ಸೋಮವಾರ, ಮೇ 11, 2009

ಗ್ರಾಹಕನ ಸ್ಥಿತಿ-ಗತಿ, ’ಗ್ರಾಹಕ ಸಂಸ್ಕೃತಿ’

ಈಚೆಗಷ್ಟೇ ’ವಿಶ್ವ ಗ್ರಾಹಕ ಹಕ್ಕುಗಳ ದಿನ’ವನ್ನು ದೇಶಾದ್ಯಂತ ಆಚರಿಸಲಾಯಿತು. ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪತ್ರಿಕೆಗಳಲ್ಲಿ ಆಕರ್ಷಕ ಜಾಹಿರಾತುಗಳನ್ನು ಪ್ರಕಟಿಸಿದವು. ಸರ್ಕಾರಿ ಮಟ್ಟದಲ್ಲೂ ಮತ್ತು ವಿವಿಧ ಸ್ವಯಂಸೇವಾ ಸಂಸ್ಥೆಗಳ ವತಿಯಿಂದಲೂ ಸಮಾರಂಭಗಳನ್ನು ನಡೆಸಲಾಯಿತು.

ಆದರೆ ಇಂದು ಗ್ರಾಹಕನ ಸ್ಥಿತಿ-ಗತಿ ಹೇಗಿದೆ? ’ಗ್ರಾಹಕ ಸಂಸ್ಕೃತಿ’ಯೆಂಬುದು ಇಂದು ಯಾವ ರೂಪು ತಳೆದಿದೆ? ಅವಲೋಕಿಸಿದರೆ ತೀವ್ರ ನಿರಾಶೆಯಾಗುತ್ತದೆ.

ಗ್ರಾಹಕನ ಸ್ಥಿತಿ-ಗತಿ
------------------
ಉಪಭೋಗ ಸಂಸ್ಕೃತಿಯ ಇಂದಿನ ದಿನಮಾನದಲ್ಲಿ ’ಗ್ರಾಹಕನೇ ಪ್ರಭು’ ಎಂಬ ಪ್ರಶಂಸೆಯೇನೋ ವಿಶ್ವಾದ್ಯಂತ ಢಾಳವಾಗಿ ಕೇಳಿಬರುತ್ತಿದೆ. ಆದರೆ ವಾಸ್ತವದಲ್ಲಿ ಇಂದು ಗ್ರಾಹಕನೆಂಬುವವನು ವ್ಯಾಪಾರಿಗಳ ಕೈಯ ದಾಳವಾಗಿದ್ದಾನೆ! ಉಪಭೋಗವೆಂಬ ಯಜ್ಞದ ಬಲಿಪಶುವಾಗಿದ್ದಾನೆ! ಕೊಳ್ಳುಬಾಕತನವೆಂಬ ತನ್ನ ತೆವಲಿಗೆ ತಾನೇ ದಂಡ ತೆರುತ್ತಿರುವ ಅಮಾಯಕನಾಗಿದ್ದಾನೆ! ಜಾಹಿರಾತೆಂಬ ವಶೀಕರಣಕ್ಕೆ ಒಳಗಾಗಿರುವ ದುರ್ಬಲ ತಾನಾಗಿದ್ದಾನೆ! ರಿಯಾಯಿತಿಯೆಂಬ ಮೋಸದ ಬಲೆಗೆ ಸಿಕ್ಕಿಬಿದ್ದು ಒದ್ದಾಡುತ್ತಿರುವ ಅಸಹಾಯಕನಾಗಿದ್ದಾನೆ!

’ಪ್ರಭು’ ಎನ್ನಿಸಿಕೊಂಡಿರುವ ಗ್ರಾಹಕನಿಗಿಂದು ಉತ್ತಮ ಗುಣಮಟ್ಟದ ವಸ್ತು ಅಥವಾ ಸೇವೆಯನ್ನು ಅನಾಯಾಸವಾಗಿ ಮತ್ತು ಯೋಗ್ಯ ದರದಲ್ಲಿ ಪಡೆಯುವ ಸೌಲಭ್ಯವಿಲ್ಲ. ಪ್ರಶ್ನಿಸುವ ಹಕ್ಕು ಕಾನೂನು ಪುಸ್ತಕಕ್ಕೆ ಮಾತ್ರ ಸೀಮಿತವಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಪರಿಸ್ಥಿತಿ ಕೊಂಚ ಭಿನ್ನವಿರಬಹುದು, ಆದರೆ ಭಾರತದಲ್ಲಿ ಮತ್ತು ಭಾರತಕ್ಕಿಂತ ಹಿಂದುಳಿದ ದೇಶಗಳಲ್ಲಿ ಗ್ರಾಹಕನ ಹಕ್ಕುಗಳ ಚಲಾವಣೆಯೆಂಬುದು ಅತಿ ಕಷ್ಟದಾಯಕ, ದುಬಾರಿ ಮತ್ತು ಕಾಲಹರಣದ ಕ್ರಿಯೆಯಾಗಿದೆ. ದೋಷಪೂರ್ಣ ಬಿಸ್ಕತ್ ಸರಬರಾಜು ಮಾಡಿದ ಪ್ರಸಿದ್ಧ ಕಂಪೆನಿಯೊಂದರ ವಿರುದ್ಧ ಗ್ರಾಹಕ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಿಸಿದ ನಾನು ಎರಡು ವರ್ಷ ಹೋರಾಡಿ, ಒಂದೂವರೆ ಸಾವಿರ ರೂಪಾಯಿ ಖರ್ಚುಮಾಡಿ ಕೊನೆಗೆ ಒಂದು ಸಾವಿರ ರೂಪಾಯಿ ಪರಿಹಾರ ಪಡೆದೆ! ಒಂದು ಸಾವಿರ ’ಬಿಸಾಡಿದ’ ಆ ಕಂಪೆನಿಯ ಪ್ರತಿನಿಧಿ ನನ್ನತ್ತ ’ಅಟ್ಟಹಾಸದ ನಗೆ’ ಬೀರುತ್ತ ಹೊರಟುಹೋದ! ಪಾಶ್ಚಾತ್ಯ ದೇಶಗಳಲ್ಲಿ ಪರಿಸ್ಥಿತಿ ಕೊಂಚ ಉತ್ತಮ, ಆದರೆ ಗ್ರಾಹಕನಿಗೆ ಬವಣೆಯೆಂಬುದು ಅಲ್ಲೂ ತಪ್ಪಿದ್ದಲ್ಲ.

ಗ್ರಾಹಕನು ’ಪ್ರಭು’; ಆದರೆ ಭಾರತದಲ್ಲಿ ಬಹುತೇಕ ಸಂದರ್ಭಗಳಲ್ಲಿ ಅವನಿಗೆ ತಾನು ಖರೀದಿಸಿದ ಸಾಮಗ್ರಿಗಳ ಸೂಕ್ತ ಬಿಲ್ ಪಡೆಯಲೂ ಸಾಧ್ಯವಾಗುವುದಿಲ್ಲ! ಇದು ಇಂದಿನ ಗ್ರಾಹಕನ ಸ್ಥಿತಿ-ಗತಿ!

ಇನ್ನು, ’ಗ್ರಾಹಕ ಸಂಸ್ಕೃತಿ’ಯೆಂಬುದು ಇದೆಯಲ್ಲಾ, ಅದು ಈ ದಿನಮಾನದಲ್ಲಿ ವಿರೂಪಹೊಂದಿಬಿಟ್ಟಿದೆ!

’ಗ್ರಾಹಕ ಸಂಸ್ಕೃತಿ’
-----------------
ನಾನು ಚಿಕ್ಕವನಿದ್ದಾಗ, ಅಂದರೆ ಈಗ್ಗೆ ೫೦-೫೫ ವರ್ಷಗಳ ಕೆಳಗೆ ’ಗ್ರಾಹಕ ಸಂಸ್ಕೃತಿ’ಯೆಂಬುದು ಒಂದು ಆತ್ಮೀಯ ನಿಜಸಂಸ್ಕೃತಿಯಾಗಿತ್ತು. ಮನೆಗೆ ಹಾಲು ಹಾಕುವ ಗೌಳಿಯಿಂದ ಹಿಡಿದು ಕಿರಾಣಿ ಅಂಗಡಿಯ ಶೆಟ್ಟರವರೆಗೆ, ಕ್ಷೌರಿಕನಿಂದ ಹಿಡಿದು ದರ್ಜಿಯವರೆಗೆ, ಮನೆಕೆಲಸದ ಆಳಿನಿಂದ ಹಿಡಿದು ಮನೆವೈದ್ಯರವರೆಗೆ, ಗ್ರಾಹಕನಿಗೂ ಮತ್ತು ವ್ಯಾಪಾರಿಗೂ/ಸೇವಾವೃತ್ತಿಪರನಿಗೂ ಒಂದು ಮಧುರ ಬಾಂಧವ್ಯ ಏರ್ಪಟ್ಟಿತ್ತು. ವಿಶಾಲವೃಕ್ಷದ ಶಾಖೆಗಳಂತೆ ಎಲ್ಲರೂ ಒಂದು ಭಾವಬಂಧದಿಂದೊಡಗೂಡಿ ವ್ಯವಹಾರ ಸಾಗಿಸುತ್ತಿದ್ದರು. ಪರಸ್ಪರ ಸುಖ-ಕಷ್ಟ ವಿಚಾರಿಸಿಕೊಳ್ಳುತ್ತ ಮತ್ತು ಹಬ್ಬ-ಹರಿದಿನ-ಸಮಾರಂಭಗಳಲ್ಲಿ ಒಟ್ಟಾಗುತ್ತ ಜೀವನ ಸಾಗಿಸುತ್ತಿದ್ದರು. ’ಪ್ರತಿ ಗ್ರಾಹಕನೂ ವ್ಯಾಪಾರಿಯೇ/ವೃತ್ತಿಪರನೇ ಮತ್ತು ಪ್ರತಿ ವ್ಯಾಪಾರಿಯೂ/ವೃತ್ತಿಪರನೂ ಗ್ರಾಹಕನೇ; ಎಲ್ಲಕ್ಕಿಂತ ಮಿಗಿಲಾಗಿ, ಎಲ್ಲರೂ ಒಂದು ಕುಟುಂಬಕರು’ ಎಂಬೀ ಅರಿವು ಆ ದಿನಗಳಲ್ಲಿ ಎಲ್ಲರಲ್ಲೂ ಜಾಗೃತವಾಗಿತ್ತು. ಎಂದೇ, ಗ್ರಾಹಕ ಮತ್ತು ವ್ಯಾಪಾರಿ/ವೃತ್ತಿಪರ ಇವರ ಮಧ್ಯೆ ಪ್ರೀತಿ, ವಿಶ್ವಾಸ, ಸ್ನೇಹಸಂಪರ್ಕಗಳಿಗೆ ಆ ದಿನಗಳಲ್ಲಿ ಮಹತ್ತ್ವದ ಸ್ಥಾನವಿತ್ತು.

ಇಂದು ಎಲ್ಲಿದೆ ಅಂಥ ಸ್ನೇಹದ ಬೆಸುಗೆ? ಇಂದೇನಿದ್ದರೂ ಗ್ರಾಹಕ ಮತ್ತು ವ್ಯಾಪಾರಿ/ವೃತ್ತಿಪರ ಇವರ ನಡುವೆ ’ಹಾಯ್, ವೆಲ್‌ಕಮ್, ಥ್ಯಾಂಕ್ಯೂ’ ಇಷ್ಟೇ ’ಸ್ನೇಹ-ಸಂಪರ್ಕ’! ಅಂಗಡಿಯ ಮೆಟ್ಟಿಲು ದಾಟಿದಮೇಲೆ ಅವನ್ಯಾರೋ, ನಾವ್ಯಾರೋ! ಪಾಶ್ಚಾತ್ಯರಲ್ಲಿ ಬಲವಾಗಿ ಬೇರೂರಿರುವ ಈ ’ನೀರಮೇಲಣ ಗುಳ್ಳೆ’ಯ/’ತಾವರೆ ಎಲೆಯಮೇಲಿನ ನೀರಹನಿ’ಯ ಅವಸ್ಥೆ ಭಾರತದ ನಗರಗಳನ್ನು ಎಂದೋ ವ್ಯಾಪಿಸಿದ್ದು ಇದೀಗ ಹಳ್ಳಿಗಳಿಗೂ ಹಬ್ಬತೊಡಗಿದೆ!

ಇನ್ನು, ಕೊಳ್ಳುಬಾಕತನವೆಂಬ ’ಗ್ರಾಹಕ ಸಂಸ್ಕೃತಿ’ಯ ಹೆಸರಿನ ವಿಕೃತಿಯ ಬಗ್ಗೆ ನಾನು ಹೆಚ್ಚೇನೂ ಹೇಳಬೇಕಾಗಿಲ್ಲ. ’ಗ್ರಾಹಕ ಸಂಸ್ಕೃತಿ’ಯೆಂಬುದು ಇಂದು ’ಕೊಳ್ಳುಬಾಕ ಸಂಸ್ಕೃತಿ’ಯಾಗಿ ರೂಪಾಂತರ ಹೊಂದಿಬಿಟ್ಟಿದೆ! ಹಾಸಿಗೆಯಿದ್ದಷ್ಟು ಮಾತ್ರ ಕಾಲುಚಾಚುವ ಬದಲು ನಾವು ಅದನ್ನು ಮೀರಿ ಕಾಲುಚಾಚಲು ಹೊರಟಿದ್ದೇವೆ. ಪರಿಣಾಮ, ಹಾಸಿಗೆಯನ್ನು ಇನ್ನಷ್ಟು ಉದ್ದ ಮಾಡುವ ಯತ್ನಕ್ಕಿಳಿದು, ಅದರಲ್ಲೇ ಜೀವನವನ್ನು ವ್ಯಯಿಸಿಬಿಡುತ್ತಿದ್ದೇವೆ! ಇಷ್ಟಾಗಿಯೂ, ಹಾಸಿಗೆ ಎಷ್ಟು ಉದ್ದವಾದರೂ ನಮಗೆ ಇನ್ನೂ ಸಾಲದು! ಈ ಕ್ಷೋಭೆ-ಹೆಣಗಾಟಗಳಲ್ಲೇ ನಮ್ಮಿಡೀ ಜೀವನವನ್ನು ಕಳೆದುಬಿಡುತ್ತಿದ್ದೇವೆ! ’ಉಪಭೋಗ ಸಂಸ್ಕೃತಿ/ಕೊಳ್ಳುಬಾಕ ಸಂಸ್ಕೃತಿ’ಯ ವ್ಯಾಮೋಹದ ಭರದಲ್ಲಿ ನಾವಿಂದು ಜೀವನದ ಉಳಿದೆಲ್ಲ ಆನಂದವನ್ನೂ ಕಳೆದುಕೊಳ್ಳತೊಡಗಿದ್ದೇವೆ, ಮಾತ್ರವಲ್ಲ, ನಿಜಸಂಸ್ಕೃತಿಯಿಂದಲೇ ವಂಚಿತರಾಗತೊಡಗಿದ್ದೇವೆ!

ಉಳ್ಳವರ ಕೊಳ್ಳುವ ಭರಾಟೆಯನ್ನು ಕಂಡು ಇಲ್ಲದವರು ಕುದಿಯತೊಡಗಿದ್ದಾರೆ. ಯೇನ ಕೇನ ಪ್ರಕಾರೇಣ ಧನಾರ್ಜನೆಯೇ ಎಲ್ಲರ ಜೀವನದ ಮುಖ್ಯ ಗುರಿಯಾಗತೊಡಗಿದೆ. ಉಪಭೋಗದ ವಸ್ತುಗಳ ಖರೀದಿಗಾಗಿ ಹಣ ಸಂಪಾದಿಸುವುದೇ ಇಂದು ಅನೇಕರ ಜೀವನವಾಗಿಬಿಟ್ಟಿದೆ! ಪರಿಣಾಮ, ಅವರು ಜೀವನದ ನಿಜಸುಖದಿಂದ ದಿನೇದಿನೇ ವಂಚಿತರಾಗತೊಡಗಿದ್ದಾರೆ.

ಒಟ್ಟಾರೆ, ಗ್ರಾಹಕನಿಗಿಂದು ಹಕ್ಕು ಚಲಾವಣೆಯ ಅವಕಾಶವೂ ಕಷ್ಟಕರ ಮತ್ತು ಕೊಳ್ಳುಬಾಕತನದ ಪರಿಣಾಮವೂ ಅವನಮೇಲೆ ಘೋರ! ಇಂಥ ಪರಿಸ್ಥಿತಿಯಲ್ಲಿ, ಈಚೆಗೆ ಆಚರಿಸಲಾದ ’ವಿಶ್ವ ಗ್ರಾಹಕ ಹಕ್ಕುಗಳ ದಿನ’ವು ನನಗೆ ಸರ್ಕಾರಿ ಪ್ರಹಸನದಂತೆ ಕಂಡಿತು!

2 ಕಾಮೆಂಟ್‌ಗಳು: