ಬುಧವಾರ, ಮೇ 6, 2009

ಕೋತಿಚೇಷ್ಟೆ

ಕೋತಿಚೇಷ್ಟೆ ಎಂಬ ನುಡಿಗಟ್ಟನ್ನು ಸೃಷ್ಟಿಸಿದ್ದು ನಾನಲ್ಲ. ಯಾರೋ ಪೂರ್ವಜರು, ತಮ್ಮ ಮಕ್ಕಳನ್ನೋ ಮೊಮ್ಮಕ್ಕಳನ್ನೋ ಸುಧಾರಿಸಲು ಕಷ್ಟವಾದಾಗ, ತಮ್ಮ ಪೂರ್ವಜರನ್ನು ನೆನೆದು, ಈ ನುಡಿಗಟ್ಟನ್ನು ಸೃಷ್ಟಿಸಿರಬೇಕು. ತಮ್ಮ ಕಂದಮ್ಮಗಳಮೇಲಿನ, ಹಾಗೂ, ತಮ್ಮ ಆ ಪೂರ್ವಜರಮೇಲಿನ ಪ್ರೀತಿಯಿಂದಲೇ ಈ ನುಡಿಗಟ್ಟನ್ನವರು ಹುಟ್ಟುಹಾಕಿರುತ್ತಾರೆಂಬುದು ನನ್ನ ಅಚಲ ನಂಬಿಕೆ. ಪರಂಪರಾನುಗತವಾಗಿ ಬಳಕೆಯಲ್ಲಿ ಬಂದಿರುವ ಈ ವಿಶೇಷಪದವನ್ನು ಎಲ್ಲರಂತೆಯೇ ನಾನೂ ಬಳಸುತ್ತಿದ್ದೇನೆ ಅಷ್ಟೆ. ಆದಾಗ್ಗ್ಯೂ, ಅಣೋರಣೀಯನೂ ಮಹತೋ ಮಹೀಯನೂ ಆಗಿರುವ ಮುಖ್ಯಪ್ರಾಣನ (ಪ್ರಾಣಿ)ರೂಪವನ್ನು ಈ ರೀತಿ ಲಘುವಾಗಿ ಬಳಸಿಕೊಳ್ಳುತ್ತಿರುವುದಕ್ಕಾಗಿ ಆ ಸ್ವಾಮಿಯಲ್ಲಿ ಮಾಫಿ ಮಾಂಗುತ್ತೇನೆ. ಆಂಜನೇಯಾ, ಕ್ಷಮಿಸೆನ್ನನು.

ಇಷ್ಟಕ್ಕೂ, ಈ "ಕೋತಿಚೇಷ್ಟೆ" ಎಂಬ ನುಡಿಗಟ್ಟನ್ನು ನಾನು ನನ್ನ ಮಕ್ಕಳಮೇಲೋ ಮೊಮ್ಮಕ್ಕಳಮೇಲೋ ಇನ್ನಾರಮೇಲೋ ಆರೋಪಿಸುತ್ತಿಲ್ಲ. ಅಸಲಿಗೆ, ನರರ ಕುರಿತು ಅಲ್ಲವೇಅಲ್ಲ ನನ್ನೀ ಬರಹ (ಆರೋಪ). ವಾನರರ ಕುರಿತಾದುದು ಈ ನನ್ನ ಕೊರೆತ! ಆದ್ದರಿಂದ, ಈ ಬರಹದ ತಲೆಬರಹವಾಗಿ "ಕೋತಿಚೇಷ್ಟೆ" ಓಕೆ; ಹಿಂಜರಿಕೆ ಯಾಕೆ? ಅಲ್ವಾ?

ಈಗ ವಿಷಯಕ್ಕೆ ಬರುತ್ತೇನೆ. ವಿದ್ಯಾರಣ್ಯಪುರ ಎಂಬಲ್ಲಿ ಒಂದು ಮನೆ ಖರೀದಿಸಿ ವಾಸಿಸತೊಡಗಿದೆ. ಪುರಕ್ಕಿಂತ ಅರಣ್ಯಕ್ಕೇ ಹೆಚ್ಚು ಸನಿಹದಲ್ಲಿರುವ ಒಂದು ಬಡಾವಣೆ ಅದು. ಕಡಿಮೆ ರೇಟಿಗೆ ಮನೆ ಸಿಗಬೇಕೆಂದರೆ ಸಿಟಿ ಮಧ್ಯದಲ್ಲಿ ಸಿಗುತ್ತೆಯೇ? ಊರಿಂದ ಹೊರಗೆ, ದೂರ ಹೋಗ್ಬೇಕಾಗುತ್ತಪ್ಪ. ಅಂಥದೊಂದು ಸ್ಥಳ ವಿದ್ಯಾರಣ್ಯಪುರ. ಹೆಸರಿಗೆ ಸಿಟಿ ; ಅನುಭವಕ್ಕೆ ಕಾಡು ಕಂ ಪ್ರಕೃತಿ ಕಂ ರೆಸಾರ್ಟು! ಒಂಥರಾ ಮಲ್ಟಿಪರ್ಪಸ್ ಲೇಔಟು!

ಇಂತಿಪ್ಪ ವಿದ್ಯಾರಣ್ಯಪುರದ ನನ್ನ ಮನೆಯ ದೇವರಕೋಣೆಯೊಳ್ ಎಂದಿನಂತೆ ಅಂದೂ ಸಹ ನಾನು ದೇವರ ಪೂಜೆಗೆ ಕುಳಿತಿದ್ದೆ. ಪ್ರಾತಃಸಂಧ್ಯಾವಂದನೆ ಪೂರೈಸಿ, ಪೂಜಾವಿಧಿಯ ಅಂತಿಮ ಹಂತಕ್ಕೆ ಬಂದು, ಇನ್ನೇನು, ದೇವರಿಗೆ ನೈವೇದ್ಯ ಅರ್ಪಿಸಬೇಕು, ಅಷ್ಟರಲ್ಲಿ ನನ್ನ ಹಿಂದೆ ಏನೋ ಸದ್ದಾದಂತನ್ನಿಸಿತು. ಹಿಂತಿರುಗಿ ನೋಡಿದರೆ, ಅದೆಲ್ಲಿಂದ ಒಳಗೆ ಬಂತೋ, ಒಂದು ಕೋತಿಮರಿ ನನ್ನ ಹಿಂದೆ ನಿಂತು ಡ್ಯಾನ್ಸ್ ಮಾಡ್ತಿದೆ! ಮರುಕ್ಷಣವೇ ಆ ಕೋತಿಮರಿ ಮುಂದಕ್ಕೆ ಜಿಗಿದು, ನಾನು ನೈವೇದ್ಯಕ್ಕೆಂದು ಇಟ್ಟಿದ್ದ ಜೋಡಿ ಬಾಳೆಹಣ್ಣನ್ನು ಎತ್ತಿಕೊಂಡು ಪರಾರಿಯಾಯಿತು! ರಾಮನ ನೈವೇದ್ಯಕ್ಕೆಂದು ಇಟ್ಟಿದ್ದ ಹಣ್ಣನ್ನು ರಾಮಬಂಟ ಸ್ವೀಕರಿಸಿದ, ಹೋಗಲಿ ಬಿಡು, ಅಂದುಕೊಂಡು ರಾಮನಿಗೆ ಸಕ್ಕರೆ ತಿನ್ನಿಸಿ ಮಂಗಳಾರತಿ ಎತ್ತಿದೆ.

ಇದಾದ ಮರುದಿನ ಬೆಳಿಗ್ಗೆ. ಎಂದಿನಂತೆ ಸಂಧ್ಯಾವಂದನೆ, ಪೂಜೆ. ಮುಗಿಯಿತು. ಹಿಂದಿನ ದಿನದಹಾಗೆ ಮರಿಮಾರುತಿರಾಯ ಬಂದು ನೃತ್ಯಸೇವೆ ಮಾಡಲಿಲ್ಲ, ಸದ್ಯ! ಆದರೆ............! ಅದೇ ರಾಯ ತನ್ನ ಮಾತಾಪಿತೃರೊಂದಿಗೆ ಆಗಮಿಸಿ ನನ್ನ ಮನೆಯ ಹಿತ್ತಿಲಲ್ಲಿ ಪಟ್ಟಾಗಿ ಕೂತುಬಿಟ್ಟಿದ್ದಾನೆ! ಗಿಡಕ್ಕೆ ಪೂಜೆಯ ನೀರು ಚೆಲ್ಲಲು ಹೋದ ನನ್ನನ್ನು ನೋಡಿ "ಗುರ್ರ್" ಅನ್ನುತ್ತಾನೇ! ನನಗೆ ಅರ್ಥವಾಯಿತು. ನೈವೇದ್ಯ ಮಾಡಿದ್ದ ಬಾಳೆಹಣ್ಣನ್ನು ಕೊಟ್ಟೆ. ತಗೊಂಡು ಸಂಸಾರ ಡೀಸೆಂಟಾಗಿ ಜಾಗ ಖಾಲಿಮಾಡಿತು.

ಅದರ ಮರುದಿನ ಅದೇವೇಳೆಗೆ ಹಿತ್ತಲಲ್ಲಿ ಕರೆಕ್ಟಾಗಿ ಒಂಭತ್ತು ಕೋತಿಗಳು ಹಾಜರ್! ನಿನ್ನೆ ಬಂದ ಆ ಮೂರು, ಪ್ಲಸ್, ಬೇರೆಯವು ಆರು! ನನ್ನ ಬಳಿ ಇರುವುದು ಎರಡೇ ಬಾಳೆಹಣ್ಣು. ಏನು ಮಾಡಲಿ? ಆ ಎರಡು ಬಾಳೆಹಣ್ಣನ್ನೇ ಅವುಗಳ ಕಡೆಗೆ ಎಸೆದೆ. ಮರುಕ್ಷಣವೇ ಅವುಗಳ ಮಧ್ಯೆ ಮಹಾಭಾರತ ಯುದ್ಧ!

ಅದರ ಮರುದಿನ ನಾನು ಹುಷಾರಾದೆ. ಕರೆಕ್ಟಾದ ಟೈಮಿಗೆ, ಕರೆಕ್ಟಾಗಿ ಒಂಭತ್ತೇ ಸಂಖ್ಯೆಯಲ್ಲಿ ಬಿಜಯಂಗೈದ ಪವನಸುತ-ಸುತೆಯರಿಗೆ ನಾನು ನನ್ನ ಸತಿಯ ದ್ವಾರಾ ಒಂದು ಬೊಗಸೆ ನೆಲಗಡಲೆ ಕಾಳು ಅರ್ಪಿಸಿದೆ. ತಿಂದು ತೇಗಿ ಖುಷ್ ಆಗಿ ಹೊರಟುಹೋದವು.

ಅದರ ಮರುದಿನವೇ ಅವುಗಳ ಚೇಷ್ಟೆ ನಮ್ಮ ಅನುಭವಕ್ಕೆ ಬಂದದ್ದು. ಸರಿಯಾದ ಸಮಯಕ್ಕೆ ಒಂಭತ್ತೂ ವಾನರಗಳೂ ಹಿತ್ತಲಲ್ಲಿ ಪ್ರತ್ಯಕ್ಷವಾದವು. ಸದರಿ ಮರಿವಾನರ ಇದ್ದಕ್ಕಿದ್ದಂತೆ ನಮ್ಮ ಅಡಿಗೆಮನೆಯೊಳಕ್ಕೆ ನುಗ್ಗಿತು! ಹಿಂದಿನ ದಿನ ಗಮನಿಸಿರಬೇಕು ಶಾಣ್ಯಾ, ನೇರವಾಗಿ ನೆಲಗಡಲೆ ಡಬ್ಬದ ಬಳಿಗೇ ಚಂಗನೆ ನೆಗೆದು ಡಬ್ಬ ಎತ್ತಿಕೊಂಡು ಹೈ ಸ್ಪೀಡಿನಲ್ಲಿ ವಾಪಸ್ ಹಿತ್ತಲಿಗೆ ಓಡಿತು! ಮರುಕ್ಷಣವೇ ಒಂಭತ್ತೂ ಕಪಿಗಳೂ ಡಬ್ಬದ ಸಮೇತ ಮನೆಯ ಟೆರೇಸ್‌ಮೇಲಿದ್ದವು! ಮುಂದಿನ ಹದಿನೈದು ನಿಮಿಷ ಅವುಗಳಿಗೆ ಸಮಾರಾಧನೆ! ಎಲ್ಲವೂ ನೆಲಗಡಲೆಯನ್ನು ಹೊಟ್ಟೆತುಂಬ ತಿಂದು, ಗಂಟಲ ಚೀಲದಲ್ಲಿ ತುಂಬಿಕೊಂಡು, ಇನ್ನೂ ನೆಲಗಡಲೆ ಉಳಿದಿರುವುದನ್ನು ಕಂಡು ಖುಷಿಯಿಂದ ಅದರಲ್ಲಿ ವಿವಿಧ ಆಟಗಳನ್ನು ಆಡತೊಡಗಿದವು! ಎಸೆದಾಟ, ಕ್ಯಾಚ್ ಹಿಡಿಯುವಾಟ, ಗೋಲಿಯಾಟ, ಕಿವಿ ಮೂಗುಗಳಲ್ಲಿ ತುರುಕಿಕೊಳ್ಳುವಾಟ, ಹೀಗೆ ಆ ನೆಲಗಡಲೆ ಕಾಳುಗಳಲ್ಲಿ ಹಲಬಗೆಯ ಆಟಗಳನ್ನಾಡಿ ಕೊನೆಗೆ ಖಾಲಿ ಡಬ್ಬವನ್ನು ಪಕ್ಕದ ಮನೆಯ ಕಾಂಪೌಂಡಿನೊಳಕ್ಕೆ ಎಸೆದವು! ಮುಂದಿನ ಒಂದು ನಿಮಿಷದಲ್ಲಿ, ಒಂದೊಂದಾಗಿ ಟೆರೇಸಿನಿಂದ ಕಾಲುಕಿತ್ತವು. ಅಷ್ಟರಲ್ಲಿ ನನ್ನಾಕೆಯ ಕೈಗೆ ನಾಲ್ಕು ಸಲ ಪೊರಕೆ ಬಂದಿತ್ತು!

ಅದರ ಮಾರನೆಯ ದಿನ ಒಂಭತ್ತೂ ವಾನರಗಳೂ ಅತಿ ಸಭ್ಯರಂತೆ ಮತ್ತೆ ಹಾಜರ್! ಮುನ್ನೆಚ್ಚರಿಕೆ ಕ್ರಮವಾಗಿ ನನ್ನಾಕೆ ಅಡಿಗೆಮನೆ ಬಾಗಿಲನ್ನು ಮುಚ್ಚಿಕೊಂಡು ಒಳಗಿಂದ ಬೋಲ್ಟ್ ಹಾಕಿಕೊಂಡಿದ್ದಳು. ಅವಳ ಆದೇಶದಮೇರೆಗೆ ನಾನೂ ಆ ವಾನರಸಮೂಹಕ್ಕೆ ಬಾಳೆಹಣ್ಣು ಕೊಡಲಿಲ್ಲ. ಒಂದಷ್ಟು ಹೊತ್ತು ಕಾದವು, ಆಮೇಲೊಂದಷ್ಟು ಹೊತ್ತು "ಗುರ್ರ್" ಅಂದವು, ಬಳಿಕ ಮನೆಗೆ ಒಂದು ಪ್ರದಕ್ಷಿಣೆ ಹಾಕಿ ಒಳನುಗ್ಗುವ ದಾರಿ ಏನಾದರೂ ಇದೆಯಾ ಎಂದು ನೋಡಿದವು, ಪ್ರಯೋಜನವಾಗದಿದ್ದಾಗ ಕಾಂಪೌಡ್ ಒಳಗಿನ ಮಾವಿನಮರ ಏರಿ ಕುಳಿತವು. ಅದರಲ್ಲೊಂದು ಕಪಿಯು ಮರದಮೇಲಿಂದ ಪಕ್ಕದಮನೆಯವರ ಕಾರಿನಮೇಲೆ ಜಿಗಿಯಿತು. ಕೂಡಲೇ ಕಾರು "ಭೊಂವ್" ಎಂದು ಒಂದು ಭರ್ಜರಿ ಆವಾಜ್ ಹಾಕಿತು! ಆಟೋಮ್ಯಾಟಿಕ್ ಹಾರ್ನ್ ಅಳವಡಿಸಿದ್ದರ ಪರಿಣಾಮ! ಮಂಗಗಳಿಗೆ ರೋಮಾಂಚನವಾಯಿತು! ಚೊಂಗಪ್ಪ ಹತ್ತಿದವರಂತೆ ಎಲ್ಲಾ ಮಂಗಗಳೂ ಸರದಿಮೇಲೆ ಮರದಿಂದ ಕಾರಿನ ಟಾಪ್‌ಗೆ ಜಿಗಿಯತೊಡಗಿದವು! ಜಿಗಿಯುವುದು, ಕುಣಿಕುಣಿಯುತ್ತ ಮತ್ತೆ ಮರ ಏರುವುದು, ಮತ್ತೆ ಜಿಗಿಯುವುದು, ಮತ್ತೆ ಮರ ....... ಹೀಗೇ ಸಾಗಿತು ಅವುಗಳ ಆಟ! ಒಂದೊಂದು ಜಿಗಿತಕ್ಕೂ ಒಂದೊಂದು "ಭೊಂವ್" ಲೆಕ್ಕದಲ್ಲಿ ಕಾರಿನ ಹಾರ್ನು ಸತತವಾಗಿ "ಭೊಂವ್, ಭೊಂವ್, ಭೊಂವ್, ಭೊಂವ್, ..........."! ಇಡೀ ವಿದ್ಯಾರಣ್ಯಪುರಕ್ಕೆ ಕೇಳಿಸುವಂಥಾ ಸೌಂಡು! "ಹುಷ್" ಅಂತ ನಾನು ಹೆದರಿಸಲು ಯತ್ನಿಸಿದರೆ ಆ ಮಂಗಗಳಿಗೆ ಕೇರೇ ಇಲ್ಲ! ಕಾರಿನ ಮಾಲೀಕರು ಪಾಪ, ಅರವತ್ತೈದು ಅಂಡ್ ಅರವತ್ತರ ಯುವ ದಂಪತಿ, ನಿಧಾನವಾಗಿ ಬಂದು ಕೋಲು ತೋರಿಸಿ ಅವುಗಳನ್ನು ಓಡಿಸುವಷ್ಟರಲ್ಲಿ ಆ ವಾನರವೃಂದ ಬರೋಬ್ಬರಿ ಹತ್ತು ನಿಮಿಷ ಭರ್ಜರಿ ನೃತ್ಯ-ವಾದ್ಯಗೋಷ್ಠಿ ನಡೆಸಿತ್ತು! (ಮುಂದೆ ಒಂದು ತಿಂಗಳು ಪಕ್ಕದಮನೆಯ ಆ ದಂಪತಿ ನಮ್ಮೊಡನೆ "ಠೂ" ಬಿಟ್ಟಿದ್ದರು!)

ಇಷ್ಟೆಲ್ಲ ಆದರೂ ಆ ಕಪಿಸಂಕುಲಕ್ಕೆ ಮಾನ, ಮರ್ಯಾದೆ, ನಾಚಿಕೆ, ಅಂಜಿಕೆ, ಯಾವುದೂ ಇಲ್ಲ ನೋಡಿ, ಮಾರನೇ ದಿನವೂ ಮತ್ತೆ ಹಾಜರ್! ಯಥಾಪ್ರಕಾರ ಹಿತ್ತಲಲ್ಲಿ ಚಿತ್ತೈಸಿ, "ಪ್ರಸಾದ" ಬಯಸಿ ಎಲ್ಲವೂ ಅತ್ಯಂತ ವಿನಯದಿಂದ ಸಾಲಾಗಿ ಕುಳಿತವು! ನಾನೂ ನನ್ನವಳೂ ತಲಾ ಒಂದೊಂದು ದೊಣ್ಣೆ ತೋರಿಸಿದೆವು. ಕೂಡಲೇ ಅವು ಓಡಿದವು. ಎಲ್ಲಿಗೆ? ನಮ್ಮ ಟೆರೇಸಿಗೆ! ಟೆರೇಸಲ್ಲಿ ಏನಾದರೂ ಮಾಡಿಕೊಳ್ಳಲಿ ಅಂತ ನಾವು ಸುಮ್ಮನಾದೆವು. ಮುಂದಿನ ಹತ್ತು ನಿಮಿಷ ಅವು ಟೆರೇಸ್‌ಮೇಲೆ ಓಡುವ, ಜಿಗಿಯುವ, ಇತ್ಯಾದಿ ಸಪ್ಪಳ ನಮಗೆ ಕೇಳಿಸುತ್ತಿತ್ತು. ಆಗ ಇದ್ದಕ್ಕಿದ್ದಂತೆ ನನ್ನಾಕೆಗೆ ನೆನಪಾಗಿ, "ಅಯ್ಯಯ್ಯೋ, ಒಣಹಾಕಿದ ಬಟ್ಟೆ!" ಎಂದು ಕೂಗುತ್ತಾ ಟೆರೇಸಿಗೆ ಓಡಿದಳು! ಹಿಂದೆಯೇ ನಾನೂ ಓಡಿದೆ. ಹೋಗಿ ನೋಡಿದರೆ, ಅಲ್ಲಿ ಏನು ನಡೆದಿದೆ? ಒಣಹಾಕಿದ ಸೀರೆಯಲ್ಲಿ ಎರಡು ಕಪಿಗಳು ಉಯ್ಯಾಲೆ ಆಡುತ್ತಿವೆ! ಇನ್ನೆರಡು ಕಪಿಗಳು ನನ್ನ ಪ್ಯಾಂಟ್‌ನೊಳಗೆ ಸೇರಿಕೊಂಡು ಕಣ್ಣಾಮುಚ್ಚಾಲೆ ಆಡುತ್ತಿವೆ! ಉಳಿದವು, ಉಳಿದ ಬಟ್ಟೆಗಳನ್ನೆಲ್ಲಾ ಹಗ್ಗದಿಂದ ಕೆಳಕ್ಕೆ ಎಳೆದುಹಾಕಿಕೊಂಡು ಮನಸೋಇಚ್ಛೆ ಹರಿಯುತ್ತಿವೆ! ತಿನ್ನಲು ಕೊಡದೇಇದ್ದುದಕ್ಕೆ ನಮಗೆ ಶಾಸ್ತಿ! ಅವುಗಳಿಂದ ಛೇದಗೊಳ್ಳದೆ ಉಳಿದ ಬಟ್ಟೆಯೆಂದರೆ ನನ್ನ ಕರ್ಚೀಫ್ ಒಂದೇ! ಮರುದಿನದಿಂದ ಮನೆಯೊಳಗೇ ಬಟ್ಟೆ ಒಣಹಾಕತೊಡಗಿದೆವು. ಒಣಗದಿದ್ದರೆ ಅಷ್ಟೇಹೋಯ್ತು!

ಮುಂದಿನ ದಿನಗಳಲ್ಲಿ ಸದರಿ ಕಪಿಸೈನ್ಯವು ನಮ್ಮ ಕೇಬಲ್ ವೈರ್ ಮೇಲೆ ಸರ್ಕಸ್ಸು, ಹಿತ್ತಿಲಿನ ನಲ್ಲಿ ತಿರುಗಿಸಿ ನೀರು ಬಿಟ್ಟುಕೊಂಡು ಆಟ, ಸಿಂಟೆಕ್ಸ್ ಟ್ಯಾಂಕಿನ ಮುಚ್ಚಳ ತೆಗೆದು ಎಸೆಯಾಟ, ಮನೆಗೆಲಸದವಳು ಹೊರಗೆ ಬಿಟ್ಟ ಚಪ್ಪಲಿಗಳನ್ನು ಹರಿಯುವ ಆಟ, ಹೀಗೆ ವಿವಿಧ ಆಟಗಳನ್ನಾಡುತ್ತ ನಮ್ಮಮೇಲೆ ಸೇಡು ತೀರಿಸಿಕೊಳ್ಳತೊಡಗಿತು! ಹೀಗೇ ಒಂದಷ್ಟು ದಿನ ಮುಂದುವರಿಯಿತು. ಆಡೀ ಆಡೀ ಸಾಕಾಗಿರಬೇಕು, ಒನ್ ಫೈನ್ ಮಾರ್ನಿಂಗ್ ಇದ್ದಕ್ಕಿದ್ದಂತೆ ಇಡೀ ಸೈನ್ಯ ನಾಪತ್ತೆ! ನಾನೂ ನನ್ನಾಕೆಯೂ ನೆಮ್ಮದಿಯ ನಿಟ್ಟುಸಿರಿಟ್ಟೆವು.

ಪ್ರಿಯ ವಾಚಕರೇ, ಇಷ್ಟೆಲ್ಲ ಆಗಿ ಇಂದಿಗೆ, ಅಂದರೆ ನಾನು ಈ (ನಮ್ಮ ಹಣೆ)ಬರಹ ಬರೆಯುತ್ತಿರುವ ಈ ದಿನಕ್ಕೆ, ಒಂದು ತಿಂಗಳು ಕಳೆದಿದೆ. ಒಂದು ತಿಂಗಳಿನಿಂದ ಯಾವೊಂದು ಮಂಗವೂ ನಮ್ಮ ಮನೆಕಡೆ ಸುಳಿದಿಲ್ಲ.

ಇವತ್ತು ನನ್ನಾಕೆ ಅಡಿಗೆಮನೆಯೊಳಗೆ ಚಕ್ಲಿ ಕಾರ್ಖಾನೆ ಶುರುಮಾಡ್ಕೊಂಡಿದ್ದಾಳೆ. ಮಂಗಗಳ ಕಾಟ ತಪ್ಪಿ ತಿಂಗಳಾದದ್ದನ್ನು ಸೆಲೆಬ್ರೇಟ್ ಮಾಡಲಿಕ್ಕಲ್ಲ, ಅಳಿಯ-ಮಗಳು ಬರ್ತಾ ಇದ್ದಾರೆ, ಅದಕ್ಕೆ.

ಅಗೋ, ಅಳಿಯ-ಮಗಳು ಬಂದೇಬಿಟ್ರು, ಕಾಲಿಂಗ್ ಬೆಲ್ ಸದ್ದಾಯ್ತಲ್ಲ.

ಹೋಗಿ ಬಾಗಿಲು ತೆಗೆದೆ. ಎಲ್ಲಿದ್ದಾರೆ ಅಳಿಯ-ಮಗಳು? ಹೊರಗಡೆ ಯಾರೂ ಇಲ್ಲ! ಹಾಗಾದ್ರೆ ಕಾಲಿಂಗ್ ಬೆಲ್ ಒತ್ತಿದ್ದು ಯಾರು? ಆಚೆ ಈಚೆ ನೋಡಿದೆ. ಯಾರೂ ಕಾಣಿಸಲಿಲ್ಲ. ಒಂದು ಕ್ಷಣ ಅಲ್ಲೇ ನಿಂತು ಯೋಚಿಸಿದೆ. ಊಹ್ಞೂ. ಏನೂ ಗೊತ್ತಾಗಲಿಲ್ಲ. ಇದೊಳ್ಳೆ ಮ್ಯಾಜಿಕ್ ಆಯ್ತಲ್ಲಾ, ಅಂದುಕೊಳ್ಳುತ್ತಾ ಇನ್ನೇನು ವಾಪಸ್ ಬಾಗಿಲು ಮುಚ್ಚಬೇಕು, ಆಗ, ಕಾಲಿಂಗ್ ಬೆಲ್ ಪಕ್ಕದ ಕಿಟಕಿಮೇಲಿನ ಪ್ಯಾರಾಪೆಟ್ ಗೋಡೆಯ ಮೇಲ್ಗಡೆಯಿಂದ, ತಲೆ ಕೆಳಗೆ ಮಾಡಿಕೊಂಡು ಇಣುಕಿತೊಂದು ಕೋತಿಮರಿ! ತಿಂಗಳ ಕೆಳಗೆ ಸೈನ್ಯಸಮೇತ ದಾಳಿಯಿಟ್ಟಿತ್ತಲ್ಲಾ ಅದೇ ಕೋತಿಮರಿ!

4 ಕಾಮೆಂಟ್‌ಗಳು:

  1. ಹಹ್ಹ ಹ್ಹ ..... ಪಕ್ಷದಿ೦ದ ಪಕ್ಷಕ್ಕೆ ಹಾರುವ ರಾಜಕಾರಣಿಗಳನ್ನು ತಮ್ಮ ಕಟೂಕ್ತಿಗಳಿ೦ದ ಟೀಕಿಸುವ ಶಾಸ್ತ್ರಿಗಳಿಗೆ ಮ೦ಗಗಳಿ೦ದ ತಕ್ಕ ಶಾಸ್ತಿ ಆಗಿದೆ.

    ಪ್ರತ್ಯುತ್ತರಅಳಿಸಿ
  2. ಅಳಿಯನಿಗಿಂತ ಮೊದಲು ಗೆಳೆಯ ಬರಲೇಬೇಕಲ್ಲ!

    ಪ್ರತ್ಯುತ್ತರಅಳಿಸಿ
  3. ತಕ್ಕ ಶಾಸ್ತಿ ಮಾಡಿದ ಪರಾಂಜಪೆಯವರಿಗೆ,
    ತಕ್ಕ ಗಾದೆ ಮಂಡಿಸಿದ ಸುನಾಥರಿಗೆ,
    ಮತ್ತು,
    ಪಕ್ಕದೂರಲ್ಲ, ದೂರ ದೇಶ ಸ್ವೀಡನ್‌ನಿಂದ sweet words ಬರೆದ ’ಇಂಚರ’ (ಡಾ.) ಗುರುಮೂರ್ತಿ ಹೆಗ್ದೆಯವರಿಗೆ
    ಹೃತ್ಪೂರ್ವಕ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ