ಶನಿವಾರ, ಮೇ 9, 2009

ಶಾಂತಿ-ಕ್ರಾಂತಿ-ಸಂಕ್ರಾಂತಿ

ಈ ಲಘುಬರಹಕ್ಕೆ ಕಥಾವಸ್ತು ಇಲ್ಲ. ಮೂರು ಗಂಟೆ ಅವಧಿಯ ಚಲನಚಿತ್ರವೇ ಕಥೆಯಿಲ್ಲದೆ ಓಡಿ ಹಿಟ್ಟಾಗುವಾಗ ಮೂರು ನಿಮಿಷದ ಓದಿನ ಈ ಬರಹಕ್ಕೆ ಕಥಾವಸ್ತುವಿಗಾಗಿ ನಾನೇಕೆ ತಲೆ ಕೆಡಿಸಿಕೊಳ್ಳಲಿ? ಕಥಾವಸ್ತುವನ್ನು ಎಳೆದುತಂದಿಟ್ಟು ನಿಮ್ಮ ತಲೆಯನ್ನಾದರೂ ಏಕೆ ಕೆಡಿಸಲಿ? ಹಾಗೇ ಹಗುರಾಗಿ ಲಘುವಾಗಿ ಲಗುವಾಗಿ ಬರೆದು ಮುಗಿಸಿಬಿಡುತ್ತೇನೆ, ನೀವೂ ಲಗುಲಗೂನೆ ಓದಿ ’ಮುಗಿಸಿಬಿಡಿ.’

ಲಘುಬರಹವಾದರೂ ಇದರಲ್ಲಿ ಸೀರಿಯಸ್ ಘಟ್ಟವುಂಟು. ಕೊನೆತನಕ ತಲೆಬುಡವಿಲ್ಲದೆ ಓಡಿ ಕೊನೆಯಲ್ಲಿ ಕ್ಲೈಮ್ಯಾಕ್ಸ್ ಎಂಬ ಸೀರಿಯಸ್ ಹಂತಕ್ಕೆ ಧುತ್ತೆಂದು ಬಂದು ನಿಲ್ಲುವ ಅದ್ಭುತ ಚಲನಚಿತ್ರದೋಪಾದಿ ಈ ಬರಹವೂ ಒಂದು ಅದ್’ಭೂತ’ ಬರಹ! ’ಭೂತಬರಹ’ ಎಂದಾಕ್ಷಣ ’ಘೋಸ್ಟ್ ರೈಟಿಂಗ್’ ಎಂದು ಭಾವಿಸಬೇಡಿ. ನಾನೆಂಬ ನಾನೇ ಬರೆದ ಬರಹವಿದು. ಭೂತಕಾಲದ ಬರಹವೂ ಇದಲ್ಲ. ಇದೊಂದು ಭೂತಪ್ರಾಯ ಬರಹ! ಅರ್ಥಾತ್, ನಿಮಗೆ ಭೂತ ಹೇಗೆ ಇಷ್ಟವೋ ಹಾಗೆಯೇ ಈ ಬರಹವೂ ಇಷ್ಟವಾಗುತ್ತದೆ.

ಅಂದರೆ, ಭೂತದ ಹಾಗೆ ಕಾಡುತ್ತದೆ? ಹಾಗೇನಿಲ್ಲ ಸ್ವಾಮೀ, ಇದು ಲಘುಬರಹ. ಓದಿ ನೋಡಿ, ಗೊತ್ತಾಗುತ್ತದೆ.

ಅರ್ಥಪೂರ್ಣಮಲ್ತೆ?
----------------
ಶಾಂತಿ-ಕ್ರಾಂತಿ-ಸಂಕ್ರಾಂತಿ. ಎಷ್ಟು ಅರ್ಥಪೂರ್ಣ ಈ ನುಡಿಗಟ್ಟು! ಶಾಂತಿ ಯಾರಿಗೆ ಬೇಡ? ಯುದ್ಧಮಾಡುವ ಎಲ್ಲ ದೇಶಗಳೂ ಶಾಂತಿಗಾಗಿಯೇ ಯುದ್ಧಮಾಡುವುದು, ಅಲ್ಲವೆ? ಅಮೆರಿಕವಂತೂ ಶಾಂತಿಸ್ಥಾಪನೆಗೆಂದೇ ಬಾಂಬುಗಳನ್ನು ತಯಾರಿಸಿ ಕಂಡಕಂಡ ದೇಶಗಳ ಮೇಲೆಲ್ಲ ಎಸೆಯುವುದು. ಶಾಂತಿ ಇಂದು ಪ್ರಪಂಚದಲ್ಲಿ ಅತ್ಯಂತ ತುರ್ತಾಗಿ ಅವಶ್ಯವಾಗಿರುವ ವಸ್ತು. ಎಂದೇ ಯುದ್ಧಗಳು. ’ವಾರ್ ಅಂಡ್ ಪೀಸ್’. ಪೀಸ್ ಪೀಸ್.

ಶಾಂತಿ ಎಂದರೆ ನಮ್ಮ ಗುಳಿಗೆಪ್ಪಗೂ ಬಹಳ ಇಷ್ಟ. ಎಂದೇ ಸದಾ ಶಾಂತಿಯ ಮನೆಯೆದುರೇ ಠಳಾಯಿಸುತ್ತಿರುತ್ತಾನೆ, ಇರಲಿ.

ಇನ್ನು ಕ್ರಾಂತಿ. ಈ ಪದದ ಅರ್ಥ-ವ್ಯಾಪ್ತಿಯನ್ನೆಂತು ಬಣ್ಣಿಸಲಿ! ಕ್ಷೀರಕ್ರಾಂತಿ (ಗೊಮ್ಮಟೇಶ್ವರನಿಗೆ ಕ್ಷೀರಾಭಿಷೇಕ), ಹಸಿರುಕ್ರಾಂತಿ (ಹಸಿರು ಶಾಲಿನವರ ಕ್ರಾಂತಿ), ಕೆಂಪುಕ್ರಾಂತಿ (ಇದು ’ಎಡ’ ಅಂತಾರಪ್ಪ, ಯಾರೋ), ರಕ್ತಕ್ರಾಂತಿ (ಉಗ್ರರು ಪ್ರಪಂಚದೆಲ್ಲೆಡೆ ಮಾಡುತ್ತಿರುವ -ಅನ್ಯರ ರಕ್ತದ- ಕ್ರಾಂತಿ), ಧರ್ಮಕ್ರಾಂತಿ (’ಶರಣ’ರ ಕೊರಳ ಹೂವಿನ ಹಾರವಯ್ಯಾ), ಅಧರ್ಮಕ್ರಾಂತಿ (’ಮಾತೆ’ಯ ಮಾತಿಗೆ ಎದುರಾಡುವರಯ್ಯಾ), ಹೀಗೆ, ಕ್ರಾಂತಿಯಿಲ್ಲದ ವಸ್ತು ಅದಾವುದಿಹುದೀ ಜಗದಲ್ಲಿ? ಮುವ್ವತ್ತು ಸೆಕೆಂಡಿನ ಟಿವಿ ಜಾಹಿರಾತುಗಳಲ್ಲೂ ’ಕ್ಷಿಪ್ರ’ಕ್ರಾಂತಿ! ಕ್ರಾಂತಿಗೆ ನಮೋ!

ಮೂರನೆಯದು ಸಂಕ್ರಾಂತಿ. ’ಎಳ್ಳು ಬೆಲ್ಲ ತಿಂದು ಒಳ್ಳೆಮಾತಾಡಿ.’ ಇಷ್ಟೇ ನನಗೆ ಗೊತ್ತಿರೋದು.

ಎಳ್ಳು ಬೆಲ್ಲ ತುಟ್ಟಿಯಾಗಿದ್ದರೂ ನಾವು ಕೊಳ್ಳಬಲ್ಲೆವು ಎಂದಾದರೆ, ತಿನ್ನಲು ನಮ್ಮ ದೇಹಸ್ಥಿತಿಯೂ -ಷುಗರ್ ಇತ್ಯಾದಿ ಇಲ್ಲದೆ- ಸರಿಯಾಗಿದೆ ಎಂದಾದರೆ ಮತ್ತು ಒಳ್ಳೆಮಾತನ್ನಾಡುವ ಸದ್ಗುಣ ನಮ್ಮಲ್ಲಿದೆಯೆಂದಾದರೆ ಮೇಲಿನ ಲೋಕೋಕ್ತಿಗಿಂತ ಮಿಗಿಲಾಗಿ ಇನ್ನೇನನ್ನು ತಾನೇ ಸಂಕ್ರಾಂತಿಗೆ ಆರೋಪಿಸುವ ಅವಶ್ಯಕತೆ ಇದೆ? ’What do you say?’
’ಕನ್ನಡ, ಕನ್ನಡ!’
’ಓ, sorry!’

ಏನ್ ಛಂದ!
-----------
ಶಾಂತಿ-ಕ್ರಾಂತಿ-ಸಂಕ್ರಾಂತಿ, ಈ (ಮೂರು ಪದಗಳನ್ನೂ ಒಟ್ಟಿಗೆ ಕಟ್ಟಿದ) ನುಡಿಗಟ್ಟಿಗೆ ಎಷ್ಟು ಛಂದ ಅರ್ಥ ಅದ, ನೋಡ್ರಲಾ!

’ಶಾಂತಿ-ಕ್ರಾಂತಿ’ ಒಂದು ಅದ್ಭುತ ಸಿನಿಮಾ. ಮನದಲ್ಲಿ ಏನೋ ಭ್ರಾಂತಿ ಇಟ್ಟುಕೊಂಡು ಥಿಯೇಟರ್‌ಗೆ ಹೋದದ್ದರಿಂದಾಗಿ ನಾನು ವಿಭ್ರಾಂತನಾಗಿ ಹೊರಬರಬೇಕಾಯಿತು. ನನ್ನ ದೌರ್ಬಲ್ಯವದು. ಅದಕ್ಕೆ ನಿರ್ಮಾಪಕರನ್ನು ದೂರುವುದೇ?

’ಕ್ರಾಂತಿ-ಸಂಕ್ರಾಂತಿ’ ಎಂಬ ಸಿನಿಮಾ ಸೆಟ್ಟೇರುವುದಿತ್ತು, ಆದರೆ ’ಶಾಂತಿ-ಕ್ರಾಂತಿ’ಯ ಕ್ರಾಂತಿ ಕಂಡು ದಂಗಾದ ನಿರ್ಮಾಪಕರು ’ಕ್ರಾಂತಿ-ಸಂಕ್ರಾಂತಿ’ಯನ್ನು ಸೆಟ್ಟೇರಿಸುವ ಸಾಹಸ ಮಾಡಲಿಲ್ಲ.

ಆದರೆ ’ಕ್ರಾಂತಿ-ಸಂಕ್ರಾಂತಿ’ಯು ಕನ್ನಡ ಕವಿಗಳ ಲೇಖನಿ ಮೂಲಕ ಕ್ರಾಂತಿಯೆಸಗಿಯೇಬಿಟ್ಟಿದೆ. ಉದಾಹರಣೆಗೆ ಚಿತ್ರಕವಿ ’ಕವಿಮಹಾರಾಜ್’ ರಚಿಸಿರುವ ಚಿತ್ರಗೀತೆಯೊಂದರ ಸಾಲುಗಳನ್ನು ಗಮನಿಸಿ.

ಕ್ರಾಂತೀ ಸಂಕ್ರಾಂತೀ
ಏನಂತೀ ಶಾಂತೀ
ಆಹಾ! ಮುಖದ ಕಾಂತಿ
ಮಾಡಿಕೊಂಡೆ ವಾಂತಿ
ಎಷ್ಟು ತಿಂಗಳು? ಹೇಳೇ ಶಾಂತೀ
ಕ್ರಾಂತಿಕ್ರಾಂತಿಕ್ರಾಂತಿ!

ಇತರರ ಉದಾಹರಣೆಯೇಕೆ, ’ಆಂದೋಲನ ಮಹಾನ್ವೇಷಣಂ’ ಎಂಬ ಮಹಾಕಾವ್ಯ ರಚಿಸಿ ’ಮಹಾಕವಿ’ಯೆಂದು ಸ್ವಯಂ ಬಿರುದಾಂಕಿತನಾಗಿರುವ ಸ್ವಯಂ ನನ್ನ ಸ್ವಂತ ಸ್ವರಚನೆಯನ್ನೇ ಗಮನಿಸಿ.

ಏನಿದು ಭ್ರಾಂತಿ!
ಎಂಥ ವಿಭ್ರಾಂತಿ!
ಇದಾ ನಿನ್ನ ಕ್ರಾಂತಿ?!
ಹೊಟ್ಟೆಗೇನು ತಿಂತಿ?
ಏನು ಹೇಳಿದರು ಗಾಂಧಿ,
ಬುದ್ಧ, ಬಸವ, ಅಂಬೇಡ್ಕರರು?
ಮದರ್ ತೆರೇಸಾ, ತಾಯಿ ಸೋನಿಯಾ, ಮತ್ತೆ
ಮಾತೆ ಮಹದೇವಿಯರು?
ನಾನಿಲ್ಲಿ ಶರ್ಮರೊಡನೆ ಮಾತಾಡುತ್ತಿದ್ದಾಗ
ಆಫ್ರಿಕದಲ್ಲಿ ಬೆಳ್ಳಂಬೆಳಗು.
ಕ್ರಾಂತಿ-ಸಂಕ್ರಾಂತಿ.

ನನ್ನ ಈ ಕವನಕ್ಕೆ ’ಮೋಕ್ಷಗುಂಡಿ ಪ್ರಶಸ್ತಿ’, ’ದ್ರಾವಿಡಭಟ್ಟ ಪ್ರಶಸ್ತಿ’, ’ಕನ್ನಡಮಳ್ಳ (ಪ್ರಿಂಟ್ ಮಿಸ್ಟೇಕ್ ಅಲ್ಲ) ಪ್ರಶಸ್ತಿ’, ಹೀಗೆ ಹತ್ತು ಹಲವು ಪ್ರಶಸ್ತಿಗಳು ಬಂದಿವೆ. ’ಕ್ರಾಂತಿ-ಸಂಕ್ರಾಂತಿ’ ಪದದ ಮಹಿಮೆಯೇ ಅಂಥದು!

ಒಂದಾದಮೇಲೊಂದು
-------------------
ಈಗ ಧುತ್ತೆಂದು ಕ್ಲೈಮ್ಯಾಕ್ಸಿಗೆ(?) ಬಂದುಬಿಡೋಣ.
ಶಾಂತಿ-ಕ್ರಾಂತಿ-ಸಂಕ್ರಾಂತಿ.
ಒಂದಾದಮೇಲೊಂದು.
ಒಟ್ಟಿನಲ್ಲಿ/ಒಟ್ಟಾಗಿ/ಒಟ್ಟಾರೆ ಪರಿಣಾಮ? ಈಗ ಓದಿ.

೮೦೦೦ ವರ್ಷಗಳ ಕೆಳಗೆ ಜಂಬೂದ್ವೀಪದಲ್ಲಿ ಶಾಂತಿ ನೆಲೆಸಿತ್ತು. ಇಂದಿನ ರಷ್ಯಾ-ಸೈಬೀರಿಯಾದಿಂದ ಹಿಡಿದು ನಮ್ಮ ಕನ್ಯಾಕುಮಾರಿಯವರೆಗೂ ವ್ಯಾಪಿಸಿರುವ ವಿಶಾಲ ಪ್ರದೇಶವೇ ಅಂದಿನ ಜಂಬೂದ್ವೀಪ. ಆ ಜಂಬೂದ್ವೀಪವು ೭೦೦೦ ವರ್ಷಗಳ ಕಾಲ ಶಾಂತಿ, ಸಮೃದ್ಧಿಗಳಿಂದ ಶೋಭಿಸುತ್ತಿತ್ತು. ಅಂದರೆ, ಇಂದಿನ ಭಾರತ ದೇಶವೂ ೭೦೦೦ ವರ್ಷ ಕಾಲ ಶಾಂತಿ, ಸಮೃದ್ಧಿಗಳಿಂದ ನಳನಳಿಸುತ್ತಿತ್ತು. ಆಗ ಬಂದ ನೋಡಿ, ಅಲೆಕ್ಸಾಂಡರು! ಬಂದರು ನೋಡಿ, ಗ್ರೀಕರು, ಹೂಣರು, ಶಕರು!

ಆಮೇಲೆ ಬಿಡಿ, ಮಹಮದ್ ಬಿನ್ ಕಾಸಿಮ್, ಘಜ್ನಿ, ಘೋರಿ, ಮೊಗಲರು, ಯೂರೋಪಿಯನ್ನರು-ಬ್ರಿಟಿಷ್ ಬ...ಮಕ್ಕಳು!

ಶಾಂತಿಪರ್ವ ಫಿನಿಷ್!

ನಾವು ಸಾವಿರ ವರ್ಷ ಕಾಲ, ಪಡಬಾರದ ಪಾಡು ಪಟ್ಟೆವು. ಆಗ ಶುರುವಾಯಿತು ಕ್ರಾಂತಿ’ಪರ್ವ’.

ಮಂಗಳ್ ಪಾಂಡೆ, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಸುಖದೇವ್, ರಾಜಗುರು, ಸುಭಾಷ್‌ಚಂದ್ರ ಬೋಸ್, ಸಾವರ್‌ಕರ್, ಮದನ್‌ಲಾಲ್ ಧಿಂಗ್ರ, ರಾಸ್ ಬಿಹಾರಿ ಬೋಸ್, ಜತೀಂದ್ರನಾಥ್ ಮುಖೋಪಾಧ್ಯಾಯ, ಅರೊಬಿಂದೊ,......

ಕ್ರಾಂತಿ’ಪರ್ವ’ದ ಏಟು ತಾಳಲಾರದೆ ಬ್ರಿಟಿಷರು ಓಡಿಹೋದರು. ಭಾರತ ಸ್ವತಂತ್ರವಾಯಿತು.

ಸ್ವಾತಂತ್ರ್ಯ ದೊರೆತು ಅರವತ್ತೊಂದು ಗತಿಸಿ ಇದೀಗ ಅರವತ್ತೆರಡು ನಡೆಯುತ್ತಿದೆ. ಪರ್ವದೋಲ್ ಕೈಕೊಂಡ ಕ್ರಾಂತಿಯಿಂ ದೊರೆತ ಸ್ವಾತಂತ್ರ್ಯಮಂ ಬಳಸಿದ ನಿಮಿತ್ತಂ ಈ ಸಂವತ್ಸರ ಷಷ್ಟಿ ಮೇಲೊಂದರ ಪರ್ವಕಾಲದೊಳ್ ಆದುದೆಮ್ಮ ಸಂಕ್ರಾಂತಿ! ಇದೀಗ ಎಮ್ಮದು ’ಸಂಕ್ರಾಂತಿಪರ್ವ’!

ಸಂಕ್ರಾಂತಿ. ಅಂದರೆ, ಸೂರ್ಯನ ’ರಾಶಿಚಲನ’. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯನ ’ಚಲಿಸುವಿಕೆ’. ಸಂಕ್ರಮಣ.

ನಮ್ಮೀ ’ಭಾರತಸೂರ್ಯ’ ಕೈಕೊಂಡಿರುವ ಸಂಕ್ರಮಣ ಎಲ್ಲಿಂದ ಎಲ್ಲಿಗೆ, ಗೊತ್ತೆ?
ಸ್ವಸಂಸ್ಕೃತಿಯಿಂದ ಪಾಶ್ಚಾತ್ಯ ಸಂಸ್ಕೃತಿಯೆಡೆಗೆ!
ಸ್ವದೇಶದಿಂದ ಅಮೆರಿಕದೆಡೆಗೆ!
’ಅಧ್ಯಾತ್ಮ ಸಂಸ್ಕಾರ’ದಿಂದ ’ಉಪಭೋಗ ಸಂಸ್ಕೃತಿ’ಯೆಂಬ ವಿಕೃತಿಯೆಡೆಗೆ!
ಕರ್ಣಾನಂದಕರ, ಮನೋಲ್ಲಾಸಕರ, ಜ್ಞಾನೇಂದ್ರಿಯ ಮಧುರ (ಸ್ವಕೀಯ) ಶಾಸ್ತ್ರೀಯ ಸಂಗೀತದಿಂದ ಕರ್ಣಕಠೋರ, ಮನೋವಿಕಾರಕರ, ಜ್ಞಾನಪೀಠಿ ಬಂಧುರ ಲೈವ್ ಬ್ಯಾಂಡ್‌ನೆಡೆಗೆ!
ದೇಹಾಲಸ್ಯ-ಆಯಾಸಗಳನ್ನು ದೂರಮಾಡುವ ಚಾರಣ-ಯಾತ್ರೆಗಳಿಂದ ಮತ್ತು ಚಿತ್ತಕ್ಲೇಶವನ್ನು ದೂರಮಾಡುವ ದೈವದರ್ಶನ-ಪುರಾಣಶ್ರವಣಗಳಿಂದ ಮತ್ತೇರಿಸುವ ರೇವ್ ಪಾರ್ಟಿಯೆಡೆಗೆ!

ಈ ರೀತಿ,
ಸರಿದು ನಾವು ಶಾಂತಿಯಿಂದ ಕ್ರಾಂತಿಯೆಡೆಗೆ, ಸರಿಯುತ್ತಿದ್ದೇವಿಂದು ಕ್ರಾಂತಿಯಿಂದ ಸಂಕ್ರಾಂತಿಯೆಡೆಗೆ.

ಇದುವೇ ನಮ್ಮ
’ಶಾಂತಿ-ಕ್ರಾಂತಿ-ಸಂಕ್ರಾಂತಿ’!
ಓಂ ಶಾಂತಿಃ ಶಾಂತಿಃ ಶಾಂತಿಃ.
ಊಹ್ಞೂಂ.
’ಓಂ ಶಾಂತಿ ಓಂ’!

--0--

4 ಕಾಮೆಂಟ್‌ಗಳು: