಗೆ!

ಭಾನುವಾರ, ಮೇ 17, 2009

ಎಲೆಕ್ಷನ್ ಗುಳಿಗೆಗಳು!

* ರಾಜ್ಯ ಮತ್ತು ಕೇಂದ್ರದಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರ.
- ಕರ್ನಾಟಕಕ್ಕೆ ಇದು ಮಾಮೂಲಿ ಗ್ರಹಚಾರ!

***

* ರಾಜ್ಯದಲ್ಲಿ ಭರ್ಜರಿ ಜಯ, ಆದರೆ ಕೇಂದ್ರದಲ್ಲಿ ಸರ್ಕಾರದ ಭಾಗ್ಯ ಇಲ್ಲ! ಇದಕ್ಕೆ ಯಡಿಯೂರಪ್ಪ ಏನನ್ನುತ್ತಿದ್ದಾರೆ?
- ’ನಗುವುದೋ ಅಳುವುದೋ ನೀವೇ ಹೇಳಿ’, ಅನ್ನುತ್ತಿದ್ದಾರೆ!

***

* ’ರಾಮಮಂದಿರ ಕಟ್ತೀವಿ’ ಅಂದರೂ ಸೋತರು.
- ’ಖಂಡಿತ ಕಟ್ಟೋಲ್ಲ’ ಅಂದರೆ ಗೆಲ್ತಾರೇನೋ ಮುಂದಿನ ಸಲ.

***

* ಆರು-ಮೂರು ಒಂಬತ್ತು, ಕಾಂ-ಜ ಇಲ್ಲಿ ಹಳ್ಳಕೆ ಬಿತ್ತು!
- ಗೆದ್ದರೂ ಇಲ್ಲಿ ಹತ್ತೊಂಬತ್ತು, ಅಲ್ಲಿ ಅಧಿಕಾರ ’ಕೈ’ಕೊಟ್ತು!

***

* ಕೇಂದ್ರದಲ್ಲಿ ಯುಪಿಎ ಆಡಳಿತ ಮುಂದುವರಿದದ್ದು ಯಡಿಯೂರಪ್ಪನವರಿಗೆ ಒಂದು ರೀತೀಲಿ ಒಳ್ಳೇದೇ ಆಯ್ತು.
- ತಮ್ಮ ಆಡಳಿತ ವೈಫಲ್ಯಕ್ಕೆ ಎಂದಿನಂತೆ ಕೇಂದ್ರದಮೇಲೆ ಗೂಬೆ ಕೂರಿಸಿ ಪಾರಾಗೋ ಚಾಳಿಯನ್ನು ಮುಂದುವರಿಸಿಕೊಂಡು ಹೋಗಬಹುದು.

***

* ಭಾರತಕ್ಕಿನ್ನು ಏಕಕಾಲಕ್ಕೇ ಮೂರು ತಲೆಮಾರುಗಳ ಆಡಳಿತ!
- ಮೊದಲನೇ ತಲೆಮಾರಿನ ಪ್ರಧಾನಿ, ಎರಡನೇ ತಲೆಮಾರಿನ ಮೇಡಂ ಸೋನಿ(ಯಾ) ಮತ್ತು ಮೂರನೇ ತಲೆಮಾರಿನ (ರಾಹುಲ್ ಎಂಬ) ನಿಧಾನಿ!

***

* ಮಮತಾ ಗಾಳಕ್ಕೆ
- ಬಂಗಾಳದ ಮತ.

***

* ಯುಪಿಎ ಸರ್ಕಾರ ಇನ್ನು
- ಮಮತೆಯ ಮಡಿಲಲ್ಲಿ!

***

* ಕೇರಳ, ಬಂಗಾಳ ಎರಡೂ ಕಡೆ ಕಮ್ಯುನಿಸ್ಟರು ಸೋತುಹೋದರು.
- ಸೋತು ಎಲ್ಲಿಗೆ ಹೋದರು? ಚೀನಾಕ್ಕಾ, ನೇಪಾಳಕ್ಕಾ?

***

* ಅನುಭವಮಂಟಪದ ಪೀಠ ಏರಲು ಹೊರಟಿದ್ದ ಪಾಸ್ವಾನ್‌ಗೆ
- ಶೂನ್ಯಸಂಪಾದನೆ!

***

* ಮೂತಿ ನೋಡೋಕೆ ಬಂದಿದ್ದೋರೆಲ್ಲಾ ಮತ ನೀಡಿದ್ದರೆ
- ಚಿರಂಜೀವಿ ಇಷ್ಟೊತ್ತಿಗೆ ಮುಖ್ಯಮಂತ್ರಿ ಆಗಿರ್ತಿದ್ದರು!

***

* ಚಿರಂಜೀವಿಗೆ ಒಂದು ಕ್ಷೇತ್ರದಲ್ಲಿ ಗೆಲುವು, ಇನ್ನೊಂದರಲ್ಲಿ ಸೋಲು.
- ’ಸುಖೇ ದುಃಖೇ ಸಮೇ ಕೃತ್ವಾ’ ಅಂತ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದು ಇದನ್ನೇ ಇರಬೇಕು.

***

* ರೇಣುಕಾ ಚೌಧರಿ ಸೋತರು.
- ನಿರ್ಮಲಾ ವೆಂಕಟೇಶ್ ಹಾಲು ಕುಡಿದರು!

***

* ದೇವೇಗೌಡರ ವಿರುದ್ಧ ಗೆದ್ದ ತೇಜಮ್ಮ ಗೌಡರ ಮಗನ ವಿರುದ್ಧ ಸೋತರು!
- ಮುಂದಿನ ಎಲೆಕ್ಷನ್ನಲ್ಲಿ ಮೊಮ್ಮಗನ ವಿರುದ್ಧ ಡಿಪಾಸಿಟ್ ಖೋತಾ?

***

* ಬಂಗಾರಪ್ಪ ಸೋಲಲು ಕಾರಣ?
- ಫ್..ಫ್..ದುಡ್ಡು. ಫ್..ಫ್..ಖರ್ಚು ಮಾಡಲು ಸಾಕಷ್ಟು ಇಲ್ಲದೇ ಇದ್ದದ್ದು.

***

* (ಮಾಜಿ) ಎಸ್.ಪಿ.ಸಾಂಗ್ಲಿಯಾನಾ ಚಿಂತಿಸಬೇಕಿಲ್ಲ.
- (ಮಾಜಿ) ’ಎಂ.ಪಿ.ಸಾಂಗ್ಲಿಯಾನಾ’ ಎಂಬ ಚಿತ್ರ ತಗ್ಗ್..ಯೋಕೆ ದೇವ್ರು ಪ್ರೊಡ್ಯೂಸರ್‍ನ ಹೆವನ್ನಿಂದ ಕಾಳಿಸಿ ಕೋಡ್ತಾರೇ.

***

* ಖರ್ಗೆ, ಧರಂ, ಮುನಿಯಪ್ಪ ಹಳೇ ಹುಲಿಗಳು.
- ಪೂಜಾರಿ, ಷರೀಫ್, ಬಂಗಾರಪ್ಪ ಹಳೇ ಇಲಿಗಳು!
* ಮಾರ್ಗರೆಟ್ ಆಳ್ವ?
- ಮಾರ್ಜಾಲ!

***

* ಜನಾರ್ದನ ಪೂಜಾರಿ ಸೋತದ್ದು ಯಾಕೆ?
- ಗಾದೇಲಿರೋ ಪೂಜಾರಿ ಇವರೇ ಅಂದ್ಕೊಂಡ ದೇವರು, ಅದಕ್ಕೆ!

***

* ದಾವಣಗೆರೆ ಫಲಿತಾಂಶ ಬಲು ವಿಶೇಷ.
- ಎಸ್ ಎಸ್ ಮಲ್ಲಿಕಾರ್ಜುನ್‌ಗೆ ಮತದಾರರು ನೋ ನೋ ಅಂದರು; ಪರಿಣಾಮ, ಸಿದ್ದೇಶ್ವರರು ಗೆದ್ದೇಶ್ವರರಾದರು.

***

* ಲಾಸ್ಟ್ ಕ್ವೆಶ್ಚನ್: ಮನಮೋಹನ್ ಸಿಂಗ್ ಇನ್ನಷ್ಟು ಪ್ರಬಲ?
- ಊಹ್ಞೂ. ಇನ್ನಷ್ಟು ದುರ್ಬಲ!

ಹಿಸ್ಟರಿ ರಿಪೀಟ್ಸ್ (ಭವಿಷ್ಯದ ಸುದ್ದಿ!)

ನವದೆಹಲಿ, ನವೆಂಬರ್ 17:
’ಹಿಸ್ಟರಿ ರಿಪೀಟ್ಸ್’ ಎಂಬ ಮಾತು ಎಷ್ಟೊಂದು ಸತ್ಯ!
2004ರಲ್ಲಿ ಸೋನಿಯಾ ಗಾಂಧಿ ತಮ್ಮ ಅಂತರಾತ್ಮದ ಕರೆಗೆ ಓಗೊಟ್ಟು ಪ್ರಧಾನಿ ಹುದ್ದೆಯನ್ನು ನಿರಾಕರಿಸಿದರು. ಆ ಹುದ್ದೆ ಮನಮೋಹನ್ ಸಿಂಗ್ ಪಾಲಾಯಿತು. ಸೋನಿಯಾ ಗಾಂಧಿಯದು ಮಹಾನ್ ತ್ಯಾಗವೆಂದೇ ಕಾಂಗ್ರೆಸ್ ವಲಯದಲ್ಲಿ ಬಣ್ಣಿಸಲಾಯಿತು. ಇದೀಗ ಮನಮೋಹನ್ ಸಿಂಗ್ ಕೂಡ ತಮ್ಮ ಅಂತರಾತ್ಮದ ಕರೆಗೆ ಓಗೊಟ್ಟು ಪ್ರಧಾನಿ ಹುದ್ದೆಯನ್ನು ತ್ಯಾಗಮಾಡಿದ್ದಾರೆ. ಆ ಹುದ್ದೆ ರಾಹುಲ್ ಗಾಂಧಿ ಪಾಲಾಗಿದೆ. ಸಿಂಗ್ ಅವರದೂ ಮಹಾನ್ ತ್ಯಾಗವೆಂದು ಕಾಂಗ್ರೆಸ್ ವಲಯದಲ್ಲಿ ಬಣ್ಣಿಸಲಾಗುತ್ತಿದೆ.

ತಮ್ಮ ವಿದೇಶಿ ಮೂಲದ ಕಾರಣದಿಂದಾಗಿ ಸೋನಿಯಾ ಅಂದು ಪ್ರಧಾನಿ ಹುದ್ದೆ ಕೈಬಿಟ್ಟರು. ತಮ್ಮ ವಿದೇಶಿ ವಿದ್ಯಾಭ್ಯಾಸದ ಪ್ರಭೆಯೊಂದಿಗೆ ರಾಹುಲ್ ಇಂದು ಪ್ರಧಾನಿ ಪಟ್ಟವನ್ನೇರಿದ್ದಾರೆ.

ಸಮರ್ಥ ವ್ಯಕ್ತಿಯೆಂದು ಹೇಳಿ ಸೋನಿಯಾ ಅಂದು ಸಿಂಗ್ ಅವರಿಗೆ ಪಟ್ಟ ಕಟ್ಟಿದರು. ಸಮರ್ಥ ಯುವಶಕ್ತಿಯೆಂದು ಹೇಳಿ ಸಿಂಗ್ ಇಂದು ರಾಹುಲ್‌ಗೆ ಪಟ್ಟ ಬಿಟ್ಟುಕೊಟ್ಟಿದ್ದಾರೆ.

ಸಿಂಗ್‌ಗೂ ಮೊದಲು ಪ್ರಧಾನಿಯಾಗಿದ್ದ ವಾಜಪೇಯಿ ಅವರು ಪ್ರಧಾನಿ ಹುದ್ದೆ ತಮ್ಮ ಕೈಬಿಟ್ಟುಹೋದ ಕೆಲವೇ ತಿಂಗಳುಗಳಲ್ಲೇ ಆರೋಗ್ಯದ ಸಮಸ್ಯೆ ಎದುರಿಸಬೇಕಾಗಿ ಬಂತು. ಪರಿಣಾಮವಾಗಿ ಅವರೀಗ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ. ಪ್ರಧಾನಿ ಹುದ್ದೆಯ ಪ್ರಥಮಾವಧಿ ಮುಗಿಯುವ ಕೆಲವೇ ತಿಂಗಳು ಮೊದಲು ಸಿಂಗ್ ಅವರನ್ನೂ ಆರೋಗ್ಯದ ಸಮಸ್ಯೆ ಕಾಡಿ ಅವರು ಆಪರೇಷನ್‌ಗೆ ಒಳಗಾಗಬೇಕಾಯಿತು. ಪರಿಣಾಮವಾಗಿ ಸಿಂಗ್ ಈಗ ಎರಡನೇ ಬಾರಿ ಪ್ರಧಾನಿಯಾದ ಆರೇ ತಿಂಗಳಲ್ಲಿಯೇ ಆರೋಗ್ಯದ ಸಮಸ್ಯೆಯಿಂದಾಗಿ ಸಕ್ರಿಯ ರಾಜಕಾರಣದಿಂದ ದೂರ ಉಳಿಯುವ ಘೋಷಣೆ ಮಾಡಿದ್ದಾರೆ.

ಹಿಸ್ಟರಿ ರಿಪೀಟ್ಸ್, ಬಟ್ ಇನ್ ಎ ಡಿಫರೆಂಟ್ ಸ್ಟೈಲ್! ಅಲ್ಲವೆ?

ಈ ಫೋಟೊ ಹೀಗೇಕೆ?

ಮೇಲಿನ ಫೋಟೊ ನೋಡಿರಿ. ಅದರ ಅಡಿಬರಹ ಓದಿರಿ. ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಫೋಟೊ ಇದು. ಇದರ ಅಡಿಬರಹ ಸುಮ್ಮನೆ ಬರೆದದ್ದು. ಇಬ್ಬರೂ ಈ ರೀತಿ ಮುಖವಾಡ ಧರಿಸಿ ನಿಂತಿರುವುದಕ್ಕೆ, ಅದರಲ್ಲೂ ಸೀರೆಯುಟ್ಟ ಮಹಿಳೆಯೊಬ್ಬರು ಕುಮಾರಸ್ವಾಮಿಯ ಮುಖವಾಡ ಧರಿಸಿರುವುದಕ್ಕೆ ವಿಶೇಷ ಕಾರಣವಿದೆ. ಅದು ಹೀಗಿದೆ.

ಚುನಾವಣೆಯಲ್ಲಿ ದೇವೇಗೌಡರಿಗೆ ಎದುರಾಳಿಯಾಗಿ ಮಹಿಳೆಯೊಬ್ಬಳನ್ನು ಕಣಕ್ಕಿಳಿಸಿದರೆ ಗೌಡರು ಸೋಲುತ್ತಾರೆಂದು ಜ್ಯೋತಿಷಿಯೊಬ್ಬರು ಹೇಳಿದ ಪ್ರಕಾರ 2004ರ ಚುನಾವಣೆಯಲ್ಲಿ ಡಿಕೆಶಿ ಅವರು ತೇಜಮ್ಮ ಅವರನ್ನು ಕಣಕ್ಕಿಳಿಸಿದರು. ಜ್ಯೋತಿಷಿಯ ಮಾತು ನಿಜವಾಯಿತು. ಗೌಡರು ಸೋತರು, ತೇಜಮ್ಮ ಗೆದ್ದರು.

ಈ ಸಲದ ಚುನಾವಣೆಯಲ್ಲಿ ದೇವೇಗೌಡರ ಮಗನನ್ನೂ ಅದೇ ರೀತಿ ಸೋಲಿಸಬಹುದೆಂದು ಅದೇ ಜ್ಯೋತಿಷಿ ಹೇಳಿದ್ದನ್ನು ಕೇಳಿ ತೇಜಮ್ಮನವರು ಸ್ವಯಂಸ್ಫೂರ್ತಿಯಿಂದ ಕುಮಾರಸ್ವಾಮಿಯ ವಿರುದ್ಧ ಕಣಕ್ಕಿಳಿದರು. ಆದರೆ ಹೀನಾಯವಾಗಿ ಸೋತರು!

ತೇಜಮ್ಮನ ವಿರುದ್ಧ ಕುಮಾರಸ್ವಾಮಿ ಗೆದ್ದರೂ ರೇವಣ್ಣನಿಗೆ ಒಳಗೊಳಗೇ ಆತಂಕ! ಮಹಿಳೆಯ ವಿರುದ್ಧವಾಗಿ ಹಾಗೂ ಜ್ಯೋತಿಷಿಯ ಮಾತಿಗೆ ವ್ಯತಿರಿಕ್ತವಾಗಿ ತಮ್ಮನು ಗೆದ್ದಿರುವುದರಿಂದ ಮುಂದೆ ಅವನಿಗೆ ಏನು ಆತಂಕ ಕಾದಿದೆಯೋ ಎಂಬ ಆತಂಕ! ರೇವಣ್ಣ ಅದೇ ಜ್ಯೋತಿಷಿಯ ಬಳಿಗೆ ಓಡಿ ತಮ್ಮ ಆತಂಕವನ್ನು ಮುಂದಿಟ್ಟರು. ಜ್ಯೋತಿಷಿಯು ಕೂಡಿ, ಕಳೆದು, ಗುಣಿಸಿ, ಭಾಗಿಸಿ, ಕಣ್ಣುಮುಚ್ಚಿ, ಕಣ್ಣುತೆರೆದು ಪರಿಹಾರವನ್ನು ಹೇಳಿದರು. ಅದೆಂದರೆ, ಕುಮಾರಸ್ವಾಮಿಯು ಮಹಿಳೆಯ ವೇಷ ತೊಟ್ಟು ಪಕ್ಷದ ಕಚೇರಿಯ ಮುಂದೆ ರಾಹುಕಾಲ ಪೂರ್ತಿ ನಿಲ್ಲಬೇಕು. ಪಕ್ಕದಲ್ಲಿ ತಂದೆ ದೇವೇಗೌಡರೂ ಇರತಕ್ಕದ್ದು.

ಸರಿ ಎಂದು ರೇವಣ್ಣ ಹೋಗಿ ತಮ್ಮನಿಗೆ ಈ ಮಾತು ಹೇಳಿದಾಗ ಕುಮಾರಸ್ವಾಮಿ ಇದಕ್ಕೆ ಸುತರಾಂ ಒಪ್ಪಲಿಲ್ಲ. ದೇವೇಗೌಡರೂ ಹಿಂದೇಟು ಹಾಕಿದರು. ರೇವಣ್ಣ ಪುನಃ ಜ್ಯೋತಿಷಿಯ ಬಳಿ ಧಾವಿಸಿ ಸಮಸ್ಯೆ ತೋಡಿಕೊಂಡರು. ಆಗ ಜ್ಯೋತಿಷಿಯು ಪರ್ಯಾಯ ಪರಿಹಾರವೊಂದನ್ನು ಸೂಚಿಸಿದರು. ಅದನ್ನೇ ನೀವು ಈ ಫೊಟೋದಲ್ಲಿ ನೋಡುತ್ತಿದ್ದೀರಿ.
(ಚಿತ್ರಕೃಪೆ: ಕೆಪಿಎನ್)

ಪಾರ್ಲಿಮೆಂಟ್ ಪೆಪ್ಪರ್‌ಮಿಂಟ್!

ಪ್ರೀತಿಯ ಓದುಗ ಮಿತ್ರರಿಗೆ ನಮಸ್ಕಾರ.
ಗುಳಿಗೆಯಂಗಡಿಯನ್ನು ಆಗೀಗ ತೆರೆಯುತ್ತಿರುತ್ತೇನೆ. ಅಪರೂಪವಾದೆನೆಂದು ಬೇಸರಪಟ್ಟುಕೊಳ್ಳಬೇಡಿ. ಪತ್ರಿಕಾ ಬರಹ, ಉಪನ್ಯಾಸ, ಸಾಮಾಜಿಕ ಕಾರ್ಯಗಳು, ಹೀಗೆ, ನಾನು ಹಚ್ಚಿಕೊಂಡಿರುವ ಕಾರುಬಾರುಗಳು ಹತ್ತು ಹಲವು.

ಇದೀಗ ಒಟ್ಟೊಟ್ಟಿಗೇ ಇದೋ, ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕಲ್ಲ, ಐದಲ್ಲ, ಕ್ಷಮಿಸಿ, ಮುಂದೆ ಹೋಗಿಬಿಟ್ಟೆ, ರಿವರ್ಸ್ ಬರುತ್ತೇನೆ, ಐದಲ್ಲ ರಿವರ್ಸ್ಡ್, ನಾಲ್ಕಲ್ಲ ರಿವರ್ಸ್ಡ್, ನಾಲ್ಕು ನಗೆಬರಹಗಳನ್ನು ನಿಮಗೆ ನೀಡುತ್ತಿದ್ದೇನೆ. ನಾಲ್ಕೂ ಬೇರೆ ಬೇರೆ ರೀತಿಯವು. ನಾಲ್ಕೂ ಈ ಸಲದ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದ ನಗೆಬರಹಗಳು.
ಇವುಗಳ ರೀಡಿಂಗ್ ಮತ್ತು ರೇಟಿಂಗ್ ನಿಮ್ಮದು. ರೈಟಿಂಗ್ ಮಾತ್ರ ನನ್ನದು.
ಮೊದಲ ಬರಹ ಈ ಕೆಳಗಿದೆ.

ಪಾರ್ಲಿಮೆಂಟ್ ಪೆಪ್ಪರ್‌ಮಿಂಟ್!
---------------------------

ಕಾಂಗ್ರೆಸ್ ಜಯಭೇರಿ.
ಬಿಜೆಪಿ ಪಾಳಯದಲ್ಲಿ
ನಿರಾಶೆಯ ಕಾರ್ಮೋಡ.
ಜನರಿಗೆ ಬದಲಾವಣೆ ಬೇಡ.

ರಾಜ್ಯ ಮತ್ತು ಕೇಂದ್ರದಲ್ಲಿ
ಬೇರೆ ಬೇರೆ ಸರಕಾರ.
ಎಂದಿನಿಂದಲೋ ಹೀಗೇ!
ಇದಕ್ಕೇನು ಪರಿಹಾರ?

ಬಂಗಾಳ, ಕೇರಳಗಳಿಂದ
ಕಮ್ಯುನಿಸ್ಟರ ಎತ್ತಂಗಡಿ!
ನೇಪಾಳ, ಚೀನಾಗಳ
ಕೈವಾಡವೇನೂ ಇಲ್ಲ ಬಿಡಿ.

ಸಿಎಂ ಪುತ್ರ ರಾಘವೇಂದ್ರ
ಗೆಲುವಿನ ಹೊಳೆಯಲ್ಲಿ ಮಿಂದರು.
ಶಿವಮೊಗ್ಗೆಯ ಮತದಾರರು
’ರಾಘವೇಂದ್ರ ಪಾಹಿಮಾಂ’ ಎಂದರು.

ಅಪ್ಪನ ವಿರುದ್ಧ ಗೆಲುವು
ಮಗನ ವಿರುದ್ಧ ಸೋಲು
ಡಿಕೆಶಿಯಮೇಲೆ ಗೂಬೆ
ತೇಜಸ್ವಿನಿಯ ಗೋಳು!

ರೆಬೆಲ್ ಸ್ಟಾರ್ ಬಿದ್ದ!
ಚೆಲುವರಾಯ ಗೆದ್ದ.
ಚೆಲುವನೇ ಚೆಲುವ!
ಜಗ್ಗೇಶಿ ಖುಷಿಪಡುವ!

ಶುಕ್ರವಾರ, ಮೇ 15, 2009

ಹೀಗೇಕಾಯಿತು?! (ಬೇತಾಳ ಕಥೆ)

ಛಲ ಬಿಡದ ತ್ರಿವಿಕ್ರಮನು ’ಚಂದಮಾಮ’ ಸಂಪಾದಕರ ಆಣತಿಯಂತೆ ಮತ್ತೆ ಮರದ ಬಳಿಬಂದು ಮರದಲ್ಲಿದ್ದ ಶವವನ್ನು ಹೆಗಲಿಗೇರಿಸಿಕೊಂಡು ಮುನ್ನಡೆದನು. ಶವದಲ್ಲಿದ್ದ ಬೇತಾಳವು, ’ಬೆನ್ನು ಬಿಡದ ಬೇತಾಳ’ ಎಂಬ ಗಾದೆಯಂತೆ ಯಥಾಪ್ರಕಾರ ತ್ರಿವಿಕ್ರಮನೊಡನೆ ಮಾತಿಗೆ ಮೊದಲಿಟ್ಟಿತು.

’ಎಲೈ ತ್ರಿವಿಕ್ರಮನೇ, ನಿನ್ನನ್ನು ನೋಡಿ ನನಗೆ ಮರುಕವುಂಟಾಗುತ್ತಿದೆ. ಈ ಪ್ರಜಾಪ್ರಭುತ್ವದ ಯುಗದಲ್ಲೂ ನೀನು ನಿನ್ನನ್ನು ಇನ್ನೂ ರಾಜನೆಂದೇ ಭಾವಿಸಿಕೊಂಡಿರುವೆ. ಆದರೆ ಅದೇ ವೇಳೆ, ’ಚಂದಮಾಮ’ ಸಂಪಾದಕರ ಆಣತಿಯನ್ನು ಅಕ್ಷರಶಃ ಶಿರಸಾವಹಿಸಿ ಪಾಲಿಸುತ್ತಿರುವೆ! ಹಿಂದೆ ಗದಗದ ಪಿ.ಸಿ.ಶಾಬಾದಿಮಠ ಎಂಬ ಪುಸ್ತಕ ಪ್ರಕಾಶಕರ ಅಪ್ಪಣೆಯನ್ನೂ ಇದೇ ರೀತಿ ಪಾಲಿಸುತ್ತಿದ್ದೆ. ಇರಲಿ. ನಿನ್ನ ಕರ್ಮ. ನಾನೇನೂ ಮಾಡುವಂತಿಲ್ಲ. ಶತಮಾನಗಳಿಂದ ಈ ರೀತಿ ಶವಧಾರಿಯಾಗಿ ನಡೆಯುತ್ತ ಸುಸ್ತುಹೊಡೆಯುತ್ತಿರುವ ನಿನ್ನ ಆಯಾಸ ಪರಿಹಾರಕ್ಕಾಗಿ ಸತ್ಯಕಥೆಯೊಂದನ್ನು ಹೇಳುತ್ತೇನೆ, ಕೇಳು’, ಎಂದು ಬೇತಾಳವು ಕಥೆಯನ್ನು ಹೇಳತೊಡಗಿತು.

’ಭರತಖಂಡದ ಲೋಕಸಭಾ ಚುನಾವಣೆಯ ಅಂಗವಾಗಿ ಕರ್ನಾಟಕದಲ್ಲೂ ಚುನಾವಣೆ ನಡೆದುದು ನಿನಗೆ ಗೊತ್ತಷ್ಟೆ. ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಪಿಳ್ಳಾರಿ ಲೋಕಸಭಾ ಕ್ಷೇತ್ರವು ವಿಶಿಷ್ಟವಾದುದು. ಕರ್ನಾಟಕಕ್ಕೆ ಸೇರಿದ್ದರೂ ಇಲ್ಲಿ ತೆಲುಗು ಭಾಷೆಯು ವಿಜೃಂಭಿಸುತ್ತಿದೆ. ಕುಬೇರರ ಆಡುಂಬೊಲವಾಗಿದ್ದರೂ ಇಲ್ಲಿ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಲಕ್ಷಾಂತರ ಪ್ರಜೆಗಳಿದ್ದಾರೆ. ರಾಜ್ಯ ಸರ್ಕಾರಕ್ಕೆ ಮೂವರು ಮಂತ್ರಿಗಳನ್ನು ನೀಡಿದ್ದೂ ಈ ಕ್ಷೇತ್ರವು ಸರಿಯಾದ ರಸ್ತೆಗಳಿಲ್ಲದೆ ಸದಾ ದೂಳಿನಲ್ಲಿ ಮುಳುಗಿರುತ್ತದೆ. ಆ ಕುಬೇರ ಮಂತ್ರಿಗಳು ಮಾತ್ರ ಇಡೀ ರಾಜ್ಯವನ್ನೇ ತಮ್ಮ ಕರಕಮಲದಲ್ಲಿಟ್ಟುಕೊಂಡು ಆಡಿಸುತ್ತಿದ್ದಾರೆ.

ಇಂಥ ಪಿಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಆ ಕುಬೇರ ಮಂತ್ರಿಯೊಬ್ಬರ ಸಮೀಪಬಂಧುವೇ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರ ಜಯವು ನಿಶ್ಚಿತವೆಂದು ಇಡೀ ಕ್ಷೇತ್ರ ಮಾತ್ರವಲ್ಲ, ಇಡೀ ರಾಜ್ಯ, ಇಡೀ ಭರತಖಂಡವೇ ಮಾತಾಡಿಕೊಳ್ಳುತ್ತಿತ್ತು. ಅಂತಹುದರಲ್ಲಿ ಆ ಅಭ್ಯರ್ಥಿಯು ಸೋತುಹೋದರು! ಈಗತಾನೇ ಬಂದ ಫಲಿತಾಂಶವನ್ನು ನೀನೂ ಗಮನಿಸಿರಬಹುದು. ಆ ಅಭ್ಯರ್ಥಿ ಮಾತ್ರವಲ್ಲ, ಅವರ ಎದುರಾಳಿ ಅಭ್ಯರ್ಥಿಯೂ ಸೋತುಹೋಗಿ, ಯಾರೋ ಒಬ್ಬರು ಹೆಸರೇ ಕೇಳಿಲ್ಲದ ಪಕ್ಷೇತರ ವ್ಯಕ್ತಿ ಲೋಕಸಭೆಗೆ ಆಯ್ಕೆಯಾಗಿಬಿಟ್ಟಿದ್ದಾರೆ!

ಹೀಗೇಕಾಯಿತು? ಉತ್ತರಿಸು. ಉತ್ತರ ಗೊತ್ತಿದ್ದೂ ಹೇಳದಿದ್ದರೆ ನಿನ್ನ ತಲೆಯು ಒಡೆದು ಸಹಸ್ರ ಚೂರಾಗುವುದು ಎಚ್ಚರಿಕೆ!’ ಎಂದು ಬೇತಾಳವು ಕಥೆಯನ್ನು ಮುಗಿಸಿತು.

ಆಗ ತ್ರಿವಿಕ್ರಮನು ಬೇತಾಳವನ್ನು ನೋಡಿ ನಸುನಗುತ್ತ ಇಂತೆಂದನು.
’ಎಲೈ ಬೇತಾಳವೇ, ಈ ಸಲ ನೀನು ಈಸೀ ಕ್ವೆಶ್ಚನ್ ಹಾಕಿರುವೆ. ಚಾಲ (ಬಹಳ) ಈಸೀ. ಪಿಳ್ಳಾರಿಯಿಂದ ಗೆದ್ದ ಆ ಅಪರಿಚಿತ ಪಕ್ಷೇತರ ವ್ಯಕ್ತಿಯ ಚುನಾವಣಾ ಚಿಹ್ನೆ ರೈಲ್ವೆ ಇಂಜಿನ್. ಪಕ್ಕದ ಆಂಧ್ರಪ್ರದೇಶದ ಜನಪ್ರಿಯ ಚಿತ್ರತಾರೆ ಪರಂಜೀವಿಯ ’ಮಜಾರಾಜ್ಯಂ’ ಪಕ್ಷದ ಚಿಹ್ನೆಯೂ ರೈಲ್ವೆ ಇಂಜಿನ್ನೇ. ಪಿಳ್ಳಾರಿ ಕ್ಷೇತ್ರದ ನಿರಕ್ಷರಿ ಮತದಾರರಲ್ಲಿ ಬಹುತೇಕರು ಮುಗ್ಧರು. ಅವರೆಲ್ಲ ತೆಲುಗು ಭಾಷಿಕರಾಗಿದ್ದು ಪಿರಂಜೀವಿ ಸಿನಿಮಾಗಳೆಂದರೆ ಅವರಿಗೆ ಪ್ರಾಣ. ಅವರೆಲ್ಲರೂ ಪಿರಂಜೀವಿ ಫ್ಯಾನುಗಳು ಮತ್ತು ಟಿವಿಯಲ್ಲಿ ಸದಾ ತೆಲುಗು ಚಾನೆಲ್‌ಗಳನ್ನೇ ನೋಡುತ್ತಿರುವವರು. ತಾವು ರೈಲ್ವೆ ಇಂಜಿನ್‌ಗೆ ಮತ ನೀಡಿದರೆ ಅದು ತಮ್ಮ ಹೀರೊ ಪಿರಂಜೀವಿಗೆ ಸೇರುತ್ತದೆಂದು ಭಾವಿಸಿ ಅವರೆಲ್ಲ ರೈಲ್ವೆ ಇಂಜಿನ್‌ಗೆ ಮತ ನೀಡಿಬಿಟ್ಟಿದ್ದಾರೆ! ಕರ್ನಾಟಕದಲ್ಲಿ ಪಿರಂಜೀವಿಯ ಪಕ್ಷವು ಸ್ಪರ್ಧಿಸಿಲ್ಲವೆಂಬುದು ಅವರಿಗೆ ಗೊತ್ತಿಲ್ಲ ಪಾಪ! ಎಲ್ಲ ಗೊತ್ತಿರುವ ವಿದ್ಯಾವಂತರು ವೋಟ್ ಮಾಡಿಲ್ಲ. ಪರಿಣಾಮ, ರೈಲ್ವೆ ಇಂಜಿನ್ ಗುರುತು ಹೊಂದಿದ್ದ ಪಕ್ಷೇತರನೊಬ್ಬ ಪಿಳ್ಳಾರಿಯಲ್ಲಿ ಗೆದ್ದುಬಿಟ್ಟಿದ್ದಾನೆ!’

ತ್ರಿವಿಕ್ರಮನು ಹೀಗೆ ಸರಿ ಉತ್ತರ ನೀಡಿದ್ದೇ ತಡ, ಅವನ ಮೌನ ಮುರಿದ ಬೇತಾಳವು ಶವಸಹಿತ ಮಾಯವಾಗಿ ಮರಳಿ ಮರ ಸೇರಿಕೊಂಡುಬಿಟ್ಟಿತು! ತ್ರಿವಿಕ್ರಮನು ಮತ್ತೆ ಪುನಃ ಎಗೈನ್....

ಗುರುವಾರ, ಮೇ 14, 2009

ಬಿಟ್ಟೆನೆಂದರೆ ಬಿಡದೀ ಫೋಟೊ!

ಪ್ರಿಯ ಓದುಗ ಮಿತ್ರರೇ,

ನಿನ್ನೆ ತಾನೇ ಈ ಬ್ಲಾಗ್‌ನ ನನ್ನ ಲೇಖನಕೃಷಿಗೆ ನಮಸ್ಕಾರ ಹೇಳಿ ಹೋಗಿದ್ದೆ. ಇಂದು ಮತ್ತೆ ವಕ್ರಿಸಿದ್ದೇನೆ! ಈ ಕೆಳಗಿನ ಛಾಯಾಚಿತ್ರ ಮತ್ತೆ ನನ್ನನ್ನು ಇಲ್ಲಿಗೆ ಎಳೆತಂದಿದೆ.

’ಬಿಟ್ಟೆನೆಂದರೆ ಬಿಡದೀ ಮಾಯೆ!’ ಎಂಬ ನಾಣ್ಣುಡಿಯಂತೆ,
ಬಿಟ್ಟೆನೆಂದರೆ ಎನ್ನನು ಬಿಡದೀ ಫೋಟೊ!

ಪ್ರಸಿದ್ಧ ದಿನಪತ್ರಿಕೆಯೊಂದರ ಇಂದಿನ (14ನೇ ಮೇ 2009) ಸಂಚಿಕೆಯಲ್ಲಿ ಪ್ರಕಟವಾಗಿರುವ ಫೋಟೊ ಇದು. ಈ ಫೋಟೋವನ್ನೂ ಮತ್ತು ಅದರ ಅಡಿಬರಹವನ್ನೂ ಗಮನಿಸಿ.


ಗಮನಿಸಿದಿರಾ?

ಈ ಫೊಟೋಕ್ಕೆ ಅಡಿಬರಹವನ್ನು ನೀಡಿದವರು ಭಾರಿ ಬುದ್ಧಿವಂತರೇ ಸರಿ. ಬ್ರಾಕೆಟ್‌ಗಳೊಳಗೆ, ಅರ್ಥಾತ್, ಆವರಣಗಳೊಳಗೆ, ’ಎಡದಿಂದ ಎರಡನೆಯವರು’, ’ಬಲ’, ಎಡಬದಿ’, ಎಂಬ ವಿವರಗಳನ್ನು ನೀಡುವ ಮೂಲಕ ಆ ಪತ್ರಕರ್ತ ಮಹನೀಯರು (ಅಥವಾ ಪತ್ರಕರ್ತೆ ಮಹಿಳೀಯರು) ಓದುಗರಿಗೆ ಮಹದುಪಕಾರ ಮಾಡಿದ್ದಾರೆ. ಆವರಣಗಳೊಳಗೆ ಈ ವಿವರಗಳನ್ನು ನೀಡಿರದಿದ್ದರೆ ಓದುಗರಿಗೆ, ’ಯಾರು ಪ್ರಭಾಕರನ್ ಪತ್ನಿ, ಯಾರು ಪುತ್ರ ಮತ್ತು ಯಾರು ಪುತ್ರಿ’, ಎಂಬುದು ಗೊತ್ತಾಗುತ್ತಲೇ ಇರಲಿಲ್ಲ. ಯಾರುಯಾರಿಗೋ ಯಾರುಯಾರನ್ನೋ ಕನ್‌ಫ್ಯೂಸ್ ಮಾಡಿಕೊಂಡು ಓದುಗರು ಫಜೀತಿ ಪಡುತ್ತಿದ್ದರು. ಇಬ್ಬರು ಸ್ತ್ರೀಯರ ಪೈಕಿ ಪ್ರಭಾಕರನ್‌ನ ಪತ್ನಿ ಯಾರು, ಪುತ್ರಿ ಯಾರು ಎಂದು ಗೊತ್ತಾಗದೆ ತಲೆ ಕೆರೆದುಕೊಳ್ಳುತ್ತಿದ್ದರು. ಪತ್ನಿ ’ಎಡದಿಂದ ಎರಡನೆಯವರು’ ಮತ್ತು ಪುತ್ರಿ ’ಎಡಬದಿ’, ಎಂದು ಅಡಿಬರಹ ಬರೆದಾತ/ಬರೆದಾಕೆ ನಮೂದಿಸಿರುವುದರಿಂದಾಗಿ ಮಾತ್ರ ಓದುಗರಿಗೆ ಗೊತ್ತಾಯಿತು.

ಇನ್ನು, ’ಬಲ’ಗಡೆ ಇರುವಾತ ಪ್ರಭಾಕರನ್ ಪುತ್ರನೆಂದು ಸದರಿ ಪತ್ರಕರ್ತನು/ಪತ್ರಕರ್ತೆಯು ಆವರಣದಲ್ಲಿ ಸೂಚಿಸಿರದಿದ್ದರೆ ಓದುಗರು ಎಲ್‌ಟಿಟಿಇ ಸಮವಸ್ತ್ರದಲ್ಲಿರುವ ಆತ ವೇಲುಪಿಳ್ಳೈ ಪ್ರಭಾಕರನ್ ಎಂದು ತಪ್ಪಾಗಿ ತಿಳಿದುಬಿಡುತ್ತಿದ್ದರು. ’ಬಲ’ಗಡೆಯ ಆ ಸಮವಸ್ತ್ರಧಾರಿಯು ಪ್ರಭಾಕರನ್‌ನ ಪುತ್ರನೆಂಬುದು ಆವರಣದ ಸೂಚನೆಯಿಂದಾಗಿ ಓದುಗರಿಗೆ ಗೊತ್ತಾಯಿತು. ಇದರಿಂದಾಗಿ, ಫೋಟೋದಲ್ಲಿರುವ ಚಿಕ್ಕ ಬಾಲಕನೇ ವೇಲುಪಿಳ್ಳೈ ಪ್ರಭಾಕರನ್ ಎಂಬುದೂ ಓದುಗರಿಗೆ ಕ್ಲಿಯರ್ ಆಯಿತು.

ಓದುಗರಿಗೆ ಈ ರೀತಿ ಸ್ಪಷ್ಟ ಮಾಹಿತಿ ನೀಡಿರುವ ಸದರಿ ಪತ್ರಕರ್ತನಿಗೆ/ಪತ್ರಕರ್ತೆಗೆ ರಾಜ್ಯ ಮಾಧ್ಯಮ ಅಕಾಡೆಮಿಯ ಈ ಸಲದ ಪ್ರಶಸ್ತಿಯನ್ನು ನೀಡತಕ್ಕದ್ದು.

ಈ ಚಿತ್ರದ ಈ ಅಡಿಬರಹವನ್ನು ಶ್ರೀಲಂಕಾ ಸರ್ಕಾರವು ಓದುವುದಿಲ್ಲವಾದ್ದರಿಂದ ಪಾಪ ಆ ಪುಟ್ಟ ಹುಡುಗ ಬಚಾವ್! (ಈಗವನು ದೊಡ್ಡವನಾಗಿದ್ದಾನೆ, ಆದರೂ......)

**೦**

(ಛಾಯಾಚಿತ್ರ ಕೃಪೆ: ರಾಯಿಟರ್ಸ್‌) (ಚಿತ್ರದ ಅಡಿಬರಹದಲ್ಲಿ ಇದು ವೇದ್ಯವಾಗಿದೆಯಾದರೂ ಕೃಪೆಯನ್ನು ಪ್ರತ್ಯೇಕವಾಗಿ ನೆನೆಯಬೇಕಷ್ಟೆ.)

---೦---

ಬುಧವಾರ, ಮೇ 13, 2009

ಆನಂದರಾಮನ್ ಸತ್ತ ಸುದ್ದಿ

’ರಾಮನ್ ಸತ್ತ ಸುದ್ದಿ’. ಇದು ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ಅತ್ಯಂತ ಪ್ರಸಿದ್ಧ ಕವನಗಳಲ್ಲೊಂದು. ತಾವು ಬರೆದ ಕವನಗಳ ಪೈಕಿ ತಮಗೆ ಎಲ್ಲಕ್ಕಿಂತ ಹೆಚ್ಚು ಇಷ್ಟವಾದ ಕವನ ಇದೆಂದು ಸ್ವಯಂ ನಿಸಾರರೇ ಹೇಳಿದ್ದಾರೆ.

ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಸಿ.ವಿ.ರಾಮನ್ ನಿಧನವಾರ್ತೆಯ ಹಿನ್ನೆಲೆಯಲ್ಲಿ ಈ ಕವನವು ಜೀವನದರ್ಥದ ಗಹನ-ಗಂಭೀರ ಮಂಥನ ನಡೆಸುತ್ತದೆ. ಆ ಮಂಥನದ ಬಗೆ ಅನನ್ಯ.

ದಶಕಗಳಿಂದ ನನ್ನನ್ನು ಕಾಡುತ್ತಿರುವ ಕವನ ಇದು. ಈ ಕವನದಲ್ಲಿ ನಾನು ಕಂಡ ಕಾಣ್ಕೆ ಜೀವನಪಥದಲ್ಲಿ ನನಗದೊಂದು ಜ್ಞಾನೋದಯ. ಕವನದ ಪೂರ್ಣಪಾಠ ಇಂತಿದೆ:

ರಾಮನ್ ಸತ್ತ ಸುದ್ದಿ
------------------
(ರಚನೆ: ಕೆ.ಎಸ್.ನಿಸಾರ್ ಅಹಮದ್)

ರಾಮನ್ ಸತ್ತ ಸುದ್ದಿ ಓದಿದ ಬೆಳಿಗ್ಗೆ ಶಿವಮೊಗ್ಗೆಗೆ
ದರಿದ್ರ ಥಂಡಿ; ಅಸ್ತಿತ್ವದ ಅಸ್ಪಷ್ಟ ಜಿಜ್ಞಾಸೆ, ಗುರುತಿಸಲಾಗದ
ಕಸಿವಿಸಿ, ಮುಜುಗರ ತಾಳದೆ ವಾಕಿಂಗ್ ಹೊರಟೆ; ಬೀದಿ-
ಗದೇ ಮಾಮೂಲು ಭಂಗಿ; ಯಾರೂ ದುಃಖಿಸುತ್ತಿಲ್ಲವೆನ್ನಿಸಿ
ದುಃಖವಾಯಿತು. ಮೈಲಿಗೆ
ಪರಿಚಿತ ಸಿಕ್ಕಿದ್ದು ನವುಲೆ ಗ್ರಾಮದ ಹನುಮ;
ಯಾರದೋ ಗದ್ದೆಯಲ್ಲಿ ಗೇಯುವ, ಮೋಟು ಬೀಡಿಯ
ಕಿವಿಗೆ ಸಿಕ್ಕಿಸಿಕೊಳ್ಳುವ, ತೊಡೆಯ ಪರಪರ ಕೆರೆದುಕೊಳ್ಳುವ,
ಹಳ್ಳಿಯೇ ಹನುಮಿಸಿದಂತೆ ನನಗೆ ಭಾಸವಾಗುವ ವಿಚಿತ್ರ-
ಅಭ್ಯಾಸರೂಪಿತ ನಿರ್ದಿಷ್ಟ ಅಳತೆಯ ನಿರ್ವಿವಿಧ ಕೂಗಿಂದ
ಹಕ್ಕಿಗಳ ಅಟ್ಟುತಿದ್ದ; ಪಾತಿ ಸರಿಗೊಳಿಸುತಿದ್ದ; ಅಪ್ರಚಲಿತ
ಹಳ್ಳಿಪದದ ಅಶಾಸ್ತ್ರೀಯ ಮಟ್ಟನ್ನು ಕುರುಕುತಿದ್ದ.

ಕಂಡೊಡನೆ, ’ಹ್ಯಾಂಗಿದೀರಿ’ ಅಂದ;
ಈಚೀಚೆಗೆ ಅಪರೂಪವಲ್ಲ ಅಂದ, ಯಾಕೋ ಬಡವಾಗಿದ್ದೀರಿ
ಅಂದ, ಮಳೆ ಬೇಕಾಗಿಲ್ಲ ಅಂದ, ಫಸಲನ್ನು ಅಂದಾಜಿಸಿದ,
ನೆರೆಯವರೊಡನೆ ದಿನವಹಿ ಕಾದಾಟ ಸಾಕಾಗಿದೆ ಮಾರಾಯರೇ
ಅಂದ-ಕೊರೆಯುತ್ತಲೇ ಇದ್ದ-ಹೂಂಗುಟ್ಟಿದೆ-
ಅವನ ಮಾತಿಗೆ ಮಂಜಿನೊಳಗಿನ ಸೂರ್‍ಯ ನನ್ನ ಪ್ರಜ್ಞೆ.
’ರಾಮನ್ ಸತ್ತರೋ ಹನುಮ’ ಅನ್ನಬೇಕು, ಆಗ ತಡೆದು
ಸುಮ್ಮನಾದೆ. ರಾಮನ್ ಅರ್ಥೈಸಿಕೊಳ್ಳಬಹುದೆ ಇವನ
ಅಶಿಕ್ಷಿತ ಅರಿವಿಗೆ?

ಆ ಕಡೆ ರಾಮನ್, ಈ ಕಡೆ ಹನುಮ;
ದಿನವಿಡೀ ಮೈ ಕೆಸರಿಸಿಕೊಂಡು, ನನ್ನಂಥವ ನೆನೆಯಲೂ
ನಿರಾಕರಿಸುವ ತಂಗಳುಂಡು, ರಾತ್ರಿ ಕಳ್ಳಭಟ್ಟಿಯ ಹೊಡೆದು-
ನಾಡಿದ್ದು ನಾಳೆಯ, ನಾಳೆ ಇವೊತ್ತಿನ, ಇಂದು ನೆನ್ನೆಯ
ಪುನರಾವರ್ತನೆಯ ಏಕತಾನತೆಯಲ್ಲಿ-ಲೋಕ ಮರೆಯುವ
ಹನುಮನಿಗೆ ರಾಮನ್ ಹೋದರೆಷ್ಟೋ ರಸೆಲ್ ಹೋದರೂ ಅಷ್ಟೆ.
ಪತ್ರಿಕೆಯೋದುವುದಿಲ್ಲ; ನಾನು ಕವಿಯೆಂಬುದು ಗೊತ್ತಿಲ್ಲ:
ಹೊಟ್ಟೆಬಟ್ಟೆಯ ಅಗತ್ಯ ಮೀರಿದ ನನ್ನ ಹಸಿವು, ಅಸ್ವಸ್ಥತೆ
ಅರಿತಿಲ್ಲ; ಲೋಕದ ಪ್ರತಿನಿತ್ಯದ ಆಗು-ಹೋಗುಗಳಿಗೆ ಪ್ರತಿಕ್ರಿಯಿಸುವ
ಸೂಕ್ಷ್ಮತೆ ಕಂಡಿಲ್ಲ; ಅನೇಕ ಮಟ್ಟದಲ್ಲಿ ಬಾಳುವ ಪ್ರಶ್ನೆಯೇ
ಉದ್ಭವಿಸಿಲ್ಲ-ಆದರೂ ತೃಪ್ತ...
ಗದ್ದೆ, ಧಣಿ, ಹ್ಯಾಪ ಮೊಲೆಯ ಹೆಂಡಿರು, ಸಿಂಬಳಸುರುಕ ಮಕ್ಕಳು,
ದೇವರ ಗ್ರಾಮ್ಯ ಕಲ್ಪನೆ, ಊರಿನ ಪುಢಾರಿ-ಇಷ್ಟೇ ಜಗತ್ತು-ಆದರೂ ತೃಪ್ತ...

ನನ್ನಂತೆ ಕನ್ನಡ, ಗಡಿ, ನದಿ, ಪದ್ಯ, ಪ್ರತಿಷ್ಠೆ ಕಾಡುವುದಿಲ್ಲ-
ಹೆಂಡತಿಗೆ ಚೋಲಿ, ಹಿರಿ ಮಗನ ಶಾಲೆ
ಬೆಲ್ಲದ ಕಾಫಿಯ ಹಾಲೇಶಿಯ ಸಾಲ
ಹೊತ್ತು ಹೊತ್ತಿಗೆ ರುಚಿ ಗೌಣ ಅರಸಿಕ ಕೂಳು-ಚಿಂತೆಯಿಲ್ಲವೆಂದಲ್ಲ-ಆದರೂ ತೃಪ್ತ...

ಇದ ಮೆಚ್ಚಿ, ಕರುಬಿ, ಪೇಚಾಡಿ ನಡೆದಾಗ
ದೂರದಿಂದ, ಪ್ರಕೃತಿಯ ಅಗಾಧದಲ್ಲಿ ಹಿಮಾಚ್ಛಾದಿತ ಹನುಮ,
ಅವನ ಕೂದಲೆಳೆಯ ಕೂಗು-
ಅರ್ಥ ತೋರದ ಚುಕ್ಕೆ.

ಇಲ್ಲಿಂದ ನನಗೆ ವರ್ಗವಾಗುತ್ತೆ-ಒಂದು ದಿನ
ಹನುಮ ಸಾಯುತ್ತಾನೆ-ತಿಳಿಯುವುದಿಲ್ಲ.
ಇಲ್ಲಿನ ಹಳಬ ಅಲ್ಲಿ ಹೊಸಬನಾಗುತ್ತೇನೆ,
ಎಲ್ಲೋ ಹೇಗೋ ಸಾಯುತ್ತೇನೆ-ತಿಳಿಯುವುದಿಲ್ಲ.
ನನ್ನ ಹೆಸರು, ಹುದ್ದೆ, ಪದ್ಯ, ತಳಮಳ, ಬದುಕು-ತಿಳಿಯುವುದಿಲ್ಲ.
ಈ ಪರಿಚಿತ ಆಕಾಶ, ತೆಂಗಿನ ಮರ, ಕಾಲುವೆ, ಗುಡ್ಡ, ಗುಡಿಸಲು-
ಇವು ಕೊಟ್ಟ ಧಾರಾಳ, ಅರ್ಥವಂತಿಕೆ, ಭಾವ ಸಂಚಾರ-ತಿಳಿಯುವುದಿಲ್ಲ.

ಕೊರಲು ಬಿಗಿದು ಒಬ್ಬಂಟಿ ನಿಧಾನ ನಡೆದಂತೆ
ರಾಮನ್ ಸತ್ತ ತೀವ್ರತೆ, ಕಳವಳ ತಣ್ಣಗಾಯಿತು...

***

ಇನ್ನು, ’ಆನಂದರಾಮನ್ ಸತ್ತ ಸುದ್ದಿ’. ನಿಸಾರರ ಕವನವನ್ನು ಅನುಸರಿಸಿ-ಅನುಕರಿಸಿ ನಾನು ಬರೆದಿರುವ ಈ ಅಣಕ ಕವನದಲ್ಲಿ ಬರುವ (ಸತ್ತಿರುವ) ಆನಂದರಾಮನ್ ಒಬ್ಬ ಲೇಖಕ. ಎಲ್ಲರಂತೆ ಅವನೂ ಸತ್ತ. ಅವನ ಸುತ್ತಮುತ್ತ ಹರಿದಿರುವ ಸಾಲುಗಳನ್ನು -ಕವನದ ಸಾಲುಗಳನ್ನು- ಓದಿ ಆನಂದಿಸಿರಿ ಅಥವಾ ದುಃಖಿಸಿರಿ.

ನಿಸಾರರ ಕ್ಷಮೆ ಕೋರಿ ನಾನು ಬೆಳಕಿಗೆ ತಂದ ನನ್ನ ಈ ಅಣಕವನ (ಅಣಕ ಕವನ) ಕಳೆದ ವರ್ಷದ (ಏಪ್ರಿಲ್ ೨೦೦೮) ’ಸುಧಾ’ ಹಾಸ್ಯ ಸಂಚಿಕೆಯಲ್ಲಿ ಪ್ರಕಟವಾಗಿದೆ.

(ಓದುಗ ಮಿತ್ರರೇ,
ಪತ್ರಿಕಾ ಬರವಣಿಗೆ, ಸಮಾಜಸೇವೆ ಮುಂತಾಗಿ ಮೈತುಂಬ-ತಲೆತುಂಬ ಕೆಲಸಗಳನ್ನು ತುಂಬಿಕೊಂಡಿರುವ ನಾನು ’ಗುಳಿಗೆ’ ವಿತರಣೆಯನ್ನು ಅನಿರ್ದಿಷ್ಟ ಕಾಲದವರೆಗೆ ಸ್ಥಗಿತಗೊಳಿಸಬೇಕಾದುದು ಅನಿವಾರ್ಯವಾಗಿದೆ. ನಿಮ್ಮ ಗಮನ-ಮೆಚ್ಚುಗೆ-ವಿಮರ್ಶೆ-ಪ್ರೋತ್ಸಾಹ ನನಗೆ ಅತೀವ ಸಂತಸ ತಂದಿದೆ. ನಿಮಗೆಲ್ಲರಿಗೂ ನನ್ನ ತುಂಬುಹೃದಯದ ಧನ್ಯವಾದ. ಮುಂದೆಂದಾದರೂ ಇಲ್ಲಿ ಮತ್ತೆ ಭೇಟಿಯಾಗೋಣ. ನಮಸ್ಕಾರ.)

ಆನಂದರಾಮನ್ ಸತ್ತ ಸುದ್ದಿ
-------------------------
(ರಚನೆ: ಎಚ್.ಆನಂದರಾಮ ಶಾಸ್ತ್ರೀ)

ಆನಂದರಾಮನ್ ಸತ್ತ ದಿನ ಬೆಂಗಳೂರಿನಲ್ಲಿ
ದರಿದ್ರ ಥಂಡಿ; ಚಳಿಗಾಲದಲ್ಲೇ ಸಾಯುವುದೆ
ಈ ಬರಹಗಾರ, ಕೊರೆದದ್ದು ಸಾಲದೆ ಬದುಕಿದ್ದಾಗ
ಕೊರೆವ ಚಳಿಯಲ್ಲೇ ಸತ್ತು ಬೆಳಗಿನ ಹೊತ್ತು
ಹೊರಗೆ ಬರುವಂತಾಯ್ತಲ್ಲಾ ಈ ಚಳಿಗೆ
ಅವನ ಪಾರ್ಥಿವ ಶರೀರದ ಬಳಿಗೆ ಎಂದು
ದುಃಖವಾಯಿತು ಅವನ ಬಂಧು
-ಗಳಿಗೆ, ಪರಿಚಿತರಿಗೆ ಮತ್ತು ಸಹ
-ಬರಹಗಾರರ ಬಳಗಕ್ಕೆ.

ಪತ್ರಿಕೆಗಳಿಗೆ ಪತ್ರ ಬರೆಯುತ್ತ
ವಾಚಕರಿಗೆ ಕೀಚಕಪ್ರಾಯ ಆದಾತ,
ಕವಿಗೋಷ್ಠಿಗಳಲಿ ಭಯಂಕರ
ಕೊರೆದಾತ, ತಾನು ಬಲು ಆದರ್ಶ ವ್ಯಕ್ತಿ
ಎಂದು ಮೆರೆದಾತ, ಸಾಯಲಿ ಬಿಡು ಪೀಡೆ
ತೊಲಗಿತು ಎಂದರು ಬಹುತೇಕ ಎಲ್ಲ ಜನರು.

ಆದರೆ, ಅವನೊಬ್ಬ ಹನುಮ ಮಾತ್ರ,
ಹಳ್ಳಿ ಗಮಾರ, ಒಳ್ಳೆ ಕೆಲಸಗಾರ,
ಹಳ್ಳಿ ಪದದ ಅಶಾಸ್ತ್ರೀಯ ಮಟ್ಟನ್ನು
ಕುರುಕುವ ಹರಕಲು ಬಟ್ಟೆಯ
ಗಾಯನಶೂರ, ದಿವಂಗತ ಆನಂದರಾಮನ
ಅತೀವ ಪ್ರೀತಿಗೆ ಪಾತ್ರ; ಅವನಿಗೆ ಆನಂದರಾಮ
ಕವಿಯೆಂಬುದು ಗೊತ್ತಿಲ್ಲ, ಬರಹ
ಓದಿಲ್ಲ, ಅಸಲು ಓದಲಿಕ್ಕೇ ಬರೋಲ್ಲ,
ಆದರೂ ದುಃಖಿಸಿದ ಮನಸಾರೆ; ಕಾರಣವಿಲ್ಲದಿಲ್ಲ.

ಕೆಟ್ಟು ಪಟ್ಟಣ ಸೇರಿದ್ದಾಗ ಹನುಮ,
ಹಸಿವು, ಅಸ್ವಸ್ಥತೆಯ ಗೂಡಾಗಿದ್ದಾಗ,
ಆಸರೆ ನೀಡಿದ್ದು ಇದೇ ಆನಂದರಾಮ.
ಪ್ರೀತಿಸಿದ್ದು ಸಹ; ಕನ್ನಡ, ಗಡಿ, ನದಿ,
ಪದ್ಯ, ಪ್ರತಿಷ್ಠೆಗಳನ್ನು ಮೀರಿ.

ಖಡ್ಗಕ್ಕಿಂತ ಲೇಖನಿಗೆ ಬಲ ಹೆಚ್ಚಂತೆ, ಗೊತ್ತಿಲ್ಲ.
ಲೇಖನಿಗಿರದ ಬಲ ಪ್ರೀತಿಗೆ; ಎರಡು ಮಾತಿಲ್ಲ.

ಈ ಕಡೆ ಹನುಮ, ಆ ಕಡೆ ಆನಂದರಾಮ;
ಮಧ್ಯೆ ಅಗಾಧ ಬಂಧು-ಬಳಗ,
ಸ್ಹೇಹಿತರು, ಸಹ ಲೇಖಕರು, ’ಅಭಿಮಾನಿಗಳು’.
ಮಧ್ಯದಲ್ಲಿ ಕಳಚಿದ ಕೊಂಡಿ.

ನಿಧನವಾಗಿಹೋದ ಆನಂದರಾಮನ್
ಒಬ್ಬಂಟಿ. ಕಳವಳಗೊಂಡು ಕುಳಿತಿರುವ
ಹನುಮ ಸಹ ಒಬ್ಬಂಟಿ. ಅಗಾಧ
ಜನಸಾಗರ ಕರ್ಮಕ್ಕೆ.

--೦--

ಮಂಗಳವಾರ, ಮೇ 12, 2009

ನೀವು ಕೇಳದಿರಿ - 10

* ಮತ ಎಣಿಕೆಯ ದಿನವಾದ ಇದೇ ದಿನಾಂಕ 16 ಹಿಂದು ತಿಥಿ ಪ್ರಕಾರ ’ಶ್ರೀರಾಮ ಪಟ್ಟಾಭಿಷೇಕ’ದ ದಿನ.

- ಅದಕ್ಕೇ ಅಡ್ವಾಣಿ, ’history repeats’, ಅಂತ ಕನಸು ಕಾಣುತ್ತಿದ್ದಾರೆ!

+++

* ವರುಣ್ ಗಾಂಧಿ ಪ್ರಧಾನಿಯಾದರೆ ದೇಶದಲ್ಲಿ ಕುಟುಂಬಯೋಜನೆ ಕಡ್ಡಾಯವಂತೆ?

- ಹೌದು. ರಾಹುಲ್ ಗಾಂಧಿ ಪ್ರಧಾನಿಯಾದರೆ (ಸ್ವ)ಕುಟುಂಬ ಕಲ್ಯಾಣ ಕಡ್ಡಾಯ.
ಮನಮೋಹನ್ ಸಿಂಗ್ ಪ್ರಧಾನಿಯಾದರೆ ಅವರಿಗೆ ಈ ದೇಶಕ್ಕಿಂತ ಸೋನಿಯಾ ಮೇಡಂ ಆದೇಶ ಕಡ್ಡಾಯ.
ಅಡ್ವಾಣಿ ಪ್ರಧಾನಿಯಾದರೆ ದೇಶಾದ್ಯಂತ ಪ್ರತಿನಿತ್ಯ ರಾಮ(ಮಂದಿರ)ಭಜನೆ ಕಡ್ಡಾಯ.
ಮೋದಿ ಪ್ರಧಾನಿಯಾದರೆ ದೇಶದ ಎಲ್ಲೆಡೆ (ಮಾತಿನ) ಮೋಡಿ ಪ್ರದರ್ಶನ ಕಡ್ಡಾಯ.
ಲಾಲೂ ಪ್ರಧಾನಿಯಾದರೆ ಭ್ರಷ್ಟಾಚಾರ ಕಡ್ಡಾಯ.
ಪಾಸ್ವಾನ್ ಪ್ರಧಾನಿಯಾದರೆ ಬಿಹಾರಿಗಳಿಗೆ ರೈಲ್ವೆ ಫ್ರೀ ಪಾಸ್ ಕಡ್ಡಾಯ.
ಮಾಯಾವತಿ ಪ್ರಧಾನಿಯಾದರೆ ದೇಶಾದ್ಯಂತ ತನ್ನ ಬರ್ತ್‌ಡೇ (with gifts) ಕಡ್ಡಾಯ. (ಕಜ್ಜಾಯ.)
ಮುಲಾಯಂ ಪ್ರಧಾನಿಯಾದರೆ ಗೂಂಡಾಗಿರಿ ಕಡ್ಡಾಯ.
ಪವಾರ್ ಪ್ರಧಾನಿಯಾದರೆ ಮಗಳು ಸುಪ್ರಿಯಾಗೆ ಮಂತ್ರಿಗಿರಿ ಕಡ್ಡಾಯ.
ಕರಟ್ ಪ್ರಧಾನಿಯಾದರೆ ಜನರ ಕೈಗೆ ಕರಟ ಕಡ್ಡಾಯ.
ದೇವೇಗೌಡರು ಪ್ರಧಾನಿಯಾದರೆ ದೇಶಾದ್ಯಂತ ರಾಗಿಮುದ್ದೆ ಊಟ ಕಡ್ಡಾಯ.

+++

* ’ಪ್ರಜಾರಾಜ್ಯಂ’ ಪಕ್ಷ ಹೀನಾಯವಾಗಿ ಸೋತರೆ?

- ಆಗ ಪಕ್ಷದ ಹೆಸರನ್ನು ’ವಜಾರಾಜ್ಯಂ’ ಎಂದು ಬದಲಾಯಿಸಲಾಗುವುದು.

+++

* ಕ್ರಿಕೆಟ್‌ನಲ್ಲಿ ಜೀವಮಾನದ ನಿಷೇಧ; ಆದರೆ ಲೋಕಸಭೆಗೆ ಸ್ಪರ್ಧಿಸಬಹುದೇ?!

- ಲೋಕಸಭೆಯು ಈ ದೇಶಕ್ಕೆ ಕ್ರಿಕೆಟ್‌ನಷ್ಟು ಮುಖ್ಯ ಅಲ್ಲವಲ್ಲಾ, ಆದ್ದರಿಂದ ಸ್ಪರ್ಧಿಸಬಹುದು.

+++

* ಕೋಡಿಮಠದ ಸ್ವಾಮೀಜಿ ಹೇಳಿದ ಭವಿಷ್ಯ ನಿಜವಾಗುತ್ತೆಯೆ?

- ಒಂದು ಪ್ರಶ್ನೆಗೆ ಸ್ವಾಮೀಜಿ ರೂ.3000 ತಗೋತಾರೆ. ನನಗೆ ರೂ.6000 ಕೊಡಿ, ಉತ್ತರ ಹೇಳ್ತೀನಿ.

+++

* ’ಅಡ್ವಾಣಿಗೆ ಪ್ರಧಾನಿಯಾಗುವ ಯೋಗ ಇಲ್ಲ’, ಅಂತಾರೆ ಕೋಡಿಮಠದ ಸ್ವಾಮೀಜಿ!

- ಆ ಸ್ವಾಮೀಜಿಯನ್ನು ಭೆಟ್ಟಿಯಾಗಿ ಆಶೀರ್ವಾದ ಪಡೆದರೆ ಯೋಗ ಒದಗಿಬರಬಹುದು.

+++

* ಕೋಡಿಮಠದ ಭವಿಷ್ಯವಾಣಿ ಪ್ರಕಾರ ನೂತನ ಕೇಂದ್ರ ಸರ್ಕಾರದ ಆಡಳಿತ ಕೇವಲ ಎರಡೇ ವರ್ಷ!

- ಅನಂತರ ಕೋಡಿಮಠದ ಆಡಳಿತ.

+++

* ಇಲ್ಲೊಬ್ಬ, ’ಹುಚ್ಚುಖೋಡಿಮಠ’, ಅಂತಾನೆ!

- ಅಯ್ಯೋ, ಅವನಿಗೆ ಸುಮ್ಮನಿರೋಕೆ ಹೇಳಿ. ಇಲ್ಲದಿದ್ದರೆ ಸ್ವಾಮೀಜಿ ಅವನ ಭವಿಷ್ಯ ಹೇಳಿಬಿಡ್ತಾರೆ!

+++

* ’ಸಂಸ್ಕೃತದಿಂದ ಮಾತ್ರ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯ’, ಅಂದಿದ್ದಾರೆ ಪೇಜಾವರ ಶ್ರೀಗಳು.

- ಮಠದ ಸಂಸ್ಕೃತವೋ, ಪೋಲೀಸ್ ಇಲಾಖೆಯ ಸಂಸ್ಕೃತವೋ ಗೊತ್ತಾಗಲಿಲ್ಲ.

+++

* ’ಉದ್ಯಾನ ನಗರಿ’ ಬೆಂಗಳೂರಿನ ಮರಗಳೆಲ್ಲ ಹೋದರೆ ಗತಿ?

- ಚಿಂತೆ ಬೇಡ, ಆಗ ಬೆಂಗಳೂರು ಆಗುತ್ತೆ ’ಅಮರಾವತಿ’!

+++

* ವನವಾಸಕ್ಕೆ ಹೋಗ್ತೀರಂತೆ?

- ಪತ್ರಿಕಾಗೋಷ್ಠೀಲಿ ನಾನು ಈ ಮಾತನ್ನು off the record ಹೇಳಿದ್ದು. ಆದ್ದರಿಂದ ನಾನು ಈ ಮಾತನ್ನು ಹೇಳಿಯೇ ಇಲ್ಲ.

+++

* ’ನೀವು ಕೇಳದಿರಿ’ಗೆ ಹತ್ತು.

- ಎಲೆ ಮುದುರೆತ್ತು.

--0--

ಚು.ಜೈ!

ಆ ಕಾಲವೊಂದಿತ್ತು.

ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ಹರಟುತ್ತ ಒಂದೊಂದೇ ಖಾದ್ಯವನ್ನು ಸವಿಯುತ್ತ ವಿಮರ್ಶಿಸುತ್ತ ನಿಧಾನವಾಗಿ ಸರಕು ಒಳಗಿಳಿಸುತ್ತಿದ್ದ ಭವ್ಯ ಭೋಜನದ ದಿವ್ಯ ಕಾಲ ಅದಾಗಿತ್ತು. ಈಗ ಗಡಿಬಿಡಿಯಲ್ಲಿ ’ಟೂ ಮಿನಿಟ್ಸ್ ನೂಡಲ್ಸ್’ ನುಂಗಿ ಎದ್ದೇಳುವ ಕಾಲ ಬಂದಿದೆ. ಇನ್ನೂ ಅರ್ಜೆಂಟ್ ಇರುವವರು ಬ್ರೆಡ್ಡಿನ ತುಣುಕುಗಳನ್ನು ಬಸ್ಸಿನಲ್ಲೋ ತಮ್ಮ ಕಾರಿನಲ್ಲೋ ತಿಂದು ಮುಗಿಸಿ ಡ್ಯೂಟಿಗೆ ಹಾಜರಾಗುತ್ತಾರೆ. ಮಧ್ಯಾಹ್ನ ಕಚೇರಿಯ ಬಿಡುವಿನ ವೇಳೆಯಲ್ಲಿ ಕ್ಯಾರಿಯರ್ ತಂಗಳನ್ನು ಗಬಗಬನೆ ಮುಕ್ಕಿ ನೀರು ಕುಡಿಯುತ್ತಾರೆ. ಊಟ ಚುಟುಕಾಗಿದೆ. ಎರಡು ಹೊತ್ತಿನ ಊಟಕ್ಕಾಗಿ ಜೀವನವಿಡೀ ಕಷ್ಟಪಡುವ ನಾವು ಆ ಊಟವನ್ನು ಆನಂದಿಸುವಷ್ಟು ಸಮಯ ಹೊಂದಿಲ್ಲ!

ಹಿಂದೆಲ್ಲ ಗಂಡಸರು ಮನೆ ಜಗಲಿಯ ಮೇಲೋ ಊರ ಅರಳಿಕಟ್ಟೆಯ ಮೇಲೋ ಕುಳಿತು ಗಂಟೆಗಟ್ಟಲೆ ಹರಟುತ್ತಿದ್ದರು. ಹೆಂಗಸರು ದೇವಸ್ಥಾನದಲ್ಲೋ ತಂತಮ್ಮ ಮನೆಗಳ ತುಳಸಿಕಟ್ಟೆಗಳೆದುರೋ ಮುಖಾಮುಖಿಯಾಗಿ ಕೇರಿ ಸುದ್ದಿಯೆಲ್ಲ ಸುದೀರ್ಘವಾಗಿ ಮಾತಾಡುತ್ತಿದ್ದರು. ಈಗೇನಿದ್ದರೂ ’ಹಾಯ್, ಬಾಯ್, ಆರಾಮಾ?, ಹ್ಞೂಂ, ಕೆಲ್ಸ ಆಯ್ತಾ, ಇನ್ನೂ ಇಲ್ಲ’, ಇಷ್ಟೆ. ಹೆಚ್ಚೆಂದರೆ ದೂರವಾಣಿಯಲ್ಲಿ - ಅವರು ಹತ್ತಿರದಲ್ಲೇ ಇದ್ದರೂ - ಒಂದೆರಡು ಮಾತು, ಫಿನಿಷ್. ಕೆಲವರಿಗೆ ಅದಕ್ಕೂ ಸಮಯವಿಲ್ಲ ಅಥವಾ ಮನಸ್ಸಿಲ್ಲ, ಅವರದು ಬರೀ ಎಸ್‌ಎಂಎಸ್! ಮಾತು ಚುಟುಕಾಗಿದೆ. ಪಶುಪಕ್ಷಿಗಳಿಗಿಂತ ನಾವು ಭಿನ್ನವಾಗಿರುವುದೇ ನಮ್ಮ ನಡೆ’ನುಡಿ’ಯಿಂದಾಗಿ ಎಂಬ ಅರಿವಿದ್ದೂ ಸುಸೂತ್ರ ನಾಲ್ಕು ಮಾತಾಡುವಷ್ಟು ನಮಗಿಂದು ವ್ಯವಧಾನವಿಲ್ಲ ಅಥವಾ ಮನಸ್ಸಿಲ್ಲ!

ಚುಟುಕು-ಜೋಕು
----------------
ಕಾಳಿದಾಸನ ಮಹಾಕಾವ್ಯಗಳು ನಮಗೆ ಗೊತ್ತು. ಗೊತ್ತು ಅಂದರೆ, ಕನಿಷ್ಠ ಅವುಗಳ ಹೆಸರಾದರೂ ಗೊತ್ತು. ಅದೂ ಗೊತ್ತಿಲ್ಲದ ವಿದ್ಯಾವಂತರಿಗೆ ಕೊನೇಪಕ್ಷ ಕಾಳಿದಾಸ ಎಂಬ ಹೆಸರಾದರೂ ಗೊತ್ತು. ಇದೇರೀತಿ ಬಾಣನ ಬೃಹತ್ ’ಕಾದಂಬರಿ’ ನಮಗೆ ಗೊತ್ತು. ಪಂಪನ ಮಹಾಭಾರತದಿಂದ ಮೊದಲ್ಗೊಂಡು ಕುವೆಂಪುರವರ ’ಶ್ರೀ ರಾಮಾಯಣ ದರ್ಶನಂ’ವರೆಗೆ ಅನೇಕಾನೇಕ ಮಹಮಹಾ ಮಹಾಕಾವ್ಯಗಳನ್ನು ನಮ್ಮ ಹಿರಿಯರು ಓದಿದ್ದಾರೆ, ನಾವು ಹೆಸರು ಕೇಳಿದ್ದೇವೆ. ಆದರೆ ಇಂದು ಕಥೆ, ಕಾವ್ಯ ಎಲ್ಲ ಚುಟುಕಾಗಿದೆ. ಕಾರ್ಡಿನಲ್ಲಿ ಕಥೆ, ಒಂದೇ ವಾಕ್ಯದ ಕಥೆ, ಅರ್ಧ ವಾಕ್ಯದ ಕಥೆ, ಇಂಥವು ಜನಪ್ರಿಯವಾಗತೊಡಗಿವೆ. ಪೂರ್ಣ ಪ್ರಮಾಣದ ಕವಿತೆಗಳಿಗಿಂತ ಚುಟುಕಗಳೇ ಮೆರೆಯತೊಡಗಿವೆ. ’ಚುಟುಕ ಕವಿ’ಗೋಷ್ಠಿಗಳಲ್ಲಿ ಚುಟುಕು ಕವಿಗಳು ಚುಟುಕಾಗಿ ಕುಟುಕುವುದು ಜನರಿಗೆ ಇಷ್ಟವಾಗತೊಡಗಿದೆ. ಅಂಥ ಕವಿಗಳಿಗೆ ’ಚುಟುಕ ಶ್ರೀ’, ’ಚುಟುಕ ವೀರ’, ಮೊದಲಾದ ಬಿರುದುಬಾವಲಿಗಳು ಸಲ್ಲುತ್ತಿವೆ. ಸುದೀರ್ಘ ಲಲಿತ ಪ್ರಬಂಧವನ್ನಾಗಲೀ ಹಾಸ್ಯಬರಹವನ್ನಾಗಲೀ ಓದಲು ಯಾರಿಗೆ ಈಗ ಸಮಯವಿದೆ? ಸಮಯವಿದ್ದರೂ ಅಂಥ ಓದು ಯಾರಿಗೆ ಬೇಕಾಗಿದೆ? ನಗೆಹನಿಗಳನ್ನು ಓದಿ ನಕ್ಕು-ಬಿಡೋಣ, ಸಾಕು, ಹೀಗಾಗಿದೆ ನಮ್ಮ ಇಂದಿನ ಮನೋಭಾವ. ಅಂದು ನಾಡಿಗೇರ ಕೃಷ್ಣರಾಯರಾಗಲೀ ಬೀಚಿಯವರಾಗಲೀ ಮಾಡುತ್ತಿದ್ದಂಥ ಸುದೀರ್ಘ ಲಘುಭಾಷಣಗಳು ಇಂದು ನಮಗೆ ಬೇಕಿಲ್ಲ. ಅಭಿನವ ಬೀ’ಛಿ’ಗಳ ಚುಟುಕು-ಜೋಕುಗಳಿಗೆ ಬಿದ್ದುಬಿದ್ದು ನಕ್ಕು ಎದ್ದುನಡೆಯುವ ಜೋಕುಮಾರರು ನಾವಾಗಿದ್ದೇವೆ. ಕಿರಿ-ಕಿರಿ ಜೋಕು ನಮಗೆ ಸಾಕು. ’ಔರೇಕ್ ಜೋಕ್ ಮಾರೋ ಸಾಮೀ’, ಎನ್ನುತ್ತೇವೆ, ಅವರು ಜೋಕು ಮಾರುತ್ತಾರೆ. ನಾವು (ಕೇಳಿದ್ದನ್ನೇ ಕೇಳಿ)ಕೊಂಡು - ನಗಾಡಿಕೊಂಡು - ಎದ್ದು ನಡೆಯುತ್ತೇವೆ.

ಸಾಹಿತ್ಯವೂ ಚುಟುಕು
-------------------
ಜೋಕಿನ ವಿಷಯ ಬಿಡಿ. ಆಧ್ಯಾತ್ಮ, ಮನೋವಿಕಾಸ, ಜೀವನವಿಧಾನ, ಇಂಥ ಗಂಭೀರ ವಿಷಯಗಳೂ ನಮಗಿಂದು ಚುಟುಕಾಗಿಯೇ ತಿಳಿಸಲ್ಪಡಬೇಕು. ಮೂರುಮೂರು ಗಂಟೆಯ ಹರಿಕಥೆ, ಪ್ರವಚನ, ಉಪನ್ಯಾಸಗಳನ್ನು ಕೇಳಲು ನಮಗಿಂದು ವ್ಯವಧಾನವಿಲ್ಲ. (’ಎಲ್ಲೀ ಹರಿಕಥೆ ಹಚ್ಚಿದಿ, ಷಾರ್ಟಾಗಿ ಒದರು’, ಅನ್ನುತ್ತೇವೆ.) ಮೂರು ನಿಮಿಷದಲ್ಲಿ ರೇಡಿಯೋದಲ್ಲಿ ’ಚಿಂತನ’ ಮುಗಿದುಬಿಡಬೇಕು, ಐದು ನಿಮಿಷದಲ್ಲಿ ಟಿವಿಯಲ್ಲಿ ಉಪನ್ಯಾಸ ಶುಭಂ ಆಗಬೇಕು. ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲೂ ಗಹನಪ್ರಬಂಧವೊಂದು ಆರೇಳು ನಿಮಿಷಗಳೊಳಗೆ ಮಂಡನೆಯಾಗಿಬಿಡಬೇಕು. ಇಲ್ಲದಿದ್ದಲ್ಲಿ ಆರೇಳು ಮಂದಿಯನ್ನುಳಿದು ಇತರರೆಲ್ಲ, ’ಯಾರಿಗೆ ಬೇಕು ಈ ಬೈರಿಗೆ’, ಎಂದು ಗೊಣಗುತ್ತ ಎದ್ದು ನಡೆದುಬಿಡುವರೆಂದು (ವೃಥಾ) ಭಯ ಸಂಘಟಕರಿಗೆ! ಒಟ್ಟಾರೆ, ಸಾಹಿತ್ಯವೂ ಇಂದು ಚುಟುಕಾಗಿರಬೇಕು. ಕ್ಷಣಹೊತ್ತಿನೊಳಗೇ ಆಣಿಮುತ್ತು ಉದುರಿಬಿಡಬೇಕು!

ಸಾಹಿತ್ಯ ಮಾತ್ರವಲ್ಲ, ಸಂಗೀತ, ನಾಟಕ, ಎಲ್ಲ ಅಷ್ಟೇ. ಅಹೋರಾತ್ರಿ ಶಾಸ್ತ್ರೀಯ ಸಂಗೀತ, ಬೆಳತನಕ ಯಕ್ಷಗಾನ-ಬಯಲಾಟ, ಅಂಥ ಕಾಲ ಹೋಯಿತು. ಈಗ - ಟಿವಿಯಲ್ಲಿ ನೋಡುವುದಿಲ್ಲವೆ, ಆ ರೀತಿ - ಅರ್ಧ, ಹೆಚ್ಚೆಂದರೆ ಒಂದು ಗಂಟೆಯೊಳಗೆ ಸಂಗೀತ, ಯಕ್ಷಗಾನ ಮುಗಿದುಬಿಡಬೇಕು. ಟಿವಿಯಲ್ಲಂತೂ ಒಮ್ಮೊಮ್ಮೆ ಮೂರೇ ನಿಮಿಷದಲ್ಲಿ ಒಂದು ಶಾಸ್ತ್ರೀಯ ಗಾಯನ ಪೂರೈಸಿಬಿಡಬೇಕು. ಝಲಕ್ ಆದರೂ ಸರಿಯೇ. (ಅಶಾಸ್ತ್ರೀಯವಾದರೂ ಚಿಂತೆಯಿಲ್ಲ!) ಚುಟುಕಾಗಿ ಮುಗಿದುಬಿಡುವುದು ಮುಖ್ಯ.

’ಟಿವಿ ಧಾರಾವಾಹಿ ಮಾತ್ರ ಚುಟುಕಾಗಿಲ್ಲ, ಅದೆಂದಿದ್ದರೂ ಮೆಗಾ ಮಗಾ’, ಅನ್ನುವಿರಾ? ಇಲ್ಲೇ ನೀವು ಎಡವಿದ್ದು. ಮೇಲ್ನೋಟಕ್ಕೇನೋ ಅದು ಮೆಗಾ ಅನ್ನಿಸುತ್ತದೆ, ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಟಿವಿ ಧಾರಾವಾಹಿಗಿಂತ ಚುಟುಕು ಇನ್ನೊಂದಿಲ್ಲ ಎಂಬ ಸತ್ಯದ ಅರಿವಾಗುತ್ತದೆ! ಪ್ರತಿ ಎಪಿಸೋಡೂ ಕೇವಲ ಅರ್ಧಗಂಟೆ; ಅದರಲ್ಲಿ ಜಾಹಿರಾತು ಕಳೆದರೆ ಉಳಿಯುವುದು ಹದಿನೈದೇ ನಿಮಿಷ; ಅದರಲ್ಲಿ ಐದು ನಿಮಿಷ ಟೈಟಲ್, ಶೀರ್ಷಿಕೆ ಗೀತೆ, ಇದುವರೆಗಿನ ಕಥೆ, ಇತ್ಯಾದಿ; ಉಳಿದ ಹತ್ತು ನಿಮಿಷದಲ್ಲಿ ಅರ್ಧಪಾಲು ಅವಧಿ ಮಾತಿಲ್ಲದ ಕ್ಲೋಸಪ್ ಷಾಟುಗಳು; ಇದೆಲ್ಲ ಜಾತಾ, ಕಥೆಗೆ ಮೀಸಲಾದ ಸಮಯ (ವಾರದಲ್ಲಿ) ಕೇವಲ ಐದೇ ನಿಮಿಷ! ಇದು ಚುಟುಕಲ್ಲದೆ ಮತ್ತೇನು? ಇಷ್ಟಾಗಿ, ಒಂದು ವರ್ಷವಿಡೀ ಓಡಿದ (ಕುಂಟಿದ) ಧಾರಾವಾಹಿಯ ಕಥೆಯನ್ನು ಚುಟುಕಾಗಿ ಒಂದೇ ವಾಕ್ಯದಲ್ಲಿ ಹೇಳಿಬಿಡಬಹುದಲ್ಲವೆ?

ಪಾಠ-ಆಟ
----------
ಶಾಲಾ ಕಾಲೇಜುಗಳ ಪರೀಕ್ಷಾ ಉತ್ತರಗಳೂ ಚುಟುಕಾಗತೊಡಗಿವೆ. ನಾವು ಚಿಕ್ಕವರಿದ್ದಾಗ ಅಡಿಷನಲ್ ಷೀಟುಗಟ್ಟಲೆ ಬರೆಬರೆದು ಲಗತ್ತಿಸುತ್ತಿದ್ದೆವು. ಇದೀಗ ನ್ಯೂ ಟೈಪ್. ಪ್ರಶ್ನೆಪತ್ರಿಕೆಯಲ್ಲೇ ಉತ್ತರ ಟಿಕ್ ಮಾಡಿ ವಾಪಸ್ ಕೊಟ್ಟರಾಯಿತು. ಏಕ್‌ದಂ ಚುಟುಕು. ಕಾಲೇಜು ವಿದ್ಯಾರ್ಥಿಗಳಿಗಂತೂ ಪುಸ್ತಕಗಳೂ ಚುಟುಕು. ತೆಳುವಾದ ಒಂದು ನೋಟ್‌ಬುಕ್ಕನ್ನು ಕೈಯಲ್ಲಿ ತೂಗಾಡಿಸಿಕೊಂಡು ಹೋದರೆ ಸಾಕು, ಇಡೀ ದಿನದ ಕಾಲೇಜು ಪಾಠ ಅಟೆಂಡ್ ಮಾಡಬಹುದು. ಅಂಥ ಎರಡು ನೋಟ್‌ಬುಕ್ ಇದ್ದರೆ ಸಾಕು, ಇಡೀ ವರ್ಷ ತಳ್ಳಬಹುದು! ಪ್ರೈಮರಿ ಶಾಲೆಗಳ ಪುಸ್ತಕಗಳ ಹೊರೆಯನ್ನೂ ಚುಟುಕುಗೊಳಿಸುವ ಚಿಂತನೆ ತೀವ್ರವಾಗಿ ನಡೆದಿದೆ.

ಪಾಠವಷ್ಟೇ ಅಲ್ಲ, ಆಟವೂ ಚುಟುಕಾಗಿದೆ. ಐದು ದಿನಗಳ ಕ್ರಿಕೆಟ್ ಪಂದ್ಯ ಇತ್ತು. ಮೂರು ದಿನಕ್ಕಿಳಿಯಿತು. ಒಂದು ದಿನದ ಪಂದ್ಯ ಶುರುವಾಯಿತು. ಇದೀಗ ಟ್ವೆಂಟಿ೨೦ ಭರಾಟೆ. ಮೂರೇ ಗಂಟೆಯಲ್ಲಿ ಪಂದ್ಯ ಖಲಾಸ್! ಮುಂದೆ, ಟೆನ್೧೦, ಫೈವ್೫, ಕೊನೆಗೆ ’ಏಕಾ ಏಕಿ’ ಪಂದ್ಯ ಬಂದರೂ ಆಶ್ಚರ್ಯವಿಲ್ಲ. ಕಚೇರಿ ಕೆಲಸದ ಮಧ್ಯೆ ಎದ್ದುಹೋಗಿ ಸಿಗರೇಟ್ ಸೇದಿಬರುವಂತೆ ಒನ್೧ ಪಂದ್ಯ ನೋಡಿಬಿಟ್ಟು ಬರಬಹುದು! ಚುಟುಕಿನ ಪರಾಕಾಷ್ಠೆಯಲ್ಲವೆ ಇದು?

ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಚುಟುಕು, ’ಮುಂದುವರಿದ’ವರ ಮನೆಗಳಲ್ಲಿ - ಆಮಂತ್ರಣ ಪತ್ರಿಕೆ ಸಹಿತ - ಮದುವೆ ಮುಂಜಿ ಚುಟುಕು, ಶ್ರಾದ್ಧವಂತೂ ’ಸಂಕಲ್ಪ ಶ್ರಾದ್ಧ’ವೆಂಬ ಹೆಸರಿನಲ್ಲಿ ಚುಟುಕೋ ಚುಟುಕು, ವಿದ್ಯೆ ಹೆಚ್ಚಾದಂತೆಲ್ಲ ಜನರ ನಡುವಿನ ಸಂಭಾಷಣೆ ಚುಟುಕು, ಪತ್ರ ವ್ಯವಹಾರ ಚುಟುಕು, ಪತ್ರಿಕೆಗಳಲ್ಲಿ ಸ್ಥಳಾಭಾವದಿಂದ ಲೇಖನಗಳೂ ಚುಟುಕು, ರಾಜ್, ಜಯ್, ವಿಷ್, ವಿನು, ಅನು, ಹೀಗೆ ಹೆಸರುಗಳೂ ಚುಟುಕು, ಇವರ ಉಡುಪುಗಳೂ ಚುಟುಕು.......ಎಲ್ಲಾ ಚುಟುಕವೋ, ಪ್ರಭುವೇ, ಎಲ್ಲಾ ಚುಟುಕವೋ!

ಚುಟುಕು ಅನಾದಿ
----------------
ಹಾಗಂತ, ಈ ಚುಟುಕೆಂಬುದು ಇಂದಿನ ಧಾವಂತದಿಂದಾಗಿ ಹುಟ್ಟಿರುವ ಕೂಸೆಂದು ವಿಶ್ಲೇಷಿಸುವುದೂ ತಪ್ಪಾಗುತ್ತದೆ. ಮಹಾಭಾರತವನ್ನು ರಚಿಸಿದ ವ್ಯಾಸಮಹರ್ಷಿಗಳೇ, ’ಪರೋಪಕಾರಂ ಪುಣ್ಯಾಯ, ಪಾಪಾಯ ಪರಪೀಡನಂ’, ಎಂದು ಮಹಾಭಾರತದ ಸಾರವನ್ನು ಚುಟುಕಾಗಿ ಎರಡೇ ಮಾತಿನಲ್ಲಿ ಹೇಳಿಬಿಟ್ಟಿದ್ದಾರೆ. ’ಈ ಎರಡು ಮಾತುಗಳೇ ಹದಿನೆಂಟೂ ಪುರಾಣಗಳ ಸಾರಾಂಶ (ಅಷ್ಟಾದಶ ಪುರಾಣೇಷು ವ್ಯಾಸಸ್ಯ ವಚನದ್ವಯಂ)’, ಎಂದು ತೀರ್ಮಾನಿಸುವ ಮೂಲಕ ನಮ್ಮ ಹಿರಿಯರು ಅಷ್ಟಾದಶ ಪುರಾಣಗಳಿಗೂ ಚುಟುಕು ರೂಪವನ್ನು ಬಲು ಹಿಂದೆಯೇ ಕೊಟ್ಟುಬಿಟ್ಟಿದ್ದಾರೆ. ರಾಮಾಯಣದಂಥ ರಾಮಾಯಣವನ್ನು ಕೂಡ ನಮ್ಮ ಹಿರಿಯರು ಚುಟುಕಾಗಿ, ’ಪೂರ್ವಂ ರಾಮ ತಪೋವನಾತ್ ಗಮನಂ, ಹತ್ವಾ ಮೃಗಂ ಕಾಂಚನಂ. ವೈದೇಹಿ ಹರಣಂ. ಜಟಾಯು ಮರಣಂ, ಸುಗ್ರೀವ ಸಂಭಾಷಣಂ, ವಾಲೀ ನಿಗ್ರಹಂ, ಸಮುದ್ರ ತರಣಂ, ಲಂಕಾಪುರೀ ದಹನಂ, ಪಶ್ಚಾತ್ ರಾವಣ ಕುಂಭಕರ್ಣ ಹನನಂ, ಏತತ್ ಹಿ ರಾಮಾಯಣಂ’, ಎಂದು ಸಾರಿಬಿಟ್ಟಿದ್ದಾರೆ. ಇನ್ನೂ ಅಗ್ದಿ ಚುಟುಕುಪ್ರಿಯರು ಇದನ್ನು, ’ಶ್ರೀರಾಮ ಜನನಂ, ಸೀತಾಪಹರಣಂ, ರಾವಣ ಹನನಂ, ಏತತ್ ರಾಮಾಯಣಂ’, ಎಂದು ಇನ್ನಷ್ಟು ಮೊಟಕುಗೊಳಿಸಿದ್ದಾರೆ! ’ಶ್ಲೋಕಾರ್ಧೇನ ಪ್ರವಕ್ಷ್ಯಾಮಿ ಯದುಕ್ತಂ ಗ್ರಂಥಕೋಟಿಭಿಃ, ಬ್ರಹ್ಮಂ ಸತ್ಯಂ ಜಗನ್ಮಿಥ್ಯಂ ಜೀವೋ ಬ್ರಹ್ಮಸ್ಯ ನಾಪರಃ’, ಎಂದು ಸಾರುವ ಮೂಲಕ ಆದಿಶಂಕರರು ಕೋಟಿ ಗ್ರಂಥಗಳ ಸಾರವನ್ನು ಚುಟುಕಾಗಿ ಕೇವಲ ಅರ್ಧ ಶ್ಲೋಕದಲ್ಲಿ ಹೇಳಲು ಯತ್ನಿಸಿದ್ದಾರೆ. ಇದನ್ನೆಲ್ಲ ಗಮನಿಸಿ ನಾನೀಗ ಚುಟುಕಾಗಿ ಹೇಳುವುದಿಷ್ಟೆ: ’ಚುಟುಕು-ಚುಟುಕ ಇದು ಅನಾದಿ ಸಂಗತಿ; ಸನಾತನವಾದದ್ದು; ಇಂದು ಇದಕ್ಕೆ ಡಿಮಾಂಡ್ ಅತಿ; ಅಷ್ಟೆ’.

ಈ ಬ್ರಹ್ಮಾಂಡದಲ್ಲಿ ನಾವೆಲ್ಲ ಒಂದು ತಟಕು. ಅನಂತ ಕಾಲದೆದುರು ನಮ್ಮ ಜೀವಿತಾವಧಿಯೇ ಒಂದು ಚುಟುಕು.

ಆದ್ದರಿಂದ, ಚುಟುಕಿಗೆ ಜೈ!

ಕ್ಷಮಿಸಿ. ಚು.ಜೈ!

ಸೋಮವಾರ, ಮೇ 11, 2009

ನೀವು ಕೇಳದಿರಿ - 9

* ಬಿಜೆಪಿ ನೇತೃತ್ವದ ಎನ್‌ಡಿಎ ದಿಢೀರನೆ ಒಗ್ಗಟ್ಟು ಪ್ರದರ್ಶಿಸ್ತಾ ಇದೆ! ಮುಂದೆ?

- ರಾಷ್ಟ್ರಮಟ್ಟದಲ್ಲಿ ’ಆಪರೇಷನ್ ಕಮಲ್’!

+++

* ’ಆಪರೇಷನ್ ಕಮಲ’ದಿಂದ ಜನತೆಗೆ ಏನು ಲಾಭ?

- (ಕಮಲದ) ದಂಟು!
ನಾಗರಿಕರಿಗೆ ಬೇಕಾಗಿರೋದು ಸರ್ಕಾರಿ ಅಧಿಕಾರಿಗಳ ಕೋ-ಆಪರೇಷನ್.
ಬಡವರಿಗೆ ಬೇಕಾಗಿರೋದು ರೇಷನ್.

+++

* ಬಿಜೆಪಿ ಪರವಾಗಿ ಮಾತನಾಡುವ ಮಠಾಧೀಶರು ಭಕ್ತರಿಗೆ ಆಶೀರ್ವಾದ ಮಾಡುವಾಗ ’ಹಸ್ತ’ ತೋರಿಸುತ್ತಾರಲ್ಲಾ?!

- ಮತ್ತೇನು, ಕೈಯಲ್ಲಿ ಕಮಲ ಹಿಡಕೊಂಡು ಆಶೀರ್ವಾದ ಮಾಡಬೇಕೇ?

+++

* ಪಕ್ಷದಿಂದ ವಜಾ ಆದರೆ ಅಮರ್ ಸಿಂಗ್ ಆಗ ಏನು ಮಾಡುತ್ತಾರೆ?

- ದಂಡಿಯಾಗಿ ದುಡ್ಡೂ ಇದೆ, ಕೆಲ್ಸಾನೂ ಇಲ್ಲ, ಅಮಿತಾಭ್ ಬಚ್ಚನ್‌ನ ಫುಲ್ ಫ್ಯಾಮಿಲಿ ಹಾಕ್ಕೊಂಡು ಸಿನಿಮಾ ತೆಗೀತಾರೆ! ಜಯಪ್ರದಾಗೆ ವಿಶೇಷ ಪಾತ್ರ.

+++

* ಶ್ರೀಲಂಕಾದಲ್ಲಿ ತಮಿಳು ನಿರಾಶ್ರಿತರಿಗೆ ಸುಲಿಗೆಕೋರರ ಹಾವಳಿಯಂತೆ?

- ಬರಗಾಲದಲ್ಲಿ ಅಧಿಕಮಾಸ, ಪಾಪ!

+++

* ಐಪಿಎಲ್‌ನಲ್ಲಿ ’Knight riders’ಗೆ ಎಂಥಾ ದುರ್ಗತಿ ಬಂತಲ್ಲಾ ಗುರುವೇ!

- Nightನಲ್ಲಿ ಯಾವುದಾದರೂ ವೆಹಿಕಲ್ ride ಮಾಡ್ಕೊಂಡು ಫುಲ್ ಟೀಮು ಎಲ್ಲಿಗಾದರೂ ಓಡಿಹೋಗೋದು ವಾಸಿ, ಅಲ್ವೆ ಶಿಷ್ಯಾ?

+++

* ಛಾಯಾಗ್ರಾಹಕರನ್ನು ಓಡಿಸೋಕಂತ ರೂಪದರ್ಶಿ ಲಿಂಡ್ಸೆ ಲೋಹನ್ ತನ್ನ ಮನೆಮೇಲಿನಿಂದ ಅವರತ್ತ ಮೊಟ್ಟೆ, ಪಿಜ್ಜಾ ಎಸೆದಳಂತೆ!

- ಅವನ್ನು ತಾನೇ ತಿಂದು ಕೆಳಗಿನಿಂದ ಒಂದು ವಾಯುಬಾಣ ಬಿಟ್ಟಿದ್ದರೆ ಛಾಯಾಗ್ರಾಹಕರೆಲ್ಲ ಒಂದೇ ಉಸಿರಿಗೆ ಮೂಗು ಮುಚ್ಚಿಕೊಂಡು ಪರಾರಿಯಾಗ್ತಿದ್ದರು!

+++

* ಇಡೀ ರಾತ್ರಿ ನಿದ್ದೆಮಾಡೋಕಾಗೋಲ್ಲ; ಮನೆ ಹೊರಗಡೆ ಬೀದಿನಾಯಿ ಗಟ್ಟಿಯಾಗಿ ಬೊಗಳ್ತಾ ಇರುತ್ತೆ!

- ಇಡೀ ರಾತ್ರಿ ನಿದ್ದೆಮಾಡ್ತೀಯಾ? ಎಂಥಾ ಅರಸಿಕ ನೀನು!

+++

* ಎಲ್ಲಾ ಬೋಗಸ್ ಪ್ರಶ್ನೆಗಳನ್ನೇ ಹಾಕ್ಕೊಳ್ತೀಯಲ್ಲಾ!

- ಸದ್ಯ! ಬೋಗಸ್ ಉತ್ತರ ಅನ್ನಲಿಲ್ಲವಲ್ಲಾ, ನಾನು ಬಚಾವು!

--೦--

ಗ್ರಾಹಕನ ಸ್ಥಿತಿ-ಗತಿ, ’ಗ್ರಾಹಕ ಸಂಸ್ಕೃತಿ’

ಈಚೆಗಷ್ಟೇ ’ವಿಶ್ವ ಗ್ರಾಹಕ ಹಕ್ಕುಗಳ ದಿನ’ವನ್ನು ದೇಶಾದ್ಯಂತ ಆಚರಿಸಲಾಯಿತು. ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪತ್ರಿಕೆಗಳಲ್ಲಿ ಆಕರ್ಷಕ ಜಾಹಿರಾತುಗಳನ್ನು ಪ್ರಕಟಿಸಿದವು. ಸರ್ಕಾರಿ ಮಟ್ಟದಲ್ಲೂ ಮತ್ತು ವಿವಿಧ ಸ್ವಯಂಸೇವಾ ಸಂಸ್ಥೆಗಳ ವತಿಯಿಂದಲೂ ಸಮಾರಂಭಗಳನ್ನು ನಡೆಸಲಾಯಿತು.

ಆದರೆ ಇಂದು ಗ್ರಾಹಕನ ಸ್ಥಿತಿ-ಗತಿ ಹೇಗಿದೆ? ’ಗ್ರಾಹಕ ಸಂಸ್ಕೃತಿ’ಯೆಂಬುದು ಇಂದು ಯಾವ ರೂಪು ತಳೆದಿದೆ? ಅವಲೋಕಿಸಿದರೆ ತೀವ್ರ ನಿರಾಶೆಯಾಗುತ್ತದೆ.

ಗ್ರಾಹಕನ ಸ್ಥಿತಿ-ಗತಿ
------------------
ಉಪಭೋಗ ಸಂಸ್ಕೃತಿಯ ಇಂದಿನ ದಿನಮಾನದಲ್ಲಿ ’ಗ್ರಾಹಕನೇ ಪ್ರಭು’ ಎಂಬ ಪ್ರಶಂಸೆಯೇನೋ ವಿಶ್ವಾದ್ಯಂತ ಢಾಳವಾಗಿ ಕೇಳಿಬರುತ್ತಿದೆ. ಆದರೆ ವಾಸ್ತವದಲ್ಲಿ ಇಂದು ಗ್ರಾಹಕನೆಂಬುವವನು ವ್ಯಾಪಾರಿಗಳ ಕೈಯ ದಾಳವಾಗಿದ್ದಾನೆ! ಉಪಭೋಗವೆಂಬ ಯಜ್ಞದ ಬಲಿಪಶುವಾಗಿದ್ದಾನೆ! ಕೊಳ್ಳುಬಾಕತನವೆಂಬ ತನ್ನ ತೆವಲಿಗೆ ತಾನೇ ದಂಡ ತೆರುತ್ತಿರುವ ಅಮಾಯಕನಾಗಿದ್ದಾನೆ! ಜಾಹಿರಾತೆಂಬ ವಶೀಕರಣಕ್ಕೆ ಒಳಗಾಗಿರುವ ದುರ್ಬಲ ತಾನಾಗಿದ್ದಾನೆ! ರಿಯಾಯಿತಿಯೆಂಬ ಮೋಸದ ಬಲೆಗೆ ಸಿಕ್ಕಿಬಿದ್ದು ಒದ್ದಾಡುತ್ತಿರುವ ಅಸಹಾಯಕನಾಗಿದ್ದಾನೆ!

’ಪ್ರಭು’ ಎನ್ನಿಸಿಕೊಂಡಿರುವ ಗ್ರಾಹಕನಿಗಿಂದು ಉತ್ತಮ ಗುಣಮಟ್ಟದ ವಸ್ತು ಅಥವಾ ಸೇವೆಯನ್ನು ಅನಾಯಾಸವಾಗಿ ಮತ್ತು ಯೋಗ್ಯ ದರದಲ್ಲಿ ಪಡೆಯುವ ಸೌಲಭ್ಯವಿಲ್ಲ. ಪ್ರಶ್ನಿಸುವ ಹಕ್ಕು ಕಾನೂನು ಪುಸ್ತಕಕ್ಕೆ ಮಾತ್ರ ಸೀಮಿತವಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಪರಿಸ್ಥಿತಿ ಕೊಂಚ ಭಿನ್ನವಿರಬಹುದು, ಆದರೆ ಭಾರತದಲ್ಲಿ ಮತ್ತು ಭಾರತಕ್ಕಿಂತ ಹಿಂದುಳಿದ ದೇಶಗಳಲ್ಲಿ ಗ್ರಾಹಕನ ಹಕ್ಕುಗಳ ಚಲಾವಣೆಯೆಂಬುದು ಅತಿ ಕಷ್ಟದಾಯಕ, ದುಬಾರಿ ಮತ್ತು ಕಾಲಹರಣದ ಕ್ರಿಯೆಯಾಗಿದೆ. ದೋಷಪೂರ್ಣ ಬಿಸ್ಕತ್ ಸರಬರಾಜು ಮಾಡಿದ ಪ್ರಸಿದ್ಧ ಕಂಪೆನಿಯೊಂದರ ವಿರುದ್ಧ ಗ್ರಾಹಕ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಿಸಿದ ನಾನು ಎರಡು ವರ್ಷ ಹೋರಾಡಿ, ಒಂದೂವರೆ ಸಾವಿರ ರೂಪಾಯಿ ಖರ್ಚುಮಾಡಿ ಕೊನೆಗೆ ಒಂದು ಸಾವಿರ ರೂಪಾಯಿ ಪರಿಹಾರ ಪಡೆದೆ! ಒಂದು ಸಾವಿರ ’ಬಿಸಾಡಿದ’ ಆ ಕಂಪೆನಿಯ ಪ್ರತಿನಿಧಿ ನನ್ನತ್ತ ’ಅಟ್ಟಹಾಸದ ನಗೆ’ ಬೀರುತ್ತ ಹೊರಟುಹೋದ! ಪಾಶ್ಚಾತ್ಯ ದೇಶಗಳಲ್ಲಿ ಪರಿಸ್ಥಿತಿ ಕೊಂಚ ಉತ್ತಮ, ಆದರೆ ಗ್ರಾಹಕನಿಗೆ ಬವಣೆಯೆಂಬುದು ಅಲ್ಲೂ ತಪ್ಪಿದ್ದಲ್ಲ.

ಗ್ರಾಹಕನು ’ಪ್ರಭು’; ಆದರೆ ಭಾರತದಲ್ಲಿ ಬಹುತೇಕ ಸಂದರ್ಭಗಳಲ್ಲಿ ಅವನಿಗೆ ತಾನು ಖರೀದಿಸಿದ ಸಾಮಗ್ರಿಗಳ ಸೂಕ್ತ ಬಿಲ್ ಪಡೆಯಲೂ ಸಾಧ್ಯವಾಗುವುದಿಲ್ಲ! ಇದು ಇಂದಿನ ಗ್ರಾಹಕನ ಸ್ಥಿತಿ-ಗತಿ!

ಇನ್ನು, ’ಗ್ರಾಹಕ ಸಂಸ್ಕೃತಿ’ಯೆಂಬುದು ಇದೆಯಲ್ಲಾ, ಅದು ಈ ದಿನಮಾನದಲ್ಲಿ ವಿರೂಪಹೊಂದಿಬಿಟ್ಟಿದೆ!

’ಗ್ರಾಹಕ ಸಂಸ್ಕೃತಿ’
-----------------
ನಾನು ಚಿಕ್ಕವನಿದ್ದಾಗ, ಅಂದರೆ ಈಗ್ಗೆ ೫೦-೫೫ ವರ್ಷಗಳ ಕೆಳಗೆ ’ಗ್ರಾಹಕ ಸಂಸ್ಕೃತಿ’ಯೆಂಬುದು ಒಂದು ಆತ್ಮೀಯ ನಿಜಸಂಸ್ಕೃತಿಯಾಗಿತ್ತು. ಮನೆಗೆ ಹಾಲು ಹಾಕುವ ಗೌಳಿಯಿಂದ ಹಿಡಿದು ಕಿರಾಣಿ ಅಂಗಡಿಯ ಶೆಟ್ಟರವರೆಗೆ, ಕ್ಷೌರಿಕನಿಂದ ಹಿಡಿದು ದರ್ಜಿಯವರೆಗೆ, ಮನೆಕೆಲಸದ ಆಳಿನಿಂದ ಹಿಡಿದು ಮನೆವೈದ್ಯರವರೆಗೆ, ಗ್ರಾಹಕನಿಗೂ ಮತ್ತು ವ್ಯಾಪಾರಿಗೂ/ಸೇವಾವೃತ್ತಿಪರನಿಗೂ ಒಂದು ಮಧುರ ಬಾಂಧವ್ಯ ಏರ್ಪಟ್ಟಿತ್ತು. ವಿಶಾಲವೃಕ್ಷದ ಶಾಖೆಗಳಂತೆ ಎಲ್ಲರೂ ಒಂದು ಭಾವಬಂಧದಿಂದೊಡಗೂಡಿ ವ್ಯವಹಾರ ಸಾಗಿಸುತ್ತಿದ್ದರು. ಪರಸ್ಪರ ಸುಖ-ಕಷ್ಟ ವಿಚಾರಿಸಿಕೊಳ್ಳುತ್ತ ಮತ್ತು ಹಬ್ಬ-ಹರಿದಿನ-ಸಮಾರಂಭಗಳಲ್ಲಿ ಒಟ್ಟಾಗುತ್ತ ಜೀವನ ಸಾಗಿಸುತ್ತಿದ್ದರು. ’ಪ್ರತಿ ಗ್ರಾಹಕನೂ ವ್ಯಾಪಾರಿಯೇ/ವೃತ್ತಿಪರನೇ ಮತ್ತು ಪ್ರತಿ ವ್ಯಾಪಾರಿಯೂ/ವೃತ್ತಿಪರನೂ ಗ್ರಾಹಕನೇ; ಎಲ್ಲಕ್ಕಿಂತ ಮಿಗಿಲಾಗಿ, ಎಲ್ಲರೂ ಒಂದು ಕುಟುಂಬಕರು’ ಎಂಬೀ ಅರಿವು ಆ ದಿನಗಳಲ್ಲಿ ಎಲ್ಲರಲ್ಲೂ ಜಾಗೃತವಾಗಿತ್ತು. ಎಂದೇ, ಗ್ರಾಹಕ ಮತ್ತು ವ್ಯಾಪಾರಿ/ವೃತ್ತಿಪರ ಇವರ ಮಧ್ಯೆ ಪ್ರೀತಿ, ವಿಶ್ವಾಸ, ಸ್ನೇಹಸಂಪರ್ಕಗಳಿಗೆ ಆ ದಿನಗಳಲ್ಲಿ ಮಹತ್ತ್ವದ ಸ್ಥಾನವಿತ್ತು.

ಇಂದು ಎಲ್ಲಿದೆ ಅಂಥ ಸ್ನೇಹದ ಬೆಸುಗೆ? ಇಂದೇನಿದ್ದರೂ ಗ್ರಾಹಕ ಮತ್ತು ವ್ಯಾಪಾರಿ/ವೃತ್ತಿಪರ ಇವರ ನಡುವೆ ’ಹಾಯ್, ವೆಲ್‌ಕಮ್, ಥ್ಯಾಂಕ್ಯೂ’ ಇಷ್ಟೇ ’ಸ್ನೇಹ-ಸಂಪರ್ಕ’! ಅಂಗಡಿಯ ಮೆಟ್ಟಿಲು ದಾಟಿದಮೇಲೆ ಅವನ್ಯಾರೋ, ನಾವ್ಯಾರೋ! ಪಾಶ್ಚಾತ್ಯರಲ್ಲಿ ಬಲವಾಗಿ ಬೇರೂರಿರುವ ಈ ’ನೀರಮೇಲಣ ಗುಳ್ಳೆ’ಯ/’ತಾವರೆ ಎಲೆಯಮೇಲಿನ ನೀರಹನಿ’ಯ ಅವಸ್ಥೆ ಭಾರತದ ನಗರಗಳನ್ನು ಎಂದೋ ವ್ಯಾಪಿಸಿದ್ದು ಇದೀಗ ಹಳ್ಳಿಗಳಿಗೂ ಹಬ್ಬತೊಡಗಿದೆ!

ಇನ್ನು, ಕೊಳ್ಳುಬಾಕತನವೆಂಬ ’ಗ್ರಾಹಕ ಸಂಸ್ಕೃತಿ’ಯ ಹೆಸರಿನ ವಿಕೃತಿಯ ಬಗ್ಗೆ ನಾನು ಹೆಚ್ಚೇನೂ ಹೇಳಬೇಕಾಗಿಲ್ಲ. ’ಗ್ರಾಹಕ ಸಂಸ್ಕೃತಿ’ಯೆಂಬುದು ಇಂದು ’ಕೊಳ್ಳುಬಾಕ ಸಂಸ್ಕೃತಿ’ಯಾಗಿ ರೂಪಾಂತರ ಹೊಂದಿಬಿಟ್ಟಿದೆ! ಹಾಸಿಗೆಯಿದ್ದಷ್ಟು ಮಾತ್ರ ಕಾಲುಚಾಚುವ ಬದಲು ನಾವು ಅದನ್ನು ಮೀರಿ ಕಾಲುಚಾಚಲು ಹೊರಟಿದ್ದೇವೆ. ಪರಿಣಾಮ, ಹಾಸಿಗೆಯನ್ನು ಇನ್ನಷ್ಟು ಉದ್ದ ಮಾಡುವ ಯತ್ನಕ್ಕಿಳಿದು, ಅದರಲ್ಲೇ ಜೀವನವನ್ನು ವ್ಯಯಿಸಿಬಿಡುತ್ತಿದ್ದೇವೆ! ಇಷ್ಟಾಗಿಯೂ, ಹಾಸಿಗೆ ಎಷ್ಟು ಉದ್ದವಾದರೂ ನಮಗೆ ಇನ್ನೂ ಸಾಲದು! ಈ ಕ್ಷೋಭೆ-ಹೆಣಗಾಟಗಳಲ್ಲೇ ನಮ್ಮಿಡೀ ಜೀವನವನ್ನು ಕಳೆದುಬಿಡುತ್ತಿದ್ದೇವೆ! ’ಉಪಭೋಗ ಸಂಸ್ಕೃತಿ/ಕೊಳ್ಳುಬಾಕ ಸಂಸ್ಕೃತಿ’ಯ ವ್ಯಾಮೋಹದ ಭರದಲ್ಲಿ ನಾವಿಂದು ಜೀವನದ ಉಳಿದೆಲ್ಲ ಆನಂದವನ್ನೂ ಕಳೆದುಕೊಳ್ಳತೊಡಗಿದ್ದೇವೆ, ಮಾತ್ರವಲ್ಲ, ನಿಜಸಂಸ್ಕೃತಿಯಿಂದಲೇ ವಂಚಿತರಾಗತೊಡಗಿದ್ದೇವೆ!

ಉಳ್ಳವರ ಕೊಳ್ಳುವ ಭರಾಟೆಯನ್ನು ಕಂಡು ಇಲ್ಲದವರು ಕುದಿಯತೊಡಗಿದ್ದಾರೆ. ಯೇನ ಕೇನ ಪ್ರಕಾರೇಣ ಧನಾರ್ಜನೆಯೇ ಎಲ್ಲರ ಜೀವನದ ಮುಖ್ಯ ಗುರಿಯಾಗತೊಡಗಿದೆ. ಉಪಭೋಗದ ವಸ್ತುಗಳ ಖರೀದಿಗಾಗಿ ಹಣ ಸಂಪಾದಿಸುವುದೇ ಇಂದು ಅನೇಕರ ಜೀವನವಾಗಿಬಿಟ್ಟಿದೆ! ಪರಿಣಾಮ, ಅವರು ಜೀವನದ ನಿಜಸುಖದಿಂದ ದಿನೇದಿನೇ ವಂಚಿತರಾಗತೊಡಗಿದ್ದಾರೆ.

ಒಟ್ಟಾರೆ, ಗ್ರಾಹಕನಿಗಿಂದು ಹಕ್ಕು ಚಲಾವಣೆಯ ಅವಕಾಶವೂ ಕಷ್ಟಕರ ಮತ್ತು ಕೊಳ್ಳುಬಾಕತನದ ಪರಿಣಾಮವೂ ಅವನಮೇಲೆ ಘೋರ! ಇಂಥ ಪರಿಸ್ಥಿತಿಯಲ್ಲಿ, ಈಚೆಗೆ ಆಚರಿಸಲಾದ ’ವಿಶ್ವ ಗ್ರಾಹಕ ಹಕ್ಕುಗಳ ದಿನ’ವು ನನಗೆ ಸರ್ಕಾರಿ ಪ್ರಹಸನದಂತೆ ಕಂಡಿತು!

ಭಾನುವಾರ, ಮೇ 10, 2009

ನೀವು ಕೇಳದಿರಿ - 8

* ಮೊಯ್ಲಿ ಪದಚ್ಯುತರಾದರು. ಚುನಾವಣೆಯಲ್ಲೂ ಸೋತರೆ ಆಗ?

- ’ರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯ ಬರೆದು ಮುಗಿಸಿರುವ ಮಹಾಕವಿ ’ಮಹಾಭಾರತ ಮಹಮಹಾನ್ವೇಷಣಂ’ ಮಹಮಹಾಕಾವ್ಯ ಆರಂಭಿಸಬಹುದು!

+++

* ಮೊಯ್ಲಿ ತಮ್ಮದು ಪದಚ್ಯುತಿ ಅಲ್ಲ ಅಂತಾರೆ?!

- ಹಾಗಾದರೆ ಅದು ರಾಮಾಯಣ!

+++

* ಮೊಯ್ಲಿ ಸಾಹೇಬರದು ಅಂದು ಟೇಪ್ ಹಗರಣ, ಇಂದು?

- ಟ್ರ್ಯಾಪ್ ಹಗರಣ!

+++

* ಶ್ರುತಿ ಮೇಡಂ ತಿರುಪತಿಯಲ್ಲಿ ಮರುಮದುವೆಯಾಗ್ತಾರಂತೆ?

- ಚಕ್ರವರ್ತಿಗೆ ತಿರುಪತಿ ಲಡ್ಡು, ಮಹೇಂದರ್‌ಗೆ ತಿರುಪತಿ ನಾಮ ಎಂಬುದರ ಸಂಕೇತವಾಗಿ ತಿರುಪತಿಯಲ್ಲಿ ಮದುವೆ!

+++

* ಚಿರಂಜೀವಿ ಸ್ಪರ್ಧೆ ತಿರುಪತಿಯಲ್ಲಿ, ಶ್ರುತಿ ಮದುವೆ ತಿರುಪತಿಯಲ್ಲಿ!

- ಹೌದು, ಎರಡೂ ತಿರುಪತಿಯೇ!

+++

* ಶ್ರುತಿಯ ಭಾವಿ ಪತಿಯ ಹೆಸರು ಚಂದ್ರಚೂಡ ಚಕ್ರವರ್ತಿ ಅಂತನಾ?

- ಮಹೇಂದರ್ ಷಾರ್ಟಾಗಿ ’ಚಂಚ’ ಅಂತಾರೆ.
(ಶ್ರುತಿಗೆ ಚೂಡ!) (ಜಗೀಬಹುದು!)

+++

* ಚಂದ್ರಚೂಡ ಚಕ್ರವರ್ತೀನ ಷಾರ್ಟ್ ಆಗಿ ಸೀಸೀ ಅನ್ನಬಹುದಾ?

- ಶ್ರುತಿಗೆ ಸೀಸೀ, ಮಹೇಂದರ್‌ಗೆ ಕಹಿಕಹಿ!
(ನೋಡಿದವರಿಗೆ ’ಇಸ್ಸೀಸೀ!’)

+++

* ಐಪಿಎಲ್ ವಾಣಿಜ್ಯೀಕರಣವನ್ನು ಕೇಂದ್ರ ಕ್ರೀಡಾ ಸಚಿವ ಗಿಲ್ ಆಕ್ಷೇಪಿಸಿದ್ದಾರೆ?

- ಕ್ರಿಕೆಟ್ಟಾಟ ಇರಲಿ, ಕೆಟ್ಟಾಟ ಬೇಡ ಅಂದಿದ್ದಾರೆ.

+++

* ಎಸ್ಸೆಸ್ಸೆಲ್ಸಿಯಲ್ಲಿ ಉಡುಪಿ ಜಿಲ್ಲೆ ಟಾಪ್, ಪಿಯುಸಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಟಾಪ್!

- ಡಿಗ್ರಿಯಲ್ಲಿ ಅವೆರಡೂ ಟಾಪ್! ಬೇಸಿಗೇಲಿ ೪೦ರಿಂದ ೪೬ ಡಿಗ್ರಿವರೆಗೂ ಹೋಗುತ್ತೆ!

--೦--

ಶನಿವಾರ, ಮೇ 9, 2009

ನೀವು ಕೇಳದಿರಿ - 7

* ಭಾರತದಲ್ಲಿ ಹಂದಿಜ್ವರ ಇದೆಯೆ?

- ಚುನಾವಣೆ ಸೀಸನ್ನಾದ್ದರಿಂದ ಸೇಂದಿಜ್ವರ ಇದೆ.

+++

* ವರುಣ್ ವಿರುದ್ಧ ಮಾಯಾವತಿ ಹೂಡಿದ್ದ ಮೊಕದ್ದಮೆ ವಜಾ ಆಯ್ತಲ್ಲ ಗುರುವೇ!

- ಹೌದು. ವರುಣ್ ಮೇಲೆ ಮಾಯಾ-ಮಂತ್ರ ನಡೆಯಲಿಲ್ಲ. ಮಾಯಾಜಾಲದಿಂದ ವರುಣ್ ಹೊರಬಂದ. ಅವನಿಗೆ ಇನ್ನಾವ ಮಾಯಾಬಜಾರ್ ಕಾದಿದೆಯೋ ’ಮಾಯಾವಿ’ತಿಯೇ ಬಲ್ಲಳು!

+++

* ಹಿಂದೂ-ಮುಸ್ಲಿಮರು ಬಯಸಿದ ದಿನ ರಾಮಮಂದಿರ ನಿರ್ಮಾಣ ಮಾಡುತ್ತಾರಂತೆ ಅಡ್ವಾಣಿ?

- ’ಆದರೆ-ಹೋದರೆ, ಅತ್ತಿ ಮರದಲ್ಲಿ ಹತ್ತಿ ಬೆಳೆದರೆ, ಅಜ್ಜಾ, ನಿನಗೊಂದು ರೇಷ್ಮೆಪಂಚೆ’!

+++

* ನೆಹರೂ ಅವರು ಮಕ್ಕಳನ್ನು ಬಲು ಇಷ್ಟಪಡುತ್ತಿದ್ದರೇ?

- ಮಗಳನ್ನು ಹಾಗೂ ಮಗಳ ಮಕ್ಕಳನ್ನು ಬಲು ಇಷ್ಟಪಡುತ್ತಿದ್ದರು. ಆ ಇಷ್ಟದ ಫಲವನ್ನೇ ನಾವೀಗ ಉಣ್ಣುತ್ತಿರುವುದು!

+++

* ವಿಜಯ್ ಮೋರೆ ಮುಖಕ್ಕೆ ಮಸಿ ಬಳಿದ ಪ್ರಕರಣ ಮೂರೂವರೆ ವರ್ಷಗಳ ನಂತರ ಈಗ ವಿಚಾರಣೆಗೆ ಬಂದಿದೆಯಲ್ಲಾ ಗುರೂ!

- ಹೌದು.
ಮೋರೆ ಮೋರೆಗೆ ಮಸಿ
ಈಗ ತಟ್ಟಿದೆ ಬಿಸಿ
ಇನ್ನೂ ಕಾಯಿರಿ ಒಸಿ
ಆಗುತ್ತೆಲ್ಲಾ ಹುಸಿ

+++

* ಶ್ರುತಿ ಅಭಿಮಾನಿ ನಿಮ್ಮಮೇಲೆ ಕೇಸ್ ಹಾಕ್ತಾನಂತೆ?

- ಮಹೇಂದರ್ ಅಭಿಮಾನಿ ನನ್ನ ಪರವಾಗಿ ವಕೀಲನನ್ನಿಡ್ತಾನೆ.

+++

* ಷೋಗಳ ಟೈಮ್ ಬದಲಾದಕೂಡಲೇ ಸಿನಿಮಾ ಥಿಯೇಟರ್‌ಗೆ ಜನ ನುಗ್ತಾರೆಯೆ?

- ಇಲ್ಲ. ಪ್ರೊಡ್ಯೂಸರ್‌ಗೆ ಟೈಮ್ ಕೂಡಿಬರಬೇಕು!

+++

* ಆ ನೇಪಾಳಿ ಇದ್ದಾನಲ್ಲಾ, ಆತ ಚಂಡನೋ, ಪ್ರಚಂಡನೋ?

- ನಿರ್ಧರಿಸುವುದು ರಣರಂಗ.

+++

* ಅಂತೂ ಕಸಬ್ ವಿರುದ್ಧ ಮೊದಲ ಪ್ರತ್ಯಕ್ಷ ಸಾಕ್ಷಿಯ ಹೇಳಿಕೆ ದಾಖಲಾಯಿತು.

- ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಕಸಬ್ ಕೃತ್ಯಕ್ಕೆ ಸಾಕ್ಷಿ ಏಕೆ?

--೦--

ಶಾಂತಿ-ಕ್ರಾಂತಿ-ಸಂಕ್ರಾಂತಿ

ಈ ಲಘುಬರಹಕ್ಕೆ ಕಥಾವಸ್ತು ಇಲ್ಲ. ಮೂರು ಗಂಟೆ ಅವಧಿಯ ಚಲನಚಿತ್ರವೇ ಕಥೆಯಿಲ್ಲದೆ ಓಡಿ ಹಿಟ್ಟಾಗುವಾಗ ಮೂರು ನಿಮಿಷದ ಓದಿನ ಈ ಬರಹಕ್ಕೆ ಕಥಾವಸ್ತುವಿಗಾಗಿ ನಾನೇಕೆ ತಲೆ ಕೆಡಿಸಿಕೊಳ್ಳಲಿ? ಕಥಾವಸ್ತುವನ್ನು ಎಳೆದುತಂದಿಟ್ಟು ನಿಮ್ಮ ತಲೆಯನ್ನಾದರೂ ಏಕೆ ಕೆಡಿಸಲಿ? ಹಾಗೇ ಹಗುರಾಗಿ ಲಘುವಾಗಿ ಲಗುವಾಗಿ ಬರೆದು ಮುಗಿಸಿಬಿಡುತ್ತೇನೆ, ನೀವೂ ಲಗುಲಗೂನೆ ಓದಿ ’ಮುಗಿಸಿಬಿಡಿ.’

ಲಘುಬರಹವಾದರೂ ಇದರಲ್ಲಿ ಸೀರಿಯಸ್ ಘಟ್ಟವುಂಟು. ಕೊನೆತನಕ ತಲೆಬುಡವಿಲ್ಲದೆ ಓಡಿ ಕೊನೆಯಲ್ಲಿ ಕ್ಲೈಮ್ಯಾಕ್ಸ್ ಎಂಬ ಸೀರಿಯಸ್ ಹಂತಕ್ಕೆ ಧುತ್ತೆಂದು ಬಂದು ನಿಲ್ಲುವ ಅದ್ಭುತ ಚಲನಚಿತ್ರದೋಪಾದಿ ಈ ಬರಹವೂ ಒಂದು ಅದ್’ಭೂತ’ ಬರಹ! ’ಭೂತಬರಹ’ ಎಂದಾಕ್ಷಣ ’ಘೋಸ್ಟ್ ರೈಟಿಂಗ್’ ಎಂದು ಭಾವಿಸಬೇಡಿ. ನಾನೆಂಬ ನಾನೇ ಬರೆದ ಬರಹವಿದು. ಭೂತಕಾಲದ ಬರಹವೂ ಇದಲ್ಲ. ಇದೊಂದು ಭೂತಪ್ರಾಯ ಬರಹ! ಅರ್ಥಾತ್, ನಿಮಗೆ ಭೂತ ಹೇಗೆ ಇಷ್ಟವೋ ಹಾಗೆಯೇ ಈ ಬರಹವೂ ಇಷ್ಟವಾಗುತ್ತದೆ.

ಅಂದರೆ, ಭೂತದ ಹಾಗೆ ಕಾಡುತ್ತದೆ? ಹಾಗೇನಿಲ್ಲ ಸ್ವಾಮೀ, ಇದು ಲಘುಬರಹ. ಓದಿ ನೋಡಿ, ಗೊತ್ತಾಗುತ್ತದೆ.

ಅರ್ಥಪೂರ್ಣಮಲ್ತೆ?
----------------
ಶಾಂತಿ-ಕ್ರಾಂತಿ-ಸಂಕ್ರಾಂತಿ. ಎಷ್ಟು ಅರ್ಥಪೂರ್ಣ ಈ ನುಡಿಗಟ್ಟು! ಶಾಂತಿ ಯಾರಿಗೆ ಬೇಡ? ಯುದ್ಧಮಾಡುವ ಎಲ್ಲ ದೇಶಗಳೂ ಶಾಂತಿಗಾಗಿಯೇ ಯುದ್ಧಮಾಡುವುದು, ಅಲ್ಲವೆ? ಅಮೆರಿಕವಂತೂ ಶಾಂತಿಸ್ಥಾಪನೆಗೆಂದೇ ಬಾಂಬುಗಳನ್ನು ತಯಾರಿಸಿ ಕಂಡಕಂಡ ದೇಶಗಳ ಮೇಲೆಲ್ಲ ಎಸೆಯುವುದು. ಶಾಂತಿ ಇಂದು ಪ್ರಪಂಚದಲ್ಲಿ ಅತ್ಯಂತ ತುರ್ತಾಗಿ ಅವಶ್ಯವಾಗಿರುವ ವಸ್ತು. ಎಂದೇ ಯುದ್ಧಗಳು. ’ವಾರ್ ಅಂಡ್ ಪೀಸ್’. ಪೀಸ್ ಪೀಸ್.

ಶಾಂತಿ ಎಂದರೆ ನಮ್ಮ ಗುಳಿಗೆಪ್ಪಗೂ ಬಹಳ ಇಷ್ಟ. ಎಂದೇ ಸದಾ ಶಾಂತಿಯ ಮನೆಯೆದುರೇ ಠಳಾಯಿಸುತ್ತಿರುತ್ತಾನೆ, ಇರಲಿ.

ಇನ್ನು ಕ್ರಾಂತಿ. ಈ ಪದದ ಅರ್ಥ-ವ್ಯಾಪ್ತಿಯನ್ನೆಂತು ಬಣ್ಣಿಸಲಿ! ಕ್ಷೀರಕ್ರಾಂತಿ (ಗೊಮ್ಮಟೇಶ್ವರನಿಗೆ ಕ್ಷೀರಾಭಿಷೇಕ), ಹಸಿರುಕ್ರಾಂತಿ (ಹಸಿರು ಶಾಲಿನವರ ಕ್ರಾಂತಿ), ಕೆಂಪುಕ್ರಾಂತಿ (ಇದು ’ಎಡ’ ಅಂತಾರಪ್ಪ, ಯಾರೋ), ರಕ್ತಕ್ರಾಂತಿ (ಉಗ್ರರು ಪ್ರಪಂಚದೆಲ್ಲೆಡೆ ಮಾಡುತ್ತಿರುವ -ಅನ್ಯರ ರಕ್ತದ- ಕ್ರಾಂತಿ), ಧರ್ಮಕ್ರಾಂತಿ (’ಶರಣ’ರ ಕೊರಳ ಹೂವಿನ ಹಾರವಯ್ಯಾ), ಅಧರ್ಮಕ್ರಾಂತಿ (’ಮಾತೆ’ಯ ಮಾತಿಗೆ ಎದುರಾಡುವರಯ್ಯಾ), ಹೀಗೆ, ಕ್ರಾಂತಿಯಿಲ್ಲದ ವಸ್ತು ಅದಾವುದಿಹುದೀ ಜಗದಲ್ಲಿ? ಮುವ್ವತ್ತು ಸೆಕೆಂಡಿನ ಟಿವಿ ಜಾಹಿರಾತುಗಳಲ್ಲೂ ’ಕ್ಷಿಪ್ರ’ಕ್ರಾಂತಿ! ಕ್ರಾಂತಿಗೆ ನಮೋ!

ಮೂರನೆಯದು ಸಂಕ್ರಾಂತಿ. ’ಎಳ್ಳು ಬೆಲ್ಲ ತಿಂದು ಒಳ್ಳೆಮಾತಾಡಿ.’ ಇಷ್ಟೇ ನನಗೆ ಗೊತ್ತಿರೋದು.

ಎಳ್ಳು ಬೆಲ್ಲ ತುಟ್ಟಿಯಾಗಿದ್ದರೂ ನಾವು ಕೊಳ್ಳಬಲ್ಲೆವು ಎಂದಾದರೆ, ತಿನ್ನಲು ನಮ್ಮ ದೇಹಸ್ಥಿತಿಯೂ -ಷುಗರ್ ಇತ್ಯಾದಿ ಇಲ್ಲದೆ- ಸರಿಯಾಗಿದೆ ಎಂದಾದರೆ ಮತ್ತು ಒಳ್ಳೆಮಾತನ್ನಾಡುವ ಸದ್ಗುಣ ನಮ್ಮಲ್ಲಿದೆಯೆಂದಾದರೆ ಮೇಲಿನ ಲೋಕೋಕ್ತಿಗಿಂತ ಮಿಗಿಲಾಗಿ ಇನ್ನೇನನ್ನು ತಾನೇ ಸಂಕ್ರಾಂತಿಗೆ ಆರೋಪಿಸುವ ಅವಶ್ಯಕತೆ ಇದೆ? ’What do you say?’
’ಕನ್ನಡ, ಕನ್ನಡ!’
’ಓ, sorry!’

ಏನ್ ಛಂದ!
-----------
ಶಾಂತಿ-ಕ್ರಾಂತಿ-ಸಂಕ್ರಾಂತಿ, ಈ (ಮೂರು ಪದಗಳನ್ನೂ ಒಟ್ಟಿಗೆ ಕಟ್ಟಿದ) ನುಡಿಗಟ್ಟಿಗೆ ಎಷ್ಟು ಛಂದ ಅರ್ಥ ಅದ, ನೋಡ್ರಲಾ!

’ಶಾಂತಿ-ಕ್ರಾಂತಿ’ ಒಂದು ಅದ್ಭುತ ಸಿನಿಮಾ. ಮನದಲ್ಲಿ ಏನೋ ಭ್ರಾಂತಿ ಇಟ್ಟುಕೊಂಡು ಥಿಯೇಟರ್‌ಗೆ ಹೋದದ್ದರಿಂದಾಗಿ ನಾನು ವಿಭ್ರಾಂತನಾಗಿ ಹೊರಬರಬೇಕಾಯಿತು. ನನ್ನ ದೌರ್ಬಲ್ಯವದು. ಅದಕ್ಕೆ ನಿರ್ಮಾಪಕರನ್ನು ದೂರುವುದೇ?

’ಕ್ರಾಂತಿ-ಸಂಕ್ರಾಂತಿ’ ಎಂಬ ಸಿನಿಮಾ ಸೆಟ್ಟೇರುವುದಿತ್ತು, ಆದರೆ ’ಶಾಂತಿ-ಕ್ರಾಂತಿ’ಯ ಕ್ರಾಂತಿ ಕಂಡು ದಂಗಾದ ನಿರ್ಮಾಪಕರು ’ಕ್ರಾಂತಿ-ಸಂಕ್ರಾಂತಿ’ಯನ್ನು ಸೆಟ್ಟೇರಿಸುವ ಸಾಹಸ ಮಾಡಲಿಲ್ಲ.

ಆದರೆ ’ಕ್ರಾಂತಿ-ಸಂಕ್ರಾಂತಿ’ಯು ಕನ್ನಡ ಕವಿಗಳ ಲೇಖನಿ ಮೂಲಕ ಕ್ರಾಂತಿಯೆಸಗಿಯೇಬಿಟ್ಟಿದೆ. ಉದಾಹರಣೆಗೆ ಚಿತ್ರಕವಿ ’ಕವಿಮಹಾರಾಜ್’ ರಚಿಸಿರುವ ಚಿತ್ರಗೀತೆಯೊಂದರ ಸಾಲುಗಳನ್ನು ಗಮನಿಸಿ.

ಕ್ರಾಂತೀ ಸಂಕ್ರಾಂತೀ
ಏನಂತೀ ಶಾಂತೀ
ಆಹಾ! ಮುಖದ ಕಾಂತಿ
ಮಾಡಿಕೊಂಡೆ ವಾಂತಿ
ಎಷ್ಟು ತಿಂಗಳು? ಹೇಳೇ ಶಾಂತೀ
ಕ್ರಾಂತಿಕ್ರಾಂತಿಕ್ರಾಂತಿ!

ಇತರರ ಉದಾಹರಣೆಯೇಕೆ, ’ಆಂದೋಲನ ಮಹಾನ್ವೇಷಣಂ’ ಎಂಬ ಮಹಾಕಾವ್ಯ ರಚಿಸಿ ’ಮಹಾಕವಿ’ಯೆಂದು ಸ್ವಯಂ ಬಿರುದಾಂಕಿತನಾಗಿರುವ ಸ್ವಯಂ ನನ್ನ ಸ್ವಂತ ಸ್ವರಚನೆಯನ್ನೇ ಗಮನಿಸಿ.

ಏನಿದು ಭ್ರಾಂತಿ!
ಎಂಥ ವಿಭ್ರಾಂತಿ!
ಇದಾ ನಿನ್ನ ಕ್ರಾಂತಿ?!
ಹೊಟ್ಟೆಗೇನು ತಿಂತಿ?
ಏನು ಹೇಳಿದರು ಗಾಂಧಿ,
ಬುದ್ಧ, ಬಸವ, ಅಂಬೇಡ್ಕರರು?
ಮದರ್ ತೆರೇಸಾ, ತಾಯಿ ಸೋನಿಯಾ, ಮತ್ತೆ
ಮಾತೆ ಮಹದೇವಿಯರು?
ನಾನಿಲ್ಲಿ ಶರ್ಮರೊಡನೆ ಮಾತಾಡುತ್ತಿದ್ದಾಗ
ಆಫ್ರಿಕದಲ್ಲಿ ಬೆಳ್ಳಂಬೆಳಗು.
ಕ್ರಾಂತಿ-ಸಂಕ್ರಾಂತಿ.

ನನ್ನ ಈ ಕವನಕ್ಕೆ ’ಮೋಕ್ಷಗುಂಡಿ ಪ್ರಶಸ್ತಿ’, ’ದ್ರಾವಿಡಭಟ್ಟ ಪ್ರಶಸ್ತಿ’, ’ಕನ್ನಡಮಳ್ಳ (ಪ್ರಿಂಟ್ ಮಿಸ್ಟೇಕ್ ಅಲ್ಲ) ಪ್ರಶಸ್ತಿ’, ಹೀಗೆ ಹತ್ತು ಹಲವು ಪ್ರಶಸ್ತಿಗಳು ಬಂದಿವೆ. ’ಕ್ರಾಂತಿ-ಸಂಕ್ರಾಂತಿ’ ಪದದ ಮಹಿಮೆಯೇ ಅಂಥದು!

ಒಂದಾದಮೇಲೊಂದು
-------------------
ಈಗ ಧುತ್ತೆಂದು ಕ್ಲೈಮ್ಯಾಕ್ಸಿಗೆ(?) ಬಂದುಬಿಡೋಣ.
ಶಾಂತಿ-ಕ್ರಾಂತಿ-ಸಂಕ್ರಾಂತಿ.
ಒಂದಾದಮೇಲೊಂದು.
ಒಟ್ಟಿನಲ್ಲಿ/ಒಟ್ಟಾಗಿ/ಒಟ್ಟಾರೆ ಪರಿಣಾಮ? ಈಗ ಓದಿ.

೮೦೦೦ ವರ್ಷಗಳ ಕೆಳಗೆ ಜಂಬೂದ್ವೀಪದಲ್ಲಿ ಶಾಂತಿ ನೆಲೆಸಿತ್ತು. ಇಂದಿನ ರಷ್ಯಾ-ಸೈಬೀರಿಯಾದಿಂದ ಹಿಡಿದು ನಮ್ಮ ಕನ್ಯಾಕುಮಾರಿಯವರೆಗೂ ವ್ಯಾಪಿಸಿರುವ ವಿಶಾಲ ಪ್ರದೇಶವೇ ಅಂದಿನ ಜಂಬೂದ್ವೀಪ. ಆ ಜಂಬೂದ್ವೀಪವು ೭೦೦೦ ವರ್ಷಗಳ ಕಾಲ ಶಾಂತಿ, ಸಮೃದ್ಧಿಗಳಿಂದ ಶೋಭಿಸುತ್ತಿತ್ತು. ಅಂದರೆ, ಇಂದಿನ ಭಾರತ ದೇಶವೂ ೭೦೦೦ ವರ್ಷ ಕಾಲ ಶಾಂತಿ, ಸಮೃದ್ಧಿಗಳಿಂದ ನಳನಳಿಸುತ್ತಿತ್ತು. ಆಗ ಬಂದ ನೋಡಿ, ಅಲೆಕ್ಸಾಂಡರು! ಬಂದರು ನೋಡಿ, ಗ್ರೀಕರು, ಹೂಣರು, ಶಕರು!

ಆಮೇಲೆ ಬಿಡಿ, ಮಹಮದ್ ಬಿನ್ ಕಾಸಿಮ್, ಘಜ್ನಿ, ಘೋರಿ, ಮೊಗಲರು, ಯೂರೋಪಿಯನ್ನರು-ಬ್ರಿಟಿಷ್ ಬ...ಮಕ್ಕಳು!

ಶಾಂತಿಪರ್ವ ಫಿನಿಷ್!

ನಾವು ಸಾವಿರ ವರ್ಷ ಕಾಲ, ಪಡಬಾರದ ಪಾಡು ಪಟ್ಟೆವು. ಆಗ ಶುರುವಾಯಿತು ಕ್ರಾಂತಿ’ಪರ್ವ’.

ಮಂಗಳ್ ಪಾಂಡೆ, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಸುಖದೇವ್, ರಾಜಗುರು, ಸುಭಾಷ್‌ಚಂದ್ರ ಬೋಸ್, ಸಾವರ್‌ಕರ್, ಮದನ್‌ಲಾಲ್ ಧಿಂಗ್ರ, ರಾಸ್ ಬಿಹಾರಿ ಬೋಸ್, ಜತೀಂದ್ರನಾಥ್ ಮುಖೋಪಾಧ್ಯಾಯ, ಅರೊಬಿಂದೊ,......

ಕ್ರಾಂತಿ’ಪರ್ವ’ದ ಏಟು ತಾಳಲಾರದೆ ಬ್ರಿಟಿಷರು ಓಡಿಹೋದರು. ಭಾರತ ಸ್ವತಂತ್ರವಾಯಿತು.

ಸ್ವಾತಂತ್ರ್ಯ ದೊರೆತು ಅರವತ್ತೊಂದು ಗತಿಸಿ ಇದೀಗ ಅರವತ್ತೆರಡು ನಡೆಯುತ್ತಿದೆ. ಪರ್ವದೋಲ್ ಕೈಕೊಂಡ ಕ್ರಾಂತಿಯಿಂ ದೊರೆತ ಸ್ವಾತಂತ್ರ್ಯಮಂ ಬಳಸಿದ ನಿಮಿತ್ತಂ ಈ ಸಂವತ್ಸರ ಷಷ್ಟಿ ಮೇಲೊಂದರ ಪರ್ವಕಾಲದೊಳ್ ಆದುದೆಮ್ಮ ಸಂಕ್ರಾಂತಿ! ಇದೀಗ ಎಮ್ಮದು ’ಸಂಕ್ರಾಂತಿಪರ್ವ’!

ಸಂಕ್ರಾಂತಿ. ಅಂದರೆ, ಸೂರ್ಯನ ’ರಾಶಿಚಲನ’. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯನ ’ಚಲಿಸುವಿಕೆ’. ಸಂಕ್ರಮಣ.

ನಮ್ಮೀ ’ಭಾರತಸೂರ್ಯ’ ಕೈಕೊಂಡಿರುವ ಸಂಕ್ರಮಣ ಎಲ್ಲಿಂದ ಎಲ್ಲಿಗೆ, ಗೊತ್ತೆ?
ಸ್ವಸಂಸ್ಕೃತಿಯಿಂದ ಪಾಶ್ಚಾತ್ಯ ಸಂಸ್ಕೃತಿಯೆಡೆಗೆ!
ಸ್ವದೇಶದಿಂದ ಅಮೆರಿಕದೆಡೆಗೆ!
’ಅಧ್ಯಾತ್ಮ ಸಂಸ್ಕಾರ’ದಿಂದ ’ಉಪಭೋಗ ಸಂಸ್ಕೃತಿ’ಯೆಂಬ ವಿಕೃತಿಯೆಡೆಗೆ!
ಕರ್ಣಾನಂದಕರ, ಮನೋಲ್ಲಾಸಕರ, ಜ್ಞಾನೇಂದ್ರಿಯ ಮಧುರ (ಸ್ವಕೀಯ) ಶಾಸ್ತ್ರೀಯ ಸಂಗೀತದಿಂದ ಕರ್ಣಕಠೋರ, ಮನೋವಿಕಾರಕರ, ಜ್ಞಾನಪೀಠಿ ಬಂಧುರ ಲೈವ್ ಬ್ಯಾಂಡ್‌ನೆಡೆಗೆ!
ದೇಹಾಲಸ್ಯ-ಆಯಾಸಗಳನ್ನು ದೂರಮಾಡುವ ಚಾರಣ-ಯಾತ್ರೆಗಳಿಂದ ಮತ್ತು ಚಿತ್ತಕ್ಲೇಶವನ್ನು ದೂರಮಾಡುವ ದೈವದರ್ಶನ-ಪುರಾಣಶ್ರವಣಗಳಿಂದ ಮತ್ತೇರಿಸುವ ರೇವ್ ಪಾರ್ಟಿಯೆಡೆಗೆ!

ಈ ರೀತಿ,
ಸರಿದು ನಾವು ಶಾಂತಿಯಿಂದ ಕ್ರಾಂತಿಯೆಡೆಗೆ, ಸರಿಯುತ್ತಿದ್ದೇವಿಂದು ಕ್ರಾಂತಿಯಿಂದ ಸಂಕ್ರಾಂತಿಯೆಡೆಗೆ.

ಇದುವೇ ನಮ್ಮ
’ಶಾಂತಿ-ಕ್ರಾಂತಿ-ಸಂಕ್ರಾಂತಿ’!
ಓಂ ಶಾಂತಿಃ ಶಾಂತಿಃ ಶಾಂತಿಃ.
ಊಹ್ಞೂಂ.
’ಓಂ ಶಾಂತಿ ಓಂ’!

--0--

ಶುಕ್ರವಾರ, ಮೇ 8, 2009

ನೀವು ಕೇಳದಿರಿ - 6 (ತಾರಾಜಕೀಯ ಸ್ಪೆಷಲ್)

* ಶ್ರುತಿ ಅವರು ಚಕ್ರವರ್ತಿ ಎಂಬುವವರನ್ನು ಮದುವೆಯಾಗುತ್ತಾರಂತೆ?

- ದೇವತೆಗಳ ಚಕ್ರವರ್ತಿ ಮಹೇಂದ್ರನಿಗಿಂತ ಆಯಮ್ಮಗೆ ಈ ಚಕ್ರವರ್ತಿಯೇ ಮೇಲಾದನೇ?!

+++

* ಸಿನಿಮಾ ಮತ್ತು ನಿಜಜೀವನ ಎರಡೂ ಒಂದೇನಾ?

- ಒಂದಕ್ಕೊಂದು ವಿರುದ್ಧ.
ಸಿನಿಮಾದಲ್ಲಿ ಶ್ರುತಿ ಅಳುತ್ತಿದ್ದರು, ನಿಜಜೀವನದಲ್ಲಿ ಮಹೇಂದರ್ ಅಳುತ್ತಾರೆ.

+++

* ’ಶ್ರುತಿ’? ’ಶೃತಿ’?

- ಮಹೇಂದರ್‌ಗಿನ್ನು ಕೇವಲ ’ಸ್ಮೃತಿ’!

+++

* ’ಜೈ ಹೋ’ ಬಳಸಿತಲ್ಲಾ ಕಾಂಗ್ರೆಸ್, ಅದಕ್ಕೆ ಜಯವಾಗುತ್ತೆಯೆ?

- ಗೆದ್ದರೆ ’ಜೈ ಹೋಗಯಾ’, ಸೋತರೆ ’ಜೈ ಹೋ ಗಯಾ’!

+++

* ಈ ಸಲ ಲೋಕಸಭೆಗೆ ಸ್ಪರ್ಧಿಸಿರುವ ಎಲ್ಲ ತಾರಾಮಣಿಗಳೂ ಗೆದ್ದುಬಿಟ್ಟು ಮನಮೋಹನ್ ಸಿಂಗರೇ ಮತ್ತೆ ಪ್ರಧಾನಿಯಾದರೆ?

- ವಿ.ಪಿ.ಸಿಂಗ್‌ಗೆ ಮಂಡಲ್ ಆಯೋಗ, ಎಂಎಂ ಸಿಂಗ್‌ಗೆ ತಾರಾಮಂಡಲ ಯೋಗ!

+++

* ’ಚಕ್ ದೇ ಇಂಡಿಯಾ - 2’ ಚಿತ್ರದಲ್ಲಿ ಶಾರುಖ್ ಖಾನ್ ಕ್ರಿಕೆಟ್ ಕೋಚ್ ಅಂತೆ!?

- ’ಕೋಲ್ಕತ್ತಾ ನೈಟ್ ರೈಡರ್ಸ್’ ತಂಡದ ಆಟಗಾರರೇ ಚಿತ್ರದ ಪಾತ್ರಧಾರಿಗಳು ಅಂತ ಪ್ರೊಡ್ಯೂಸರ್ ಹೇಳಿದ್ದಕ್ಕೆ ಶಾರುಖ್ ಖಾನ್ ಸಾಹೇಬರು, ’ನಾನು ಕೋಚ್ ಪಾತ್ರ ಮಾಡೋಲ್ಲ, ಬೇರೆಯವರಿಂದ ಮಾಡಿಸ್ಕಳಿ’ ಅಂದುಬಿಟ್ಟರಂತೆ!

--೦--

ಡಿ ವಿ ಜಿ ದೃಷ್ಟಿಯಲ್ಲಿ ಮಹಾಚುನಾವಣೆ

ದಾರ್ಶನಿಕ ಕವಿ ಡಿ ವಿ ಜಿ ಅವರು ಮಹಾಚುನಾವಣೆಯ ಬಗ್ಗೆ ಕೆಲವು ಸೊಗಸಾದ ಪದ್ಯಗಳನ್ನು ಬರೆದಿದ್ದಾರೆಂದರೆ ಹಲವರಿಗೆ ಆಶ್ಚರ್ಯವಾಗಬಹುದು. ಆ ಪದ್ಯಗಳನ್ನು ಓದಿದಾಗ ನಮಗೆ, ’ಡಿ ವಿ ಜಿ ಕಾಲಕ್ಕೂ ಇಂದಿಗೂ ದೇಶದ ರಾಜಕೀಯ ಪರಿಸ್ಥಿತಿಯಲ್ಲಿ ವ್ಯತ್ಯಾಸವೇನಿಲ್ಲ’, ಎಂಬ ಸತ್ಯದ ಅರಿವು ಉಂಟಾಗುತ್ತದೆ. ೧೯೬೫ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಎಂಥ ನಿಂತ ನೀರೆಂಬುದು ನಮಗೆ ವೇದ್ಯವಾಗುತ್ತದೆ!

ಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. ದಿನೇದಿನೇ ಕೊಳಕು ಹೆಚ್ಚಾಗುತ್ತಿದೆ ಅಷ್ಟೆ.

ಅಂದು ಡಿ ವಿ ಜಿ ಬರೆದ ಪದ್ಯಗಳು ಇಂದಿಗೂ ಹೇಗೆ ಪ್ರಸ್ತುತವೆನಿಸುತ್ತವೆಂಬುದನ್ನು ಕೆಲ ಉದಾಹರಣೆಗಳ ಮೂಲಕ ನೋಡೋಣ.

ಮಹಾಚುನಾವಣೆಯನ್ನು ಡಿ ವಿ ಜಿ ಅವರು ’ವರಣ ಪ್ರಸ್ತ’ ಎಂದು ಕರೆಯುತ್ತಾರೆ. ’(ಜನಪ್ರತಿನಿಧಿಗಳನ್ನು) ಆರಿಸುವ ಶುಭ ಸಮಾರಂಭ’ ಎಂದು ಇದರರ್ಥ. ’ವರಣ ಪ್ರಸ್ತ’ ಎಂಬ ಶೀರ್ಷಿಕೆಯ ಪದ್ಯದಲ್ಲಿ ಡಿ ವಿ ಜಿ ಹೇಳುತ್ತಾರೆ:

ಏನು ಜಾತ್ರೆಯದು? ಏನಾ ಪ್ರಸ್ತವೊ!
ವೋಟಿನ ಹಾರಾಟಾ,
ಮಗುವೇ, ವೋಟಿನ ಹಾರಾಟಾ.
ನಾನು ತಾನೆನುತ್ತಿರುವಾ ಪ್ರತಿನಿಧಿ
ಪೋಟಿಯ ಮೇಲಾಟಾ,
ಮಗುವೇ, ಮೇಲುಪೋಟಿಯಾಟಾ.

ಮುಂದುವರಿದು ಅವರು ಚುನಾವಣಾ ರ್‍ಯಾಲಿ(rally)ಗಳ ಬಗ್ಗೆ ಹೇಳುತ್ತಾರೆ:

ಶಿಕ್ಷಣವಂತರು ಲಕ್ಷಣವತಿಯರು
ಲಕ್ಷಮಂದಿ ಪರಿಷೇ,
ಮಗುವೇ, ಲಕ್ಷಾಂತರ ಪರಿಷೇ.
ಅಕ್ಷರವರಿಯದ ಕುಕ್ಷಿಯ ಮರೆಯದ
ಅಕ್ಷಯಜನ ಪರಿಷೇ,
ಮಗುವೇ, ಸಾಕ್ಷಾತ್ ಜನ ಪರಿಷೇ.

ಪದ್ಯದ ಕೊನೆಯಲ್ಲಿ ಡಿ ವಿ ಜಿ ಅವರು ಅಭ್ಯರ್ಥಿಗಳ ಕಾಪಟ್ಯವನ್ನು ಹೀಗೆ ಬಿಚ್ಚಿಡುತ್ತಾರೆ:

ದೇಶೋದ್ಧಾರಕ ಮೋಸನಿವಾರಕ
ವೇಷದ ನಾಟಕವೋ,
ಮಗುವೇ, ವೇಷದ ನಾಟಕವೋ.
ಆಶಾದಾಯಕ ಘೋಷಣಕಾರಕ
ಹಾಸ್ಯವಿಕಾರಕವೋ,
ಮಗುವೇ, ಹಾಸ್ಯವಿಕಾರಕವೋ.

ವಿವಿಧ ಪಕ್ಷಗಳವರು ಮತಯಾಚನೆ ಮಾಡುವ ಬಗೆಯನ್ನು ’ಜನಜನವರಿಗೆ’ ಎಂಬ ಪದ್ಯದಲ್ಲಿ ಡಿ ವಿ ಜಿ ಸೊಗಸಾಗಿ ಬಣ್ಣಿಸುತ್ತಾರೆ:

ದೇಶಸ್ವತಂತ್ರಕ್ಕೆ ಮೀಶೆಬಿಟ್ಟವ ನಾನು;
ಕೊಡಿರೆನಗೆ ಮತವ,
ಹಿಡಿಯಿರಿದೊ ಹಿತವ;
ಇಂತೆಂದು ಬಂದನಾ ಘನ ಕಾಂಗ್ರೆಸಿಗನು.
ಬೇಸಾಯಗಾರಂಗೆ ಬೆನ್ನುಮೂಳೆಯೊ ನಾನು;
ತನ್ನಿರಾ ಮತವ,
ಬನ್ನಿ, ಕೊಳಿ ಹಿತವ;
ಇಂತೆಂದು ಬಂದನಾ ಕಿಸುಕಿಸಾನವನು.
ಕೂಲಿಯಾಳ್ಗಲನೆಲ್ಲ ಮೇಲಕೆತ್ತುವೆ ನಾನು;
ಇತ್ತ ಕೊಡಿ ಮತವ,
ಎತ್ತಿಕೊಳಿ ಹಿತವ;
ಇಂತೆಂದು ಬಂದನಾ ಮಜ್ದೂರಿನವನು.
...........................
ಕೀಳು ಮೇಲೆಂಬರ್‍ಗೆ ಕಾಲಾಂತಕನು ನಾನು;
ನೀಡಿರಾ ಮತವ,
ನೋಡಿರೀ ಹಿತವ;
ಇಂತೆಂದು ಬಂದನಾ ಹರಿಜನೋದ್ಧರನು.
ಸಾಲಹೊರೆ ಹೊತ್ತರ್‍ಗೆ ಕೀಲುಕುದುರೆಯು ನಾನು;
ಚಾಚಿರಾ ಮತವ,
ಬಾಚಿಕೊಳಿ ಹಿತವ;
ಇಂತೆಂದು ಬಂದನಾ ಋಣವಿಮೋಚಕನು.
.............................
ಧರ್ಮದುದ್ಧಾರವೇ ಪೆರ್‍ಮೆಯೆಂಬನು ನಾನು;
ಮುಡುಪಿಡಿರಿ ಮತವ,
ಪಿಡಿಯಿರಿದೊ ಹಿತವ;
ಇಂತೆಂದು ಬಂದನಾ ಹಿಂದುಸಭೆಯವನು.

ಹೀಗೆ ಮುಂದುವರಿಯುತ್ತದೆ ’ಜನಜನವರಿಗೆ’ ಪದ್ಯ.

’ಅಂಗೈಯ ವೈಕುಂಠ’ ಎಂಬ ಪದ್ಯದಲ್ಲಿ ಡಿ ವಿ ಜಿ ಅವರು ಚುನಾವಣೆ ದಾಟಿ ಮುಂದಕ್ಕೆ ಹೋಗುತ್ತಾರೆ.
ಪೊಳ್ಳು ಆಶ್ವಾಸನೆಗಳನ್ನು ನೀಡಿ ಆಯ್ಕೆಯಾದ ಅಭ್ಯರ್ಥಿಯು ’ಹೆಮ್ಮಂತ್ರಿ’ಯಾಗಿ ಮೆರೆಯುತ್ತಾನೆ, ಆದರೆ ಆಶ್ವಾಸನೆಗಳನ್ನು ಈಡೇರಿಸುವುದಿಲ್ಲ. ’ರೋಸಿದ್ದ ಜನವೆಲ್ಲ ಕಡೆಗೂರ ಚೌಕದಲಿ’ ನೆರೆದು, ಔತಣದ ನೆಪದಲ್ಲಿ ಆ ಮಂತ್ರಿಯನ್ನು ಕರೆಸಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಆಗ ಮಂತ್ರಿ ಉತ್ತರಿಸುತ್ತಾನೆ:

ವೇಷ ತೊಟ್ಟೆನು ನಿಮ್ಮ ಮನಮೆಚ್ಚಿಗಾಗಿ,
ಭಾಷೆ ಕೊಟ್ಟೆನು ನಿಮ್ಮ ವರಪತ್ರಕಾಗಿ.
ಅದೇ ಬಾಯಲ್ಲಿ ಆತ ಮತ್ತೆ ಹೇಳುತ್ತಾನೆ:
ಈ ಸಾರಿ ನೀಮೆನ್ನನಾರಿಸಿರಿ, ನಾನು
ಮೂಸಲದ ಋಣಬಡ್ಡಿಯೆಲ್ಲ ತೀರಿಪೆನು.

ಮುಗ್ಧ ಮತದಾರರು ಅವನನ್ನು ಮತ್ತೆ ನಂಬುತ್ತಾರೆ!

ದೂರ್‍ವುದೇಕವನ ನಾಮ್? ಅವನ ಮನಸೊಳಿತು;
ಪೂರ್ವಕರ್ಮವು ನಮ್ಮದದರ ಫಲವಿನಿತು.

ಹೀಗೆಂದುಕೊಂಡು ಜನರು ಮತ್ತೆ ಮುಂದಿನ ಚುನಾವಣೆಯಲ್ಲೂ ಆತನನ್ನೇ ಆಯ್ಕೆಮಾಡುತ್ತಾರೆ! ಆತನದೋ, ಮತ್ತೆ ಅದೇ ಚಾಳಿ! ಇದನ್ನು ಕಂಡು ಕವಿ (ಡಿ ವಿ ಜಿ) ಉದ್ಗರಿಸುತ್ತಾರೆ:

ಕಲಿಯಿತೇಂ ಜನತೆಯಂಗೈಯ ವೈಕುಂಠದಿಂ
ರಾಜ್ಯಪಾಠವನು?
ತಿಳಿಯಿತೇಂ ಕಂಡ ಮುಂಗೈಯ ಕೈಲಾಸದಿಂ
ಭೋಜ್ಯದೂಟವನು?
ಮರೆವು ಕವಿಯಿತು ಜನವ ನಿಶಿನಿದ್ದೆಯೊಡನೆ;
ಕರಗಿತಾ ಕಹಿನೆನಪು ಬಿಸಿಮುದ್ದೆಯೊಡನೆ.

ಡಿ ವಿ ಜಿ ಅವರ ಈ ಮಾತು ಇಂದಿಗೂ ಅಷ್ಟೇ ಪ್ರಸ್ತುತವಲ್ಲವೆ? ’ಪಬ್ಲಿಕ್ ಮೆಮೊರಿ ಈಸ್ ಷಾರ್ಟ್’ ತಾನೆ? ಅದರ ದುರುಪಯೋಗವನ್ನೇ ಅಲ್ಲವೆ ನಮ್ಮ ಪುಢಾರಿಗಳು ಮಾಡಿಕೊಳ್ಳುತ್ತಿರುವುದು? ಇಂಥ ಪುಢಾರಿಯನ್ನು ’ಜನನಾಯಕ’ ಎಂಬ ಪದ್ಯದಲ್ಲಿ ಡಿ ವಿ ಜಿ ಅವರು ಸಖತ್ತಾಗಿ ಬೆಂಡೆತ್ತಿದ್ದಾರೆ. ಆ ಪದ್ಯದ ಪೂರ್ಣಪಾಠ ಇಂತಿದೆ:

ಎಲ್ಲಿಂದ ಬಂದೆಯೋ ಜನನಾಯಕಾ-ಎಂಥ
ಒಳ್ಳೆಯದ ತಂದೆಯೋ ಜನನಾಯಕ.
ಬೆಲ್ಲವನು ಕಿವಿಗೀವ ಜನನಾಯಕಾ ನೀನು
ಸುಳ್ಳಾಡದಿರು ಸಾಕು-ಜನನಾಯಕಾ.
ಗಗನದಿಂದಿಳಿದೆಯಾ ಮಘವಂತ ದೂತನೇ
ಮುಗಿಲಂತೆ ಗುಡುಗಾಡುತಿರುವೆಯೇಕೋ?
ಸೊಗವೀವ ಮಳೆಯ ನೀಂ ಕರೆಯಬಲ್ಲೆಯ ಬರಿ
ಹೊಗೆಯ ಮೋಡವೊ ನೀನು-ಜನನಾಯಕಾ.
ಪಾತಾಳದಿಂದೆದ್ದು ಬಂದಿಹೆಯ ನೀನು,
ಭೇತಾಳ ಮಾಯೆಗಳ ಮಾಡಲಿಹೆಯಾ?
ಮಾತಿನಿಂ ಮಾತೆಗೇನುದ್ಧಾರವೋ ನಿನ್ನ
ಬೂತಾಟಿಕೆಗಳೇಕೊ-ಜನನಾಯಕಾ.
ಕಡಲ ಮಧ್ಯದಿನೆದ್ದು ಬಂದಿರುವೆಯಾ ನೀನು,
ಕಡೆದು ನಮಗಮೃತವನು ತಂದಿರುವೆಯಾ?
ಪೊಡವಿಯಾಳ್ತನವೇನು ಬುಡುಬುಡುಕಿಯಾಟವೇ?
ದುಡಿತ ನೀನೇನರಿವೆ?-ಜನನಾಯಕಾ.
ನಾಗಲೋಕದಿನೆದ್ದು ಬಂದೆಯೇನೋ ಬರಿಯ
ಲಾಗಾಟ ಕೂಗಾಟ ನಿನ್ನ ಬದುಕು.
ನೇಗಿಲನು ಪಿಡಿದು ನೆಲನುಳಬಲ್ಲೆಯಾ ನೀನು
ನಾಗರ ಕಳಿಂಗನೋ-ಜನನಾಯಕಾ.
ಯಾವ ವಿದ್ಯೆಯ ಬಲ್ಲೆ? ಯಾವ ವ್ರತವ ಗೈದೆ?
ಜೀವನದ ಮರ್ಮವೇನರಿತವನೆ ನೀಂ?
ಸಾವಧಾನದ ತಪಸ್ಸಲ್ಲವೇನೋ ರಾಷ್ಟ್ರ-
ಸೇವೆಯ ಮಹಾಕಾರ್ಯ-ಜನನಾಯಕಾ.
ಗಾಂಧಿ ಗಾಂಧಿಯೆನುತ್ತಲಡಿಗಡಿಗೆ ಕೂಗುತಿಹೆ
ಗಾಂಧಿವೋಲನುದಿನದಿ ಬಾಳುತಿಹೆಯಾ?
ದಾಂಧಲೆಯ ಮಾಡಿ ನೀಂ ಪದವಿಗೇರುವನೆಂದು
ಸಂದೇಹವೋ ನಮಗೆ-ಜನನಾಯಕಾ.
ಗಾಳಿತಿತ್ತಿಯೊ ನೀನು ಜನನಾಯಕಾ-ಹಳಸು
ಕೂಳು ಬುತ್ತಿಯೊ ನೀನು ಜನನಾಯಕಾ.
ದಾಳದಾಟವೊ ನೀನು ಜನನಾಯಕಾ-ನಮ್ಮ
ಫಾಲಲಿಪಿಯೋ ನೀನು-ಜನನಾಯಕಾ.

ದಾರ್ಶನಿಕ ಕವಿ ಡಿ ವಿ ಜಿ ಅವರು ಈ ಪದ್ಯದ ಕೊನೆಯಲ್ಲಿ, ’ಇಂಥ ಜನನಾಯಕನನ್ನು ಹೊಂದಿರುವುದು ನಮ್ಮ ಹಣೆಬರಹ’ ಎಂಬ ತೀರ್ಮಾನಕ್ಕೆ ಬಂದಿರುವುದನ್ನು ನೋಡಿದರೆ ಅಂದಿನ ರಾಜಕಾರಣವೂ ಎಷ್ಟು ಹೊಲೆಗಟ್ಟಿತ್ತೆಂಬುದನ್ನು ನಾವು ಊಹಿಸಬಹುದು. ಡಿ ವಿ ಜಿ ಅವರ ಬೇಗುದಿಯೂ ಇಲ್ಲಿ ನಮ್ಮ ಕಣ್ಣಿಗೆ ಕಟ್ಟುತ್ತದೆ.

ಇನ್ನು, ಮಹಾಚುನಾವಣೆಯೆಂಬ ಈ ’ಜನವಂಚನೆ’ಯ ಬಗ್ಗೆ ಕವಿಯ ಕಲ್ಪನೆಯು ಎಂಥ ಉತ್ತುಂಗವನ್ನು ತಲುಪಿದೆಯೆಂದರೆ, ಪುಢಾರಿಗಳ ಬಾಯಲ್ಲಿ ಸಿಕ್ಕಿಬಿದ್ದ ಸರಸ್ವತಿಯು ಬಿಡುಗಡೆಗಾಗಿ ಬ್ರಹ್ಮನ ಮೊರೆಹೊಗುತ್ತಾಳೆ! ’ಸರಸ್ವತಿಯ ಪ್ರಾರ್ಥನೆ’ ಪದ್ಯದಲ್ಲಿ ಆ ದೇವಿಯು ಬ್ರಹ್ಮನನ್ನು ಈ ರೀತಿ ಪ್ರಾರ್ಥಿಸುತ್ತಾಳೆ:

ಬಿಡಿಸೆನ್ನ ರಾಜ್ಯಕರ ಹಿಡಿತದಿಂ ವಿಧಿಯೇ
ತೊದಲು ತುಟಿಗೆನ್ನ ಬಲಿಕೊಡಬೇಡ ಪತಿಯೇ.
ದೇಶದುದ್ಧಾರಕ್ಕೆ ಭಾಷಣವೆ ಪಥವಂತೆ,
ಘೋಷಣೆಯ ಲೋಕ ಸಂತೋಷ ನಿಧಿಯಂತೆ.
ಆಶೆಯಾಗಿಸೆ ಜನಕೆ ವೇಷ ತೊಡಿಸುವರೆನಗೆ
ವೇಶಿತನವನದೆಂತು ಸೈಸಲಹುದಜನೇ.
ಮಾತು ನೂಲನು ಜೇಡ ಬಲೆಯಾಗಿ ನೆಯ್ದು
ವೋಟು ನೊಣಗಳ ಪಿಡಿವ ಹೂಟವನು ಹೂಡಿ
ಊಟಕ್ಕೆ ಬಾಯ್ದೆರೆವ ಮಾಟಗಾರರಿಗೆ ನಾಂ
ಚೇಟಿಯಾಗುವೆನೆ? ಈ ಕೋಟಲೆಯ ಹರಿಸೈ.

ಕವಿಯ ಕಲ್ಪನೆಯಿಲ್ಲಿ ಅನ್ಯಾದೃಶವಲ್ಲವೆ?

ಮಹಾಚುನಾವಣೆಯ ಬಗ್ಗೆ ಡಿ ವಿ ಜಿ ಅವರು ಅಂದು ಆಡಿರುವ ನುಡಿಗಳು ಇಂದಿಗೂ ಪ್ರಸ್ತುತ.

ಡಿ ವಿ ಜಿ ಅವರ ’ಮಂಕುತಿಮ್ಮನ ಕಗ್ಗ’ ಅದೊಂದು ಲೋಕಸತ್ಯ; ಸಾರ್ವಕಾಲಿಕ ಸತ್ಯ. ಆದರೆ, ಮಹಾಚುನಾವಣೆಯ ಬಗ್ಗೆ ಡಿ ವಿ ಜಿ ಅವರು ಆಡಿರುವ ನುಡಿಗಳು ಸಾರ್ವಕಾಲಿಕ ಸತ್ಯ ಆಗದಿರಲಿ ಎಂಬುದು ನಮ್ಮ ನಿಮ್ಮೆಲ್ಲರ ಅಪೇಕ್ಷೆ. ಡಿ ವಿ ಜಿ ಅವರ ಅಪೇಕ್ಷೆಯೂ ಇದೇ ಆಗಿತ್ತಲ್ಲವೆ?

ಈ ಅಪೇಕ್ಷೆಯನ್ನು ನಿಜವಾಗಿಸುವ ಅವಕಾಶ, ಅರ್ಥಾತ್, ದುಷ್ಟ-ಭ್ರಷ್ಟ ಜನನಾಯಕರಿಗೆ ’ಗತಿ ಕಾಣಿಸುವ’ ಅವಕಾಶ ದೇಶಾದ್ಯಂತ ನಮಗೀಗ ಒದಗಿಬಂದಿದ್ದು, ಮತಪತ್ರಗಳ ಮೂಲಕ ನಾವು ಆ ಕೆಲಸವನ್ನು ಮಾಡಿದ್ದೇವೆಯೇ?
ಇದೇ ೧೬ರಂದು ಗೊತ್ತಾಗುತ್ತದೆ.

ಗುರುವಾರ, ಮೇ 7, 2009

ನೀವು ಕೇಳದಿರಿ - 5

* ಶ್ರುತಿ-ಮಹೇಂದರ್ ವಿರಸವಂತೆ?

- ಹೌದು. ಶ್ರುತಿಯ ಸರಸ ಸಂಗೀತದಲ್ಲಿ ಈಗ ವಿರಸದ ಅಪಶ್ರುತಿ ಮೂಡಿದೆ. ನಿನ್ನೆವರೆಗೂ ಇಂದ್ರ-ಚಂದ್ರ-ಮಹೇಂದ್ರ; ಈಗ, ’ಆ ಮಹೇಂದ್ರ ಯಾವ ಮಹಾ ಇಂದ್ರ?’

+++

* ಐಪಿಎಲ್ ಮ್ಯಾಚ್ ನೋಡೋಕೆ ಸ್ಟೇಡಿಯಂನಲ್ಲಿ ಜನರೇ ಇಲ್ಲವಂತೆ!

- ಮ್ಯಾಚ್ ಇಲ್ಲಿ ಅಲ್ಲ, ಆದ್ದರಿಂದ ಜನ ಅಲ್ಲಿ ಇಲ್ಲ.
(ಲಲಿತ್ ಮೋದಿಯೇ ಕಾರಣ ಬಲ್ಲ. ಆತನ ಸೊಕ್ಕಿನ ಫಲವೇ ಎಲ್ಲ!)

+++

* ಒಬಾಮಾ ನಿರ್ಧಾರದಿಂದ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನ ಗತಿ ಏನು ಗುರುವೇ?

- ’ವಿದ್ಯುನ್ಮಾನ ನಗರ’ ಇದುವರೆಗೆ ’ವಿದ್ಯುನ್ಮಾದ ನಗರ’ ಆಗಿತ್ತು, ಇನ್ನುಮೇಲೆ ಅದು ’ವಿದ್ಯುನ್‌ಮೌನ ನಗರ’!

+++

* ನೇಪಾಳದಲ್ಲಿ ಮುಂದೇನಾಗಬಹುದು?

- ಇದುವರೆಗೆ ಪ್ರಚಂಡನ ಸರ್ಕಾರ ಇತ್ತು, ಇನ್ನು ಪ್ರಚಂಡ ಸರ್ಕಾರ ಬರಲಿದೆ!

+++

* ಚಲನಚಿತ್ರ ನಟಿಯರ ಬಗ್ಗೆ ಮಾತಾಡುವಾಗ ಯಾವಾಗಲೂ ಏಕವಚನವನ್ನೇ ಬಳಸುತ್ತೇವಲ್ಲಾ, ಯಾಕೆ?

- ಯಾಕೆಂದರೆ, ಅವರಿಗೆ ಎಂದಿಗೂ ವಯಸ್ಸಾಗೋದೇ ಇಲ್ವಲ್ಲಾ, ಅದಕ್ಕೆ.

+++

* ಇವತ್ತು ಲಾಲೂ ಕ್ಷೇತ್ರದಲ್ಲಿ ಮತದಾನ. ಲಾಲೂ ಗೆಲ್ಲಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ.

- "ತುಮ್‌ಕೋ ಇಂಡ್ಯನ್ ರೈಲ್ವೆ ಕಾ ಫ್ರೀ ಪಾಸ್ ಸ್ಯಾಂಕ್ಷನ್."

+++

* ಮುಂದಿನ ಪ್ರಧಾನಿ ಯಾರಾಗಬಹುದು ಗುರುವೆ?

- ಗಂಡಸು ಅಥವಾ ಹೆಂಗಸು ಆಗಬಹುದು.

--೦--

ಪ್ರಧಾನಿ ಪ್ರಸಂಗ

ರಾಹುಲ್ ಗಾಂಧಿಗೆ ಸಿಕ್ಕಿತು ಎಂದರೆ ಪೀಯೆಮ್ಮಿನ ಪಟ್ಟ
ರಾಹು-ಕೇತುಗಳು ಪಕ್ಕದಿ ಬರುವುವು ಆಗ ಅವನು ಕೆಟ್ಟ!
ಮತ್ತೇನಾದರು ಮನಮೋಹನನೇ ಆದರೆ ಪ್ರಧಾನಿಯು
ಕತ್ತೆಯಂತೇನೊ ದುಡಿವನು ಆದರೆ ಬಹಳೇ ನಿಧಾನಿಯು!

ಅದ್ವಾನಿಯು ಆದರು ಎಂದರೆ ಭಾರತದ ಪ್ರಧಾನ್ಮಂತ್ರಿ
ಅಧ್ವಾನವು ದೇಶವು ಭಾರತಕಾಗೆಂಥಾ ಗತಿ ಬಂತ್ರೀ!
ಕಾಂಗ್ರೆಸ್-ಕಮ್ಯುನಿಸ್ಟ್ ಹೀಗನ್ನುವುದು, ನಾನಂದದ್ದಲ್ರೀ
ಟಾಂಗ್ ಕೊಡುವುದೆ ಚಟ, ದೇಶದ ಯೋಚನೆ ಇವುಗಳಿಗೇನಿಲ್ರೀ!

ಮೂರನೆ ರಂಗವೊ ನಾಲ್ಕನೆ ಮಂಗವೊ ಆದರೆ ಪೀಯೆಮ್ಮು
ಮಾರನೆ ದಿನವೇ ಭರ್ಜರಿ ಸೀನು, ಫೈಟಿಂಗ್ ಏಕ್‌ದಮ್ಮು!
ಕರಟ್, ಮುಲಾಯಂ, ಪಾಸ್ವಾನ್, ಮಾಯಾ, ದೇವೇಗೌಡ, ಜಯಾ,
ಶರದ್, ಲಾಲುಗಳ ಶೀತಲ ಸಮರದಿ ದೇಶದ ಹಿತ ಮಾಯ!

ಚಂದ್ರಾಯಣ!

ಎ.ಪಿ.ಜೆ.ಅಬ್ದುಲ್ ಕಲಾಂ, ಮಾಧವನ್ ನಾಯರ್, ಯು.ಆರ್.ರಾವ್ ಮತ್ತು ಟಿ.ಕೆ.ಅಲೆಕ್ಸ್ ಈ ನಾಲ್ವರು ಭಾರತದ ಹೆಗ್ಗಳಿಕೆಯ ಚಂದ್ರಯಾನದ ಯಶಸ್ಸಿಗೆ ಕಾರಣರಾದ ನಮ್ಮ ವಿಜ್ಞಾನಿಗಳಲ್ಲಿ ಪ್ರಮುಖರು. ಇವರೆಲ್ಲ ಸೇರಿ ಚಂದ್ರನ ಮೇಲೆ ಎಂಐಪಿ ಎಂಬ ಶೋಧಕ ಉಪಕರಣವನ್ನು ಯಶಸ್ವಿಯಾಗಿ ಇಳಿಸಿದರು. ಭಾರತದ ತ್ರಿವರ್ಣವನ್ನು ಚಂದ್ರನ ಮೇಲೆ ಏರಿಸಿದರು.

ಕೆಲವು ಬುದ್ಧಿವಂತ ರಿಯಲ್ ಎಸ್ಟೇಟ್ ಉದ್ಯಮಿಗಳು ಇದೇ ಅವಕಾಶವೆಂದುಕೊಂಡು ಏನು ಮಾಡಿದರು ಗೊತ್ತೆ? ಅಂತರರಾಷ್ಟ್ರೀಯ ಮಟ್ಟದಲ್ಲಿ ಲಾಬಿ ನಡೆಸಿ ಕಾನೂನಿನ ಅಡೆತಡೆಗಳನ್ನು ನಿವಾರಿಸಿಕೊಂಡು, ಕೇಂದ್ರ ಸರ್ಕಾರದೊಡನೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆವಶ್ಯಕ ಒಪ್ಪಂದಗಳನ್ನು ಮಾಡಿಕೊಂಡು ಚಂದ್ರನ ಒಂದಷ್ಟು ನೆಲವನ್ನು ಖರೀದಿಸಿ ತಮ್ಮ ಸಂಸ್ಥೆಗಳ ಹೆಸರುಗಳಲ್ಲಿ ರಿಜಿಸ್ಟರ್ ಮಾಡಿಸಿಕೊಂಡರು. ಅನಂತರ ಆ ನೆಲದಲ್ಲಿ ನಿವೇಶನ ಇತ್ಯಾದಿಗಳನ್ನು ಗಣಕಯಂತ್ರದ ಸಹಾಯದಿಂದ ’ನಿರ್ಮಿಸಿ’ ಮಾಧ್ಯಮಗಳಲ್ಲಿ ಆಕರ್ಷಕ ಜಾಹಿರಾತುಗಳನ್ನು ನೀಡಿ ಸಾರ್ವಜನಿಕರಿಗೆ ಮಾರತೊಡಗಿದರು! ವಿವಿಧ ವಿಸ್ತೀರ್ಣಗಳ ಸೈಟುಗಳು ಅಲ್ಲಿ ಲಭ್ಯ!

’ಡೂ ಯೂ ವಾಂಟ್ ಎ ಸೈಟ್ ಆನ್ ಮೂನ್? ಚಾಂದ್ ಕೇ ಊಪರ್ ಸೈಟ್ ಹೋನಾ?’ ಎಂದು ಕೇಳಿಕೊಂಡು ಈ ರಿಯಲ್ ಎಸ್ಟೇಟ್ ಉದ್ಯಮಗಳ ಏಜಂಟರು ಎ.ಪಿ.ಜೆ.ಅಬ್ದುಲ್ ಕಲಾಂ, ಮಾಧವನ್ ನಾಯರ್, ಯು.ಆರ್.ರಾವ್, ಟಿ.ಕೆ.ಅಲೆಕ್ಸ್ ಇವರುಗಳ ಮನೆಬಾಗಿಲನ್ನೂ ಬಡಿದು ಬೈಸಿಕೊಂಡು ವಾಪಸಾದರು!

ಕೈಯಲ್ಲಿ ಕಾಸು ಓಡಾಡುತ್ತಿದ್ದ ಕಾಲ, ಭಾರತದ ಸಾಫ್ಟ್‌ವೇರ್ ಉದ್ಯೋಗಿಗಳು ಮುಗಿಬಿದ್ದು ಚಂದ್ರನಮೇಲೆ ಸೈಟುಗಳನ್ನು ಖರೀದಿಸಿದರು. ಹಾಗೆ ಖರೀದಿಸಿದವರಲ್ಲಿ ಸಹಜವಾಗಿಯೇ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿಗಳದ್ದೇ ಸಿಂಹಪಾಲು.

ಇದೆಲ್ಲ ಹಳೆಯ ಕಥೆ. ಇದೀಗ ಒಬಾಮಾ, ’ಬ್ಯಾಂಗಲೋರ್ ನೋ, ಬಫೆಲೋ ಯೆಸ್’, ಅಂದನಲ್ಲಾ, ಬಹಳಷ್ಟು ಸಾಫ್ಟ್‌ವೇರ್ ಉದ್ಯೋಗಿಗಳ ಉದ್ಯೋಗ ಹೊರಟುಹೋಗಿದೆ! ಅವರೀಗ ಜೀವನೋಪಾಯಕ್ಕಾಗಿ ಚಂದ್ರನಮೇಲಿನ ತಮ್ಮ ಸೈಟುಗಳನ್ನು ಮಾರಲು ಹೊರಟಿದ್ದಾರೆ. ಆದರೆ, ಕೊಳ್ಳಲು ಗಿರಾಕಿಯೇ ಇಲ್ಲ! ಕಾರಣ ಆರ್ಥಿಕ ಹಿಂಜರಿತ!

ಎಲ್ಲಿಗೆ ಬಂತು ನೋಡಿ ಅವಸ್ಥೆ!

ಬುಧವಾರ, ಮೇ 6, 2009

ಕೋತಿಚೇಷ್ಟೆ

ಕೋತಿಚೇಷ್ಟೆ ಎಂಬ ನುಡಿಗಟ್ಟನ್ನು ಸೃಷ್ಟಿಸಿದ್ದು ನಾನಲ್ಲ. ಯಾರೋ ಪೂರ್ವಜರು, ತಮ್ಮ ಮಕ್ಕಳನ್ನೋ ಮೊಮ್ಮಕ್ಕಳನ್ನೋ ಸುಧಾರಿಸಲು ಕಷ್ಟವಾದಾಗ, ತಮ್ಮ ಪೂರ್ವಜರನ್ನು ನೆನೆದು, ಈ ನುಡಿಗಟ್ಟನ್ನು ಸೃಷ್ಟಿಸಿರಬೇಕು. ತಮ್ಮ ಕಂದಮ್ಮಗಳಮೇಲಿನ, ಹಾಗೂ, ತಮ್ಮ ಆ ಪೂರ್ವಜರಮೇಲಿನ ಪ್ರೀತಿಯಿಂದಲೇ ಈ ನುಡಿಗಟ್ಟನ್ನವರು ಹುಟ್ಟುಹಾಕಿರುತ್ತಾರೆಂಬುದು ನನ್ನ ಅಚಲ ನಂಬಿಕೆ. ಪರಂಪರಾನುಗತವಾಗಿ ಬಳಕೆಯಲ್ಲಿ ಬಂದಿರುವ ಈ ವಿಶೇಷಪದವನ್ನು ಎಲ್ಲರಂತೆಯೇ ನಾನೂ ಬಳಸುತ್ತಿದ್ದೇನೆ ಅಷ್ಟೆ. ಆದಾಗ್ಗ್ಯೂ, ಅಣೋರಣೀಯನೂ ಮಹತೋ ಮಹೀಯನೂ ಆಗಿರುವ ಮುಖ್ಯಪ್ರಾಣನ (ಪ್ರಾಣಿ)ರೂಪವನ್ನು ಈ ರೀತಿ ಲಘುವಾಗಿ ಬಳಸಿಕೊಳ್ಳುತ್ತಿರುವುದಕ್ಕಾಗಿ ಆ ಸ್ವಾಮಿಯಲ್ಲಿ ಮಾಫಿ ಮಾಂಗುತ್ತೇನೆ. ಆಂಜನೇಯಾ, ಕ್ಷಮಿಸೆನ್ನನು.

ಇಷ್ಟಕ್ಕೂ, ಈ "ಕೋತಿಚೇಷ್ಟೆ" ಎಂಬ ನುಡಿಗಟ್ಟನ್ನು ನಾನು ನನ್ನ ಮಕ್ಕಳಮೇಲೋ ಮೊಮ್ಮಕ್ಕಳಮೇಲೋ ಇನ್ನಾರಮೇಲೋ ಆರೋಪಿಸುತ್ತಿಲ್ಲ. ಅಸಲಿಗೆ, ನರರ ಕುರಿತು ಅಲ್ಲವೇಅಲ್ಲ ನನ್ನೀ ಬರಹ (ಆರೋಪ). ವಾನರರ ಕುರಿತಾದುದು ಈ ನನ್ನ ಕೊರೆತ! ಆದ್ದರಿಂದ, ಈ ಬರಹದ ತಲೆಬರಹವಾಗಿ "ಕೋತಿಚೇಷ್ಟೆ" ಓಕೆ; ಹಿಂಜರಿಕೆ ಯಾಕೆ? ಅಲ್ವಾ?

ಈಗ ವಿಷಯಕ್ಕೆ ಬರುತ್ತೇನೆ. ವಿದ್ಯಾರಣ್ಯಪುರ ಎಂಬಲ್ಲಿ ಒಂದು ಮನೆ ಖರೀದಿಸಿ ವಾಸಿಸತೊಡಗಿದೆ. ಪುರಕ್ಕಿಂತ ಅರಣ್ಯಕ್ಕೇ ಹೆಚ್ಚು ಸನಿಹದಲ್ಲಿರುವ ಒಂದು ಬಡಾವಣೆ ಅದು. ಕಡಿಮೆ ರೇಟಿಗೆ ಮನೆ ಸಿಗಬೇಕೆಂದರೆ ಸಿಟಿ ಮಧ್ಯದಲ್ಲಿ ಸಿಗುತ್ತೆಯೇ? ಊರಿಂದ ಹೊರಗೆ, ದೂರ ಹೋಗ್ಬೇಕಾಗುತ್ತಪ್ಪ. ಅಂಥದೊಂದು ಸ್ಥಳ ವಿದ್ಯಾರಣ್ಯಪುರ. ಹೆಸರಿಗೆ ಸಿಟಿ ; ಅನುಭವಕ್ಕೆ ಕಾಡು ಕಂ ಪ್ರಕೃತಿ ಕಂ ರೆಸಾರ್ಟು! ಒಂಥರಾ ಮಲ್ಟಿಪರ್ಪಸ್ ಲೇಔಟು!

ಇಂತಿಪ್ಪ ವಿದ್ಯಾರಣ್ಯಪುರದ ನನ್ನ ಮನೆಯ ದೇವರಕೋಣೆಯೊಳ್ ಎಂದಿನಂತೆ ಅಂದೂ ಸಹ ನಾನು ದೇವರ ಪೂಜೆಗೆ ಕುಳಿತಿದ್ದೆ. ಪ್ರಾತಃಸಂಧ್ಯಾವಂದನೆ ಪೂರೈಸಿ, ಪೂಜಾವಿಧಿಯ ಅಂತಿಮ ಹಂತಕ್ಕೆ ಬಂದು, ಇನ್ನೇನು, ದೇವರಿಗೆ ನೈವೇದ್ಯ ಅರ್ಪಿಸಬೇಕು, ಅಷ್ಟರಲ್ಲಿ ನನ್ನ ಹಿಂದೆ ಏನೋ ಸದ್ದಾದಂತನ್ನಿಸಿತು. ಹಿಂತಿರುಗಿ ನೋಡಿದರೆ, ಅದೆಲ್ಲಿಂದ ಒಳಗೆ ಬಂತೋ, ಒಂದು ಕೋತಿಮರಿ ನನ್ನ ಹಿಂದೆ ನಿಂತು ಡ್ಯಾನ್ಸ್ ಮಾಡ್ತಿದೆ! ಮರುಕ್ಷಣವೇ ಆ ಕೋತಿಮರಿ ಮುಂದಕ್ಕೆ ಜಿಗಿದು, ನಾನು ನೈವೇದ್ಯಕ್ಕೆಂದು ಇಟ್ಟಿದ್ದ ಜೋಡಿ ಬಾಳೆಹಣ್ಣನ್ನು ಎತ್ತಿಕೊಂಡು ಪರಾರಿಯಾಯಿತು! ರಾಮನ ನೈವೇದ್ಯಕ್ಕೆಂದು ಇಟ್ಟಿದ್ದ ಹಣ್ಣನ್ನು ರಾಮಬಂಟ ಸ್ವೀಕರಿಸಿದ, ಹೋಗಲಿ ಬಿಡು, ಅಂದುಕೊಂಡು ರಾಮನಿಗೆ ಸಕ್ಕರೆ ತಿನ್ನಿಸಿ ಮಂಗಳಾರತಿ ಎತ್ತಿದೆ.

ಇದಾದ ಮರುದಿನ ಬೆಳಿಗ್ಗೆ. ಎಂದಿನಂತೆ ಸಂಧ್ಯಾವಂದನೆ, ಪೂಜೆ. ಮುಗಿಯಿತು. ಹಿಂದಿನ ದಿನದಹಾಗೆ ಮರಿಮಾರುತಿರಾಯ ಬಂದು ನೃತ್ಯಸೇವೆ ಮಾಡಲಿಲ್ಲ, ಸದ್ಯ! ಆದರೆ............! ಅದೇ ರಾಯ ತನ್ನ ಮಾತಾಪಿತೃರೊಂದಿಗೆ ಆಗಮಿಸಿ ನನ್ನ ಮನೆಯ ಹಿತ್ತಿಲಲ್ಲಿ ಪಟ್ಟಾಗಿ ಕೂತುಬಿಟ್ಟಿದ್ದಾನೆ! ಗಿಡಕ್ಕೆ ಪೂಜೆಯ ನೀರು ಚೆಲ್ಲಲು ಹೋದ ನನ್ನನ್ನು ನೋಡಿ "ಗುರ್ರ್" ಅನ್ನುತ್ತಾನೇ! ನನಗೆ ಅರ್ಥವಾಯಿತು. ನೈವೇದ್ಯ ಮಾಡಿದ್ದ ಬಾಳೆಹಣ್ಣನ್ನು ಕೊಟ್ಟೆ. ತಗೊಂಡು ಸಂಸಾರ ಡೀಸೆಂಟಾಗಿ ಜಾಗ ಖಾಲಿಮಾಡಿತು.

ಅದರ ಮರುದಿನ ಅದೇವೇಳೆಗೆ ಹಿತ್ತಲಲ್ಲಿ ಕರೆಕ್ಟಾಗಿ ಒಂಭತ್ತು ಕೋತಿಗಳು ಹಾಜರ್! ನಿನ್ನೆ ಬಂದ ಆ ಮೂರು, ಪ್ಲಸ್, ಬೇರೆಯವು ಆರು! ನನ್ನ ಬಳಿ ಇರುವುದು ಎರಡೇ ಬಾಳೆಹಣ್ಣು. ಏನು ಮಾಡಲಿ? ಆ ಎರಡು ಬಾಳೆಹಣ್ಣನ್ನೇ ಅವುಗಳ ಕಡೆಗೆ ಎಸೆದೆ. ಮರುಕ್ಷಣವೇ ಅವುಗಳ ಮಧ್ಯೆ ಮಹಾಭಾರತ ಯುದ್ಧ!

ಅದರ ಮರುದಿನ ನಾನು ಹುಷಾರಾದೆ. ಕರೆಕ್ಟಾದ ಟೈಮಿಗೆ, ಕರೆಕ್ಟಾಗಿ ಒಂಭತ್ತೇ ಸಂಖ್ಯೆಯಲ್ಲಿ ಬಿಜಯಂಗೈದ ಪವನಸುತ-ಸುತೆಯರಿಗೆ ನಾನು ನನ್ನ ಸತಿಯ ದ್ವಾರಾ ಒಂದು ಬೊಗಸೆ ನೆಲಗಡಲೆ ಕಾಳು ಅರ್ಪಿಸಿದೆ. ತಿಂದು ತೇಗಿ ಖುಷ್ ಆಗಿ ಹೊರಟುಹೋದವು.

ಅದರ ಮರುದಿನವೇ ಅವುಗಳ ಚೇಷ್ಟೆ ನಮ್ಮ ಅನುಭವಕ್ಕೆ ಬಂದದ್ದು. ಸರಿಯಾದ ಸಮಯಕ್ಕೆ ಒಂಭತ್ತೂ ವಾನರಗಳೂ ಹಿತ್ತಲಲ್ಲಿ ಪ್ರತ್ಯಕ್ಷವಾದವು. ಸದರಿ ಮರಿವಾನರ ಇದ್ದಕ್ಕಿದ್ದಂತೆ ನಮ್ಮ ಅಡಿಗೆಮನೆಯೊಳಕ್ಕೆ ನುಗ್ಗಿತು! ಹಿಂದಿನ ದಿನ ಗಮನಿಸಿರಬೇಕು ಶಾಣ್ಯಾ, ನೇರವಾಗಿ ನೆಲಗಡಲೆ ಡಬ್ಬದ ಬಳಿಗೇ ಚಂಗನೆ ನೆಗೆದು ಡಬ್ಬ ಎತ್ತಿಕೊಂಡು ಹೈ ಸ್ಪೀಡಿನಲ್ಲಿ ವಾಪಸ್ ಹಿತ್ತಲಿಗೆ ಓಡಿತು! ಮರುಕ್ಷಣವೇ ಒಂಭತ್ತೂ ಕಪಿಗಳೂ ಡಬ್ಬದ ಸಮೇತ ಮನೆಯ ಟೆರೇಸ್‌ಮೇಲಿದ್ದವು! ಮುಂದಿನ ಹದಿನೈದು ನಿಮಿಷ ಅವುಗಳಿಗೆ ಸಮಾರಾಧನೆ! ಎಲ್ಲವೂ ನೆಲಗಡಲೆಯನ್ನು ಹೊಟ್ಟೆತುಂಬ ತಿಂದು, ಗಂಟಲ ಚೀಲದಲ್ಲಿ ತುಂಬಿಕೊಂಡು, ಇನ್ನೂ ನೆಲಗಡಲೆ ಉಳಿದಿರುವುದನ್ನು ಕಂಡು ಖುಷಿಯಿಂದ ಅದರಲ್ಲಿ ವಿವಿಧ ಆಟಗಳನ್ನು ಆಡತೊಡಗಿದವು! ಎಸೆದಾಟ, ಕ್ಯಾಚ್ ಹಿಡಿಯುವಾಟ, ಗೋಲಿಯಾಟ, ಕಿವಿ ಮೂಗುಗಳಲ್ಲಿ ತುರುಕಿಕೊಳ್ಳುವಾಟ, ಹೀಗೆ ಆ ನೆಲಗಡಲೆ ಕಾಳುಗಳಲ್ಲಿ ಹಲಬಗೆಯ ಆಟಗಳನ್ನಾಡಿ ಕೊನೆಗೆ ಖಾಲಿ ಡಬ್ಬವನ್ನು ಪಕ್ಕದ ಮನೆಯ ಕಾಂಪೌಂಡಿನೊಳಕ್ಕೆ ಎಸೆದವು! ಮುಂದಿನ ಒಂದು ನಿಮಿಷದಲ್ಲಿ, ಒಂದೊಂದಾಗಿ ಟೆರೇಸಿನಿಂದ ಕಾಲುಕಿತ್ತವು. ಅಷ್ಟರಲ್ಲಿ ನನ್ನಾಕೆಯ ಕೈಗೆ ನಾಲ್ಕು ಸಲ ಪೊರಕೆ ಬಂದಿತ್ತು!

ಅದರ ಮಾರನೆಯ ದಿನ ಒಂಭತ್ತೂ ವಾನರಗಳೂ ಅತಿ ಸಭ್ಯರಂತೆ ಮತ್ತೆ ಹಾಜರ್! ಮುನ್ನೆಚ್ಚರಿಕೆ ಕ್ರಮವಾಗಿ ನನ್ನಾಕೆ ಅಡಿಗೆಮನೆ ಬಾಗಿಲನ್ನು ಮುಚ್ಚಿಕೊಂಡು ಒಳಗಿಂದ ಬೋಲ್ಟ್ ಹಾಕಿಕೊಂಡಿದ್ದಳು. ಅವಳ ಆದೇಶದಮೇರೆಗೆ ನಾನೂ ಆ ವಾನರಸಮೂಹಕ್ಕೆ ಬಾಳೆಹಣ್ಣು ಕೊಡಲಿಲ್ಲ. ಒಂದಷ್ಟು ಹೊತ್ತು ಕಾದವು, ಆಮೇಲೊಂದಷ್ಟು ಹೊತ್ತು "ಗುರ್ರ್" ಅಂದವು, ಬಳಿಕ ಮನೆಗೆ ಒಂದು ಪ್ರದಕ್ಷಿಣೆ ಹಾಕಿ ಒಳನುಗ್ಗುವ ದಾರಿ ಏನಾದರೂ ಇದೆಯಾ ಎಂದು ನೋಡಿದವು, ಪ್ರಯೋಜನವಾಗದಿದ್ದಾಗ ಕಾಂಪೌಡ್ ಒಳಗಿನ ಮಾವಿನಮರ ಏರಿ ಕುಳಿತವು. ಅದರಲ್ಲೊಂದು ಕಪಿಯು ಮರದಮೇಲಿಂದ ಪಕ್ಕದಮನೆಯವರ ಕಾರಿನಮೇಲೆ ಜಿಗಿಯಿತು. ಕೂಡಲೇ ಕಾರು "ಭೊಂವ್" ಎಂದು ಒಂದು ಭರ್ಜರಿ ಆವಾಜ್ ಹಾಕಿತು! ಆಟೋಮ್ಯಾಟಿಕ್ ಹಾರ್ನ್ ಅಳವಡಿಸಿದ್ದರ ಪರಿಣಾಮ! ಮಂಗಗಳಿಗೆ ರೋಮಾಂಚನವಾಯಿತು! ಚೊಂಗಪ್ಪ ಹತ್ತಿದವರಂತೆ ಎಲ್ಲಾ ಮಂಗಗಳೂ ಸರದಿಮೇಲೆ ಮರದಿಂದ ಕಾರಿನ ಟಾಪ್‌ಗೆ ಜಿಗಿಯತೊಡಗಿದವು! ಜಿಗಿಯುವುದು, ಕುಣಿಕುಣಿಯುತ್ತ ಮತ್ತೆ ಮರ ಏರುವುದು, ಮತ್ತೆ ಜಿಗಿಯುವುದು, ಮತ್ತೆ ಮರ ....... ಹೀಗೇ ಸಾಗಿತು ಅವುಗಳ ಆಟ! ಒಂದೊಂದು ಜಿಗಿತಕ್ಕೂ ಒಂದೊಂದು "ಭೊಂವ್" ಲೆಕ್ಕದಲ್ಲಿ ಕಾರಿನ ಹಾರ್ನು ಸತತವಾಗಿ "ಭೊಂವ್, ಭೊಂವ್, ಭೊಂವ್, ಭೊಂವ್, ..........."! ಇಡೀ ವಿದ್ಯಾರಣ್ಯಪುರಕ್ಕೆ ಕೇಳಿಸುವಂಥಾ ಸೌಂಡು! "ಹುಷ್" ಅಂತ ನಾನು ಹೆದರಿಸಲು ಯತ್ನಿಸಿದರೆ ಆ ಮಂಗಗಳಿಗೆ ಕೇರೇ ಇಲ್ಲ! ಕಾರಿನ ಮಾಲೀಕರು ಪಾಪ, ಅರವತ್ತೈದು ಅಂಡ್ ಅರವತ್ತರ ಯುವ ದಂಪತಿ, ನಿಧಾನವಾಗಿ ಬಂದು ಕೋಲು ತೋರಿಸಿ ಅವುಗಳನ್ನು ಓಡಿಸುವಷ್ಟರಲ್ಲಿ ಆ ವಾನರವೃಂದ ಬರೋಬ್ಬರಿ ಹತ್ತು ನಿಮಿಷ ಭರ್ಜರಿ ನೃತ್ಯ-ವಾದ್ಯಗೋಷ್ಠಿ ನಡೆಸಿತ್ತು! (ಮುಂದೆ ಒಂದು ತಿಂಗಳು ಪಕ್ಕದಮನೆಯ ಆ ದಂಪತಿ ನಮ್ಮೊಡನೆ "ಠೂ" ಬಿಟ್ಟಿದ್ದರು!)

ಇಷ್ಟೆಲ್ಲ ಆದರೂ ಆ ಕಪಿಸಂಕುಲಕ್ಕೆ ಮಾನ, ಮರ್ಯಾದೆ, ನಾಚಿಕೆ, ಅಂಜಿಕೆ, ಯಾವುದೂ ಇಲ್ಲ ನೋಡಿ, ಮಾರನೇ ದಿನವೂ ಮತ್ತೆ ಹಾಜರ್! ಯಥಾಪ್ರಕಾರ ಹಿತ್ತಲಲ್ಲಿ ಚಿತ್ತೈಸಿ, "ಪ್ರಸಾದ" ಬಯಸಿ ಎಲ್ಲವೂ ಅತ್ಯಂತ ವಿನಯದಿಂದ ಸಾಲಾಗಿ ಕುಳಿತವು! ನಾನೂ ನನ್ನವಳೂ ತಲಾ ಒಂದೊಂದು ದೊಣ್ಣೆ ತೋರಿಸಿದೆವು. ಕೂಡಲೇ ಅವು ಓಡಿದವು. ಎಲ್ಲಿಗೆ? ನಮ್ಮ ಟೆರೇಸಿಗೆ! ಟೆರೇಸಲ್ಲಿ ಏನಾದರೂ ಮಾಡಿಕೊಳ್ಳಲಿ ಅಂತ ನಾವು ಸುಮ್ಮನಾದೆವು. ಮುಂದಿನ ಹತ್ತು ನಿಮಿಷ ಅವು ಟೆರೇಸ್‌ಮೇಲೆ ಓಡುವ, ಜಿಗಿಯುವ, ಇತ್ಯಾದಿ ಸಪ್ಪಳ ನಮಗೆ ಕೇಳಿಸುತ್ತಿತ್ತು. ಆಗ ಇದ್ದಕ್ಕಿದ್ದಂತೆ ನನ್ನಾಕೆಗೆ ನೆನಪಾಗಿ, "ಅಯ್ಯಯ್ಯೋ, ಒಣಹಾಕಿದ ಬಟ್ಟೆ!" ಎಂದು ಕೂಗುತ್ತಾ ಟೆರೇಸಿಗೆ ಓಡಿದಳು! ಹಿಂದೆಯೇ ನಾನೂ ಓಡಿದೆ. ಹೋಗಿ ನೋಡಿದರೆ, ಅಲ್ಲಿ ಏನು ನಡೆದಿದೆ? ಒಣಹಾಕಿದ ಸೀರೆಯಲ್ಲಿ ಎರಡು ಕಪಿಗಳು ಉಯ್ಯಾಲೆ ಆಡುತ್ತಿವೆ! ಇನ್ನೆರಡು ಕಪಿಗಳು ನನ್ನ ಪ್ಯಾಂಟ್‌ನೊಳಗೆ ಸೇರಿಕೊಂಡು ಕಣ್ಣಾಮುಚ್ಚಾಲೆ ಆಡುತ್ತಿವೆ! ಉಳಿದವು, ಉಳಿದ ಬಟ್ಟೆಗಳನ್ನೆಲ್ಲಾ ಹಗ್ಗದಿಂದ ಕೆಳಕ್ಕೆ ಎಳೆದುಹಾಕಿಕೊಂಡು ಮನಸೋಇಚ್ಛೆ ಹರಿಯುತ್ತಿವೆ! ತಿನ್ನಲು ಕೊಡದೇಇದ್ದುದಕ್ಕೆ ನಮಗೆ ಶಾಸ್ತಿ! ಅವುಗಳಿಂದ ಛೇದಗೊಳ್ಳದೆ ಉಳಿದ ಬಟ್ಟೆಯೆಂದರೆ ನನ್ನ ಕರ್ಚೀಫ್ ಒಂದೇ! ಮರುದಿನದಿಂದ ಮನೆಯೊಳಗೇ ಬಟ್ಟೆ ಒಣಹಾಕತೊಡಗಿದೆವು. ಒಣಗದಿದ್ದರೆ ಅಷ್ಟೇಹೋಯ್ತು!

ಮುಂದಿನ ದಿನಗಳಲ್ಲಿ ಸದರಿ ಕಪಿಸೈನ್ಯವು ನಮ್ಮ ಕೇಬಲ್ ವೈರ್ ಮೇಲೆ ಸರ್ಕಸ್ಸು, ಹಿತ್ತಿಲಿನ ನಲ್ಲಿ ತಿರುಗಿಸಿ ನೀರು ಬಿಟ್ಟುಕೊಂಡು ಆಟ, ಸಿಂಟೆಕ್ಸ್ ಟ್ಯಾಂಕಿನ ಮುಚ್ಚಳ ತೆಗೆದು ಎಸೆಯಾಟ, ಮನೆಗೆಲಸದವಳು ಹೊರಗೆ ಬಿಟ್ಟ ಚಪ್ಪಲಿಗಳನ್ನು ಹರಿಯುವ ಆಟ, ಹೀಗೆ ವಿವಿಧ ಆಟಗಳನ್ನಾಡುತ್ತ ನಮ್ಮಮೇಲೆ ಸೇಡು ತೀರಿಸಿಕೊಳ್ಳತೊಡಗಿತು! ಹೀಗೇ ಒಂದಷ್ಟು ದಿನ ಮುಂದುವರಿಯಿತು. ಆಡೀ ಆಡೀ ಸಾಕಾಗಿರಬೇಕು, ಒನ್ ಫೈನ್ ಮಾರ್ನಿಂಗ್ ಇದ್ದಕ್ಕಿದ್ದಂತೆ ಇಡೀ ಸೈನ್ಯ ನಾಪತ್ತೆ! ನಾನೂ ನನ್ನಾಕೆಯೂ ನೆಮ್ಮದಿಯ ನಿಟ್ಟುಸಿರಿಟ್ಟೆವು.

ಪ್ರಿಯ ವಾಚಕರೇ, ಇಷ್ಟೆಲ್ಲ ಆಗಿ ಇಂದಿಗೆ, ಅಂದರೆ ನಾನು ಈ (ನಮ್ಮ ಹಣೆ)ಬರಹ ಬರೆಯುತ್ತಿರುವ ಈ ದಿನಕ್ಕೆ, ಒಂದು ತಿಂಗಳು ಕಳೆದಿದೆ. ಒಂದು ತಿಂಗಳಿನಿಂದ ಯಾವೊಂದು ಮಂಗವೂ ನಮ್ಮ ಮನೆಕಡೆ ಸುಳಿದಿಲ್ಲ.

ಇವತ್ತು ನನ್ನಾಕೆ ಅಡಿಗೆಮನೆಯೊಳಗೆ ಚಕ್ಲಿ ಕಾರ್ಖಾನೆ ಶುರುಮಾಡ್ಕೊಂಡಿದ್ದಾಳೆ. ಮಂಗಗಳ ಕಾಟ ತಪ್ಪಿ ತಿಂಗಳಾದದ್ದನ್ನು ಸೆಲೆಬ್ರೇಟ್ ಮಾಡಲಿಕ್ಕಲ್ಲ, ಅಳಿಯ-ಮಗಳು ಬರ್ತಾ ಇದ್ದಾರೆ, ಅದಕ್ಕೆ.

ಅಗೋ, ಅಳಿಯ-ಮಗಳು ಬಂದೇಬಿಟ್ರು, ಕಾಲಿಂಗ್ ಬೆಲ್ ಸದ್ದಾಯ್ತಲ್ಲ.

ಹೋಗಿ ಬಾಗಿಲು ತೆಗೆದೆ. ಎಲ್ಲಿದ್ದಾರೆ ಅಳಿಯ-ಮಗಳು? ಹೊರಗಡೆ ಯಾರೂ ಇಲ್ಲ! ಹಾಗಾದ್ರೆ ಕಾಲಿಂಗ್ ಬೆಲ್ ಒತ್ತಿದ್ದು ಯಾರು? ಆಚೆ ಈಚೆ ನೋಡಿದೆ. ಯಾರೂ ಕಾಣಿಸಲಿಲ್ಲ. ಒಂದು ಕ್ಷಣ ಅಲ್ಲೇ ನಿಂತು ಯೋಚಿಸಿದೆ. ಊಹ್ಞೂ. ಏನೂ ಗೊತ್ತಾಗಲಿಲ್ಲ. ಇದೊಳ್ಳೆ ಮ್ಯಾಜಿಕ್ ಆಯ್ತಲ್ಲಾ, ಅಂದುಕೊಳ್ಳುತ್ತಾ ಇನ್ನೇನು ವಾಪಸ್ ಬಾಗಿಲು ಮುಚ್ಚಬೇಕು, ಆಗ, ಕಾಲಿಂಗ್ ಬೆಲ್ ಪಕ್ಕದ ಕಿಟಕಿಮೇಲಿನ ಪ್ಯಾರಾಪೆಟ್ ಗೋಡೆಯ ಮೇಲ್ಗಡೆಯಿಂದ, ತಲೆ ಕೆಳಗೆ ಮಾಡಿಕೊಂಡು ಇಣುಕಿತೊಂದು ಕೋತಿಮರಿ! ತಿಂಗಳ ಕೆಳಗೆ ಸೈನ್ಯಸಮೇತ ದಾಳಿಯಿಟ್ಟಿತ್ತಲ್ಲಾ ಅದೇ ಕೋತಿಮರಿ!

ಮಂಗಳವಾರ, ಮೇ 5, 2009

ನೀವು ಕೇಳದಿರಿ - 4 (ಸಿನಿಮಾ ಸ್ಪೆಷಲ್)

* ’ಹೊಡಿಮಗ’ ಈಗ ’ಹ್ಯಾಟ್ರಿಕ್ ಹೊಡಿಮಗ’. ಅದರ ಡೈರೆಕ್ಟರ್?

- ’ಟ್ರಿಕ್ ಡೈರೆಕ್ಟರ್’.

+++

* ಗಣೇಶ ’ಗೋಲ್ಡನ್ ಸ್ಟಾರ್’. ಅಂಬರೀಷ್?

- ’ಓಲ್ಡನ್ ಸ್ಟಾರ್’.

+++

* ಚುನಾವಣೆ ವೇಳೆ ಒಂದಷ್ಟು ದಿನ ಅಂಬಿ ತನ್ನ ಪಕ್ಷದ ವಿರುದ್ಧವೇ (ಅನಧಿಕೃತವಾಗಿ) ಬಂಡೆದ್ದದ್ದು ಯಾಕೆ?

- ತಾನು ’ರೆಬೆಲ್ ಸ್ಟಾರ್’ ಎಂಬುದು ಇದ್ದಕ್ಕಿದ್ದಂತೆ ನೆನಪಾಗಿರಬೇಕು!

+++

* ಪೂಜಾ ಗಾಂಧಿ ಕನ್ನಡ ಕಲೀತಿದ್ದಾರಾ?

- ಕಲೀತಿದ್ದಾರೆ ಕಲೀತಿದ್ದಾರೆ; ಕನ್ನಡದಲ್ಲೇ ನುಲೀತಿದ್ದಾರೆ; ಅದನ್ನು ಕೇಳಿ / ನೋಡಿ ಪಡ್ಡೆ ಹೈಕಳು ನಲೀತಿದ್ದಾರೆ!

+++

* ಪೂಜಾ ಗಾಂಧಿಯ ವೆಬ್‌ಸೈಟ್ ತಗೊಂಡು ನಾನೇನ್ಮಾಡಲಿ?

- Sight seeing ಮಾಡೋ ಮಾರಾಯ! ಕಣ್ಣು ತಂಪಾಗುತ್ತೆ!

+++

* ’ಕಿರಣ್ ಬೇಡಿ’ ಮಾಲಾಶ್ರೀ ಅವರ ನೆಕ್ಸ್ಟ್ ಫಿಲಂ ಹೆಸರೇನು?

- ’ಹೆದರ್‌ಬೇಡಿ’.
(ಈ ಹೆಸರಿನ ಮೇಲ್ಗಡೆ ಸಣ್ಣಕ್ಷರಗಳಲ್ಲಿ, ’ಸೈಜ್ ನೋಡಿ’ ಎಂದು ಬರೆದಿರುತ್ತೆ.)

+++

* ಪರಭಾಷಾ ನಟಿಯೋರ್ವಳಿಗೆ ಕನ್ನಡದಲ್ಲಿ ಮಾತಾಡಲು ನಾಲಗೆ ತಿರುಗೋಲ್ವಂತೆ!

- ಸ್ಟಾರ್‌ಟಂಗ್ ಟ್ರಬಲ್ ಪಾಪ!

--೦--

ಜಾತಿಭೂತ ತೊಲಗಲಿ

ಭಾರತದಲ್ಲಿ ಪ್ರಚಲಿತವಿರುವ ಜಾತಿಪದ್ಧತಿಯ ಬಗ್ಗೆ ನನ್ನ ಮನಸ್ಸಿನಲ್ಲಿ ಬಹುಕಾಲದಿಂದ ಇರುವ ತುಡಿತವನ್ನು ಸಂಕ್ಷಿಪ್ತವಾಗಿ ಇಲ್ಲಿ ನಿವೇದಿಸಿಕೊಳ್ಳುತ್ತಿದ್ದೇನೆ.

’ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತೇ
ಯಾ ಬ್ರಹ್ಮಾದಿಪಿಪೀಲಿಕಾಂತತನುಷು ಪ್ರೋತಾ ಜಗತ್‌ಸಾಕ್ಷಿಣೀ
ನೈವಾಹಂ ನ ಚ ದೃಶ್ಯವಸ್ತ್ವಿತಿ ದೃಢಪ್ರಜ್ಞಾಪಿ ಯಸ್ಯಾಸ್ತಿ ಚೇತ್
ಚಂಡಾಲೋsಸ್ತು ಸ ತು ದ್ವಿಜೋsಸ್ತು ಗುರುರಿತ್ಯೇಷಾ ಮನೀಷಾ ಮಮ’.

’ಎಚ್ಚರ, ಕನಸು, ನಿದ್ರೆ ಈ ಮೂರರಲ್ಲೂ ಏಕಸೂತ್ರವನ್ನು ಯಾವ ಚೇತನವು ಸಾಧಿಸಿದೆಯೋ, ಯಾವ ಚಿತ್‌ಪ್ರಕಾಶವು ಬ್ರಹ್ಮನಿಂದ ಹಿಡಿದು ಇರುವೆಯವರೆಗಿನ ಎಲ್ಲ ಜೀವಸಂಕುಲದಲ್ಲಿಯೂ ಒಂದೇ ರೀತಿಯಲ್ಲಿ ಹಾಸುಹೊಕ್ಕಾಗಿದೆಯೋ, ಆ ಚಿತ್‌ಸ್ವರೂಪವೇ ನಾನು, ನೋಟದ ವಸ್ತು ನಾನಲ್ಲ’, ಎಂಬ ದೃಢವಾದ ಅರಿವು ಯಾರಿಗುಂಟೋ ಆ ವ್ಯಕ್ತಿಯು ಜನ್ಮತಃ ಚಂಡಾಲನಿರಲಿ, ಬ್ರಾಹ್ಮಣನಿರಲಿ, ನನ್ನ ಭಾವನೆಯಲ್ಲಿ ಅವನೇ ನನ್ನ ಗುರು.

’ಮನೀಷಾಪಂಚಕ’ದಲ್ಲಿ ಆದಿಶಂಕರರು ಹೇಳಿರುವ ಮಾತಿದು.

’ಸದಾಕಾಲ ಒಂದು ನಿಯಮಕ್ಕೆ ಬದ್ಧನಾಗಿ ಸಾಗುವ ಮತ್ತು ತನ್ನಂತೆ ಸಕಲ ಜೀವಿಗಳಲ್ಲೂ ಮನದ ಬೆಳಕು ಉಂಟೆಂಬ ಅರಿವನ್ನು ಹೊಂದಿರುವ ಮನುಷ್ಯ, ಅವನು ಯಾವ ಜಾತಿಯವನೇ ಆಗಿರಲಿ, ಗುರುಸಮಾನ’, ಎಂಬ ವೇದಾಂತಸಾರವೇ ಆದಿಶಂಕರರ ಈ ಸ್ತೋತ್ರದಲ್ಲಿದೆ.

’ನಿಯಮ, ಬದ್ಧತೆ, ಏಕರೂಪ (ಒಂದೇ ಗುಣ, ಬಹುರೂಪಿ ಬಣ್ಣವಲ್ಲ, ಊಸರವಳ್ಳಿಯ ಗುಣವಲ್ಲ, ಎರಡು ನಾಲಗೆಯ ಹಾವಿನಂತಲ್ಲ, ಅವಕಾಶವಾದಿ ಬುದ್ಧಿಯಲ್ಲ, ನಮ್ಮ ಪುಢಾರಿಗಳಂತಲ್ಲ) ಹೊಂದಿರುವವನು ಹಾಗೂ ’ತಾನು ದೈವಾಂಶಸಂಭೂತ (ಆದ್ದರಿಂದ ತನಗೆ ದುರ್ಗುಣಗಳು ಸಲ್ಲವು) ಮತ್ತು ಒಂದು ಇರುವೆಯೂ ತನ್ನಂತೆಯೇ ಸಮಾನಜೀವಿ’ ಎಂಬುದನ್ನು ಅರಿತು ಅದರಂತೆ ಮುನ್ನಡೆಯುವವನು ಗುರುಸ್ಥಾನಕ್ಕೆ ಅರ್ಹನೆಂದಾಗ ಜಾತಿಮಾತ್ರದಿಂದ ಯಾರೂ ಯಾವ ಅರ್ಹತೆಗೂ ಹಕ್ಕುದಾರರಾಗುವುದಿಲ್ಲ. ಮೇಲೆ ಹೇಳಿದಂಥ ಸದ್ಗುಣಗಳನ್ನುಳ್ಳವನೇ ಉತ್ತಮ ಜಾತಿಯವನು. ಅವನು ನರೋತ್ತಮ. ಗುಣಹೀನನೇ ಅಧಮ ಜಾತಿಯವನು. ನರಾಧಮ.

ಈ ಮಾತನ್ನೇ ಅನೇಕ ಸಾಧುಸಂತರು, ಕ್ರಾಂತಿಕಾರಿಗಳು, ಸಮಾಜಸುಧಾರಕರು ವಿವಿಧ ಬಗೆಗಳಲ್ಲಿ ಹೇಳಿದ್ದಾರೆ.

’ಕುಲಕುಲಕುಲವೆಂದು ಹೊಡೆದಾಡದಿರಿ..’ ಎಂದು ಕನಕದಾಸರು, ’ಕೊಲ್ಲುವನೇ ಮಾದಿಗ, ಹೊಲಸ ತಿಂಬುವನೇ ಹೊಲೆಯ, ಕುಲವೇನೋ, ಆವಂದಿರ ಕುಲವೇನೋ, ಸಕಲ ಜೀವಾತ್ಮರಿಗೆ ಲೇಸನೇ ಬಯಸುವ....ಶರಣರೇ ಕುಲಜರು’ ಎಂದು ಬಸವಣ್ಣನವರು, ’ಆವ ಕುಲವಾದರೇನು, ಆವನಾದರೇನು, ಆತ್ಮಭಾವವರಿತಮೇಲೆ,....ಹಸಿಕಬ್ಬು ಡೊಂಕಿರಲು ಅದರ ರಸ ಡೊಂಕೇನೋ?’ ಎಂದು ಪುರಂದರದಾಸರು, ’ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ?’ ಎಂದು ಸರ್ವಜ್ಞ, ಇವರೆಲ್ಲ ಹೇಳಿರುವುದೂ ಇದೇ ಮಾತನ್ನೇ ಅಲ್ಲವೆ?

ಇವರೆಲ್ಲರಿಗಿಂತ ಹೆಚ್ಚು ಜ್ಞಾನಿಗಳೇನು ನಾವೆಲ್ಲ? ಅಲ್ಲ ತಾನೆ?

ಆದ್ದರಿಂದ, ನಾವೇ ಮಾಡಿಕೊಂಡಿರುವ ಜನ್ಮಜಾತಿ ಹಿಡಿದುಕೊಂಡು ನಾವು ಯಾರನ್ನೂ ಹೊಗಳುವುದೂ ಬೇಡ, ತೆಗಳುವುದೂ ಬೇಡ. ಸದ್ಗುಣದ ಜಾತಿಯವರು ನಾವಾಗೋಣ. ಆಗ ಜಾತಿ ವೈಮನಸ್ಯವೆಂಬುದು ನಮ್ಮಿಂದ ದೂರಾಗುತ್ತದೆ. ನಮ್ಮ ಬಾಳೇ ಹಸನಾಗುತ್ತದೆ, ಸುಖಮಯವಾಗುತ್ತದೆ.

ಸೋಮವಾರ, ಮೇ 4, 2009

ನನಗೆ ಬೇಕಿಲ್ಲ (ಕವನ)

ಅರ್ಥ ಹೊಳೆಯದ ಕವಿತೆ ನನಗೆ ಬೇಕಿಲ್ಲ
ಅರ್ಥಗರ್ಭಿತವಿರಲಿ ಎಷ್ಟೇ ಅದು
ಅರ್ಥೈಸುವೊತ್ತಡಕೆ ಮನ ಮುದುಡಲಲ್ಲ
ಕವಿತೆ ಓದುವುದು ನಾ ಮನ ಅರಳಲೆಂದು.

ಪ್ರೀತಿ ತೋರದ ಕೊಡುಗೆ ನನಗೆ ಬೇಕಿಲ್ಲ
ಧಾರಾಳವಾಗಿರಲಿ ಎಷ್ಟೇ ಅದು
ಪಡೆದು ಅಡಿಯಾಗುವುದು ನನಗಿಷ್ಟವಿಲ್ಲ
ಸರಳ ಪ್ರೇಮದ ಕೊಡುಗೆ ನಾನು ಬಯಸುವುದು.

ಪದವಿಗಂಟಿದ ಘನತೆ ನನಗೆ ಬೇಕಿಲ್ಲ
ಫಲಕಾರಿಯಾಗಿರಲಿ ಎಷ್ಟೇ ಅದು
ಪದವಿ ವ್ಯಕ್ತಿತ್ವವನು ಮರೆಮಾಡಲಲ್ಲ
ಬದಲಾಗಿ ಅದರಿಂದ ತಾ ಮೆರೆಯಲಿಹುದು.

ಶ್ರಮವು ಇಲ್ಲದ ಗಳಿಕೆ ನನಗೆ ಬೇಕಿಲ್ಲ
ಭರ್ಜರಿಯೆ ಆಗಿರಲಿ ಎಷ್ಟೇ ಅದು
ವಿಶ್ರಮಿಸಿ ಜಡವಾಗಿ ಕೊಳೆಯಲೆಂದಲ್ಲ
ದುಡಿದುಂಡು ತೃಪ್ತಿಹೊಂದಲು ನಾನಿರುವುದು.

ನಡತೆ ನೀಡದ ವಿದ್ಯೆ ನನಗೆ ಬೇಕಿಲ್ಲ
ಉನ್ನತವೆ ಆಗಿರಲಿ ಎಷ್ಟೇ ಅದು
ನಡತೆ ತಿಳಿಸದಮೇಲೆ ಅದಕೆ ಬೆಲೆಯಿಲ್ಲ
ಬೆಲೆಯುಳ್ಳ ವಿದ್ಯೆಯದು ನನಗೆ ಬೇಕಿಹುದು.

ಪರರಿಗಾಗದ ಬಾಳು ನನಗೆ ಬೇಕಿಲ್ಲ
ನನಗಾಗಿ ’ಸುಖ’ ಕೊಡಲಿ ಎಷ್ಟೇ ಅದು
ಪರರಿಗಾಗದ ಬಾಳು ಬಾಳುವೆಯೆ ಅಲ್ಲ
ಬಾಳಲ್ಲದಲ್ಲಿ ’ಸುಖ’ ಸುಖವು ಹೇಗಹುದು?

ಮುಪ್ಪಿಗಂಟಿಯೆ ಸಾವು ನನಗೆ ಬೇಕಿಲ್ಲ
ಆರಾಮವಾಗಿರಲಿ ಎಷ್ಟೇ ಅದು
ಬದುಕುವುದು ತಡವಾಗಿ ಸಾಯಲೆಂದಲ್ಲ
ಕೃತಕೃತ್ಯನಾಗಿ ದಿನಕೆದುರಾಗಲೆಂದು.

ಭಾನುವಾರ, ಮೇ 3, 2009

ನೀವು ಕೇಳದಿರಿ - 3

* ಕರ್ನಾಟಕದಲ್ಲಿ ಮತದಾನ ಮುಗಿದರೂ ಪಕ್ಷಗಳ ಪರಸ್ಪರ ಕೆಸರೆರಚಾಟ ನಿಂತಿಲ್ಲವಲ್ಲ ಗುರುವೇ!

- ಎಲ್ಲರ ಬಳಿಯೂ ಆ ಪಾಟಿ ಕೆಸರಿದೆಯಲ್ಲಾ, ಅದನ್ನು ಹೇಳು ಶಿಷ್ಯಾ!

+++

* ಪಕ್ಷಗಳ ಕೆಸರೆರಚಾಟದ ಬಗ್ಗೆ ರವಷ್ಟು ಕಮೆಂಟ್ ಮಾಡಿ ಗುರುವೇ.

- ಓಕೆ ಶಿಷ್ಯಾ, ಕೇಳು.
’ಕೈ ಕೆಸರಾದರೆ ಬಾಯ್ ಮೊಸರು’, ಎಂದು ನಂಬಿ ಕಾಂಗ್ರೆಸ್ ’ಕೈ’ ಕೆಸರು ಮಾಡಿಕೊಳ್ಳುತ್ತಿದೆ.
ಜೆಡಿಎಸ್ ಪಿತಮಹಾಶಯ ಸ್ವಯಂ ಕೆಸರಿನ (ಮಣ್ಣಿನ) ಮಗ.
ಇನ್ನು ಬಿಜೆಪಿ; ಅದು ’ಕೆಸರಿನ ಕಮಲ’. ಕೆಸರಿದ್ದರೇನೇ ಕೇಸರಿಗೆ ಖುಷಿ (ಸದಾ ಆನಂದ).
ಹೀಗಿರುವಾಗ ಸದರಿ ಕೆಸರೆರಚಾಟದಲ್ಲಿ ವಿಶೇಷವೇನಿಲ್ಲ.
ನಮ್ಮೀ ಪಕ್ಷಗಳಿಗೆ ಗೊತ್ತಿರುವುದು ಎರಡೇ. ಕೆಸರಾಟ ಮತ್ತು ಕೊಸರಾಟ. ಏನಂತೀ ಶಿಷ್ಯಾ?

+++

* ಸ್ವಿಸ್ ಬ್ಯಾಂಕ್ ಹಣ ಭಾರತಕ್ಕೆ ಬರುತ್ತೆಯೆ?

- ಬರುತ್ತೆ, ಬರುತ್ತೆ; ಮತದಾನದ ಅಂತಿಮ ದಿನವಾದ ಮೇ ೧೩ರ ತನಕ ಬರ್ತಾನೇ ಇರುತ್ತೆ.

+++

* ಮುಷ್ಕರನಿರತ ಕಿರಿಯ ವೈದ್ಯರಿಗೆ ಏನಾಗಬೇಕು?

- ಕಿರಿ ವೈದ್ಯರು ಕಿರಿಕಿರಿ ವೈದ್ಯರಾಗದಿದ್ದರೆ ಸಾಕು.

+++

* ಕಸಬ್ ಏನೇನೋ ಡಿಮಾಂಡ್ ಮಾಡ್ತಿದ್ದಾನೆ!

- ಬೇರೆ ಕಸಬಿಲ್ಲ, ಇನ್ನೇನ್ಮಾಡ್ತಾನೆ?

+++

* ಪ್ರಪಂಚದಲ್ಲೇ ಅತೀ ಸುಂದರರು ಯಾರು?

- ಅಧಿಕಾರದ ಅಥವಾ ಜನಪ್ರಿಯತೆಯ ನಂಟುಳ್ಳವರು.
ಉದಾ: ಮಿಷೆಲ್ ಒಬಾಮಾ, ಫ್ರೀಡಾ ಪಿಂಟೊ, ದೇವ್ ಪಟೇಲ್....

+++

* ವಿಶ್ವಶಾಂತಿಗೆ ಯಾವಯಾವ ಹೋಮ ಮಾಡುತ್ತಾರೆ?

- ಸದ್ಯಕ್ಕೆ ಹಂದಿಗಳ ಮಾರಣಹೋಮ ಮಾಡುತ್ತಿದ್ದಾರೆ.

--೦--

ಬೆರಳ್‌ನ ತಿರುಳ್

ಲೋಕಸಭಾ ಚುನಾವಣೆಯ ಮತದಾನದ ಗುರುತಿನ ಶಾಯಿಯನ್ನು ಕೆಲ ಗಣ್ಯರು ಬೇರೆ ಬೆರಳುಗಳಿಗೆ ಹಚ್ಚಿಸಿಕೊಂಡದ್ದಕ್ಕೆ ಕಾರಣಗಳನ್ನು ಈ ಕೆಳಗೆ ಬಯಲುಗೊಳಿಸಲಾಗಿದೆ.

ಚಿತ್ರ ಕೃಪೆ: Deccan Herald

ಬಲಪಂಥೀಯ ಯಡಿಯೂರಪ್ಪನವರು ಪಕ್ಷದ ಬಲವರ್ಧನೆಗಾಗಿ ಬಲಮುರಿ ಗಣಪತಿ ದೇವಸ್ಥಾನದ ಅರ್ಚಕರ ಸಲಹೆಯಂತೆ ಹಾಗೂ ತಮ್ಮ ಬಲಗೈ ಬಂಟ ಮುಜರಾ(ಯಿ) ಸಚಿವ ಕೃಷ್ಣಯ್ಯ ಶೆಟ್ಟರ ಸೂಚನೆಯಂತೆ ಬಲಗೈ ಬೆರಳಿಗೆ ಶಾಯಿ ಹಚ್ಚಿಸಿಕೊಂಡಿದ್ದಾರೆ. ತಮ್ಮ ಹೆಸರನ್ನು ಹಲವರು ’ಎಡ’ಯೂರಪ್ಪ ಎಂದು ಉಚ್ಚರಿಸುವುದರಿಂದ ಅದನ್ನು ’ಬಲ’ಯೂರಪ್ಪ ಎಂದು ಬದಲಿಸಿಕೊಳ್ಳುವ ಆಲೋಚನೆಯೂ ಮಾನ್ಯ ಮುಖ್ಯಮಂತ್ರಿಗಳಿಗಿದೆಯಂತೆ. ಅವರ ಸುಪುತ್ರ ರಾಘವೇಂದ್ರ ಮಾತ್ರ ಮಾಡರ್ನ್ ಗೈ ಆಗಿರುವುದರಿಂದ ಎಡಗೈ ಬೆರಳಿಗೇ ಶಾಯಿ ಹಚ್ಚಿಸಿಕೊಂಡಿದ್ದಾನೆ.

ಚಿತ್ರ ಕೃಪೆ: Reuters

ಚಿತ್ರ ಕೃಪೆ: AP

ಅಮಿತಾಭ್ ಬಚ್ಚನ್‌ನ ಪೂರಾ ಕುಟುಂಬವೇ ತೋರು ಬೆರಳಿನ ಬದಲು ಮಧ್ಯಬೆರಳಿಗೆ ಶಾಯಿ ಹಚ್ಚಿಸಿಕೊಂಡಿದೆ. ಏಕೆಂದರೆ, ಆ ಕುಟುಂಬವು ಸದಾ ’ಸೆಂಟರ್’ ಆಫ್ ಅಟ್ರ್ಯಾಕ್ಷನ್ ಆಗಿರಬಯಸುತ್ತದೆ.
’ನಾನೇನು ಕಮ್ಮಿ? ನಾನೂ ಅಷ್ಟೇಯ’, ಎಂದು ಅಮೀರ್ ಖಾನ್ ಕೂಡ ’ಸೆಂಟರ್’ ಫಿಂಗರಿಗೆ ಶಾಯಿ ಹಚ್ಚಿಸಿಕೊಂಡಿದ್ದಾನೆ.
(ಬಚ್ಚನ್ ಕುಟುಂಬವು ಕ್ಯಾಮೆರಾಗಳಿಗೆ ಮಧ್ಯಬೆರಳನ್ನು ಚಾಚಿ ತೋರಿಸುತ್ತಿರುವ ಚಿತ್ರವನ್ನು ಪತ್ರಿಕೆಗಳಲ್ಲಿ ಕಂಡು ಅಮೆರಿಕದ ಕೆಲ ಎನ್ನಾರೈ ಸಂಘಟನೆಗಳು ’ಛೀಛೀ’ ಎಂದು ಅಸಹ್ಯಪಟ್ಟುಕೊಂಡಿವೆಯೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.)


ಚಿತ್ರ ಕೃಪೆ: AFP

ಈ ನಡುವೆ, ಬಲಪಂಥೀಯ ಅಡ್ವಾಣಿ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾ ಸಾರಾಭಾಯ್ ಕೂಡ ಬಲಗೈ ಬೆರಳಿಗೆ ಶಾಯಿ ಹಚ್ಚಿಸಿಕೊಂಡಿರುವುದು ಕಾಂಗ್ರೆಸ್ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಮಲ್ಲಿಕಾ ಅವರು ’ಆಪರೇಷನ್ ಕಮಲ’ಕ್ಕೆ ಬಲಿಯಾಗಲಿದ್ದಾರೆಯೇ ಎಂಬ ಅನುಮಾನ ಕಾಂಗ್ರೆಸ್ ವಲಯದಲ್ಲಿ ಹುಟ್ಟಿಕೊಂಡಿದೆ. ಆದರೆ, ಮಲ್ಲಿಕಾ ಅವರ ಪುತ್ರಿ ಅನಾಹಿತಾ, ’ಹಾಗೇನಿಲ್ಲ, ನಮ್ಮಮ್ಮ ಕೂಚಿಪುಡಿ-ಭರತನಾಟ್ಯಗಳಲ್ಲೇ ಜೀವನ ಕಳೆದದ್ದರಿಂದ ಅವರಿಗೆ ಯಾವ ಬೆರಳಿಗೆ ಶಾಯಿ ಹಚ್ಚಿಸಿಕೊಳ್ಳಬೇಕು ಎಂಬುದು ಗೊತ್ತಿಲ್ಲ, ಹಾಗಾಗಿ ಪರಪಾಟಾಯಿತು, ಅಷ್ಟೆ’, ಎಂದು ಪತ್ರಿಕಾ ಹೇಳಿಕೆ ನೀಡುವ ಮೂಲಕ ವಿಷಯವನ್ನು ತಿಳಿಗೊಳಿಸಲೆತ್ನಿಸಿದ್ದಾರೆ.

ಚಿತ್ರ ಕೃಪೆ: AP

ಎಲ್ಲರಿಗಿಂತ ಬುದ್ಧಿವಂತರೆಂದರೆ ನರೇಂದ್ರ ಮೋದಿ. ಮಾಧ್ಯಮಗಳ ಕ್ಯಾಮೆರಾಗಳಿಗೆ ಶಾಯಿಯ ಬೆರಳನ್ನು ತೋರಿಸುವ ನೆಪದಲ್ಲಿ ಮೋದಿಯು ಪಕ್ಕದ ಬೆರಳನ್ನೂ ಜೊತೆಗೆ ಚಾಚಿ ವಿಜಯದ ಸಂಕೇತವನ್ನೂ (ಹಿಂದುಮುಂದಾಗಿ) ಬೀರಿಬಿಟ್ಟಿದ್ದಾರೆ! ಫಲಿತಾಂಶಕ್ಕೆ ಮುನ್ನವೇ ಜನರನ್ನು ಈ ರೀತಿ ಮೋಡಿ ಮಾಡಲೆತ್ನಿಸುವ ಮೋದಿಯ ಮಿದುಳೆಂದರೆ ಸಾಮಾನ್ಯವೆ?!

ಶನಿವಾರ, ಮೇ 2, 2009

ನೀವು ಕೇಳದಿರಿ - 2

* ಕೇಳಿ-ಕೇಳಿದಿರಿ-ಕೇಳದಿರಿ ಇವುಗಳ ವ್ಯತ್ಯಾಸವೇನು?
- ಮೊದಲನೆಯದು ಬರೀ ’ಕೇಳಿ’. (ವಿವರಣೆ ಅನವಶ್ಯ) ( ’ಹಾಯ್’!).
ಎರಡನೆಯದು ’ಕೇಳಿ ದಿರಿ’ಸು (ಕ್ರೀಡೆಯ ದಿರಸು) (’ಸುಧಾ’).
ಮೂರನೆಯದು ’ಕೇಳದಿರಿ’ಸು (ಕೇಳದೇ ಇಡು!) (ಪಾಯಿಂಟ್ ಇಡು, ಬತ್ತಿ ಇಡು ಇತ್ಯಾದಿ).

+++

* ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಸಲ ಉಡುಪಿ ಜಿಲ್ಲೆಯೇ ಯಾಕೆ ಫಸ್ಟ್ ಬರುತ್ತದೆ?
- ಶ್ರೀಕೃಷ್ಣನ ಅನುಗ್ರಹ ಅಂತಾರೆ ಪೇಜಾವರ ಶ್ರೀಗಳು.

+++

* ಇದೇನಿದು, ಕರ್ನಾಟಕದಲ್ಲಿ ಕೇರಳ-ಆಂಧ್ರ ಪೋಲೀಸರ ಗೂಂಡಾಗಿರಿ!
- ಯಾಕೆ, ಕರ್ನಾಟಕದಲ್ಲಿ ಕರ್ನಾಟಕದ ಪೋಲೀಸರು ಮಾತ್ರ ಗೂಂಡಾಗಿರಿ ಮಾಡ್ಬೇಕು ಅಂತ ರೂಲ್ಸಿದೆಯೇನು? ಇಷ್ಟಕ್ಕೂ, ಗೂಂಡಾಗಿರಿ ಮಾಡದೆ ಒಂದು ದಿನವಾದ್ರೂ ಹೇಗೆ ಇರಬಲ್ಲರು ಪೋಲೀಸರು, ಪಾಪ!

+++

* ಗುಜರಾತ್‌ನಲ್ಲೇ ಗೋಧ್ರಾ ವಿಚಾರಣೆ....
- ಅಯೋಧ್ಯೆಯಲ್ಲೇ ರಾಮಮಂದಿರ.

+++

* ಅಂಬಾನಿ ಹೆಲಿಕಾಪ್ಟರ್ ಹಗ’ರಣ’ ಏನಿದು ಕಥೆ?!
- ’ಅಂಬಾ, ನೀ ಹೇಳಿದೆ ಅಂತ ನಾವಿಬ್ಬರೂ ಮತ್ತೆ ಒಂದಾಗಿದ್ದೇವೆಯೇ ಹೊರತು ನಮ್ಮ ವೈರ ಇನ್ನೂ ಅಳಿದಿಲ್ಲ’, ಅನ್ನುತ್ತಿದ್ದಾರಂತೆ ಅಂಬಾನಿದ್ವಯರು ತಮ್ಮ ಅಂಬೆ ಕೋಕಿಲಾಬೆನ್ ಬೆನ್ನಿಗೆ!

+++

* ಈ ಸಲದ ಚುನಾವಣಾ ಫಲಿತಾಂಶವನ್ನು ಯಾರೂ ಊಹಿಸಲು ಸಾಧ್ಯವಿಲ್ಲ ಅಂದಿದ್ದಾರೆ ಪ್ರಿಯಾಂಕಾ ಗಾಂಧಿ!
- ಭಗವದ್ಗೀತೆ ಓದಿದ್ದು ಜಾಸ್ತಿಯಾಗಿರಬೇಕು.

+++

* ಹಂದಿಜ್ವರ ಹತೋಟಿಗೆ ಭಾರತ ಸರ್ಕಾರ ಏನು ಮಾಡುತ್ತಿದೆ?
- ಪತ್ರಿಕೆಗಳಲ್ಲಿ ಜಾಹಿರಾತು ನೀಡುತ್ತಿದೆ.

+++

* ಐಪಿಎಲ್ ಫುಲ್ ಫಾರ್ಮ್‌ ತಿಳಿಸಿ ಗುರುವರ್ಯಾ.
- ಐಪಿಎಲ್ ಫುಲ್ ಫಾರ್ಮ್‌‌ನಲ್ಲೇ ಇದೆಯಲ್ಲಾ ಶಿಷ್ಯೋತ್ತಮಾ, ಚೀರ್ ಗರ್ಲ್ಸ್ ಫೋಟೋಗಳನ್ನು ನೋಡಿದರೆ ಗೊತ್ತಾಗೋಲ್ವೆ?

--0--

ಶುಕ್ರವಾರ, ಮೇ 1, 2009

ನೀವು ಕೇಳದಿರಿ

’ಸುಧಾ’ದಲ್ಲಿ ’ನೀವು ಕೇಳಿದಿರಿ?’
’ಗುಳಿಗೆ’ಯಲ್ಲಿ ’ನೀವು ಕೇಳದಿರಿ’.
ನಾವೇ ಉತ್ತರಿಸುತ್ತೇವೆ ಆಗಾಗ(!)
ಆನಂದರಾಮನ ಪ್ರಶ್ನೆಗೆ ಅವನ
ಅಂತರಂಗದ ಮಿತ್ರ ಗುಳಿಗೆಪ್ಪನ
ಉತ್ತರದ ಯೋಗ!
--೦--

* ’ಗುಳಿಗೆ’ ಏನನ್ನು ಗುಣಪಡಿಸುತ್ತದೆ?

- ಹೇನನ್ನು.
ನುಂಗಿ ತಲೆ ಕೆರೆದುಕೊಂಡೂ ಕೆರೆದುಕೊಂಡೂ ಹೇನೆಲ್ಲ ಮಾಯ!

+++

* ಕರ್ನಾಟಕದಲ್ಲಿ ಎರಡನೇ ಹಂತದ ಮತದಾನದ ಪ್ರಮಾಣದಲ್ಲಿ ಸುಧಾರಣೆ ಆಗಿದೆ!

- ಕೆಟ್ಟಮೇಲೆ ಬುದ್ಧಿ ಬಂತು!

+++

* ಮತದಾನದ ಗುರುತಿನ ಶಾಯಿಯನ್ನು ಯಡಿಯೂರಪ್ಪ ಬಲಗೈ ಬೆರಳಿಗೆ ಹಚ್ಚಿಸಿಕೊಂಡದ್ದು ಯಾಕೆ?

- ತಾನು ಬಲಪಂಥೀಯ ಎಂದು ಕ್ಯಾಮೆರಾಗಳೆದುರು ಸಾರಿ ತೋರಿಸಲಿಕ್ಕೆ.

+++

* ಕರ್ನಾಟಕದಲ್ಲಿ ಈ ಚುನಾವಣೆಯಲ್ಲಿ ಯಾರ್‍ಯಾರಿಗೆ ಎಷ್ಟೆಷ್ಟು ಸೀಟು ಬರಬಹುದು?

- ಎಲ್ಲರಿಗೂ ಒಟ್ಟು ಸೇರಿ ಇಪ್ಪತ್ತೆಂಟು.

+++

* ರೇಜಸ್ವಿನಿಮೇಲೆ ಶೂ ಎಸೆದರೆ?

- ’ಶೂ’ರ್ಪನಖಿ ಆಗುತ್ತಾರೆ.

+++

* ರಾಹುಲ್ ಗಾಂಧಿ ಮುಂದಿನ ಪ್ರಧಾನಿಯೆ?

- ಆಗುವುದಾದರೆ ಆತ ಮುಂದಿನ ಪ್ರಧಾನಿಯೇ ಆಗುತ್ತಾನೆ. ಮನಮೋಹನ್ ಸಿಂಗರಂತೆ ಮೇಡಂ ಹಿಂದಿನ ಪ್ರಧಾನಿ ಆಗುಳಿಯುವುದಿಲ್ಲ.

+++

* ಒಟ್ಟಾವಿಯೋ ಕ್ವಟ್ರೋಚಿಯನ್ನು ಸಿಬಿಐ ’ಕೈ’ಬಿಟ್ಟಂತೇನಾ?

- ದೇಶದ ಪ್ರಜೆಗಳಿಗೆ ಇವರೆಲ್ಲ ಸೇರಿ ’ಕೈ’ ಕ್ವಟ್ರೋ ಛಿ!
ಪ್ರಕರಣ ಒಟ್ಟಾವಿಯೋ!

+++

* ಚೀರ್ ಗರ್ಲ್‌ಗೆ ಕನ್ನಡದಲ್ಲಿ ಏನಂತಾರೆ?

- ಚೀರ್‌ತಾರೆ.

+++

* ಭಾರತಕ್ಕೆ ಹಂದಿ ಜ್ವರ ಕಾಡದಿರಲು ಏನು ಕ್ರಮ ಕೈಕೊಳ್ಳಬೇಕು?

- ವರಾಹವು ಶ್ರೀಮನ್ನಾರಾಯಣನ ಅವತಾರವಾದ್ದರಿಂದ ವರಾಹಪೂಜೆ, ವರಾಹಹೋಮ, ವರಹದಾನ ಮೊದಲಾದ ಆಚರಣೆಗಳನ್ನು ಕೈಕೊಳ್ಳಬೇಕೆಂದು ದೈವಅಜ್ಞ ರಾಮಯಾಜಿ ಹೇಳುತ್ತಾರೆ.

--೦--