ಬುಧವಾರ, ಮೇ 13, 2009

ಆನಂದರಾಮನ್ ಸತ್ತ ಸುದ್ದಿ

’ರಾಮನ್ ಸತ್ತ ಸುದ್ದಿ’. ಇದು ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ಅತ್ಯಂತ ಪ್ರಸಿದ್ಧ ಕವನಗಳಲ್ಲೊಂದು. ತಾವು ಬರೆದ ಕವನಗಳ ಪೈಕಿ ತಮಗೆ ಎಲ್ಲಕ್ಕಿಂತ ಹೆಚ್ಚು ಇಷ್ಟವಾದ ಕವನ ಇದೆಂದು ಸ್ವಯಂ ನಿಸಾರರೇ ಹೇಳಿದ್ದಾರೆ.

ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಸಿ.ವಿ.ರಾಮನ್ ನಿಧನವಾರ್ತೆಯ ಹಿನ್ನೆಲೆಯಲ್ಲಿ ಈ ಕವನವು ಜೀವನದರ್ಥದ ಗಹನ-ಗಂಭೀರ ಮಂಥನ ನಡೆಸುತ್ತದೆ. ಆ ಮಂಥನದ ಬಗೆ ಅನನ್ಯ.

ದಶಕಗಳಿಂದ ನನ್ನನ್ನು ಕಾಡುತ್ತಿರುವ ಕವನ ಇದು. ಈ ಕವನದಲ್ಲಿ ನಾನು ಕಂಡ ಕಾಣ್ಕೆ ಜೀವನಪಥದಲ್ಲಿ ನನಗದೊಂದು ಜ್ಞಾನೋದಯ. ಕವನದ ಪೂರ್ಣಪಾಠ ಇಂತಿದೆ:

ರಾಮನ್ ಸತ್ತ ಸುದ್ದಿ
------------------
(ರಚನೆ: ಕೆ.ಎಸ್.ನಿಸಾರ್ ಅಹಮದ್)

ರಾಮನ್ ಸತ್ತ ಸುದ್ದಿ ಓದಿದ ಬೆಳಿಗ್ಗೆ ಶಿವಮೊಗ್ಗೆಗೆ
ದರಿದ್ರ ಥಂಡಿ; ಅಸ್ತಿತ್ವದ ಅಸ್ಪಷ್ಟ ಜಿಜ್ಞಾಸೆ, ಗುರುತಿಸಲಾಗದ
ಕಸಿವಿಸಿ, ಮುಜುಗರ ತಾಳದೆ ವಾಕಿಂಗ್ ಹೊರಟೆ; ಬೀದಿ-
ಗದೇ ಮಾಮೂಲು ಭಂಗಿ; ಯಾರೂ ದುಃಖಿಸುತ್ತಿಲ್ಲವೆನ್ನಿಸಿ
ದುಃಖವಾಯಿತು. ಮೈಲಿಗೆ
ಪರಿಚಿತ ಸಿಕ್ಕಿದ್ದು ನವುಲೆ ಗ್ರಾಮದ ಹನುಮ;
ಯಾರದೋ ಗದ್ದೆಯಲ್ಲಿ ಗೇಯುವ, ಮೋಟು ಬೀಡಿಯ
ಕಿವಿಗೆ ಸಿಕ್ಕಿಸಿಕೊಳ್ಳುವ, ತೊಡೆಯ ಪರಪರ ಕೆರೆದುಕೊಳ್ಳುವ,
ಹಳ್ಳಿಯೇ ಹನುಮಿಸಿದಂತೆ ನನಗೆ ಭಾಸವಾಗುವ ವಿಚಿತ್ರ-
ಅಭ್ಯಾಸರೂಪಿತ ನಿರ್ದಿಷ್ಟ ಅಳತೆಯ ನಿರ್ವಿವಿಧ ಕೂಗಿಂದ
ಹಕ್ಕಿಗಳ ಅಟ್ಟುತಿದ್ದ; ಪಾತಿ ಸರಿಗೊಳಿಸುತಿದ್ದ; ಅಪ್ರಚಲಿತ
ಹಳ್ಳಿಪದದ ಅಶಾಸ್ತ್ರೀಯ ಮಟ್ಟನ್ನು ಕುರುಕುತಿದ್ದ.

ಕಂಡೊಡನೆ, ’ಹ್ಯಾಂಗಿದೀರಿ’ ಅಂದ;
ಈಚೀಚೆಗೆ ಅಪರೂಪವಲ್ಲ ಅಂದ, ಯಾಕೋ ಬಡವಾಗಿದ್ದೀರಿ
ಅಂದ, ಮಳೆ ಬೇಕಾಗಿಲ್ಲ ಅಂದ, ಫಸಲನ್ನು ಅಂದಾಜಿಸಿದ,
ನೆರೆಯವರೊಡನೆ ದಿನವಹಿ ಕಾದಾಟ ಸಾಕಾಗಿದೆ ಮಾರಾಯರೇ
ಅಂದ-ಕೊರೆಯುತ್ತಲೇ ಇದ್ದ-ಹೂಂಗುಟ್ಟಿದೆ-
ಅವನ ಮಾತಿಗೆ ಮಂಜಿನೊಳಗಿನ ಸೂರ್‍ಯ ನನ್ನ ಪ್ರಜ್ಞೆ.
’ರಾಮನ್ ಸತ್ತರೋ ಹನುಮ’ ಅನ್ನಬೇಕು, ಆಗ ತಡೆದು
ಸುಮ್ಮನಾದೆ. ರಾಮನ್ ಅರ್ಥೈಸಿಕೊಳ್ಳಬಹುದೆ ಇವನ
ಅಶಿಕ್ಷಿತ ಅರಿವಿಗೆ?

ಆ ಕಡೆ ರಾಮನ್, ಈ ಕಡೆ ಹನುಮ;
ದಿನವಿಡೀ ಮೈ ಕೆಸರಿಸಿಕೊಂಡು, ನನ್ನಂಥವ ನೆನೆಯಲೂ
ನಿರಾಕರಿಸುವ ತಂಗಳುಂಡು, ರಾತ್ರಿ ಕಳ್ಳಭಟ್ಟಿಯ ಹೊಡೆದು-
ನಾಡಿದ್ದು ನಾಳೆಯ, ನಾಳೆ ಇವೊತ್ತಿನ, ಇಂದು ನೆನ್ನೆಯ
ಪುನರಾವರ್ತನೆಯ ಏಕತಾನತೆಯಲ್ಲಿ-ಲೋಕ ಮರೆಯುವ
ಹನುಮನಿಗೆ ರಾಮನ್ ಹೋದರೆಷ್ಟೋ ರಸೆಲ್ ಹೋದರೂ ಅಷ್ಟೆ.
ಪತ್ರಿಕೆಯೋದುವುದಿಲ್ಲ; ನಾನು ಕವಿಯೆಂಬುದು ಗೊತ್ತಿಲ್ಲ:
ಹೊಟ್ಟೆಬಟ್ಟೆಯ ಅಗತ್ಯ ಮೀರಿದ ನನ್ನ ಹಸಿವು, ಅಸ್ವಸ್ಥತೆ
ಅರಿತಿಲ್ಲ; ಲೋಕದ ಪ್ರತಿನಿತ್ಯದ ಆಗು-ಹೋಗುಗಳಿಗೆ ಪ್ರತಿಕ್ರಿಯಿಸುವ
ಸೂಕ್ಷ್ಮತೆ ಕಂಡಿಲ್ಲ; ಅನೇಕ ಮಟ್ಟದಲ್ಲಿ ಬಾಳುವ ಪ್ರಶ್ನೆಯೇ
ಉದ್ಭವಿಸಿಲ್ಲ-ಆದರೂ ತೃಪ್ತ...
ಗದ್ದೆ, ಧಣಿ, ಹ್ಯಾಪ ಮೊಲೆಯ ಹೆಂಡಿರು, ಸಿಂಬಳಸುರುಕ ಮಕ್ಕಳು,
ದೇವರ ಗ್ರಾಮ್ಯ ಕಲ್ಪನೆ, ಊರಿನ ಪುಢಾರಿ-ಇಷ್ಟೇ ಜಗತ್ತು-ಆದರೂ ತೃಪ್ತ...

ನನ್ನಂತೆ ಕನ್ನಡ, ಗಡಿ, ನದಿ, ಪದ್ಯ, ಪ್ರತಿಷ್ಠೆ ಕಾಡುವುದಿಲ್ಲ-
ಹೆಂಡತಿಗೆ ಚೋಲಿ, ಹಿರಿ ಮಗನ ಶಾಲೆ
ಬೆಲ್ಲದ ಕಾಫಿಯ ಹಾಲೇಶಿಯ ಸಾಲ
ಹೊತ್ತು ಹೊತ್ತಿಗೆ ರುಚಿ ಗೌಣ ಅರಸಿಕ ಕೂಳು-ಚಿಂತೆಯಿಲ್ಲವೆಂದಲ್ಲ-ಆದರೂ ತೃಪ್ತ...

ಇದ ಮೆಚ್ಚಿ, ಕರುಬಿ, ಪೇಚಾಡಿ ನಡೆದಾಗ
ದೂರದಿಂದ, ಪ್ರಕೃತಿಯ ಅಗಾಧದಲ್ಲಿ ಹಿಮಾಚ್ಛಾದಿತ ಹನುಮ,
ಅವನ ಕೂದಲೆಳೆಯ ಕೂಗು-
ಅರ್ಥ ತೋರದ ಚುಕ್ಕೆ.

ಇಲ್ಲಿಂದ ನನಗೆ ವರ್ಗವಾಗುತ್ತೆ-ಒಂದು ದಿನ
ಹನುಮ ಸಾಯುತ್ತಾನೆ-ತಿಳಿಯುವುದಿಲ್ಲ.
ಇಲ್ಲಿನ ಹಳಬ ಅಲ್ಲಿ ಹೊಸಬನಾಗುತ್ತೇನೆ,
ಎಲ್ಲೋ ಹೇಗೋ ಸಾಯುತ್ತೇನೆ-ತಿಳಿಯುವುದಿಲ್ಲ.
ನನ್ನ ಹೆಸರು, ಹುದ್ದೆ, ಪದ್ಯ, ತಳಮಳ, ಬದುಕು-ತಿಳಿಯುವುದಿಲ್ಲ.
ಈ ಪರಿಚಿತ ಆಕಾಶ, ತೆಂಗಿನ ಮರ, ಕಾಲುವೆ, ಗುಡ್ಡ, ಗುಡಿಸಲು-
ಇವು ಕೊಟ್ಟ ಧಾರಾಳ, ಅರ್ಥವಂತಿಕೆ, ಭಾವ ಸಂಚಾರ-ತಿಳಿಯುವುದಿಲ್ಲ.

ಕೊರಲು ಬಿಗಿದು ಒಬ್ಬಂಟಿ ನಿಧಾನ ನಡೆದಂತೆ
ರಾಮನ್ ಸತ್ತ ತೀವ್ರತೆ, ಕಳವಳ ತಣ್ಣಗಾಯಿತು...

***

ಇನ್ನು, ’ಆನಂದರಾಮನ್ ಸತ್ತ ಸುದ್ದಿ’. ನಿಸಾರರ ಕವನವನ್ನು ಅನುಸರಿಸಿ-ಅನುಕರಿಸಿ ನಾನು ಬರೆದಿರುವ ಈ ಅಣಕ ಕವನದಲ್ಲಿ ಬರುವ (ಸತ್ತಿರುವ) ಆನಂದರಾಮನ್ ಒಬ್ಬ ಲೇಖಕ. ಎಲ್ಲರಂತೆ ಅವನೂ ಸತ್ತ. ಅವನ ಸುತ್ತಮುತ್ತ ಹರಿದಿರುವ ಸಾಲುಗಳನ್ನು -ಕವನದ ಸಾಲುಗಳನ್ನು- ಓದಿ ಆನಂದಿಸಿರಿ ಅಥವಾ ದುಃಖಿಸಿರಿ.

ನಿಸಾರರ ಕ್ಷಮೆ ಕೋರಿ ನಾನು ಬೆಳಕಿಗೆ ತಂದ ನನ್ನ ಈ ಅಣಕವನ (ಅಣಕ ಕವನ) ಕಳೆದ ವರ್ಷದ (ಏಪ್ರಿಲ್ ೨೦೦೮) ’ಸುಧಾ’ ಹಾಸ್ಯ ಸಂಚಿಕೆಯಲ್ಲಿ ಪ್ರಕಟವಾಗಿದೆ.

(ಓದುಗ ಮಿತ್ರರೇ,
ಪತ್ರಿಕಾ ಬರವಣಿಗೆ, ಸಮಾಜಸೇವೆ ಮುಂತಾಗಿ ಮೈತುಂಬ-ತಲೆತುಂಬ ಕೆಲಸಗಳನ್ನು ತುಂಬಿಕೊಂಡಿರುವ ನಾನು ’ಗುಳಿಗೆ’ ವಿತರಣೆಯನ್ನು ಅನಿರ್ದಿಷ್ಟ ಕಾಲದವರೆಗೆ ಸ್ಥಗಿತಗೊಳಿಸಬೇಕಾದುದು ಅನಿವಾರ್ಯವಾಗಿದೆ. ನಿಮ್ಮ ಗಮನ-ಮೆಚ್ಚುಗೆ-ವಿಮರ್ಶೆ-ಪ್ರೋತ್ಸಾಹ ನನಗೆ ಅತೀವ ಸಂತಸ ತಂದಿದೆ. ನಿಮಗೆಲ್ಲರಿಗೂ ನನ್ನ ತುಂಬುಹೃದಯದ ಧನ್ಯವಾದ. ಮುಂದೆಂದಾದರೂ ಇಲ್ಲಿ ಮತ್ತೆ ಭೇಟಿಯಾಗೋಣ. ನಮಸ್ಕಾರ.)

ಆನಂದರಾಮನ್ ಸತ್ತ ಸುದ್ದಿ
-------------------------
(ರಚನೆ: ಎಚ್.ಆನಂದರಾಮ ಶಾಸ್ತ್ರೀ)

ಆನಂದರಾಮನ್ ಸತ್ತ ದಿನ ಬೆಂಗಳೂರಿನಲ್ಲಿ
ದರಿದ್ರ ಥಂಡಿ; ಚಳಿಗಾಲದಲ್ಲೇ ಸಾಯುವುದೆ
ಈ ಬರಹಗಾರ, ಕೊರೆದದ್ದು ಸಾಲದೆ ಬದುಕಿದ್ದಾಗ
ಕೊರೆವ ಚಳಿಯಲ್ಲೇ ಸತ್ತು ಬೆಳಗಿನ ಹೊತ್ತು
ಹೊರಗೆ ಬರುವಂತಾಯ್ತಲ್ಲಾ ಈ ಚಳಿಗೆ
ಅವನ ಪಾರ್ಥಿವ ಶರೀರದ ಬಳಿಗೆ ಎಂದು
ದುಃಖವಾಯಿತು ಅವನ ಬಂಧು
-ಗಳಿಗೆ, ಪರಿಚಿತರಿಗೆ ಮತ್ತು ಸಹ
-ಬರಹಗಾರರ ಬಳಗಕ್ಕೆ.

ಪತ್ರಿಕೆಗಳಿಗೆ ಪತ್ರ ಬರೆಯುತ್ತ
ವಾಚಕರಿಗೆ ಕೀಚಕಪ್ರಾಯ ಆದಾತ,
ಕವಿಗೋಷ್ಠಿಗಳಲಿ ಭಯಂಕರ
ಕೊರೆದಾತ, ತಾನು ಬಲು ಆದರ್ಶ ವ್ಯಕ್ತಿ
ಎಂದು ಮೆರೆದಾತ, ಸಾಯಲಿ ಬಿಡು ಪೀಡೆ
ತೊಲಗಿತು ಎಂದರು ಬಹುತೇಕ ಎಲ್ಲ ಜನರು.

ಆದರೆ, ಅವನೊಬ್ಬ ಹನುಮ ಮಾತ್ರ,
ಹಳ್ಳಿ ಗಮಾರ, ಒಳ್ಳೆ ಕೆಲಸಗಾರ,
ಹಳ್ಳಿ ಪದದ ಅಶಾಸ್ತ್ರೀಯ ಮಟ್ಟನ್ನು
ಕುರುಕುವ ಹರಕಲು ಬಟ್ಟೆಯ
ಗಾಯನಶೂರ, ದಿವಂಗತ ಆನಂದರಾಮನ
ಅತೀವ ಪ್ರೀತಿಗೆ ಪಾತ್ರ; ಅವನಿಗೆ ಆನಂದರಾಮ
ಕವಿಯೆಂಬುದು ಗೊತ್ತಿಲ್ಲ, ಬರಹ
ಓದಿಲ್ಲ, ಅಸಲು ಓದಲಿಕ್ಕೇ ಬರೋಲ್ಲ,
ಆದರೂ ದುಃಖಿಸಿದ ಮನಸಾರೆ; ಕಾರಣವಿಲ್ಲದಿಲ್ಲ.

ಕೆಟ್ಟು ಪಟ್ಟಣ ಸೇರಿದ್ದಾಗ ಹನುಮ,
ಹಸಿವು, ಅಸ್ವಸ್ಥತೆಯ ಗೂಡಾಗಿದ್ದಾಗ,
ಆಸರೆ ನೀಡಿದ್ದು ಇದೇ ಆನಂದರಾಮ.
ಪ್ರೀತಿಸಿದ್ದು ಸಹ; ಕನ್ನಡ, ಗಡಿ, ನದಿ,
ಪದ್ಯ, ಪ್ರತಿಷ್ಠೆಗಳನ್ನು ಮೀರಿ.

ಖಡ್ಗಕ್ಕಿಂತ ಲೇಖನಿಗೆ ಬಲ ಹೆಚ್ಚಂತೆ, ಗೊತ್ತಿಲ್ಲ.
ಲೇಖನಿಗಿರದ ಬಲ ಪ್ರೀತಿಗೆ; ಎರಡು ಮಾತಿಲ್ಲ.

ಈ ಕಡೆ ಹನುಮ, ಆ ಕಡೆ ಆನಂದರಾಮ;
ಮಧ್ಯೆ ಅಗಾಧ ಬಂಧು-ಬಳಗ,
ಸ್ಹೇಹಿತರು, ಸಹ ಲೇಖಕರು, ’ಅಭಿಮಾನಿಗಳು’.
ಮಧ್ಯದಲ್ಲಿ ಕಳಚಿದ ಕೊಂಡಿ.

ನಿಧನವಾಗಿಹೋದ ಆನಂದರಾಮನ್
ಒಬ್ಬಂಟಿ. ಕಳವಳಗೊಂಡು ಕುಳಿತಿರುವ
ಹನುಮ ಸಹ ಒಬ್ಬಂಟಿ. ಅಗಾಧ
ಜನಸಾಗರ ಕರ್ಮಕ್ಕೆ.

--೦--

6 ಕಾಮೆಂಟ್‌ಗಳು:

  1. ಆನಂದರಾಮನ್ ಸಾಯಬಾರದು ಸ್ವಾಮಿ. ಏನೇ ಸಮಾಜದ ಕಸಗುಡಿಸುವುದಿದ್ದರೂ ಮುಂದಿನ ಪೀಳಿಗೆ ಎಂಬ ಅಮರ ಜೀವಿಗಳಿಗೆ ಒಂದಷ್ಟು ಮಾದರಿ ಬಿಟ್ಟು ಹೋಗಲೇ ಬೇಕು. ಬಿಡುವಾದಾಗಲೋ, ವರ್ಷಕ್ಕೊಮ್ಮೆ, ಯುಗಾದಿಗೋ, ದೀವಳಿಗೆಗೋ ಒಂದೊಂದು ಬರೆದು ಬಿಸಾಡಿ. ಅನುಭವಾಮೃತವನ್ನು ಹಂಚಲಿಕ್ಕೆಂದೇ ದೇವರು ಕಳಿಸಿರುವುದು. ಯೂಥನೇಷಿಯಾ ಬಯಸುವ ಲೇಖಕರೂ ಇದ್ದಾರೆಯೇ! ಅಮರ ಕವಿ ತಾನೇ! ಏನೋ ಒಂದು ಬಿಡಿ. ಕವನ ತುಂಬಾ ಚೆನ್ನಾಗಿದೆ. ಶಿವಮೊಗ್ಗದವನು ನಾನು. ಹೊಸಮನೆ ಬಡಾವಣೆಯ ಸರ್ಕಾರಿ ಶಾಲೆಯ ಪ್ರಾಡಕ್ಟು. ಕುಂಬಾರಗುಂಡಿಯ ಹೈಸ್ಕೂಲು, ಸಹ್ಯಾದ್ರಿ ಕಾಲೇಜಿನ ಸಂಪತ್ತು, ಮೈಸೂರು ವಿ.ವಿ.ಯ ಕಿರೀಟ ಎಲ್ಲ ಹೊತ್ತು, ಅಲ್ಲಿಂದ ಕಾಲ್ಕಿತ್ತು 'ಉದರನಿಮಿತ್ತಂ ಆಕಾಶವಾಣಿ ವಾರ್ತಾಲಾಪಂ' ಮಾಡುತ್ತಾ ದುರ್ಗದ ಬಂಡೆಗಳಲ್ಲಿ ಬಂಧಿಯಾಗಿದ್ದೇನೆ. ಆನಂದರಾಮನ್ ಅವರನ್ನು ಒಮ್ಮೆಯಾದರೂ ಭೇಟಿಮಾಡುವ ಅವಕಾಶ ಎದುರುನೋಡುತ್ತಿದ್ದೇನೆ.
    ಬೇದ್ರೆ ಮಂಜುನಾಥ

    ಪ್ರತ್ಯುತ್ತರಅಳಿಸಿ
  2. original ಕವನಕ್ಕಿಂತ ಅಣಕವಾಡು ಚೆನ್ನಾಗಿದೆ!
    (Long live ಆನಂದರಾಮ!)

    ಪ್ರತ್ಯುತ್ತರಅಳಿಸಿ
  3. ಸ್ವಾಮಿ, ಬೇಗ ಮರಳಿ ಗುಳಿಗೆಯ೦ಗಡಿಗೆ, ಕಾದಿದ್ದೇವೆ ನಾವೆಲ್ಲಾ. ಅ೦ದ ಹಾಗೆ ಅಣಕವನ ಸೂಪರ್ ಆಗಿದೆ.
    "ಆನ೦ದರಾಮರಿಗೆ ಜೈ ಹೋ"

    ಪ್ರತ್ಯುತ್ತರಅಳಿಸಿ
  4. ಪತ್ರಮಿತ್ರತ್ರಯರಿಗೆ ಹೃತ್ಪೂರ್ವಕ ವಂದನೆಗಳು.
    ನಾನು ಬರೀ ’ಗುಳಿಗೆ’ ನೀಡಿ(ನಿಲ್ಲಿಸಿ)ದರೆ ನೀವು ನನಗೆ ಶಕ್ತಿದಾಯಕ ಟಾನಿಕ್ಕನ್ನೇ ನೀಡಿದ್ದೀರಿ!
    ಬೇದ್ರೆ ಮಂಜುನಾಥರೇ, ನಿಮ್ಮೆಲ್ಲ ಬರಹಗಳಂತೆಯೇ ಇಲ್ಲಿಯೂ ತಲೆದೂಗುವಂಥ ಅಭಿಪ್ರಾಯವನ್ನೇ ಮಂಡಿಸಿದ್ದೀರಿ.
    (’ನಿಸಾರರ ಕವನದ ಹನುಮ’ನುದಿಸಿದ ನಾಡಿನವರು ನೀವು!)
    ಸುನಾಥ್ ಮತ್ತು ಪರಾಂಜಪೆ ಅವರೇ, ಎಂದಿನಂತೆ ಪ್ರೀತ್ಯಭಿಮಾನಗಳಿಂದ ಶುಭ ಹಾರೈಸಿದ್ದೀರಿ.
    ಇಂಥ ಮಿತ್ರರನ್ನು ಹೊಂದಿರುವ ನಾನು ಧನ್ಯ.

    ಪ್ರತ್ಯುತ್ತರಅಳಿಸಿ
  5. ಧನ್ಯವಾದಗಳು ಸರ್. ತಾವು ಗುಳಿಗೆ ವಿತರಿಸಲು ಮತ್ತೆ ಬಂದದ್ದು ಸಂತಸ ತಂದಿದೆ. ನಗೆ ಗುಳಿಗೆಗಳಿಲ್ಲದಿದ್ದರೆ ಬಿ.ಪಿ. ಇಳಿಯುವುದೇ ಇಲ್ಲ! ವಂಡರ್ ಫುಲ್! ತಾವೂ ಶಿವಮೊಗ್ಗದಲ್ಲಿದ್ದೀರೆಂದು ಗೆಳೆಯರೊಬ್ಬರು ಹೇಳಿದ್ದರು. ಅದರಿಂದಾಗಿ ನಾನೂ ಅಲ್ಲಿನ ಮರಿ ಎಂಬುದಾಗಿ ಪರಿಚಯಿಸಿಕೊಂಡಿದ್ದೆ. ತಮ್ಮ ಬರಹಗಳ ಇ-ಬುಕ್ ರೂಪ ಮತ್ತು ಪ್ರಕಟಿತ ರೂಪ ನೋಡಲು ಕಾಯುತ್ತಿದ್ದೇನೆ. ಪ್ರಯತ್ನಿಸಿರಿ.
    ಬೇದ್ರೆ ಮಂಜುನಾಥ

    ಪ್ರತ್ಯುತ್ತರಅಳಿಸಿ
  6. ಮಂಜುನಾಥರಿಂದ ಎಷ್ಟೊಂದು ಶುಭಹಾರೈಕೆಗಳು! ’ನಿಮ್ಮ್ ಬಾಯಾಗ್ ಸಕ್ರಿ ಹಾಕ!’
    ಗೊತ್ತಾಯ್ತಲ್ಲ, ನಾನು ದಾವಣಗೆರೆಯವನು. ಶಿವಮೊಗ್ಗೆ ಮತ್ತು ಚಿತ್ರದುರ್ಗ ಎರಡೂ ನನ್ನ ಸಂಬಂಧಿಗಳು ಇರುವ ಊರುಗಳು. ಶಿವಮೊಗ್ಗೆ ನನ್ನ ಪ್ರೀತಿಯ ಊರುಗಳಲ್ಲೊಂದು.
    ನಿಮ್ಮ ಹೃದ್ಯ ಪ್ರತಿಕ್ರಿಯೆಗೆ ಅನಂತ ಧನ್ಯವಾದ.

    ಪ್ರತ್ಯುತ್ತರಅಳಿಸಿ